ಮಂಗಳೂರು ರೈಲ್ವೆ ವಿಭಾಗ: ಡೀವಿ ಬಜೆಟ್ನಲ್ಲಿ ನಿರಾಶೆ

ಮಂಗಳೂರು: ಬಹುನಿರೀಕ್ಷಿತ ಮಂಗಳೂರು ಪ್ರತ್ಯೇಕ ರೈಲ್ವೆ ವಿಭಾಗ ರಚನೆ, ಮಂಗಳೂರಿನಿಂದ ದೂರ ಸ್ಥಳಗಳಿಗೆ ಹೊಸ ರೈಲು, ಎಚ್ಎಂಆರ್ಡಿಸಿ ಮತ್ತು ಪಣಂಬೂರು ಕಾರ್ಗೋವನ್ನು ಫಾಲ್ಘಾಟ್ನಿಂದ ವರ್ಗಾಯಿಸುವುದು...
ಹೀಗೆ ತವರು ಜಿಲ್ಲೆಯಲ್ಲಿ ರೈಲ್ವೆ ಅಭಿವೃದ್ಧಿ ಬಗ್ಗೆ ಸಚಿವರು ನೀಡಿದ್ದ ಭರವಸೆ ಹುಸಿಯಾಗಿದೆ.
ಜಿಲ್ಲೆಯ ರೈಲ್ವೆ ಬೇಡಿಕೆಯನ್ನು ಕೇವಲ ನಗೆಯಲ್ಲೇ ತೇಲಿಸಿಬಿಟ್ಟಿದ್ದಾರೆ ರೈಲ್ವೆ ಸಚಿವ ಡಿ.ವಿ.ಸದಾನಂದ ಗೌಡ. ತವರಿಗೆ ಕೊಡುಗೆಯ ಜನತೆಯ ನಿರೀಕ್ಷೆ ಹುಸಿಯಾಗಿದೆ, ಬಿಜೆಪಿ ಸಂಸದರಿದ್ದರೂ ಉದ್ದೇಶಿತ ರೀತಿಯಲ್ಲಿ ರೈಲ್ವೆ ಯೋಜನೆ ಘೋಷಣೆ ಮಾಡಿಸುವಲ್ಲಿ ಯಶಸ್ವಿಯಾಗಿಲ್ಲ.
ಮಂಗಳೂರಿಗೆ ದಕ್ಕಿದ್ದು ಎರಡು ರೈಲು?: ಇಷ್ಟಾಗಿಯೂ ಮಂಗಳೂರಿಗೆ ಹೊಸದಾಗಿ ಸಿಕ್ಕಿದ್ದು ಕಾಸರಗೋಡು-ಬೈಂದೂರು ಮಧ್ಯೆ ಪ್ಯಾಸೆಂಜರ್ ಓಡಾಟ ಕೊಡುಗೆ. ಬೆಂಗಳೂರು-ಮಂಗಳೂರು ಹೊಸ ರೈಲು ಘೋಷಣೆ. ಅದು ಹಗಲು ರೈಲಿನ ನಿತ್ಯ ಸಂಚಾರವೆ ಅಥವಾ ಹೊಸ ರೈಲು ಸಂಚಾರವೇ ಎಂಬುದು ಖಚಿತವಾಗಿಲ್ಲ. ಇದು ಬಿಟ್ಟರೆ ಹೆಚ್ಚೂ ಕಡಿಮೆ ಹಿಂದಿನ ಯೋಜನೆಗಳ ಅನುಷ್ಠಾನ ಮಾತ್ರ.
ಕಾಸರಗೋಡು-ಬೈಂದೂರು ಪ್ಯಾಸೆಂಜರ್ ನಿತ್ಯ ಪ್ರಯಾಣಿಕರಿಗೆ ಅನುಕೂಲ. ಕೇರಳ, ತಮಿಳುನಾಡಿನ ಯಾತ್ರಿಕರಿಗೆ ಕೊಲ್ಲೂರು ಕ್ಷೇತ್ರ ದರ್ಶನಕ್ಕೆ ಅನುಕೂಲವಾಗಲಿದೆ.
ಬೆಂಗಳೂರು-ಮಂಗಳೂರು ಹೊಸ ರೈಲು ಯಾವ ಮಾರ್ಗದಲ್ಲಿ ಹೋಗುತ್ತದೆ? ಹಗಲು ಇನ್ನೊಂದು ರೈಲೇ? ಅಥವಾ ಈಗಾಗಲೇ ಎರಡು ದಿನಕ್ಕೊಮ್ಮೆ ಸಂಚರಿಸುವ ಕಾರವಾರ-ಯಶವಂತಪುರ ರೈಲನ್ನು ನಿತ್ಯ ರೈಲಾಗಿ ಪರಿವರ್ತಿಸಲಾಗಿದೆಯೇ ಎಂಬುದು ಸ್ಪಷ್ಟವಾಗಿಲ್ಲ. ಹಗಲು ರೈಲನ್ನು ನಿತ್ಯ ರೈಲಾಗಿ ಮಾರ್ಪಡಿಸಿದರೆ, ಕಾರವಾರಕ್ಕೆ ನಿತ್ಯ ರೈಲು ಇರುವುದಿಲ್ಲವೇ ಎಂಬ ಪ್ರಶ್ನೆಯೂ ಉದ್ಭವಿಸುತ್ತದೆ.
ಕಾಣಿಯೂರು ಸರ್ವೇ ಹೊಸದಲ್ಲ: ಸ್ವಂತ ಊರು ಸುಳ್ಯಕ್ಕೆ ಬಜೆಟ್ನಲ್ಲಿ ವಿಶೇಷ ಕೊಡುಗೆ ನೀಡುವುದಾಗಿ ಸಚಿವ ಡೀವಿ ಹೇಳಿದ್ದು ಕೂಡ ಸುಳ್ಳಾಗಿದೆ. ಯಾಕೆಂದರೆ ಕಾಞಂಗಾಡ್-ಪಾಣತ್ತೂರು-ಕಾಣಿಯೂರು ರೈಲು ಮಾರ್ಗ ಸರ್ವೇ 3 ವರ್ಷ ಹಿಂದಿನ ಸಂಗತಿ. ಯುಪಿಎ ಸರ್ಕಾರ ರೈಲ್ವೆ ಬಜೆಟ್ನಲ್ಲಿ ಇದನ್ನು ಘೋಷಿಸಿತ್ತು. ಕೇರಳ ಕಾಞಂಗಾಡ್ನಿಂದ ಪಾಣತ್ತೂರು ವರೆಗೆ ಮಾರ್ಗ ಸರ್ವೇ ಆಗಿದೆ. ಕರ್ನಾಟಕದಲ್ಲಿ ಅರಣ್ಯ ಇಲಾಖೆ ತೊಡಕಿನಿಂದ ಪಾಣತ್ತೂರಿನಿಂದ ಕಾಣಿಯೂರು ವರೆಗೆ ಸರ್ವೇ ಕಾರ್ಯ ನಡೆದಿರಲಿಲ್ಲ. ಈಗ ಇದಕ್ಕೆ ಹಸಿರು ಸಿಗ್ನಲ್ ಸಿಕ್ಕಿದೆ ಅಷ್ಟೇ. ಆದರೆ ಶಿವಮೊಗ್ಗ-ಶೃಂಗೇರಿ-ಮಂಗಳೂರು ಮಾರ್ಗ ಸರ್ವೇ ಹೊಸ ಕೊಡುಗೆ. ಇದು ಮುಂದೆ ಪ್ರಯಾಣಿಕರಿಗೆ, ಯಾತ್ರಾರ್ಥಿಗಳಿಗೆ ಅನುಕೂಲವಾಗಲಿದೆ.
ಹಳಿ ದ್ವಿಗುಣಕ್ಕೆ ಒತ್ತು: ಮಂಗಳೂರು- ಉಳ್ಳಾಲ- ಸುರತ್ಕಲ್ ಹಳಿ ದ್ವಿಗುಣಗೊಳಿಸುದಾಗಿ ಸಚಿವ ಡೀವಿ ಪ್ರಕಟಿಸಿದ್ದಾರೆ. ವಾಸ್ತವದಲ್ಲಿ ತೋಕೂರು-ಕಂಕನಾಡಿ ಮಧ್ಯೆ ದ್ವಿಹಳಿ ಕಾಮಗಾರಿ ನಡೆಯುತ್ತಿದೆ. ಇದು ಕಂಕನಾಡಿ-ಸೆಂಟ್ರಲ್ ಹಾಗೂ ತೋಕೂರು-ಸುರತ್ಕಲ್ ಮಧ್ಯೆ ಪೂರ್ತಿಯಾಗಲು ಬಾಕಿ ಇದೆ.
ಪ್ರಣಾಳಿಕೆಗೆ ಸೀಮಿತವಾದ ವಿಭಾಗ: ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಮಂಗಳೂರು ಪ್ರತ್ಯೇಕ ರೈಲ್ವೆ ವಿಭಾಗ ರಚಿಸುವುದಾಗಿ ಸಂಸದ ನಳಿನ್ಕುಮಾರ್ ಕಟೀಲ್ ಚುನಾವಣಾ ಪ್ರಣಾಳಿಕೆಯಲ್ಲಿ ಪ್ರಕಟಿಸಿದ್ದರು. ಚುನಾವಣೆ ಪ್ರಚಾರದಲ್ಲೂ ಬಿಜೆಪಿ ಮುಖಂಡರು ಜನತೆಗೆ ಭರವಸೆ ನೀಡಿದ್ದರು.
ಬಜೆಟ್ಗೆ ಒಂದು ವಾರ ಮುಂಚೆ ಕೊಂಕಣ ರೈಲ್ವೆ ಪ್ರಾದೇಶಿಕ ಕಚೇರಿಗೆ ಪೂರ್ಣ ಪ್ರಮಾಣದ ಅಧಿಕಾರಿ, ಸಿಬ್ಬಂದಿ ನಿಯೋಜಿಸಲಾಗಿತ್ತು. ಅಲ್ಲದೆ ಕೊಂಕಣ ರೈಲ್ವೆ ನಿಗಮಕ್ಕೆ ಎಚ್ಎಂಆರ್ಡಿಸಿ (ಮಂಗಳೂರು ಹಾಸನ ರೈಲ್ವೆ ಅಭಿವೃದ್ಧಿ ನಿಗಮ) ಮತ್ತು ಪಣಂಬೂರು ಎನ್ಎಂಪಿಟಿ ಆದಾಯ ಹಸ್ತಾಂತರಿಸುವ ಪ್ರಸಾಪ ಕೇಳಿಬಂದಿತ್ತು. ಸಂಸದ ನಳಿನ್ ಕುಮಾರ್ ಅಧ್ಯಕ್ಷತೆಯಲ್ಲಿ ನಗರದಲ್ಲಿ ತುರ್ತು ಸಭೆ ಸೇರಿದಾಗ ವಿಭಾಗ ರಚನೆ ಸಾಧ್ಯತೆಗಳು ಗರಿಗೆದರಿತ್ತು. ಇಷ್ಟೆಲ್ಲ ಪ್ರಯತ್ನ ನಡೆದರೂ ಕೊನೆ ಹಂತದಲ್ಲಿ ಮಂಗಳೂರು ವಿಭಾಗ ರಚನೆ ಘೋಷಣೆಯಾಗದಿರುವುದು ಅಚ್ಚರಿಗೆ ಕಾರಣವಾಗಿದೆ.
ಆತ್ಮಭೂಷಣ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


