ಜಯ ಕಾಣದ ಸೋದರಿ, ಅಕ್ಕ ಸಿಎಂ, ತಂಗಿಗೆ ಬೀದಿ ಕಾಯಂ!

ಬೆಂಗಳೂರು: ಗರ್ಭದಲ್ಲಿದ್ದಾಗಲೇ ಹೆತ್ತವಳ ಉದಾಸೀನಕ್ಕೆ ಒಳಗಾಗಿ ದಿಕ್ಕಿಲ್ಲದ ಪರದೇಶಿಯಂತೆ ಬೆಳೆದ ಹೆಣ್ಣು ಈಕೆ ಎನ್ನುವುದಕ್ಕಿಂತ ಖ್ಯಾತ ನಟಿ, ಅಗರ್ಭ ಶ್ರೀಮಂತೆ, ಒಂದು ರಾಜ್ಯದ ಜನತೆಯಿಂದಲೇ 'ಅಮ್ಮ' ಎನಿಸಿಕೊಂಡಿರುವ ತಮಿಳುನಾಡಿನ ಮುಖ್ಯಮಂತ್ರಿ ಜಯಲಲಿತಾ ಅವರ ಖಾಸಾ ಸೋದರಿ ಅಂದರೆ ಸರಿ.
ಹೌದು, ಅಧಿಕಾರದ ಉತ್ತುಂಗದಲ್ಲಿರುವ ಜಯಲಲಿತಾ ಅವರ ಸ್ವಂತ ತಂಗಿ ಬೆಂಗಳೂರಿನಲ್ಲಿದ್ದಾರೆ! ಇವರು ತಮ್ಮ ಅಕ್ಕನಂತೆ ಸಂಪತ್ತಿನ 'ಅಮ್ಮ'ನಾಗಿಲ್ಲ. ಬದಲಾಗಿ ಅಕ್ಷಶಃ ಬೀದಿ ಬಡಪಾಯಿ. ಇವತ್ತು ಹೊಟ್ಟೆ ತುಂಬಿಸಿಕೊಂಡರೆ ನಾಳಿನ ಸ್ಥಿತಿ ಏನು ಎನ್ನುವ ದುಃಸ್ಥಿತಿಯಲ್ಲಿದ್ದಾರೆ. ಹೆಸರು ಶೈಲಜಾ ಜಯರಾಮನ್. ಇವರ ಬದುಕನ್ನೇ ಚಿತ್ರ ಮಾಡಿದರೆ ಇದುವರೆಗೂ ತೆರೆ ಮೇಲೆ ಕಂಡಿರದ 'ಅಕ್ಕ-ತಂಗಿ'ಯರ ರೋಚಕ ಜೀವನಗಾಥೆಯನ್ನು ಪ್ರೇಕ್ಷಕರು ಕಣ್ತುಂಬಿಕೊಳ್ಳುತ್ತಾರೆ.
ಇಷ್ಟಕ್ಕೂ ಶೈಲಜಾ, ಜಯಲಲಿತಾರಿಗೆ ಹೇಗೆ ಸೋದರಿ? ಸಿಎಂ ತಂಗಿಯಾದರೂ ಈ ಸ್ಥಿತಿ ಯಾಕೆ? ತಾನೂ ಸಂಧ್ಯಾಳ ಮಗಳೇ ಎನ್ನುತ್ತಿರುವ ಶೈಲಜಾ ಗುಟ್ಟಾಗಿ ಜೀವಿಸುತ್ತಿರುವುದು ಯಾಕೆ? ಜಯಲಲಿತಾ ಸ್ವಂತ ತಂಗಿಯನ್ನು ದೂರ ಮಾಡಿರುವುದರ ಹಿಂದಿನ ಗುಟ್ಟೇನು? 'ಕನ್ನಡಪ್ರಭ' ಈ ಪ್ರಶ್ನೆಗಳನ್ನು ಇಟ್ಟುಕೊಂಡು ಶೈಲಜಾರನ್ನು ಮಾತಿಗೆಳೆಯಿತು.
ಕದ್ದು ಬೆಳೆಸಿದ ತಾಯಿ: ನನ್ನ ತಾಯಿ ಮಕ್ಕಳನ್ನು ಕದ್ದು ಬೆಳೆಸಿದ್ದೇ ಹೆಚ್ಚು. ಅದಕ್ಕೆ ಕಾರಣ ಅವರ ಸಿನಿಮಾ ಕೆರಿಯರ್. ರಾಜರ ಜೊತೆ ಆಪ್ತ ಸಂಬಂಧ ಹೊಂದಿದ್ದ ಅಮ್ಮ, ಮಕ್ಕಳಿಗೆ ಜನ್ಮ ಕೊಟ್ಟಿದ್ದು ಬಿಟ್ಟರೆ ಬೆಳಸಲಿಲ್ಲ. ನನ್ನನ್ನು ದಾಮೋದರ ಪಿಳೈಗೆ ದತ್ತಕಕ್ಕೆ ಕೊಟ್ಟು, 'ಯಾರಿಗೂ ಗೊತ್ತಾಗದಂತೆ ನೀವೇ ಇವಳನ್ನು ಸಾಕಿ' ಎಂದು ಹೋದ ತಾಯಿ ಮುಖವನ್ನು ನಾನು ನೋಡಿದ್ದು ತೀರಾ ಕಡಿಮೆ. ಶೂಟಿಂಗ್ ನಡುವೆ ಆಗಾಗ ಬರುತ್ತಿದ್ದುದು ನೆನಪಿದೆ. ಸಾಕು ತಂದೆ ದಾಮೋದರ ಪಿಳೈ ಹೇಳುವ ಪ್ರಕಾರ, ಅಮ್ಮ ಮೂರು ತಿಂಗಳ ಗರ್ಭಿಣಿ. ನಾನು ಭ್ರೂಣದಲ್ಲಿದ್ದಾಗಲೇ ಅಪ್ಪನನ್ನು ಕಳೆದುಕೊಂಡೆ. ಹೀಗಾಗಿ ಗಂಡ ತೀರಿಕೊಂಡ ಮೇಲೆ ಹುಟ್ಟಿದವಳು ಎನ್ನುವ ಕಾರಣಕ್ಕೆ ತಾಯಿ ನನ್ನ ಕದ್ದು ಬೆಳೆಸಿದಳು.
ದಾಮೋದರ ಪಿಳೈ ಬೇರಾರೂ ಅಲ್ಲ, ಚಿತ್ರರಂಗದಲ್ಲಿ ದೊಡ್ಡ ಹೆಸರು ಮಾಡಿರುವ ಕಲಾ ನಿರ್ದೇಶಕ.
ಅದಕ್ಕಿಂತಲೂ ಮುಖ್ಯವಾಗಿ ನಮ್ಮ ತಾಯಿಯ ಮೊದಲ ಪ್ರೇಮಿ. ಆ ಸಲುಗೆಯಿಂದಲೇ ಅವರು ನನ್ನ ಬೆಳೆಸಿದ್ದು. ನಾನು ತಿರುಚ್ಚಿಯಲ್ಲಿ ಹುಟ್ಟಿದ್ದು, ಶ್ರೀರಂಗಂನಲ್ಲಿ ನಮ್ಮ ಕುಟುಂಬ ನೆಲೆಸಿತ್ತು. ಕೊಯಂಬತ್ತೂರಿನಿಂದ ನನ್ನ ಎತ್ತಿಕೊಂಡು ಸಾಕು ತಂದೆ ಬೆಂಗಳೂರಿಗೆ ಬಂದು ನೆಲೆಸಿದ್ದು ಎಲ್ಲವನ್ನೂ ಹೇಳಿದ್ದು ದಾಮೋದರ ಪಿಳೈ ಅವರೇ. ನಾವು ಬೆಂಗಳೂರಿಗೆ ಬಂದಾಗ ನನಗೆ ಆರು ವರ್ಷ.
ನಮ್ಮ ಕುಟುಂಬ- ರಾಜರ ಕೃಪೆ: ನನ್ನ ತಾಯಿ ಸಂಧ್ಯಾ, ತಂದೆ ಜಯರಾಮನ್. ನಾನು, ಅಕ್ಕ ಜಯಲಲಿತಾ, ಜಯಕುಮಾರ್ ಅಣ್ಣತಂಗಿಯರು. ನಮ್ಮ ಹೊರತಾಗಿಯೂ ಮತ್ತೊಬ್ಬರು ಇದ್ದಾರೆ. ಅವರು ಎಲ್ಲಿದ್ದಾರೆ ಅಂತ ಈಗಲೂ ಗೊತ್ತಿಲ್ಲ. ಒಟ್ಟು ನಾವು ನಾಲ್ವರು ಮಕ್ಕಳು. ತಂದೆ ತೀರಿಕೊಂಡಾಗ ಅಕ್ಕನಿಗೆ 5, ಅಣ್ಣನಿಗೆ 7 ವರ್ಷ. ಜಯಲಲಿತಾ ಹುಟ್ಟಿದ್ದು 1946ರಲ್ಲಿ, ಜಯಕುಮಾರ್ ಹುಟ್ಟಿದ್ದು1944ರಲ್ಲಿ. ಇದಾದ ಮೇಲೆಯೇ ಅಮ್ಮನಿಗೆ ಸಿನಿಮಾ ಹುಚ್ಚು ಹಿಡಿದಿದ್ದು. ಅಲ್ಲದೆ ಅಮ್ಮನ ಸೋದರಿಯೊಬ್ಬರು ಆಗಲೇ ಚಿತ್ರರಂಗದಲ್ಲಿದ್ದರಂತೆ. ಆದರೆ, ಇಬ್ಬರ ಮಕ್ಕಳ ತಾಯಿ ಚಿತ್ರರಂಗದಲ್ಲಿ ನಾಯಕಿ ಆಗುವುದಾದರೂ ಹೇಗೆ? ಆಗಲೇ ರಾಜರು ತಮಗಿದ್ದ ಪ್ರಭಾವ ಬಳಸಿ ಅಮ್ಮನಿಗೆ ಸಿನಿಮಾದಲ್ಲಿ ಅವಕಾಶ ಕೊಡಿಸಿದರಂತೆ.
ಅಮ್ಮ ಸಂಧ್ಯಾ ನನ್ನ ತಂದೆಗೆ ಎರಡನೇ ಪತ್ನಿ. ಮೊದಲ ಪತ್ನಿ ಜಯಮ್ಮಾಳ್ರನ್ನು ಬಿಟ್ಟು ಸಂಧ್ಯಾರನ್ನು ಮದುವೆಯಾದರು. ಹಾಗೆ ನೋಡಿದರೆ ನಮ್ಮ ತಾಯಿಯ ನಿಜವಾದ ಹೆಸರು ವೇದಮ್ಮ. ಆಂಧ್ರದ ನೆಲ್ಲೂರಿನವರು. ರಾಜ ಸಂಸ್ಥಾನದ ವೈದ್ಯ ರಾಮಸ್ವಾಮಿ ಅಯ್ಯರ್ರ ಪುತ್ರ ಜಯರಾಮನ್ ಮದುವೆಯಾದ ಮೇಲೆ ಮಹಾರಾಜರೇ ತಾಯಿಗೆ ಸಂಧ್ಯಾ ಅಂತ ಹೆಸರಿಟ್ಟರು. ಅಲ್ಲಿಂದ ಜಯಚಾಮರಾಜೇಂದ್ರ ಒಡೆಯರ್ಗೆ ಅಮ್ಮ ಆಪ್ತರಾದರು. ಅವರ ಆಶೀರ್ವಾದದಿಂದಲೇ ಚಿತ್ರರಂಗಕ್ಕೆ ಬಂದರು ಎನ್ನುವ ಮಾತುಗಳಿವೆ.
ಖ್ಯಾತಿಗೆ ಬಲಿಯಾದೆ: ನಾನು ಮೂರು ತಿಂಗಳ ಭ್ರೂಣದಲ್ಲಿದ್ದಾಗಲೇ ತೀರಿಕೊಂಡ ಅಪ್ಪ, ಅಮ್ಮನಿಗೆ ರಾಜರ ಜೊತೆ ಸಲುಗೆ, ತೆಲುಗು, ತಮಿಳು ಚಿತ್ರರಂಗದಲ್ಲಿ ಆಕೆ ಪ್ರಸಿದ್ಧ ನಟಿಯಾಗಿದ್ದಾಗಲೇ ನಾನು ಹುಟ್ಟಿದೆ. ಹೀಗಾಗಿ ಅಮ್ಮನ ಖ್ಯಾತಿಗೆ ನಾನು ಅಡ್ಡಿಯಾಗುತ್ತೇನೆಂಬ ಕಾರಣಕ್ಕೆ ದಾಮೋದರ ಪಿಳೈಗೆ ದತ್ತು ಕೊಟ್ಟು ಬೆಳೆಸಿದ್ದರು. ಅಮ್ಮನ ಮಡಿಲು ನೋಡದ ನಾನು ಈಗಲೂ ಈ ಜಗತ್ತಿಗೆ ಯಾರೂ ಅಂತ ಗೊತ್ತಾಗದಿರುವುದು ನನ್ನ ಬದುಕಿನ ದುರಂತ. ಜಯಲಲಿತಾ ಸಂಧ್ಯಾರ ಮಗಳು ಎನ್ನುವುದಕ್ಕೆ ಸಾಕ್ಷಿಗಳಿವೆ. ಆದರೆ, ಈ ಶೈಲಜಾಳಿಗೆ ಆ ಸಾಕ್ಷಿಗಳೂ ಇಲ್ಲ.
ಸಾಕು ತಂದೆಯ ಸಾವಿನ ನಂತರ ಅಕ್ಷರಶಃ ನಮ್ಮ ಬದುಕು ಬೀದಿಗೆ ಬಂತು. ಮೊದಲಿಗೆ ಗೊತ್ತು ಗುರಿ ಇಲ್ಲದ ಏರಿಯಾದ ಜೋಪಡಿಯಲ್ಲಿ ಜೀವನ ಸಾಗಿಸಿದೆ. ನಂತರ ವಿದ್ಯಾಪೀಠ ವೃತ್ತದಲ್ಲಿ ಚಿಕ್ಕ ಬಾಡಿಗೆ ಮನೆಗೆ ಬಂದೆ. ಆಗ ಜಯಲಲಿತಾ ತಂಗಿ ಇಲ್ಲೇ ಇದ್ದಾರೆ ಅಂತ ಸುದ್ದಿಯಾಯಿತು. ಕೆಲವರಿಂದ ತೊಂದರೆ ಅನುಭವಿಸಿದೆ. ಆಗಿನಿಂದಲೂ ಪ್ರಾಣ ಭೀತಿಯಲ್ಲಿ ಬದುಕುತ್ತಿದ್ದೇನೆ. ಧರ್ಮಸಿಂಗ್ ಸಿಎಂ ಆಗಿದ್ದಾಗ ನನ್ನ ಜೋಪಡಿಗೆ ಭದ್ರತೆ ಕೊಟ್ಟಿದ್ದರು. ಈಗಲೂ ನಾನು ಬೆಂಗಳೂರಿನಲ್ಲಿ ಇಂಥ ಕಡೆ ಇದ್ದೇನೆ ಅಂತ ಹೇಳಿಕೊಳ್ಳಲಾಗದ ಸ್ಥಿತಿಯಲ್ಲಿದ್ದೇನೆ. ನಾನು ಮತ್ತು ಜಯಲಲಿತಾ ಒಂದೇ ತಾಯಿಯ ಮಕ್ಕಳು ಎನ್ನುವುದಕ್ಕೆ ಇದ್ದ ಒಂದೇ ಒಂದು ಸಾಕ್ಷಿ ದಾಮೋದರ ಪಿಳೈ. ಈಗ ಅವರೂ ಇಲ್ಲ. ಇವರ ಹೊರತಾಗಿ ಹಳೇ ನಟ, ರಾಜೇಂದ್ರ ಕೃಷ್ಣಗೆ ನಾನು ಸಂಧ್ಯಾ ಮಗಳು ಅಂತ ಗೊತ್ತು. ಅವರು ಟಾಯ್ಲೆಟ್ ಬಳಿ ವಾಸಿಸುತ್ತಿದ್ದಾರೆ ಅಂತ ಪತ್ರಿಕೆಯಲ್ಲಿ ಓದಿದ್ದೇನೆ.
ಒಟ್ಟಿನಲ್ಲಿ ಹಣ, ಅಧಿಕಾರ, ಪ್ರಸಿದ್ಧಿಯ ಮುಂದೆ ಸ್ವಂತ ಸೋದರಿಯನ್ನು ಹತ್ತಿರ ಬಿಟ್ಟುಕೊಳ್ಳದ ನನ್ನ ಅಕ್ಕ ಜಯಲಲಿತಾ ತಮಿಳುನಾಡಿನ ಸಿಎಂ ಎನ್ನುವ ಶೈಲಜಾರ ಬದುಕು 'ಅಮ್ಮ'ನಿಗೆ ಕೇಳಿಸುವುದೇ? ಗೊತ್ತಿಲ್ಲ.
ತಂಗಿ ಅಂತ ಒಪ್ಪಿಕೊಳ್ಳಲಿ
ನನಗೆ ಮದುವೆಯಾಗಿ ಒಬ್ಬಳೇ ಹೆಣ್ಣು ಮಗಳು ಇದ್ದಾಳೆ. ಹೆಸರು ಅಮೃತಾ ಅಂತ. ಗಂಡ ಸಾರಥಿ. ಆದರೆ, ಕೈ ಹಿಡಿದವನು ನನ್ನ ಬೀದಿಗೆ ತಳ್ಳಿದ್ದಾನೆ. ನನ್ನ ಜೀವನವೂ ನೆಟ್ಟಗಿಲ್ಲ, ಅತ್ತ ಮಗಳ ಬದುಕೂ ಸರಿಯಾಗಿಲ್ಲ. ಅಳಿಯನೂ ನಮ್ಮನ್ನು ಬಿಟ್ಟು ಹೋಗಿದ್ದೇನೆ. ಒಂದು ಹೊತ್ತಿನ ಊಟಕ್ಕೂ ಪರದಾಡುತ್ತಿದ್ದೇವೆ. ಆದರೂ ನಮಗೆ ಜಯಲಲಿತಾ ಆಸ್ತಿ ಕೊಡುವುದು ಬೇಡ. ಕಷ್ಟದಲ್ಲಿರುವ ಸೋದರಿ ಅಂತ ಕನಿಕರ ತೋರಿಸಿ ನೆರವು ನೀಡಲಿ. ನಾನು ಆಕೆಯ ತಂಗಿಯಾಗಿ ಕೋರ್ಟು, ಕೇಸು ಅಂತ ಹೋದರೆ ಅಕ್ಕನ ಅಧಿಕಾರದ ಮುಂದೆ ಸೋಲುತ್ತೇನೆ. ನಾನು ಅಕ್ಕನನ್ನು ಕೊನೆ ಬಾರಿ ನೋಡಿದ್ದು ಕಾಲೇಜಿನಲ್ಲಿದ್ದಾಗ. ಆಗ ನಮ್ಮ ತಾಯಿಯೂ ಅವಳೊಂದಿಗಿದ್ದಳು. ಮೊದಲೇ ಅಮ್ಮನಿಗೆ ನನ್ನ ಕಂಡರೆ ಆಗುತ್ತಿರಲಿಲ್ಲ. ಹೀಗಾಗಿ ಮನೆಯೊಳಗೆ ಬಿಟ್ಟುಕೊಳ್ಳದೆ ಆಚೆ ನಿಲ್ಲಿಸಿ ಮಾತನಾಡಿಸಿ ಕಳುಹಿಸಿದರು.
ಸತ್ಯ ಹೇಳಲ್ಲ
ನಾನು ಜಯಲಲಿತಾ ತಂಗಿ ಅಂತ ಗೊತ್ತಾದ ಮೇಲೆ ಇಲ್ಲಿವರೆಗೂ ಪ್ರಾಣ ಉಳಿಸಿಕೊಂಡಿರುವುದೇ ಹೆಚ್ಚು. ವೀರಪ್ಪನ್ ಕಾರ್ಯಚರಣೆಯಲ್ಲಿದ್ದ ಪೊಲೀಸ್ ಅಧಿಕಾರಿ ವಿಜಯ್ಕುಮಾರ್, ಕಮಿಷನರ್ ಜೈಕುಮಾರ್, ರಾಜಕಾರಣಿ ಪುಗಳೇಂದಿ, ಎಂಜಿಆರ್, ಶಿವಾಜಿ ಗಣೇಶನ್ ಹಾಗೂ ರಜನೀಕಾಂತ್ ಇವರಿಗೆಲ್ಲ ನಾನು ಮತ್ತು ಜಯಲಲಿತಾ ಅಕ್ಕ ತಂಗಿ ಅಂತ ಗೊತ್ತು. ಎಂಜಿಆರ್, ಶಿವಾಜಿ ಗಣೇಶನ್ ಈಗಿಲ್ಲ. ಉಳಿದವರು ಸತ್ಯ ಹೇಳಕ್ಕೆ ಮುಂದೆ ಬರಲ್ಲ. ಸಿಎಂ ತಂಗಿಯಾದರೂ ಒಂದು ಹೊತ್ತಿನ ಊಟಕ್ಕೆ ಸಮಸ್ಯೆಯಿದೆ. ಕನಿಷ್ಠ ನಾನು ವಾಸಿಸುತ್ತಿರುವ ಮನೆಯ ವಿಳಾಸವನ್ನೂ ಹೇಳಲಾರದ ಸ್ಥಿತಿ ನನ್ನದು.
- ಆರ್. ಕೇಶವಮೂರ್ತಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


