ನಾನು ಸದಾನಂದಗೌಡ ಹೇಳುತ್ತಿದ್ದೇನೆ, ನನ್ನದು ವಾಸ್ತವತೆ ಹತ್ತಿರದಲ್ಲಿರುವ ಬಜೆಟ್

- ಕೌಟಿಲ್ಯನ ಅರ್ಥಶಾಸ್ತ್ರ, ಮೋದಿಯ ಅಭಿವೃದ್ಧಿ ಸೂತ್ರ, ಇದು ಸದಾನಂದ ಗೌಡರ ಚೊಚ್ಚಲ ರೈಲ್ವೆ ಬಜೆಟ್ ಮಂತ್ರ.
ಜನರನ್ನು ಖುಷಿಪಡಿಸಲು ರಾಜ್ಯಕ್ಕೊಂದಿಷ್ಟು ರೈಲು, ಒಂದಷ್ಟು ಹೊಸ ಮಾರ್ಗ, ಯೋಜನೆಗಳ ಘೋಷಣೆ ಹೀಗೆ 'ರೈಲು' ಬಿಡುವುದನ್ನೇ ಕಾಯಕವಾಗಿಸಿಕೊಂಡಿದ್ದ ಕೇಂದ್ರ ಸರ್ಕಾರ, ಮೊದಲ ಬಾರಿಗೆ ವಾಸ್ತವಕ್ಕೆ ಹತ್ತಿರವಾದ ಬಜೆಟ್ ಮಂಡಿಸಿದೆ. ಯಾವೊಂದು ಹೊಸ ಯೋಜನೆ ಘೋಷಿಸದೇ ಬಾಕಿ ಇರುವ ಯೋಜನೆಗಳನ್ನು ಪೂರ್ಣಗೊಳಿಸುವ ವಾಸ್ತವಿಕ ಬಜೆಟ್ ಮಂಡಿಸಿರುವ ರೈಲ್ವೆ ಸಚಿವ ಡಿ.ವಿ.ಸದಾನಂದಗೌಡ, ಬಜೆಟ್ ಪ್ರತಿ ಕೇವಲ ಘೋಷಣಾ ಪತ್ರ ಎಂಬ ಪ್ರತೀತಿ ತೊಡೆದುಹಾಕುವ ಪ್ರಯತ್ನ ಮಾಡಿದ್ದಾರೆ.
ರೈಲ್ವೆ ನವೀಕರಣಕ್ಕೆ ಮುಂದಾಗಿರುವ ಕೇಂದ್ರ ಸರ್ಕಾರ, ಬುಲೆಟ್ ರೈಲು, ಹೈಸ್ಪೀಡ್ ರೈಲು ಹಾಗೂ ಕಂಪ್ಯೂಟರೀಕರಣದ ಮೂಲಕ ಭಾರತೀಯ ರೈಲ್ವೆ ಇಲಾಖೆಯನ್ನು ಮತ್ತೊಂದು ಪಥಕ್ಕೆ ಕೊಂಡೊಯ್ಯಲು ನಿರ್ಧರಿಸಿದೆ. ಇದಕ್ಕಾಗಿ ಸುಮಾರು 10 ಲಕ್ಷ ಕೋಟಿ ಬಂಡವಾಳ ಹೂಡಿಕೆ ನಿರೀಕ್ಷೆಯಲ್ಲಿರುವ ಕೇಂದ್ರ ಸರ್ಕಾರ, ಖಾಸಗಿ ಸಹಭಾಗಿತ್ವ ಅಪ್ಪಿಕೊಳ್ಳಲು ಮುಂದಾಗಿದೆ. ಆಳುವವನ ಅಗತ್ಯಕ್ಕಿಂತ ಭಾರತೀಯರ ಅಗತ್ಯವೇನು ಎನ್ನುವುದನ್ನು ಅರಿತು ಬಜೆಟ್ ರೂಪಿಸಿದ್ದೇವೆ, ಇನ್ನೈದು ವರ್ಷದಲ್ಲಿ ಇದರ ಪರಿಣಾಮ ತಿಳಿಯಲಿದೆ ಎಂದು ಹೇಳಿರುವ ಸದಾನಂದಗೌಡ, ತಮ್ಮ ಮೊದಲ ಬಜೆಟ್ನಲ್ಲಿಯೇ ರೈಲ್ವೆ ಇಲಾಖೆಯನ್ನು ಹಳಿಗೆ ತರುವ ಪ್ರಯತ್ನಕ್ಕೆ ಕೈಹಾಕಿದ್ದಾರೆ. ಶುಚಿತ್ವ, ಹೈಟೆಕ್ ಹಾಗೂ ಉತ್ತಮ ಸಂಪರ್ಕ ಜಾಲ ಎಂಬ ಮೋದಿಯ ತ್ರಿಸೂತ್ರಗಳನ್ನು ಬಜೆಟ್ನಲ್ಲಿ ಅಕ್ಷರಶಃ ಪಾಲಿಸಿರುವ ಸದಾನಂದಗೌಡ, ಬಜೆಟ್ನಲ್ಲಿ ಯೋಜನೆ ಘೋಷಿಸಿ ಕ್ಷಣಿಕ ಖುಷಿ ನೀಡಲು ಸಾಧ್ಯವಿಲ್ಲ, ಜನರ ಆಶೋತ್ತರ ಏನಿದೆ ಎಂದು ತಿಳಿದು ಕಾರ್ಯನಿರ್ವಹಿಸುತ್ತೇನೆ ಎಂದು ಕೌಟಿಲ್ಯನ ಅರ್ಥಶಾಸ್ತ್ರದ ನೆನಪು ಮಾಡಿಕೊಂಡಿದ್ದಾರೆ.
ಘೋಷಣೆಯಿಲ್ಲ, ಬಾಕಿ ಚುಕ್ತಾ ಕೆಲಸ
ರೈಲ್ವೆ ಬಜೆಟ್ ಇತಿಹಾಸದಲ್ಲಿ ಮೊದಲ ಬಾರಿಗೆ ಕೇಂದ್ರ ಸರ್ಕಾರವು ಯಾವುದೇ ಹೊಸ ಮಾರ್ಗ ಘೋಷಿಸಿಲ್ಲ. ಆದರೆ 28 ಹೊಸ ಮಾರ್ಗಗಳಿಗೆ ಸಮೀಕ್ಷೆ ನಡೆಸಲು ಸದಾನಂದಗೌಡ ಸಮ್ಮತಿಸಿದ್ದಾರೆ. ಹಿಂದಿನ ಯುಪಿಎ ಸರ್ಕಾರದ ಬಾಕಿ ಚುಕ್ತಾ ಮಾಡಲು ಸದಾನಂದಗೌಡ ನಿರ್ಧರಿಸಿದ್ದಾರೆ. ಕಳೆದ 10 ವರ್ಷಗಳಲ್ಲಿ 60 ಸಾವಿರ ಕೋಟಿ ವೆಚ್ಚದ 99 ಯೋಜನೆಗಳನ್ನು ಕೇಂದ್ರ ಸರ್ಕಾರ ಘೋಷಿಸಿತ್ತು. ಆದರೆ ಕೇವಲ ಒಂದು ಯೋಜನೆ ಪೂರ್ಣಗೊಂಡಿದೆ. ಇನ್ನು 30 ವರ್ಷಗಳಿಂದ 4 ಯೋಜನೆ ಬಾಕಿ ಉಳಿದಿದೆ. ಇದ್ಯಾವುದೇ ಯೋಜನೆ ರದ್ದು ಮಾಡದೇ ರೈಲ್ವೆ ಸಂಪರ್ಕ ಜಾಲ ಉನ್ನತೀಕರಿಸುವುದು ಸರ್ಕಾರದ ಆದ್ಯತೆ ಎಂದು ಡೀವಿ ೇಳಿದ್ದಾರೆ. ಇದೇ ಕಾರಣದಿಂದ ಹೊಸ ಯೋಜನೆಗೆ ಅನುಮತಿ ಸಿಕ್ಕಿಲ್ಲ ಎಂಬ ಅಭಿಪ್ರಾಯ ಸಂಸದರಲ್ಲಿ ಮೂಡಿದೆ ಎಂದು ಸಮಜಾಯಿಷಿ ನೀಡಿದ್ದಾರೆ.
ಯೋಜನೆಗಳಿಗೆ ಹಣ ಪೂರೈಕೆ
ಪ್ರಸಕ್ತ ಬಜೆಟ್ನಲ್ಲಿ ಸದಾನಂದಗೌಡರು ಹೊಸ ಯೋಜನೆಗಳಿಗಿಂತ ಹಳೆಯ ಯೋಜನೆಗಳಿಗೆ ಒತ್ತು ನೀಡಿದ್ದಾರೆ. ರಾಜ್ಯದಲ್ಲಿ ಅನುಷ್ಠಾನಗೊಳ್ಳುತ್ತಿರುವ ಯೋಜನೆಗಳಿಗೆ 1459 ಕೋಟಿ ರು.ಗಳನ್ನು ಬಜೆಟ್ನಲ್ಲಿ ಒದಗಿಸಿದ್ದಾರೆ. ಈ ಪೈಕಿ ಹೊಸ ಮಾರ್ಗಗಳಿಗೆ 517 ಕೋಟಿ, ಮಾರ್ಗ ಪರಿವರ್ತನೆಗ 12 ಕೋಟಿ, ಜೋಡಿ ಮಾರ್ಗಗಳಿಗೆ 759 ಕೋಟಿ ಹಾಗೂ ರೈಲು ಮೇಲು ಮತ್ತು ಕೆಳ ಸೇತುವೆಗಳಿಗೆ 171 ಕೋಟಿ ಒದಗಿಸಿದ್ದಾರೆ. ಇದರರ್ಥ ರಾಜ್ಯದಲ್ಲಿ ಕುಂಟುತ್ತಾ ಸಾಗಿರುವ ಯೋಜನೆಗಳು ಬೇಗ ಪೂರ್ಣಗೊಳ್ಳಲಿವೆ. ರೈಲು ಸಂಪರ್ಕವೇ ಇಲ್ಲದ ಮೈಸೂರು- ಕುಶಾಲನಗರ ಹೊಸ ಮಾರ್ಗದ ಜತೆಗೆ ಕುಶಾಲನಗರ- ಮಡಿಕೇರಿ ಹೊಸಮಾರ್ಗಕ್ಕೆ ಸಮೀಕ್ಷೆ ಮಾಡುವುದಾಗಿಯೂ ಅವರು ಘೋಷಿಸಿದ್ದಾರೆ.
ರೈಲಿಗೆ ಹೈಟೆಕ್ ಸ್ಪರ್ಶ
ರೈಲ್ವೆ ಇಲಾಖೆ ಸುಧಾರಣೆಯ ಮೊದಲ ಹೆಜ್ಜೆಯಾಗಿ ಇನ್ನೈದು ವರ್ಷದಲ್ಲಿ ಕಾಗದ ರಹಿತ ಕಚೇರಿಯನ್ನಾಗಿ ಪರಿವರ್ತಿಸುವ ಸಂಕಲ್ಪ ಮಾಡಿರುವ ಸದಾನಂದಗೌಡ, ಆನ್ಲೈನ್ ಬುಕಿಂಗ್, ರೈಲು ನಿಗಾ ವ್ಯವಸ್ಥೆ ಹಾಗೂ ತಾಂತ್ರಿಕ ವಿಶ್ವವಿದ್ಯಾಲಯ ಪ್ರಾರಂಭಿಸುವ ಪ್ರಸ್ತಾಪವಿಟ್ಟಿದ್ದಾರೆ. ಪ್ರತಿ ನಿಮಿಷಕ್ಕೆ 7200 ಟಿಕೆಟ್ ಕಾಯ್ದಿರಿಸುವ ಹಾಗೂ 1.20 ಲಕ್ಷ ಜನರು ಒಮ್ಮೆಲೆ ರೈಲ್ವೆ ಇಲಾಖೆ ವೆಬ್ಸೈಟ್ ನೋಡಬಹುದಾದ ವ್ಯವಸ್ಥೆ ರೂಪಿಸುವ ಭರವಸೆ ನೀಡಿದ್ದಾರೆ.
ಸ್ವಚ್ಛತೆಗೆ ನನ್ನ ಮೊದಲ ಆದ್ಯತೆ
ನಿಮ್ಮ ಉತ್ತಮ ಪ್ರಯಾಣ ನನ್ನ ಆದ್ಯ ಕರ್ತವ್ಯ. ಹೀಗಾಗಿ ರೈಲು ಹಾಗೂ ನಿಲ್ದಾಣದಲ್ಲಿನ ಸ್ವಚ್ಛತೆಗೆ ಈ ಬಾರಿ ಹೆಚ್ಚಿನ ಮಹತ್ವವನ್ನು ಕೊಟ್ಟಿದ್ದೇನೆ. ಅದಕ್ಕಾಗಿ ಈ ಹಿಂದನ ಸರ್ಕಾರಕ್ಕಿಂತಲೂ ಶೇ. 40ರಷ್ಟು ಹೆಚ್ಚು ಅನುದಾನವನ್ನು ಮೀಸಲಿಟ್ಟಿದ್ದೇನೆ. ನನಗೆ ಗೊತ್ತು. ರೈಲ್ವೆ ನಿಲ್ದಾಣ ಹಾಗೂ ಬೋಗಿಗಳಲ್ಲಿ ಸಮರ್ಪಕವಾದ ಸ್ವಚ್ಛತೆ ಇಲ್ಲ. ಆದರೆ ರೈಲ್ವೆ ಇಲಾಖೆ ಈ ಬಗ್ಗೆ ಸಾಕಷ್ಟು ಶ್ರಮ ಹಾಕುತ್ತಿದ್ದರೂ ಇದು ಸಾಧ್ಯವಾಗುತ್ತಿಲ್ಲ. ಕಾರಣ ಇಷ್ಟೆ. ಇಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಪ್ರಯಾಣಿಕರು ಬರುವುದರಿಂದ ಸ್ವಚ್ಛತೆ ಕಾಪಾಡಿಕೊಳ್ಳುವುದು ಸವಾಲಾಗಿದೆ. ಈ ನಿಟ್ಟಿನಲ್ಲಿ ನಾನು ಶುದ್ಧತೆಗೆ ಹೆಚ್ಚಿನ ಒತ್ತು ನೀಡುತ್ತಿದ್ದೇನೆ. ಹೀಗಾಗಿ 50 ಪ್ರಮುಖ ನಿಲ್ದಾಣಗಳ ಸ್ವಚ್ಛತಾ ಕಾರ್ಯಕ್ಕಾಗಿ ವೃತ್ತಿಪರ ಸಂಸ್ಥೆಗಳಿಗೆ ಹೊರಗುತ್ತಿಗೆ ನೀಡುತ್ತಿದ್ದೇನೆ. ಜತೆಗೆ ಪ್ರತ್ಯೇಕವಾಗಿ ಸ್ವಚ್ಛತಾ ವಿಭಾಗದ ವ್ಯವಸ್ಥೆ ಮಾಡಲಾಗುವುದು. ಇವರು ಸ್ವಚ್ಛತೆ ಮತ್ತು ನೈರ್ಮಲ್ಯವನ್ನು ಅತ್ಯಂತ ಜವಾಬ್ದಾರಿಯಿಂದ ನಿಭಾಯಿಸಲಿದ್ದಾರೆ.
ಹೊಸಮಾರ್ಗ ಸಮೀಕ್ಷೆ
- ತಿಪಟೂರು - ದುದ್ದ
- ಚಳ್ಳಕೆರೆ- ಹಿರಿಯೂರು- ಚಿಕ್ಕನಾಯಕನಹಳ್ಳಿ- ಕೆ.ಬಿ.ಕ್ರಾಸ್- ತುರುವೇಕೆರೆ- ಚನ್ನರಾಯಪಟ್ಟಣ
- ಬೆಳಗಾವಿ- ಹಬ್ಬಳ್ಳಿ ಕಿತ್ತೂರು ಮಾರ್ಗ
- ಬಳ್ಳಾರಿ- ಲಿಂಗಸೂಗೂರು- ಸಿರುಗುಪ್ಪ- ಸಿಂಧನೂರು ಮಾರ್ಗ
- ಮೀರಜ್- ಕವತೇಮಹಾಂಕಲ್- ಚತ್- ಬಿಜಾಪುರ
ಮಧ್ಯಂತರ ಬಜೆಟ್ನಲ್ಲಿ ಘೋಷಿಸಿದ ರೈಲುಗಳು
- ಜೈ ಹಿಂದ್ - ಪ್ರೀಮಿಯಂ ರೈಲುಗಳು
- ಯಶವಂತಪುರ- ಜೈಪುರ ( ಗುಲ್ಬರ್ಗಾ, ಪುಣೆ, ವಾಸೈ ಮಾರ್ಗ-ವಾರಕ್ಕೊಮ್ಮೆ)
- ಪಟನಾ- ಬೆಂಗಳೂರು ಎಕ್ಸ್ಪ್ರೆಸ್ (ಮುಗಲ್ ಸರಾಯ್- ಚೆಕಿ- ಮಾಣಿಕ್ ಪುರ್- ನಾಗಪುರ್- ವಾರಕ್ಕೊಮ್ಮೆ)
- ಯಶವಂತಪುರ್- ಕತ್ರಾ (ವೈಷ್ಣೋದೇವಿ) ಎಕ್ಸ್ಪ್ರೆಸ್ (ಗುಲ್ಬರ್ಗಾ- ಕಾಚಿಗುಡ-ನಾಗಪುರ ಮಾರ್ಗ- ವಾರಕ್ಕೊಮ್ಮೆ )
- ತಿರುವನಂತಪುರ- ಬೆಂಗಳೂರು ಎಕ್ಸ್ಪ್ರೆಸ್ ( ಈರೋಡ್-ತಿರುಪುತ್ತೂರು ಮಾರ್ಗ ವಾರಕ್ಕೆರಡು ದಿನ)
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


