ಪತ್ತೆಯಾದ ಜಯಾ ಸೋದರ

ಬೆಂಗಳೂರು: 'ಜಯಲಲಿತಾ ವಿಚಾರದಲ್ಲಿ ಶೈಲಜಾ ಹೇಳಿರುವುದು ನಿಜ. ಅವರ ಮಾತುಗಳನ್ನು ನಂಬಹುದು. ಆದರೆ, ಆಕೆ ಜಯಲಲಿತಾರನ್ನು ಸಂಪರ್ಕಿಸುವುದಕ್ಕೆ ಸಾಧ್ಯವಿಲ್ಲ. ನಾನೇ ಸಾಕಷ್ಟು ಬಾರಿ ಪ್ರಯತ್ನಪಟ್ಟು ಸುಮ್ಮನಾದೆ. ಆಕೆಯೂ ಹಾಗೆ ಪ್ರಯತ್ನಿಸಿ ಆಗದಿರುವುದಕ್ಕೆ ಈಗ ಮಾಧ್ಯಮಗಳ ಮುಂದೆ ಬಂದಿದ್ದಾರೆ'
ಹೀಗೆಂದವರು ಜಯಲಲಿತಾರ ತಂದೆ ಜಯರಾಮನ್ರ ಮೊದಲ ಪತ್ನಿ ಜಯಮ್ಮಾಳ್ರ ಪುತ್ರ ಎನ್.ಜೆ. ವಾಸುದೇವನ್. ಗುರುವಾರ 'ಕನ್ನಡಪ್ರಭ'ದಲ್ಲಿ ಪ್ರಕಟವಾದ ವರದಿ ಓದಿದ ಅವರು ದೂರವಾಣಿ ಮೂಲಕ ಮಾತನಾಡಿದರು. ಟಿ. ನರಸೀಪುರ ತಾಲೂಕಿನ ಶ್ರೀರಂಗರಾಜಪುರದಲ್ಲಿ ವಾಸವಿರುವ ಅವರು ತಮ್ಮ ಕುಟುಂಬದ ಬಗ್ಗೆ ಹೇಳಿದ್ದಷ್ಟು...
'ನಾವು ನಾಲ್ವರು ಮಕ್ಕಳು. ನಾನು, ಜಯಲಲಿತಾ ಹಾಗೂ ಅಣ್ಣ ಜಯಕುಮಾರ್. ಮತ್ತೊಬ್ಬರು ಎಲ್ಲಿದ್ದಾರೆ ಅಂತ ಗೊತ್ತಿಲ್ಲ' ಅಂತ ಶೈಲಜಾ ಹೇಳಿಕೊಂಡಿದ್ದರಲ್ಲವೆ? ಆ ನಾಲ್ಕನೆಯವನು ನಾನೇ. ನಮ್ಮ ತಾಯಿ ಜಯಮ್ಮಾಳ್ರನ್ನು ಬಿಟ್ಟು ನಮ್ಮ ತಂದೆ ಜಯರಾಮನ್, ಸಂಧ್ಯಾರನ್ನು ಮದುವೆಯಾದ ಮೇಲೆ ನಮ್ಮ ಕಡೆ ನೋಡಲಿಲ್ಲ. ಹೇಗೋ ಅಪ್ಪನ ಆಸ್ತಿ ಇದೆ. ಅದರಲ್ಲಿ ಜೀವನ ಸಾಗಿಸೋಣ ಅಂದುಕೊಂಡಿದ್ವಿ. ಆದರೆ, ನಮಗೆ ಗೊತ್ತಿಲ್ಲದಂತೆ ಸಂಧ್ಯಾ ಅಪ್ಪನ ಆಸ್ತಿಯನ್ನೆಲ್ಲ ಮಾರಿಕೊಂಡು ಮದ್ರಾಸ್ ಸೇರಿಕೊಂಡರು. ನಾನು ಕಾನೂನಿನ ಮೊರೆ ಹೋದೆ. ಒಮ್ಮೆ ತಮಿಳುನಾಡಿಗೂ ಹೋಗಿದ್ದೆ.
ನನ್ನ ಭೇಟಿಗೆ ಜಯಲಲಿತಾ ಇಷ್ಟಪಡಲಿಲ್ಲ. ಹೀಗಾಗಿ ಮಾಧ್ಯಮಗಳ ಮುಂದೆ ನಮ್ಮ ಕುಟುಂಬದ ಚರಿತ್ರೆ ತೆರೆದಿಟ್ಟೆ. ಮೊದಲ ಬಾರಿಗೆ ನಮ್ಮ ಕುಟುಂಬದ ವೈಯಕ್ತಿಕ ಸುದ್ದಿಗಳು ಬಂದಿದ್ದು ನಕ್ಕೀರನ್ ಪತ್ರಿಕೆಯಲ್ಲಿ. ಈ ಕಾರಣಕ್ಕೆ ಜಯಲಲಿತಾರಿಗೆ ನಕ್ಕೀರನ್ ಗೋಪಾಲ್ರನ್ನು ಕಂಡರೆ ಆಗದು. ತಂದೆಯ ಆಸ್ತಿಗಾಗಿ ತುಂಬಾ ವರ್ಷ ಕಾನೂನು ಸಮರ ಮಾಡಿದೆ. ಈ ನಡುವೆ ಇದ್ದ ಒಬ್ಬ ಮಗ ತೀರಿಕೊಂಡ. ಕಾಯಿಲೆಯಿಂದ ನನ್ನ ಪತ್ನಿಯೂ ತೀರಿಕೊಂಡರು. ನಾನು ಈಗ ಒಬ್ಬಂಟಿ. ಈ ಜಗಳ ಯಾಕೆ ಅಂತ ಸುಮ್ಮನಾದೆ. ಅದಾಗಿ ಎಷ್ಟೋ ವರ್ಷಗಳ ನಂತರ ಈಗ ನಿಮ್ಮ ಪತ್ರಿಕೆಯಲ್ಲಿ ಮತ್ತೆ ನಮ್ಮ ಕುಟುಂಬದ ಸುದ್ದಿ ಬಂದಿದೆ ಅಂತ ಬೆಂಗಳೂರಿನಿಂದ ನನ್ನ ಸಂಬಂಧಿಕರೊಬ್ಬರು ತಿಳಿಸಿದರು. ಹೀಗಾಗಿ ಕರೆ ಮಾಡಿದೆ.
ಸದ್ದು ಮಾಡಿದ ಸುದ್ದಿ
'ಕನ್ನಡಪ್ರಭ'ದಲ್ಲಿ ಗುರುವಾರ ಮುಂಜಾನೆ ವರದಿ ಪ್ರಕಟವಾಗುತ್ತಿದ್ದಂತೆ, ಕನ್ನಡದ ಪ್ರಮುಖ ಟಿವಿ ವಾಹಿನಿಗಳು ಈ ಸುದ್ದಿಯನ್ನು ಬ್ರೇಕಿಂಗ್ ನ್ಯೂಸ್ ಆಗಿಸಿ ವಿವರವಾಗಿ ಬಿತ್ತರಿಸಿದವು. ತಮಿಳು ವಾಹಿನಿಗಳೂ ಈ ಸುದ್ದಿಯನ್ನು ಎತ್ತಿಕೊಂಡಿವೆ. ಪತ್ರಿಕೆ ಸ್ಫೋಟಿಸಿದ ಸುದ್ದಿಗೆ ಪ್ರತಿಕ್ರಿಯೆಗಳ ಮಹಾಪೂರವೇ ಹರಿದು ಬಂದಿದೆ.
ಆರ್.ಕೇಶವಮೂರ್ತಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


