ಮೋದಿ ಮೆಚ್ಚುಗೆ

ರೈಲಿನಲ್ಲಿ ದೇಶದ ಅಭಿವೃದ್ಧಿ ಎಂಜಿನ್ ಇದೆ, ಇದರ ಮೂಲಕವೇ ದೇಶವನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯುತ್ತೇವೆ...
ಕಳೆದ 6 ದಶಕಗಳಲ್ಲಿ ರೈಲ್ವೆ ಅಭಿವೃದ್ಧಿಗೆ ವೈಜ್ಞಾನಿಕವಾಗಿ ಚಿಂತನೆ ಮಾಡಿದ್ದರೆ ಇಂದು ಈ ಪರಿಸ್ಥಿತಿ ಎದುರಾಗುತ್ತಿರಲಿಲ್ಲ. ಈ ಹಿನ್ನೆಲೆಯಲ್ಲಿ ದೇಶದ ಅಭಿವೃದ್ಧಿ ಗಮನದಲ್ಲಿಟ್ಟುಕೊಂಡು ಬಜೆಟ್ ಮಂಡಿಸಲಾಗಿದೆ. ಈ ಬಜೆಟ್ ರೈಲನ್ನು ಉತ್ತಮ ಹಳಿಯಲ್ಲಿ ತೆಗೆದುಕೊಂಡುಹೋಗುವುದಲ್ಲದೇ, ದೇಶದ ಆರ್ಥಿಕ ಪರಿಸ್ಥಿತಿಯನ್ನು ಹಳಿಗೆ ತರಲಿದೆ ಎಂದು ರೈಲ್ವೆ ಬಜೆಟ್ಗೆ ಪ್ರಧಾನಿ ನರೇಂದ್ರ ಮೋದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ತಮ್ಮ ಸರ್ಕಾರದ ಚೊಚ್ಚಲ ಬಜೆಟ್ನ್ನು ಭವಿಷ್ಯದ ಅಭಿವೃದ್ಧಿ ಸೂತ್ರ ಎಂದು ಬಣ್ಣಿಸಿರುವ ಮೋದಿ, ರೈಲ್ವೆಯ ವಿಕಾಸವಾಗಬೇಕು, ಮಾರ್ಗ ವಿಸ್ತರಿಸಬೇಕು, ಯಾತ್ರಿಗಳ ಸಂಖ್ಯೆ ಹೆಚ್ಚಬೇಕು, ಸುರಕ್ಷಾ ಮಾರ್ಗಗಳು ಅಭಿವೃದ್ಧಿಯಾಗಬೇಕು ಎಂದಿದ್ದಾರೆ. ವಿಜ್ಞಾನ ಹಾಗೂ ತಂತ್ರಜ್ಞಾನವನ್ನು ನಂಬಿ ಮಂಡಿಸಿರುವ ಆಧುನಿಕ ರೈಲ್ವೆ ಬಜೆಟ್ ಇದು. ಈ ದೇಶದ ಜನಕ್ಕಾಗಿ ರೈಲು ಸಂಚರಿಸಲಿದೆ. ಇದು ಭಾರತೀಯ ರೈಲ್ವೆ ಎಂದು ಹೆಮ್ಮೆಯಿಂದ ಹೇಳಿಕೊಳ್ಳುವ ವಾತಾವರಣ ಸೃಷ್ಟಿಸುತ್ತೇವೆ ಎಂದು ಅವರು ಹೇಳಿದ್ದಾರೆ.
ಯಾವುದೇ ದೂರಾಲೋಚನೆಗಳಿಲ್ಲದ ಬಜೆಟ್ಗಳಿಂದ ಇಂದು ಭಾರತೀಯ ರೈಲ್ವೆ ಸಂಕಷ್ಟದಲ್ಲಿದೆ. ರೈಲ್ವೆಯಂತಹ ದೊಡ್ಡ ಸಂಪರ್ಕ ಜಾಲವನ್ನು ಕೇವಲ ಪ್ರಯಾಣಕ್ಕೆ ಸೀಮಿತಗೊಳಿಸಲಾಗಿದೆ. ಆದರೆ ಮುಂದಿನ ದಿನಗಳಲ್ಲಿ ರೈಲಿನ ಪ್ರಯಾಣ, ಸೌಲಭ್ಯ ಹಾಗೂ ಇತರ ಸೇವೆಗಳನ್ನು ಜನರು ಖುಷಿಯಿಂದ ಅನುಭವಿಸುವಂತಾಗಬೇಕು ಎನ್ನುವುದು ಮೋದಿ ವಿಚಾರವಾಗಿದೆ.
ದೇಶದೆಲ್ಲೆಡೆ ಭ್ರಷ್ಟಾಚಾರದ ವಿರುದ್ಧ ಧ್ವನಿ ಕೇಳಿಬರುತ್ತಿದೆ. ನಮ್ಮ ಮೊದಲ ಹೆಜ್ಜೆಯಲ್ಲಿಯೇ ರೈಲ್ವೆ ಇಲಾಖೆಯಲ್ಲಿ ಪಾರದರ್ಶಕ ವ್ಯವಸ್ಥೆ ತರಲು ಮುಂದಾಗಿದ್ದೇವೆ. ಇಲಾಖೆಗೆ ಹೈಟೆಕ್ ಸ್ಪರ್ಶ ನೀಡಿ ತಂತ್ರಜ್ಞಾನದ ಮೂಲಕ ಜನರನ್ನು ಹೇಗೆ ತಲುಪಬಹುದು ಎನ್ನುವುದಕ್ಕೆ ಬಜೆಟ್ ಸಾಕ್ಷೀಭೂತವಾಗಲಿದೆ ಎಂದಿದ್ದಾರೆ.
ಸ್ವಾತಂತ್ರ್ಯಾನಂತರದ ದಿನಗಳಲ್ಲಿ ರೈಲ್ವೆಯ ಅಭಿವೃದ್ಧಿಗೆ ಯೋಜನೆ ರೂಪಿಸಿದ್ದರೆ ಭಾರತವು ಬಹುದೊಡ್ಡ ಆರ್ಥಿಕ ಶಕ್ತಿಯಾಗುತ್ತಿತ್ತು. ನಾವಿಂದು ಈ ಅಭಿವೃದ್ಧಿಯ ಯಾತ್ರೆಗೆ ಚಾಲನೆ ನೀಡಿದ್ದೇವೆ. ಈ ಮಾಧ್ಯಮದ ಮೂಲಕ ದೇಶವನ್ನು ಅಭಿವೃದ್ಧಿಯ ಶಿಖರಕ್ಕೇರಿಸುವುದು ಸರ್ಕಾರದ ಕನಸಾಗಿದೆ. ಇದನ್ನು ಸಾಧಿಸಿ ತೋರಿಸುತ್ತೇವೆ, ಅನಿವಾರ್ಯ ಕೂಡ ಎಂದು ಮೋದಿ ಭರವಸೆ ನೀಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


