ಪ್ರಧಾನ ಸುದ್ದಿ

ವರದೆಯ ಮೂಲ ಹುಡುಕಬೇಕಾದ ಸ್ಥಿತಿ ಬಂದೀತು ಹುಷಾರ್!

ವರದೆಯ ಮೂಲ ಹುಡುಕಬೇಕಾದ ಸ್ಥಿತಿ ಬಂದೀತು ಹುಷಾರ್!
Published On :

ವರದಾಮೂಲ (ಸಾಗರ ತಾ.):  ಸಾಗರ ತಾಲೂಕಿನ ವರದಾಮೂಲದಲ್ಲಿರುವ ವರದಾ ನದಿಯ ಮೂಲವನ್ನೇ ಹುಡುಕುವ ಪರಿಸ್ಥಿತಿ ಬಂದೀತು ಹುಷಾರ್!
ಇದು ದೇಶದ ಪ್ರತಿಷ್ಠಿತ ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್ಸಿ) ವಿಜ್ಞಾನಿಗಳು ನೀಡಿದ ಖಡಕ್ ಎಚ್ಚರಿಕೆ. ಪ್ರಸ್ತುತ ವರದಾ ನದಿಯ ಪರಿಸ್ಥಿತಿ ಚೆನ್ನಾಗಿಲ್ಲ, ಸರ್ಕಾರ ಕೂಡಲೇ ಇದರ ಪುನರುತ್ಥಾನಕ್ಕೆ ಕೈ ಹಾಕಲೇಬೇಕು. ಇಲ್ಲವಾದರೆ ಭವಿಷ್ಯದಲ್ಲಿ ಇಲ್ಲಿ ನೀರಿನ ಬದಲು ಮಣ್ಣು ಸಿಗುತ್ತದೆ ಎಂಬ ಸಂದೇಶವನ್ನು ಅಧ್ಯಯನ ನಡೆಸಿದ ವಿಜ್ಞಾನಿಗಳ ತಂಡ ರವಾನಿಸಿದೆ.
2013ರ ಮುಂಗಾರಿನ ತರುವಾಯ ಸತತವಾಗಿ 6 ತಿಂಗಳು ಅಧ್ಯಯನ ಮಾಡಿರುವ ಈ ತಂಡ, ವರದಾ ನದಿಯ ಅಚ್ಚರಿ ಸಂಗತಿ ಹಾಗೂ ಎದುರಿಸುತ್ತಿರುವ ಆತಂಕ ಬಗ್ಗೆ ಮಾಹಿತಿ ನೀಡಿದೆ.   ಈ ಅಧ್ಯಯನ ಕುರಿತು 'ಕನ್ನಡಪ್ರಭ'ಕ್ಕೆ ಮಾಹಿತಿ ನೀಡಿದ ಐಐಎಸ್ಸಿಯ ಪರಿಸರ ವಿಜ್ಞಾನಿ ಡಾ. ಟಿ.ವಿ. ರಾಮಚಂದ್ರ, ಸರ್ಕಾರ ಹಾಗೂ ಸ್ಥಳೀಯರು ಎಚ್ಚೆತ್ತುಕೊಳ್ಳದೇ ಇದ್ದಲ್ಲಿ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಲಿದೆ ಎಂದಿದ್ದಾರೆ. ಈ ನದಿ ವರದಾಮೂಲದಲ್ಲಿ ಹುಟ್ಟಿ ಸಾಗರ, ಸೊರಬ, ಶಿರಸಿ ತಾಲೂಕುಗಳಲ್ಲಿ ಸಣ್ಣ ಹೊಳೆಯಾಗಿ ಹರಿದು, ಹಾವೇರಿ ಜಿಲ್ಲೆಯ ಮುಖ್ಯ ನದಿಯಾಗಿ ತುಂಗಭದ್ರಾ ಸೇರುತ್ತದೆ.
ವಿಶೇಷತೆಗಳು: ವರದಾ ಸಣ್ಣ ನದಿಯೇನಲ್ಲ ಎಂಬುದು ಡಾ. ರಾಮಚಂದ್ರ ಅಭಿಪ್ರಾಯ. ಈ ನದಿ ತುಂಗಭದ್ರಾಗೆ ಸೇರುವ ಮುನ್ನ 190 ಕಿ.ಮೀ. ಹರಿಯುತ್ತದೆ. ಶರಾವತಿ, ಅಘನಾಶಿನಿ, ಬೇಡ್ತಿ ನದಿಗಿಂತ ಹೆಚ್ಚು ದೂರ ಕ್ರಮಿಸುತ್ತದೆ. ಶರಾವತಿ 128 ಕಿ.ಮೀ. ಕ್ರಮಿಸಿದರೆ, ಅಘನಾಶಿನಿ ಉದ್ದ 120 ಕಿ.ಮೀ. ಹಾಗೆಯೇ, ಬಹುತೇಕ ಎಲ್ಲ ನದಿಗಳು ಪಶ್ಚಿಮಕ್ಕ ಹರಿದರೆ, ಪೂರ್ವ ದಿಕ್ಕಿನತ್ತ ಮುಖಮಾಡಿ ಸಾಗುವುದು ಇದೊಂದೇ. ಸುಮಾರು ಐದು ಸಾವಿರ ಚದರ ಕಿ.ಮೀ. ಜಲಾನಯನ ಪ್ರದೇಶ ಹೊಂದಿದೆ. ಹರಿಯುವ ಪ್ರದೇಶದಲ್ಲಿ ಶೇ.12ರಷ್ಟು ಖಾಲಿ ಪ್ರದೇಶ ಇದ್ದರೆ, ಶೇ.70ರಷ್ಟು ವ್ಯವಸಾಯವಿದೆ. ಶೇ.8ರಷ್ಟು ಬಂಜರು ಭೂಮಿ ಸಹ ಇದೆ.
ಆತಂಕ: 1973ರಿಂದೀಚೆಗಿನ ದಾಖಲೆ ಪರಿಶೀಲಿಸಿದಾಗ ನದಿಯ ಇಕ್ಕೆಲಗಳಲ್ಲಿದ್ದ ದಟ್ಟ ಅರಣ್ಯ ಪ್ರದೇಶಕ್ಕೆ ಸಾಕಷ್ಟು ಹಾನಿಯಾಗಿದೆ. ಇದು ನದಿ ಹರಿವಿನ ಮೇಲೂ ಪರಿಣಾಮ ಬೀರಿದೆ. ಹಸಿರು ಕವಚ ವರ್ಷದಿಂದ ವರ್ಷಕ್ಕೆ ಕಡಿಮೆಯಾಗಿದ್ದು, ಬಹಳಷ್ಟು ಕಡೆ ಕಾಡು ಅತಿಕ್ರಮಣವಾಗಿದೆ. ಅನೇಕ ಅಭಿವೃದ್ಧಿ ಯೋಜನೆಗಳು ನದಿಯ ಮೇಲೆ ಸವಾರಿ ನಡೆಸಿವೆ. ಸದ್ಯ ಹಸಿರು ಕವಚ ದಟ್ಟವಾಗಿದ್ದಲ್ಲಿ ಮಾತ್ರ ಹರಿವಿನ ಪ್ರಮಾಣ ಚೆನ್ನಾಗಿದೆ. ಉಳಿದ ಕಡೆಗಳಲ್ಲಿ ವರ್ಷ ಪೂರ್ತಿ ಹರಿವಿಲ್ಲ.
ಏನಾಗಬೇಕು?: ವರದೆಯ ಪುನಶ್ಚೇತನಕ್ಕೆ ಸರ್ಕಾರ ತುರ್ತು ಕಾರ್ಯಕ್ರಮ ರೂಪಿಸಬೇಕು. ನದಿ ಪಾತ್ರದಲ್ಲಿ ನೆಡುತೋಪುಗಳನ್ನು ಕಡಿಮೆ ಮಾಡಿ ಸ್ಥಳೀಯ ಪ್ರಬೇಧ ಮರಗಳನ್ನು ಬೆಳೆಸಬೇಕು. ಹೀಗೆ ಮಾಡಿದಾಗ ಸಮತೋಲನ ಸಾಧ್ಯ. ಹಾಗೆಯೇ ಅಕ್ರಮ ಅರಣ್ಯ ಒತ್ತುವರಿ ತೆರವುಗೊಳಿಸಿ ಅಲ್ಲಿ ಅರಣ್ಯೀಕರಣಕ್ಕೆ ಒತ್ತುಕೊಡಬೇಕು. ತ್ಯಾಜ್ಯಗಳನ್ನು ನದಿಗೆ ಬಿಡದಂತೆ ಕ್ರಮಕೈಗೊಳ್ಳಬೇಕು ಎನ್ನುತ್ತಾರೆ ವಿಜ್ಞಾನಿಗಳು.

ಅಧ್ಯಯನ


ಅಧ್ಯಯನದ ನೇತೃತ್ವ ವಹಿಸಿದ್ದ ಭಾರತೀಯ ವಿಜ್ಞಾನ ಸಂಸ್ಥೆಯ ಪರಿಸರ ವಿಜ್ಞಾನಿ ಡಾ. ಟಿ.ವಿ. ರಾಮಚಂದ್ರ ಈ ಬಗ್ಗೆ ವಿವರಣೆ ನೀಡಿ, ಬೆಂಗಳೂರಿನ ವಿನಯ್, ವಿಷ್ಣು, ಸೈರಾ ತಮ್ಮ ಜತೆ ಅಧ್ಯಯನ ತಂಡದಲ್ಲಿದ್ದಾರೆ. ವಿನಯ್ ಅವರು ಉಪಗ್ರಹ ಚಿತ್ರ ತೆಗೆದು ವಿಶ್ಲೇಷಣೆ ಮಾಡಿದ್ದಾರೆ. ಜತೆಗೆ ಅಧ್ಯಯನ ಮುಂದುವರಿಸುತ್ತಿದ್ದು, ನೀರಿನ ಗುಣಮಟ್ಟ ಮಣ್ಣಿನ ಕುರಿತಂತೆ ಗಮನಿಸುತ್ತೇವೆ ಎಂದರು.

ಹಲವು ವಿಶೇಷತೆಯನ್ನೊಳಗೊಂಡ ವರದಾ ನದಿಯನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಎಲ್ಲರೂ ಒಟ್ಟಾಗಿ ಕೆಲಸ ಮಾಡಬೇಕಾಗಿದೆ. ವರದೆಯನ್ನು ರಕ್ಷಿಸಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯ. ಸರ್ಕಾರ ಕೂಡ ಮುತುವರ್ಜಿ ವಹಿಸಬೇಕು.
ಅನಂತ ಹೆಗಡೆ ಆಶೀಸರ, ವೃಕ್ಷಲಕ್ಷ ಆಂದೋಲನ

 ಶ್ರೀಕಾಂತ ಭಟ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.