ನಾನಿರುವುದೆ ನಿಮಗಾಗಿ

ಪ್ರಯಾಣಿಕ ಸ್ನೇಹಿ' ಯೋಜನೆಗಳನ್ನೇ ಬಜೆಟ್ನಲ್ಲಿ ಘೋಷಿಸಬೇಕು ಎನ್ನುವುದು ನನ್ನ ಬಯಕೆ. ಪ್ರಯಾಣ ದರ ಏರಿಕೆ ಮಾಡಿದ್ದಕ್ಕೆ ನಿಮಗೆ ನನ್ನ ಮೇಲೆ ಸ್ವಲ್ಪ ಬೇಸರವಾಗಿರಬಹುದು. ಅದನ್ನು ಸರಿದೂಗಿಸಲು ನಾನು ಬಜೆಟ್ನಲ್ಲಿ ಪ್ರಯತ್ನಿಸಿದ್ದೇನೆ. ನಿಮಗೆ ಅನುಕೂಲ ಮಾಡಿಕೊಡುವ ಹಲವು ಯೋಜನೆಗಳನ್ನು ಘೋಷಿಸುತ್ತಿದ್ದೇನೆ. ಅವುಗಳು ಯಾವ್ಯಾವುವು ಅಂತ ಹೇಳ್ತೇನೆ ಕೇಳಿ.
ಜನರ ಅನುಕೂಲವೇ ನನಗೆ ಮುಖ್ಯ. ನಮ್ಮ ದೇಶದಲ್ಲಿ ರೈಲಲ್ಲಿ ಸಂಚರಿಸುವವರು ತುಂಬಾ ಮಂದಿ ಇದ್ದಾರೆಂದು ಗೊತ್ತು ಹಾಗಾಗಿ ಈ ಬಾರಿ ಸಾಕಷ್ಟು ರೈಲುಗಳನ್ನು ಪರಿಚಯಿಸುತ್ತಿದ್ದೇನೆ. 5 'ಜನ ಸಾಧಾರಣ್', 5 ಪ್ರೀಮಿಯಂ ಮತ್ತು 6 ಎಸಿ ಎಕ್ಸ್ಪ್ರೆಸ್ ರೈಲುಗಳು ಸೇರಿದಂತೆ ದೇಶಾದ್ಯಂತ 50ಕ್ಕೂ ಹೆಚ್ಚು ಹೊಸ ರೈಲುಗಳು ಇನ್ನು ಮುಂದೆ ನಿಮಗಾಗಿ ಸಂಚರಿಸಲಿವೆ.
ಬುಲೈಟ್ ರೈಲಲ್ಲಿ ಓಡಾಡಿ
ಲೋಕಸಭೆ ಚುನಾವಣೆ ಪ್ರಚಾರದ ವೇಳೆ ಪ್ರಧಾನಿ ನರೇಂದ್ರ ಮೋದಿಯವರು ಸೇರಿದಂತೆ ನಾವೆಲ್ಲರೂ ನೀಡಿದ್ದ ಆಶ್ವಾಸನೆಗಳನ್ನು ಈಗ ಈಡೇರಿಸುತ್ತಿದ್ದೇವೆ. ಇದರ ಒಂದು ಹೆಜ್ಜೆಯೆಂಬಂತೆ ಹೈಸ್ಪೀಡ್ ನೆಟ್ವರ್ಕ್ ಮತ್ತು ಬುಲೆಟ್ ರೈಲಿನ ಕನಸು ಈಡೇರಲಿದೆ. ಅಹಮದಾಬಾದ್ನಿಂದ ಮುಂಬೈಗೆ ಬುಲೆಟ್ ರೈಲು ಸಂಚರಿಸಲಿದೆ.
ರೈಲಲ್ಲಿ ಚೆನ್ನಾಗಿರೋ ಊಟ ಸಿಗ್ತಾ ಇಲ್ಲ ಎಂಬ ಚಿಂತೆ ಇನ್ನು ಬೇಡ್ವೇ ಬೇಡ. ನೀವು ಕುಳಿತಲ್ಲಿಂದಲೇ ಒಂದು ಎಸ್ಸೆಮ್ಮೆಸ್ ಅಥವಾ ದೂರವಾಣಿ ಕರೆ ಮಾಡಿದ್ರೆ ಸಾಕು, ಮೊದಲೇ ಬೇಯಿಸಿಟ್ಟ, ರೆಡಿ-ಟು-ಈಟ್ ಆಹಾರ ನಿಮ್ಮ ಮುಂದಿರಲಿದೆ. ಹಾಂ, ಒಂದು ವೇಳೆ ಆಹಾರದ ಗುಣಮಟ್ಟ ಸರಿಯಿಲ್ಲದಿದ್ದರೆ ಹೇಳಿ, ಪೂರೈಸುವವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ತೇನೆ.
ಪ್ರಾದೇಶಿಕ ರುಚಿ ಸವಿಯಿರಿ
ಆಹಾರ ಎಂದಾಗ ನೆನಪಾಗುವುದು ಆಯಾ ಊರಿನ ಪ್ರಾದೇಶಿಕ ತಿಂಡಿ-ತಿನಿಸು. ಪ್ರಾದೇಶಿಕ ಸ್ವಾದವುಳ್ಳ ರುಚಿ ರುಚಿಯಾದ ಆಹಾರ ನೀಡಲಿಕ್ಕೆಂದೇ ಪ್ರಮುಖ ಸ್ಟೇಷನ್ಗಳಲ್ಲಿ ಫುಡ್ ಕೋರ್ಟ್ ತೆರೆಯಲಿದ್ದೇನೆ. ನವದೆಹಲಿ-ಅಮೃತಸರ ಮತ್ತು ನವದೆಹಲಿ- ಜಮ್ಮು ತಾವಿ ರೂಟ್ನಲ್ಲಿ ಪ್ರಾಯೋಗಿಕವಾಗಿ ಈ ಯೋಜನೆ ಜಾರಿ ಮಾಡಲಿದ್ದೇನೆ.
ನಿಲ್ದಾಣಕ್ಕೆ ಕಾಲಿಟ್ಟಾಗ ಇನ್ನು ಮೂಗು ಮುಚ್ಚಬೇಕಾಗಿಲ್ಲ. ನಿಮ್ಮ ಪರಿಸ್ಥಿತಿ ಅರ್ಥವಾಗಿದೆ. ಅದಕ್ಕೆಂದೇ ರೈಲ್ವೆಯ ಸ್ವಚ್ಛತೆಗೆ ಒತ್ತು ನೀಡಿದ್ದೇನೆ. ಸ್ಟೇಷನ್ಗಳಲ್ಲಿ ಸಿಸಿಟಿವಿ ಅಳವಡಿಸಿ, ಸ್ವಚ್ಛತೆ ಬಗ್ಗೆ ನಿಗಾ ಇಡುವಂತೆ ಮಾಡುತ್ತೇನೆ. ನೈರ್ಮಲ್ಯ ನೋಡಿಕೊಳ್ಳಲು ಥರ್ಡ್ ಪಾರ್ಟಿ ತಪಾಸಣೆ ಪರಿಚಯಿಸಲಿದ್ದೇನೆ. 50 ಪ್ರಮುಖ ಸ್ಟೇಷನ್ಗಳಲ್ಲಿ ಸ್ವಚ್ಛತೆಗಾಗಿಯೇ ಹೊರಗುತ್ತಿಗೆ ನೀಡುತ್ತಿದ್ದೇನೆ.
ಮೊಬೈಲಲ್ಲೇ ಟಿಕೆಟ್ ಬುಕಿಂಗ್
ಈಗ ನಿಮ್ಮೆಲ್ಲರ ಕೈಯಲ್ಲೂ ಮೊಬೈಲ್ ಇದೆ ತಾನೇ? ರೈಲ್ವೆ ನಿಲ್ದಾಣಕ್ಕೆ ಹೋಗಿ ಸರತಿ ಸಾಲಲ್ಲಿ ನಿಂತು ಕಾಯುವುದು ಬೇಡ ಎಂದು ಮೊಬೈಲ್ನಲ್ಲೇ ಟಿಕೆಟ್ ಕಾಯ್ದಿರಿಸುವ ವ್ಯವಸ್ಥೆ ಮಾಡುತ್ತಿದ್ದೇನೆ. ಮನೆ ಸಮೀಪ ಅಂಚೆ ಕಚೇರಿ ಇದ್ದರೆ ಅಲ್ಲೂ ಟಿಕೆಟ್ ಕಾಯ್ದಿರಿಸಬಹುದು. ಟಿಕೆಟ್ ಕಾಯ್ದಿರಿಸುವ ವ್ಯವಸ್ಥೆಯನ್ನೇ ಪರಿಷ್ಕರಿಸುತ್ತೇನೆ.
ನಿಮಿಷಕ್ಕೆ 7,200 ಇ-ಟಿಕೆಟ್
ಇ-ಟಿಕೆಟಿಂಗ್ ಕಾಯ್ದಿರಿಸುವಿಕೆಗೆ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಹಾಗಾಗಿ ಅದರಲ್ಲೂ ನಿಮ್ಮ ಸಮಯ ಉಳಿಸುವ ಪ್ರಯತ್ನವನ್ನು ನಾನು ಮಾಡುತ್ತಿದ್ದೇನೆ. ಇಷ್ಟರವರೆಗೆ ಒಂದು ನಿಮಿಷಕ್ಕೆ 2 ಸಾವಿರ ಇ-ಟಿಕೆಟ್ ಬುಕ್ ಮಾಡ್ಬಹುದಿತ್ತು. ಇನ್ನು ನೋಡಿ, ನಿಮಿಷಕ್ಕೆ 7,200 ಟಿಕೆಟ್ ಬುಕ್ ಆಗುವ ವ್ಯವಸ್ಥೆ ಕಲ್ಪಿಸುತ್ತೇನೆ.
'ಚಾರ್ ಧಾಮ್'ಗೊಮ್ಮೆ ಭೇಟಿ ಕೊಡ್ಬೇಕು ಎಂಬ ಆಸೆಯಿರುವವರು ಇನ್ನು ಆರಾಮವಾಗಿ ಪ್ರವಾಸ ಆರಂಭಿಸಬಹುದು. ಉತ್ತರಾಖಂಡದ ನಾಲ್ಕು ಪವಿತ್ರ ಯಾತ್ರಾ ಸ್ಥಳಗಳಿಗೆ ರೈಲು ಸಂಪರ್ಕ ಕಲ್ಪಿಸಲು ಪ್ರಯತ್ನಿಸುತ್ತೇನೆ. ಈ ಪ್ರಸ್ತಾಪ ಓಕೆ ಆದ್ರೆ ನಿಮ್ಮ ಇಚ್ಛೆ ಈಡೇರಲಿದೆ. ಆಮೇಲೆ ನೀವು ಕುಟುಂಬ ಸಮೇತರಾಗಿ ಚಾರ್ ಧಾಮ್ ಯಾತ್ರೆ ಕೈಗೊಳ್ಳಬಹುದು.
ಆಫೀಸ್ ಆನ್ ವೀಲ್
ವೃತ್ತಿ ಬಗ್ಗೆ ಅಗಾಧ ಪ್ರೀತಿ ಉಳ್ಳವರಿಗೆ ರೈಲಲ್ಲೇಕೆ ಟೈಂ ವೇಸ್ಟ್ ಮಾಡ್ಬೇಕು ಅನ್ನುವವರಿಗೆ 'ಆಫೀಸ್-ಆನ್-ವೀಲ್ಸ್' ಎಂಬ ಹೊಸ ಯೋಜನೆಗೆ ಪ್ರಸ್ತಾಪ ಸಲ್ಲಿಸಿದ್ದೇನೆ. ಆಯ್ದ ರೈಲುಗಳಲ್ಲಿ ಇಂಟರ್ನೆಟ್ ಮತ್ತು ವರ್ಕ್ಸ್ಟೇಷನ್ ಸೌಲಭ್ಯ ಒದಗಿಸುವ ಕೆಲಸ ಮಾಡುತ್ತೇನೆ. ವೈಫೈ ಸಂಪರ್ಕವನ್ನೂ ಕಲ್ಪಿಸುತ್ತೇನೆ. ನೀವು ರೈಲಲ್ಲಿ ಕುಳಿತು ನಿಮ್ಮ ಕೆಲಸಗಳನ್ನು ಮಾಡಿಕೊಳ್ಳಬಹುದು.
ರೈಲಲ್ಲಿ ಓಡಾಡಲು ಭಯ ಪಡುತ್ತಿದ್ದ ಮಹಿಳೆಯರು ಇನ್ನು ಮುಂದೆ ಯಾವುದೇ ಆತಂಕವಿಲ್ಲದೇ ರೈಲು ಸಂಚಾರ ಮಾಡಬಹುದು. ಮಹಿಳೆಯರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ನಾನು ರೈಲುಗಳಲ್ಲಿ 4 ಸಾವಿರ ಮಹಿಳಾ ಆರ್ಪಿಎಫ್ ಕಾನ್ಸ್ಟೇಬಲ್ಗಳನ್ನು ನಿಯೋಜಿಸುತ್ತೇನೆ. ಅವರು ನಿಮ್ಮ ಬೋಗಿಯಲ್ಲೇ ಇರುತ್ತಾರೆ. ನೆಮ್ಮದಿಯಿಂದ ಪ್ರಯಾಣ ಮಾಡಿ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


