ಕೊಪ್ಪಳ, ಗುಲ್ಬರ್ಗ, ಗದಗದಲ್ಲಿ ಮೆಡಿಕಲ್ ಕಾಲೇಜು ಪ್ರಸಕ್ತ ವರ್ಷದಿಂದಲೇ ಆರಂಭಿಸಲು ಕೇಂದ್ರ ಸಮ್ಮತಿ

ಎಂಐಸಿಯಿಂದಲೂ ಒಪ್ಪಿಗೆ, ಅಧಿಕೃತ ಪತ್ರ ಮಾತ್ರ ಬಾಕಿ
ಕೊಪ್ಪಳ: ರಾಜ್ಯದ ಏಳು ಮೆಡಿಕಲ್ ಕಾಲೇಜುಗಳ ಪೈಕಿ ಮೂರು ಪ್ರಸಕ್ತ ವರ್ಷದಿಂದಲೇ ಪ್ರಾರಂಭವಾಗಲಿವೆ. ಇದಕ್ಕೆ ಕೇಂದ್ರ ಸರ್ಕಾರ ಅಸ್ತು ಎಂದಿದೆ. ಭಾರತೀಯ ವೈದ್ಯ ಮಂಡಳಿ ಇದಕ್ಕೆ ಸಮ್ಮತಿ ಸೂಚಿಸಿದ್ದು, ಅನುಮತಿ ಪತ್ರ(ಎಲ್ಓಪಿ) ಇನ್ನಷ್ಟೇ ನೀಡಬೇಕಾಗಿದೆ.
ಕೊಪ್ಪಳ, ಗದಗ ಹಾಗೂ ಗುಲ್ಬರ್ಗದಲ್ಲಿ ಎಲ್ಲಾ ಸಿದ್ಧತೆ ತೃಪ್ತಿಕರವಾಗಿರುವ ಹಿನ್ನೆಲೆಯಲ್ಲಿ ಇಲ್ಲಿ ಈ ವರ್ಷದಿಂದಲೇ ಮೆಡಿಕಲ್ ಕಾಲೇಜು ಪ್ರಾರಂಭಿಸಲಾಗುವುದು. ವಿದ್ಯಾರ್ಥಿಗಳ ಪ್ರವೇಶಕ್ಕೆ ಆಗಸ್ಟ್ ಕೊನೆಯ ವಾರದವರೆಗೂ ಅವಕಾಶ ಇದ್ದರೆ, ಎಂಸಿಐ ನೀಡುವ ಅನುಮತಿ ಆಧರಿಸಿ, ಸೆಪ್ಟೆಂಬರ್ ಅಂತ್ಯದವರೆಗೂ ಅವಕಾಶ ಇದೆ.
16 ಪ್ರಾರಂಭಕ್ಕೆ ಯೋಗ್ಯ: ಕಳೆದ ವಾರ ಮಂತ್ರಾಲಯದಲ್ಲಿ ನಡೆದ ದೆಹಲಿಯ ಆರೋಗ್ಯ ಇಲಾಖೆ ಸಭೆಯಲ್ಲಿ ದೇಶದ 60 ಕಡೆ ಮೆಡಿಕಲ್ ಕಾಲೇಜು ಪ್ರಾರಂಭಕ್ಕೆ ಇರುವ ಪ್ರಸ್ತಾಪದ ಕುರಿತು ಗಂಭೀರ ಚರ್ಚೆ ಮಾಡಲಾಯಿತು. ಇದರಲ್ಲಿ ಕೇವಲ 16 ಕಾಲೇಜುಗಳು ಪ್ರಾರಂಭಕ್ಕೆ ಯೋಗ್ಯವಾಗಿದೆ ಎಂದು ಎಂಸಿಐ ಅಭಿಪ್ರಾಯಪಟ್ಟಿತು. ಈ ಪೈಕಿ ರಾಜ್ಯದ ಗುಲ್ಬರ್ಗ, ಕೊಪ್ಪಳ, ಗದಗ ಕಾಲೇಜುಗಳೂ ಇವೆ ಎಂಬುದು ಆಶಾದಾಯಕ ಬೆಳವಣಿಗೆ.
ಮುಂದಿನ ವಾರ ಎಂಸಿಐ ಸಭೆ: ಎಂಸಿಐ ಒಪ್ಪಿಗೆಯಂತೆ ಈ ಎಲ್ಲಾ ಕಡೆ ಮೆಡಿಕಲ್ ಕಾಲೇಜನ್ನು ಇದೇ ವರ್ಷ ಪ್ರಾರಂಭಿಸಲು ಕೇಂದ್ರ ಸರ್ಕಾರ ಸಹಮತ ವ್ಯಕ್ತಪಡಿಸಿದೆ. ಆರೋಗ್ಯ ಇಲಾಖೆ ಸಚಿವರು ಈ ಬಗ್ಗೆ ವಿಶೇಷ ಆಸಕ್ತಿ ವಹಿಸಿದ್ದಾರೆ ಎನ್ನಲಾಗಿದೆ. ಎಂಸಿಐ ಈ ವರ್ಷವೇ ಪ್ರಾರಂಭಿಸಲು ಅನುಮತಿ ನೀಡುವುದಕ್ಕೆ ಹಿಂದೇಟು ಹಾಕಿದರೂ ಆರೋಗ್ಯ ಇಲಾಖೆಯ ವಿಶೇಷ ಅಧಿಕಾರ ಬಳಕೆ ಮಾಡಿ, 16 ಕಡೆಗೂ 100 ಸೀಟ್ಗೆ ಪ್ರವೇಶಾವಕಾಶ ಕಲ್ಪಿಸಲು ಸಾಧ್ಯವಿದೆ. ಎಂಸಿಐ ಕೂಡಾ ಮುಂದಿನ ವಾರದಲ್ಲಿಯೇ ಸಭೆ ಸೇರಿ, ಗುಲ್ಬರ್ಗ, ಕೊಪ್ಪಳ ಹಾಗೂ ಗದಗದಲ್ಲಿ ಮೆಡಿಕಲ್ ಕಾಲೇಜು ಆರಂಭಿಸುವ ಕುರಿತು ತೀರ್ಮಾನ ಕೈಗೊಳ್ಳಲಿದೆ. ಅಂತಿಮ ಅನುಮತಿ ಪತ್ರ ನೀಡುವ ಕುರಿತೂ ನಿರ್ಧರಿಸಲಿದೆ ಎಂದು ತಿಳಿದು ಬಂದಿದೆ.
ಸಿದ್ಧತೆ ಪೂರ್ಣ: ಈ ಮೂರು ಕಡೆಗಳಲ್ಲಿ ಕಾಲೇಜು ಆರಂಭಿಸಲು ಸಿದ್ಧತೆಗಳು ಪೂರ್ಣಗೊಂಡಿವೆ. 150 ಸ್ಥಾನಗಳಿಗೆ ಅನುಮತಿ ನೀಡಬೇಕು ಎಂದು ಕೋರಿರುವ ರಾಜ್ಯ ಸರ್ಕಾರ ಉಳಿದ ಕಾಲೇಜುಗಳಲ್ಲಿ ಕನಿಷ್ಠ 50 ಸೀಟ್ಗಳಿಗೆ ಅನುಮತಿ ನೀಡುವಂತೆ ಕೇಂದ್ರಕ್ಕೆ ಮನವಿ ಮಾಡಿಕೊಂಡಿದೆ. ಮುಂದಿನ ವರ್ಷದ ವೇಳೆಗೆ ಎಲ್ಲಾ ಸಿದ್ಧತೆ ಮಾಡಿಕೊಳ್ಳುವುದಾಗಿ ಮನವರಿಕೆ ಮಾಡಲು ಯತ್ನಿಸಿದೆ.
ಕೇಂದ್ರ ಸರ್ಕಾರ ಸಮ್ಮತಿ ನೀಡಿದ್ದು, ವಾರದೊಳಗೆ ಎಂಸಿಐ ಅನುಮತಿ ಪತ್ರ ಬರುವ ವಿಶ್ವಾಸವಿದೆ. ಎಂಸಿಐ ಏನಾದರೂ ಕಾರಣ ಹೇಳಿದರೂ ಕೇಂದ್ರ ಸರ್ಕಾರ ವಿಶೇಷ ಅಧಿಕಾರ ಚಲಾಯಿಸಿ ನೂರು ಸೀಟ್ಗಳಿಗೆ ಅನುಮತಿ ನೀಡುವ ಸಾಧ್ಯತೆ ಇದೆ. ಇದೇ ವರ್ಷ ಕೊಪ್ಪಳ, ಗದಗ ಹಾಗೂ ಗುಲ್ಬರ್ಗದಲ್ಲಿ ಮೆಡಿಕಲ್ ಕಾಲೇಜು ಪ್ರಾರಂಭವಾಗುತ್ತವೆ.
ಟಿ ಶ್ರೀನಿವಾಸ್,
ನಿರ್ದೇಶಕ, ಕೊಪ್ಪಳ ಕಾಲೇಜು
ಸೋಮರಡ್ಡಿ ಅಳವಂಡಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


