ಭ್ರಷ್ಟಾಚಾರವೇ ಸಿದ್ಧಾಂತ ಎಂದ ಮೇಲೆ ಇನ್ನು ಉಳಿದಿದ್ದಾದರೂ ಏನು ಸ್ವಾಮಿ?

'ಇವೆಲ್ಲ ಮಾಮೂಲು ನಡೆಯೋದೇ. ಈಗ ಗೊತ್ತಾಗ್ತಾ ಇದೆ ಅಷ್ಟೇ.' ಸಮಾಜವೊಂದು ಈ ಧಾಟಿಯಲ್ಲಿ ಮಾತಿಗಿಳಿದಿದೆ ಎಂದರೆ ಅದು ನೈತಿಕವಾಗಿ ಅಧಃಪತನಕ್ಕೆ ಇಳಿದಿದೆ ಅಂತ ಅರ್ಥ. ಕೆಟ್ಟದ್ದು ಎಂಬುದು ಕಾಮನ್ ಆಗಿಬಿಟ್ಟಿರುವುದರಿಂದ ನಾವದನ್ನು ಒಪ್ಪಿಕೊಂಡಿದ್ದೇವೆ ಎಂಬ ಹಂತ ಇದು. ಇಲ್ಲಿ ಪ್ರತಿಭಟನೆ- ಹೋರಾಟ ಎಲ್ಲವೂ ಅಂತ್ಯಗೊಳ್ಳುತ್ತವೆ. ಅಲ್ಲಿಗೆ ವ್ಯವಸ್ಥೆಯಲ್ಲಿ ಉಳಿದುಕೊಳ್ಳುವ ಭರವಸೆಯಾದರೂ ಯಾವುದು?
ಕಣ್ಣೆದುರಿಗಿರುವ ಕಾಶಪ್ಪನವರ್ ಹಾಗೂ ಎಚ್. ಡಿ. ಕುಮಾರಸ್ವಾಮಿ ಪ್ರಕರಣದಲ್ಲಿ ವ್ಯಕ್ತವಾಗಲು ಸೋಲುತ್ತಿರುವ ಪ್ರತಿಕ್ರಿಯೆಗಳು ಇಂಥ ಭರವಸೆಹೀನ ಭವಿಷ್ಯವನ್ನೇ ಬಿಂಬಿಸುತ್ತಿವೆ. 'ಶಾಸಕರಿಗೆಲ್ಲ ಒಂದೊಂದು ಕೋಟಿ ರುಪಾಯಿ ಕೊಟ್ಟು ಎಂಎಲ್ಸಿಯಾಗಿ ಎಂದಿದ್ದು ಹೌದು. ಅದರಲ್ಲೇನಿದೆ? ರಾಜ್ಯಸಭೆ- ವಿಧಾನಪರಿಷತ್ ನಾಮನಿರ್ದೇಶನಗಳಿಗೆ ಹಣ ಓಡಾಡುತ್ತಿತ್ತು ಎಂಬುದೇನೂ ಹೊಸ ಸಂಗತಿಯಲ್ಲ.' ಎಂಬರ್ಥದಲ್ಲಿ ಕುಮಾರಸ್ವಾಮಿಯವರ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ. ಹಣ ಕೇಳಿದ್ದನ್ನು ನಿರಾಕರಿಸಿ ಅವರು ಜಾಣರಾಗಬೇಕಿತ್ತು ಅಂತಲ್ಲ. ಆದರೆ, ತಪ್ಪೇ ನನ್ನ ದೃಷ್ಟಿಯಲ್ಲಿ ಸರಿ, ಅದನ್ನೇ ಮಾಡೋದು ಏನೀಗ ಎಂಬ ಧ್ವನಿ ಅತ್ಯಂತ ಅಪಾಯಕಾರಿ. ಭ್ರಷ್ಟಾಚಾರ ಎಲ್ಲ ಕಡೆಯೂ ಇದೆ, ನಾವೂ ಅದನ್ನು ಮಾಡ್ತೀವಿ ಹಾಗೂ ಬೇರೆಯಂತವರಲ್ಲದೇ ನಾವು ಮಾಡುತ್ತಿರುವುದನ್ನು ಘಂಟಾಘೋಷವಾಗಿ ಹೇಳಿಕೊಳ್ಳುತ್ತೀವಾದ್ದರಿಂದ ನೀವೆಲ್ಲ ನಮ್ಮನ್ನು ಪ್ರಶಂಸಿಸಬೇಕು ಎಂಬ ಧೋರಣೆ ಇಲ್ಲಿ ಢಾಳಾಗಿದೆ. ಯಾವುದೇ ಪಕ್ಷ-ಸಂಘಟನೆ ಇಲ್ಲವೇ ಗುಂಪಿನ ಮುಖ್ಯಸ್ಥ ಸ್ಥಾನದಲ್ಲಿ ಇರುವವರಿಂದಲೇ ಈ ಧೋರಣೆ ವ್ಯಕ್ತವಾಗುವುದು ಕೆಟ್ಟದಿನಗಳ ರುದ್ರನರ್ತನಕ್ಕೆ ಮುನ್ನುಡಿ. ನಮ್ಮ ಬಾಸ್ ಹೀಗೆ ಹೇಳ್ತಿದಾರೆ ಅಂದಮೇಲೆ ಇನ್ನು ತಿನ್ನುವುದಕ್ಕೇನು ಅಂಜಿಕೆ? ಎಲ್ಲಿ ಒಂದು ಅಂಕೆ ಮೀರಿದರೆ ಮೇಲಿನವರಿಗೆ ಗೊತ್ತಾಗಿ ತರಾಟೆಗೆ ತೆಗೆದುಕೊಳ್ಳುತ್ತಾರೇನೋ ಅಂತ ಇಷ್ಟುದಿನ ತುಸುವಾದರೂ ಮುಜುಗರ ಇಟ್ಟುಕೊಂಡವರಿಗೆ ನಿರಾಳರಾಗಿ ನುಂಗಿ ಎಂಬ ಸಂದೇಶ ಇದಾಗುವುದಿಲ್ಲವೇ? ಅಧಿನಾಯಕನ ನೇತೃತ್ವದಲ್ಲೇ ನುಂಗೋಣ ಬಾರಾ ನುಂಗೋಣ!
'ಎಲ್ಲರೂ ರಾಜ್ಯಸಭೆ- ವಿಧಾನಪರಿಷತ್ ಸ್ಥಾನಗಳಿಗೆ ಹಣ ಕೇಳುತ್ತಾರೆ. ನಾನೂ ಕೇಳುತ್ತೇನೆ ಏನೀಗ' ಎಂದು ಭ್ರಷ್ಟಾಚಾರವನ್ನು ರ್ಯಾಷನಲೈಸ್ ಮಾಡುವುದಾದರೆ ಅದನ್ನೇ ನಾಳೆ ಎಲ್ಲ ವಿಷಯಗಳಲ್ಲೂ ಮಾಡಬಹುದಲ್ಲ? ಅತ್ಯಾಚಾರ ಎಂಬುದು ಘಟಿಸುತ್ತಲೇ ಇರುತ್ತದೆ ಎಂಬ ಅಂಶ ಬಲಾತ್ಕಾರಗಳನ್ನೆಲ್ಲ ಸಹಿಸಿಕೊಳ್ಳಿ ಎಂಬುದಕ್ಕಾಗಲೀ, ಬಲಾತ್ಕಾರ ಮಾಡುವುದು ಸಹಜ ಎನ್ನುವುದಕ್ಕಾಗಲೀ ಸಮರ್ಥನೆ ಆದರೆ ಗತಿ ಏನು? 'ಹುಡುಗರು ತಪ್ಪು ಮಾಡುತ್ತಾರೆ. ಹಾಗೆಂದು ಗಲ್ಲಿಗೆ ಹಾಕುವುದು ಸರಿಯೇ?' ಅಂತ ಅತ್ಯಾಚಾರಿಗಳನ್ನು ಸಮರ್ಥಿಸಿಕೊಂಡಿದ್ದ ಮುಲಾಯಂ ಸಿಂಗ್ ಮಾದರಿಯನ್ನೇ ಕರ್ನಾಟಕದ ರಾಜಕಾರಣವೂ ತನ್ನದಾಗಿಸಿಕೊಳ್ಳಲು ಹೊರಟಿದೆಯೇ?
ಬೀದಿಯಲ್ಲಿರುವ ಎಲ್ಲ ಪುಡಿರೌಡಿಗಳು, ಬ್ಲ್ಯಾಕ್ಮೇಲ್ ಮಾಡುವವರು, ಕಪ್ಪುದಂದೆಯವರು ಇರುವಂತೆ ತಾನೂ ಸಹ ಎಂಬುದೇ ವಾದವಾದರೆ ಎಲ್ಲ ಬಿಟ್ಟು ಅದೇ ಗುಂಪನ್ನು ಸೇರಿಕೊಳ್ಳಲಿ. ಅದುಬಿಟ್ಟು, ರಾಜ್ಯವನ್ನು ನಿಭಾಯಿಸುವ- ಅಧಿಕಾರ ಸೂತ್ರ ಹಿಡಿಯುವ ಸಾಧ್ಯತೆಯ ರಾಜಕೀಯ ಪಕ್ಷವೊಂದರ ಮುಖ್ಯಭೂಮಿಕೆಯಲ್ಲಿ ಏಕಿರಬೇಕು? ಹೀಗೆಲ್ಲ ಕೋಟಿ ಹಣ ಕೊಟ್ಟು ಹೋದವರು ಶಾಸನಸಭೆಗಳಲ್ಲಿ ಜನರ ಕಷ್ಟಗಳ ಬಗ್ಗೆ ಯಾಕಾದರೂ ಮಾತನಾಡುತ್ತಾರೆ? ಅವರು ಅಲ್ಲಿದ್ದಷ್ಟು ದಿನ ಜನವಿರೋಧಿ ಆಗಬಹುದಾದ ಸ್ವಹಿತಾಸಕ್ತಿಯ ಯೋಜನೆಗಳನ್ನೇ ಜಾರಿಗೆ ತರುತ್ತಾರೆ. ಏಕೆಂದರೆ ಅವರು ಹಾಕಿದ 'ಬಂಡವಾಳ'ದ ಹಲವು ಪಟ್ಟು ಹಿಂದಕ್ಕೆ ಬರಬೇಕಲ್ಲವೇ? ಆ ಸಾಮ್ರಾಜ್ಯ ಯಾರ ಗೋರಿಯ ಮೇಲೆದ್ದರೆ ಅವರಿಗೇನು?
ಜನಪ್ರತಿನಿಧಿ ಎನ್ನುವುದು ದೌಲತ್ತಲ್ಲ. ಹೆಚ್ಚುವರಿ ಎಚ್ಚರಿಕೆ ಹೊಂದಿರಬೇಕಾದ ಜವಾಬ್ದಾರಿ. ಯಾವನೋ ಪೊರ್ಕಿ ಮಧ್ಯರಾತ್ರಿಯವರೆಗೆ ಹೆಂಡ ಕುಡಿಯುತ್ತ ಕೂತಿರುತ್ತಾನೆ ಎಂದಾದರೆ ಎಮ್ಮೆಲ್ಲೆ ಆಗಿರುವ ನಾನೇನು ಕಮ್ಮಿ ಎಂಬ ಧೋರಣೆಗೆ ಅರ್ಥವಿದೆಯೇ? ಅಂಥ ಎಲ್ಲ ನ್ಯೂನತೆಗಳನ್ನು ಸರಿಮಾಡಿ ಅಂತಲೇ ಜನ ಆರಿಸಿ ಕಳಿಸೋದು. ಹೀಗಿರುವಾಗ, 'ನಾನು ಶಾಸಕ ಅಂತ ಗೊತ್ತಾದ ಮೇಲಾದರೂ ಪೊಲೀಸರು ತೆಪ್ಪಗಿರಬೇಕಿತ್ತು' ಎಂಬ ಧಾಟಿಯಲ್ಲಿ ತಪ್ಪು ಮುಚ್ಚಿಕೊಳ್ಳುವುದಕ್ಕೆ ಹೆಣಗುತ್ತಿರುವವರಿಗೆ ಉಗಿಯುವುದಕ್ಕೆ ಮುಜುಗರವೇಕೆ? ಆದರೆ ಇಲ್ಲೂ ಕುಮಾರಸ್ವಾಮಿ ಪ್ರಯತ್ನಿಸುತ್ತಿರುವಂಥದ್ದೇ 'ಅನಾಚಾರದ ಸೈದ್ಧಾಂತೀಕರಣ'ವೊಂದು ಕೆಲಸ ಮಾಡುತ್ತಿದೆ. ಕುಡಿದು ಗಲಾಟೆ ಮಾಡುವುದೆಲ್ಲ ಬಹಳ ಸಣ್ಣ ವಿದ್ಯಮಾನ. ಶಾಸಕ ಎಂಬ ಕಾರಣಕ್ಕೆ ಅದನ್ನು ದೊಡ್ಡ ಮಾಡುವುದು ಬೇಡ ಎಂಬಂತಿದೆ ಆಡಳಿತಾರೂಢ ಕಾಂಗ್ರೆಸ್ನ ಧ್ವನಿ. ಪ್ರಶ್ನೆ ಇರುವುದೇ ಕಾಶಪ್ಪನವರ್ ಜನಪ್ರತಿನಿಧಿ ಆಗಿರುವುದಕ್ಕೆ. ಕರ್ತವ್ಯನಿರತ ಪೊಲೀಸರ ಸಕಾರಣ ಆಕ್ಷೇಪಕ್ಕೆ ಯಾರೋ ಒಬ್ಬ ವ್ಯತಿರಿಕ್ತವಾಗಿ ಪ್ರತಿಕ್ರಿಯಿಸುವುದಕ್ಕೂ, ಶಾಸನ ರಚನೆಯ ಗುರುತರ ಜವಾಬ್ದಾರಿ ಇರುವ ಶಾಸಕನೊಬ್ಬ ಕಾನೂನಿನ ಪ್ರಜ್ಞೆ ಮರೆತು ಪೊಲೀಸರ ಮೇಲೆ ಏರಿ ಹೋಗುವುದಕ್ಕೂ ವ್ಯತ್ಯಾಸವಿಲ್ಲವೇ? ಇದನ್ನು ಸಾಮಾನ್ಯೀಕರಿಸುವವರಿಗೆ ನಾಚಿಕೆ ಏಕಿಲ್ಲ? 'ಇವೆಲ್ಲ ಸಾಮಾನ್ಯ. ಆದ್ರೆ ಸಿಕ್ಕಿಬೀಳಬಾರ್ದು ನೋಡ್ರಪ್ಪಾ' ಅಂತ ಒಬ್ಬರು ಘಟನೆಯ ಗಾಂಭೀರ್ಯವನ್ನೇ ತಮಾಷೆಯಲ್ಲಿ ತೇಲಿಸುವುದಕ್ಕೆ ಯತ್ನಿಸುತ್ತಾರೆ. ಮುಖ್ಯಮಂತ್ರಿ ಸೇರಿದಂತೆ ಆಡಳಿತಾರೂಢರದ್ದು 'ನೀವೇನು ಸಾಚಾನಾ' ಎಂಬ ವರಸೆ!
ವ್ಯಂಗ್ಯ ಹೇಗಿದೆ ನೋಡಿ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕುಮಾರಸ್ವಾಮಿಯವರ ಪ್ರಕರಣಕ್ಕೆ ಸಂಬಂಧಿಸಿ- 'ಬೆಕ್ಕು ಕಣ್ಣುಮುಚ್ಚಿ ಹಾಲು ಕುಡಿದು ಜಗತ್ತಿಗೆ ಗೊತ್ತಾಗಿಲ್ಲ ಅಂದುಕೊಳ್ಳುವಂತೆಯೇ ಕುಮಾರಸ್ವಾಮಿಯವರ ಭ್ರಷ್ಟಾಚಾರವೂ ಇದೆ' ಅಂತ ಪ್ರತಿಕ್ರಿಯಿಸುತ್ತಾರೆ. ಇಂಥವೆಲ್ಲ ಪ್ರತಿಕ್ರಿಯೆಗಳನ್ನು ಎದುರಿಸುವುದಕ್ಕೆ ಕುಮಾರಸ್ವಾಮಿಯವರು ಬಳಸುತ್ತಿರುವ ಗುರಾಣಿ ಎಂದರೆ- 'ಯಾರೂ ಸಾಚಾ ಅಲ್ಲ. ಆದರೆ ನಾನು ಮಾತ್ರ ಸತ್ಯ ಹರಿಶ್ಚಂದ್ರನಂತೆ ಆಡದೇ ವಾಸ್ತವ ಒಪ್ಪಿಕೊಂಡಿದ್ದೇನೆ' ಎಂಬ ಸಮರ್ಥನೆ. ಇಲ್ಲಿ ಕುಮಾರಸ್ವಾಮಿಯವರು ಹೂಡುತ್ತಿರುವ ಆಟವನ್ನೇ ಕಾಶಪ್ಪನವರ್ ಪ್ರಕರಣದಲ್ಲಿ ಸಿದ್ದರಾಮಯ್ಯ ಆಡುತ್ತಿದ್ದಾರೆ. ಅಲ್ಲಿ ಸರ್ಕಾರದ ವಿರುದ್ಧ ವ್ಯಕ್ತವಾಗುತ್ತಿರುವ ಪ್ರತಿಪಕ್ಷಗಳ ಟೀಕೆಗೆ ಮುಖ್ಯಮಂತ್ರಿಯ ಆಕ್ರೋಶಿತ ಉತ್ತರ 'ನೀವೇನು ಸಾಚಾನಾ' ಮಾದರಿಯದ್ದೇ. 'ನಿಮ್ಮ ಸರ್ಕಾರದಲ್ಲಿ ಹಾಲಪ್ಪ ಸ್ನೇಹಿತನ ಹೆಂಡತಿ ಮೇಲೆಯೇ ಅತ್ಯಾಚಾರ ಮಾಡಲಿಲ್ವೇನ್ರೀ? ರೇಣುಕಾಚಾರ್ಯ ಪ್ರಕರಣ ನೆನಪಿಸಿಕೊಳ್ಳಿ' ಹೀಗೆಲ್ಲ ಹೇಳುತ್ತಿರುವ ಮುಖ್ಯಮಂತ್ರಿ ಮಾತಿನ ಸಾರಾಂಶವಾದರೂ ಏನು? ಬಿಜೆಪಿಯವರು ಸಾಚಾ ಅಲ್ಲವಾದ್ದರಿಂದ ನಮ್ಮ ಪಕ್ಷದವರೂ ಸಾಚಾ ಆಗಿರಬೇಕಾಗಿಲ್ಲ ಅಂತಲೇ? ರಾಜಕೀಯದಲ್ಲಿ ಇವೆಲ್ಲ ಮಾಮೂಲು ಎಂಬ 'ಅನಾಚಾರದ ಸೈದ್ಧಾಂತೀಕರಣ'ವಲ್ಲವೇ ಇದು? ಈ ಹಿಂದೆ ಸರ್ಕಾರ ನಡೆಸಿದ್ದ ಬಿಜೆಪಿಯವರು ತಮ್ಮ ವಿರುದ್ಧ ಭ್ರಷ್ಟಾಚಾರದ ಆರೋಪಗಳು ಬಂದಾಗಲೆಲ್ಲ ಪ್ರತಿಕ್ರಿಯಿಸಿದ ರೀತಿಯೂ ಇದೇ ಆಗಿತ್ತು. 'ಇಷ್ಟುವರ್ಷ ಕಾಂಗ್ರೆಸ್ನವರು ನೀವು ತಿನ್ಲಿಲ್ವೇನ್ರೀ?' ಎಂಬುದೇ ಅವರ ಎಲ್ಲ ಕುಕೃತ್ಯಗಳಿಗೆ ಸಮಜಾಯಿಷಿ ಆಗಿತ್ತು.
ಅನಾಚಾರದ ಸೈದ್ಧಾಂತೀಕರಣ ಎಂಬುದು ಸಮಾಜವನ್ನೇ ವ್ಯಾಪಿಸಿಕೊಳ್ಳುತ್ತಿರುವ ಮಹಾವ್ಯಾಧಿ. ಆರೋಗ್ಯಕ್ಕೆ ಹಾನಿ ಅಂತ ಗೊತ್ತಿದ್ದೂ ಅಂತ ಪದಾರ್ಥಗಳನ್ನೇ ಅಮೃತ ಎಂದು ಬಿಂಬಿಸಿ ಮಾರಾಟ ಮಾಡ್ತಿರೋದು ಯಾಕೆ ಅಂತ ವ್ಯಾಪಾರಿಯನ್ನು ಕೇಳಿದರೆ- 'ಜನಕ್ಕೆ ಇದೇ ಇಷ್ಟ ಕಣ್ರೀ' ಅಂತ ಆತನ ಉತ್ತರ ಸಿದ್ಧವಿರುತ್ತದೆ. ಹೀಗೆಲ್ಲ ತೆರೆದ ಮೈ ಚಿತ್ರಗಳನ್ನು ಏಕೆ ಹಾಕ್ತೀರಿ ಅಂತ ಯಾವುದಾದರೂ ಸಂಪಾದಕನನ್ನು ಕೇಳಿನೋಡಿ. 'ಅದಿದ್ರೆ ಸೇಲ್ ಆಗೋದು. ಜನಕ್ಕೆ ಬೇಕಿರೋದನ್ನು ನಾವು ಕೊಡ್ತೀವಿ. ಇಷ್ಟೆಲ್ಲ ಮಾತಾಡೋ ನಿಮಗೆ ಸೆಕ್ಸ್ ಅಂದ್ರೆ ಇಂಟರೆಸ್ಟ್ ಇಲ್ವಾ? ಅದಿರೋದ್ರಿಂದಲೇ ನಾನು-ನೀವು ಹುಟ್ಟಿರೋದು' ಅಂತ ಸೈದ್ಧಾಂತಿಕರಣ ನೀಡುತ್ತಾರೆ. ಇವೆಲ್ಲವನ್ನೂ ಸರಿ ಮಾಡಬೇಕಾದ 'ಅಧಿಕಾರ ಕೇಂದ್ರ' ತನ್ನೆಲ್ಲ ಲೋಪಗಳ ನಡುವೆಯೂ ನೈತಿಕ ಗುಟುರು ಹಾಕುವ ಸಾಮರ್ಥ್ಯ ಉಳಿಸಿಕೊಳ್ಳಬೇಕಾದದ್ದು ಅನಿವಾರ್ಯ. ಆದರೆ 'ಹಾಳು ರಾಜಕೀಯ' ಎಂಬ ಗೊಣಗಾಟಕ್ಕೆ ಸೀಮಿತವಾಗಿದ್ದ ವಲಯ ಭ್ರಷ್ಟಾಚಾರವನ್ನೂ, ಗೂಂಡಾ ವರ್ತನೆಯನ್ನೂ ಸೈದ್ಧಾಂತಿಕಗೊಳಿಸಲು ಹೊರಟಿದೆಯಲ್ಲ? ಇದು ಎದೆ ನಡುಗಿಸುವ ವಿಷಯ.
'ನನಗೆ ಧರ್ಮ ಯಾವುದು ಅಂತ ಗೊತ್ತು. ನಾನದನ್ನು ಆಚರಿಸಲಾರೆ. ಅಧರ್ಮ ಯಾವುದೆಂಬುದನ್ನೂ ಅರಿತಿರುವೆ. ಆದರೆ ಅದನ್ನು ಬಿಡಲಾರೆ' ಅಂದಿದ್ದನಂತೆ ದುರ್ಯೋಧನ. ಮಹಾಭಾರತ ಸಂಘರ್ಷದ ಮತ್ತೊಂದು ಅವತರಣಿಕೆಯಲ್ಲಿ ನಾವಿದ್ದೇವೆಯೇ?
-ಚೈತನ್ಯ ಹೆಗಡೆ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


