ಪ್ರಧಾನ ಸುದ್ದಿ

ಬಡತನ ರೇಖೆ: ಈಗಲೂ ಅದೇ ಅಪಹಾಸ್ಯ

ಬಡತನ ರೇಖೆ: ಈಗಲೂ ಅದೇ ಅಪಹಾಸ್ಯ
Published On :

ನವದೆಹಲಿ: ಬಡತನ ರೇಖೆ ವಿಚಾರವಾಗಿ ಯುಪಿಎ ಅವಧಿಯಲ್ಲಿ ವಿಜಯ್ ತೆಂಡೂಲ್ಕರ್ ಸಮಿತಿ ಮಾಡಿದ್ದ ಅಪಹಾಸ್ಯವನ್ನೇ ಈಗ ಆರ್ಬಿಐನ ಮಾಜಿ ಮುಖ್ಯಸ್ಥ ಸಿ.ರಂಗರಾಜನ್ ಸಮಿತಿ ವರದಿಯೂ ಮಾಡಿದೆ. ವ್ಯತ್ಯಾಸ ಎಂದರೆ ಬಡವರ ದೈನಂದಿನ ವೆಚ್ಚದ ಮಿತಿಯಲ್ಲಿ ಕೊಂಚ ಬದಲಾವಣೆ ಮಾಡಿರುವುದು.
ವ್ಯಂಗ್ಯ ಎಂದರೆ ವಿಜಯ್ ತೆಂಡೂಲ್ಕರ್ ಸಮಿತಿ ಸಲ್ಲಿಸಿದ್ದ ವರದಿ ಪರಿಶೀಲನೆಗೆ ಭಾರತೀಯ ರಿಜರ್ವ್ ಬ್ಯಾಂಕ್ ನಿವೃತ್ತ ಗವರ್ನರ್ ಸಿ.ರಂಗರಾಜನ್ ನೇತೃತ್ವದಲ್ಲಿ ಸಮಿತಿ ರಚಿಸಲಾಗಿತ್ತು.
ತೆಂಡೂಲ್ಕರ್ ಸಮಿತಿ ಗ್ರಾಮೀಣ, ನಗರ ಪ್ರದೇಶದಲ್ಲಿ ನಿತ್ಯ ಸರಾಸರಿ ರು. 33ಗಿಂತ ಕಡಿಮೆ ವೆಚ್ಚ ಮಾಡುವವರನ್ನು ಬಡವರೆಂದು ಕರೆದಿತ್ತು. ತೆಂಡೂಲ್ಕರ್ ಸಮಿತಿ ವರದಿಯನ್ನು ಸಾರಾಸಗಟು ತಳ್ಳಿಹಾಕಿರುವ ರಂಗರಾಜನ್ ಸಮಿತಿ ಪ್ರಕಾರ, ಗ್ರಾಮಾಂತರದಲ್ಲಿ ನಿತ್ಯ ರು. 32 ಮತ್ತು ನಗರಗಳಲ್ಲಿ ರು. 47ಕ್ಕಿಂತ ಕಡಿಮೆ ವೆಚ್ಚ ಮಾಡುವವರು ಮಾತ್ರ ಬಡವರು!
ಹಣದುಬ್ಬರ ಏರುಗತಿಯಲ್ಲಿರುವ ದಿನಮಾನದಲ್ಲಿ ತಿಂಗಳಿಗೆ ರು. 10 ಸಾವಿರ ಆದಾಯವಿದ್ದರೂ ಪುಟ್ಟ ಕುಟುಂಬ ನೆಮ್ಮದಿಯ ಜೀವನ ಸಾಗಿಸುವುದು ಕಷ್ಟ. ಆದರೆ 'ಆರ್ಥಿಕ ತಜ್ಞ'ರ ಪ್ರಕಾರ ಗ್ರಾಮಾಂತರದಲ್ಲಿ ಸರಾಸರಿ  ರು. 960 ಮತ್ತು ನಗರ ಪ್ರದೇಶಗಳಲ್ಲಿ ರು. 1410 ವೆಚ್ಚ ಮಾಡಲು ಶಕ್ತರಾಗಿರುತ್ತಾರೆಯೊ ಅವರನ್ನು ಬಡವರು ಎಂದು ಪರಿಗಣಿಸಲು ಸಾಧ್ಯವಿಲ್ಲ. ಇನ್ನೂ ಅಪಹಾಸ್ಯ ಎಂದರೆ ಈ ಮಾನದಂಡದ ಪ್ರಕಾರ ದಿನಕ್ಕೆ ರು. 50 ದಿನಗೂಲಿ ಗಳಿಸುವಾತ ಸಹ ಬಡವನಲ್ಲ!
ಹೊಸ ಮಾನದಂಡದ ಪ್ರಕಾರ, 2011-12ರಲ್ಲಿ ದೇಶದಲ್ಲಿ ಪ್ರತಿ ಮೂವರಲ್ಲಿ ಒಬ್ಬರು ಬಡವರು. ದೇಶದ 120 ಕೋಟಿ ಜನರಲ್ಲಿ 36.3 ಕೋಟಿ ಮಂದಿ (ಶೇ 29.5) ಬಡವರು. ತೆಂಡೂಲ್ಕರ್ ವರದಿ ಇದನ್ನು 26.9 ಕೋಟಿ ಎಂದು ಅಂದಾಜಿಸಿತ್ತು.
ಕ್ರೂರ ವ್ಯಂಗ್ಯ: ರಂಗರಾಜನ್ ವರದಿ ಖಂಡಿಸಿರುವ ಬಿಎಸ್ಪಿ ವರಿಷ್ಠ ನಾಯಕಿ ಮಾಯಾವತಿ, 'ಇದು ಬಡವರ ಕುರಿತ ಕ್ರೂರ ವ್ಯಂಗ್ಯ' ಎಂದು  ಟೀಕಿಸಿದ್ದಾರೆ.


ವ್ಯತ್ಯಾಸವೇಕೆ?
ತೆಂಡೂಲ್ಕರ್ ಸಮಿತಿ ಗ್ರಾಮೀಣರು ಮತ್ತು ನಗರ ಪ್ರದೇಶದ ಜನರಿಗೆ ಒಂದೇ ಮಾನದಂಡ ಅನುಸರಿಸಿತ್ತು. ಆಹಾರ ಮತ್ತು ಆಹಾರೇತರ ವಸ್ತುಗಳ ಕನಿಷ್ಠ ಬಳಕೆಗೆ ಮಾಡುವ ವೆಚ್ಚವನ್ನು ಇಲ್ಲಿ ಪರಿಗಣಿಸಿದ್ದೇವೆ. ಆಹಾರದಲ್ಲಿ ಕ್ಯಾಲೊರಿ, ಪ್ರೊಟೀನ್, ಕೊಬ್ಬನ್ನು ಆಧಾರವಾಗಿಟ್ಟುಕೊಂಡು ಕನಿಷ್ಠ ಬಳಕೆ ನಿರ್ಧರಿಸಿದ್ದೇವೆ. ಆಹಾರೇತರ ಬಳಕೆ ವೆಚ್ಚದ ವಿಚಾರದಲ್ಲಿಯೂ ನಿರ್ದಿಷ್ಟ ಮಾನದಂಡ ಅನುಸರಿಸಿದ್ದೇವೆ. ಎರಡನ್ನೂ ಪರಿಗಣಿಸಿ ಬಡತನರೇಖೆ ನಿರ್ಧರಿಸಲಾಗಿದೆ. ನಮ್ಮ ವರದಿಯಂತೆ ಬಡವರ ಸಂಖ್ಯೆ ತೆಂಡೂಲ್ಕರ್ ವರದಿಗಿಂತ ಗ್ರಾಮಾಂತರದಲ್ಲಿ ಶೇ 19, ನಗರದಲ್ಲಿ ಶೇ 40 ಜಾಸ್ತಿಯಾಗಿದೆ ಎನ್ನುತ್ತಾರೆ ಡಾ.ರಂಗರಾಜನ್.


ಬಡವರ ಸಂಖ್ಯೆ (ದಶಲಕ್ಷಗಳಲ್ಲಿ)


ತೆಂಡೂಲ್ಕರ್ ವರದಿ   ಗ್ರಾಮೀಣ   ನಗರ
2009-10                      278.2     76.5
2011-12                      216.7     53.1
ಇಳಿಕೆ                                   61.5     23.4
ರಂಗರಾಜನ್ ವರದಿ
2009-10                    325.9  128.7
2011-12                      260.5   102.5
ಇಳಿಕೆ                                   65.4     26.2

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.