ಆಗಿದ್ದು ಬರೀ ವೆಚ್ಚವಷ್ಟೇ, ಅಭಿವೃದ್ಧಿ ಮಾತ್ರ ಶೂನ್ಯ
ಬೆಂಗಳೂರು: ಅಧ್ಯಯನ ಪ್ರವಾಸ ಹಾಗೂ ಕಾರ್ಯಾಗಾರ ನೆಪದಲ್ಲಿ ಕೋಟಿಗಟ್ಟಲೇ ದುಡ್ಡು ಖರ್ಚಾಗಿರುವುದು ಬಿಟ್ಟರೇ, ಪ್ರತಿಯಾಗಿ ತಾಂತ್ರಿಕ ಶಿಕ್ಷಣ ಅಭಿವೃದ್ಧಿಗೆ ಇದರಿಂದ ನಯಾ ಪೈಸೆ ಲಾಭವಾಗಿಲ್ಲ.
ವಿದೇಶಿ ಪ್ರವಾಸಕ್ಕೆ ಹೋಗಿರುವ 194 ಹಾಗೂ ಕಾರ್ಯಾಗಾರದಲ್ಲಿ ಭಾಗವಹಿಸಿರುವ 2311 ಪ್ರಾಧ್ಯಾಪಕರ ಪೈಕಿ ಯಾರೊಬ್ಬರೂ ಅಧ್ಯಯನ ವರದಿ ಸಲ್ಲಿಸಿಲ್ಲ. ಬದಲಾಗಿ ಪ್ರವಾಸದ ಉದ್ದೇಶವನ್ನು 'ಪಿಎಚ್ಡಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ' ನೀಡಲು ಎಂಬ ಸ್ವಯಂ ಹೇಳಿಕೆ ದಾಖಲಿಸಿದ್ದಾರೆ. ಆದರೆ ಕಾಲೇಜಿಗೆ 79.06 ಕೋಟಿ ಅನುದಾನ ನೀಡುತ್ತಿರುವ ತಾಂತ್ರಿಕ ಶಿಕ್ಷಣ ಇಲಾಖೆ ವಸ್ತುಸ್ಥಿತಿ ಬಗ್ಗೆ ವಿಚಾರಣೆಯನ್ನೂ ನಡೆಸಿಲ್ಲ. ಸರ್ಕಾರದ ದುಡ್ಡು ನಮಗೇನಾಗುವುದಿದೆ ಎಂಬ ಲೆಕ್ಕದಲ್ಲಿ ತಾಂತ್ರಿಕ ಶಿಕ್ಷಣ ಇಲಾಖೆ ನಿರ್ದೇಶಕರು ಹಣ ಬಿಡುಗಡೆ ಮಾಡಿದ್ದಾರೆ. ನೆಪಕ್ಕಾದರೂ ವರದಿ ಕೇಳುವ ಕಾಳಜಿ ತೋರಿಸಿಲ್ಲ.
ಟೆಕ್ವಿಪ್ ಯೋಜನಾ ಸಂಯೋಜಕರು ಕೆಲ ವಿಚಾರಗಳನ್ನು ಅಡಗಿಸಿಡುವುದನ್ನು ಎಷ್ಟು ಚೆಂದವಾಗಿ ಕರಗತ ಮಾಡಿಕೊಂಡಿದ್ದಾರೆ ಎಂದರೆ, ಒಂದೇ ದಿನ, ಒಂದೇ ಜಾಗದಲ್ಲಿ ಎರಡು ಬೇರೆ ಬೇರೆ ವಿಚಾರಗಳ ಬಗ್ಗೆ ಕಾರ್ಯಾಗಾರ ನಡೆಸುತ್ತಾರೆ. ಇದಕ್ಕೆ ಬೇರೆ ಖರ್ಚು ತೋರಿಸುತ್ತಾರೆ. ಇದೆಲ್ಲಕ್ಕಿಂತ ವಿಶೇಷವಾಗಿ ಪಿಎಚ್ಡಿಗೆ ಮಾರ್ಗದರ್ಶನ ಮಾಡಲು ವಿವಿಯಿಂದ ಅನುಮತಿಯನ್ನೇ ಪಡೆಯದ ಸಹಾಯಕ ಪ್ರಾಧ್ಯಾಪಕರು ಕೂಡ ಪಿಎಚ್ಡಿ ಮಾರ್ಗದರ್ಶನಕ್ಕೆ ನೆರವು ಕುರಿತಂತೆ ಅಧ್ಯಯನ ಪ್ರವಾಸ ಮಾಡಿದ್ದಾರೆ!
ಸಂಶೋಧನೆಗಾಗಿ ಪ್ರವಾಸ?: ವಿದೇಶ ಪ್ರವಾಸ ಮಾಡಿದ 194 ಪ್ರಾಧ್ಯಾಪಕರಲ್ಲಿ ಕೆಲವರು ಸಮ್ಮೇಳನಗಳಲ್ಲಿ ಉಪನ್ಯಾಸ ಮಾಡಿದ್ದಾರೆ, ಸಂಶೋಧನಾ ಪ್ರಬಂಧ ಮಂಡಿಸಿದ್ದಾರೆ. ಎಲ್ಲರೂ ಟೆಕ್ವಿಪ್ ಹಣ ದುರುಪಯೋಗ ಮಾಡಿಕೊಂಡಿದ್ದಾರೆ ಎಂದಲ್ಲ. ಆದರೆ 'ಕನ್ನಡಪ್ರಭ'ಕ್ಕೆ ದೊರೆತ ಮಾಹಿತಿ ಪ್ರಕಾರ 66 ಪ್ರಾಧ್ಯಾಪಕರು ಯಾವುದೇ ಶೈಕ್ಷಣಿಕ ಉದ್ದೇಶವಿಲ್ಲದೇ ಪ್ರವಾಸ ಮಾಡಿದ್ದಾರೆ. ಆದರೆ ದಾಖಲೆಗೆ ತೋರಿಸಲು 'ಪಿಎಚ್ಡಿ ವಿದ್ಯಾರ್ಥಿಗಳ ಮಾರ್ಗದರ್ಶನಕ್ಕಾಗಿ' ಎಂಬ ನೆಪ ನೀಡಿದ್ದಾರೆ. ವಿಚಿತ್ರವೆಂದರೆ ಈ ಪ್ರಾಧ್ಯಾಪಕರು ಎಷ್ಟು ವಿದ್ಯಾರ್ಥಿಗಳಿಗೆ ಪಿಎಚ್ಡಿ ಮಾರ್ಗದರ್ಶನ ಮಾಡಿದರು, ಯಾವೆಲ್ಲ ವಿದ್ಯಾರ್ಥಿಗಳು ಇದರ ಲಾಭ ಪಡೆದರು, ಯಾವೆಲ್ಲ ಪ್ರಾಧ್ಯಾಪಕರು ವೈಯಕ್ತಿಕವಾಗಿ ಸಂಶೋಧನೆ ನಡೆಸಿದರು ಎಂಬ ಸಣ್ಣ ಪ್ರಶ್ನೆಯನ್ನು ತಾಂತ್ರಿಕ ಶಿಕ್ಷಣ ಇಲಾಖೆ ಕೇಳಿಲ್ಲ. ಆದ್ದರಿಂದ ಇವರ ಪ್ರವಾಸದ ಕುರಿತಂತೆಯೇ ಸಂಶೋಧನೆ ಮಾಡುವ ಅನಿವಾರ್ಯ ಎದುರಾಗಿದೆ.
ಒಟ್ಟಾರೆ 29 ಪ್ರಾಧ್ಯಾಪಕರು ಅಧ್ಯಯನ ಪ್ರವಾಸ, 20 ಜನರು ನೇಪಾಳದಲ್ಲಿ ನಡೆದ ಕಾರ್ಯಾಗಾರ ಹಾಗೂ 17 ಜನ ನೇಪಾಳ, ಆಸ್ಟ್ರೇಲಿಯಾ, ಥೈಲ್ಯಾಂಡ್, ಕೆನಡಾದಲ್ಲಿ ನಡೆದ ನಾನಾ ಸಮ್ಮೇಳನಗಳಲ್ಲಿ ಕೇವಲ ಭಾಗವಹಿಸಿದ್ದಾರೆ. ಇದರಿಂದ ಕಾಲೇಜಿಗೆ ಅಥವಾ ವಿದ್ಯಾರ್ಥಿಗಳಿಗೆ ಯಾವ ಲಾಭವಿದೆ ಎನ್ನುವುದು ಅರ್ಥವಾಗಿಲ್ಲ.
ನೇಪಾಳದ ರೆಸಾರ್ಟ್ಲ್ಲಿ 2013ರ ನವೆಂಬರ್ 21ರಿಂದ 24ರವರೆಗೆ ಕಾರ್ಯಾಗಾರ ನಡೆದಿದೆ. ಎಲ್ಲ 20 ಪ್ರಾಧ್ಯಾಪಕರು ಒಂದೇ ಕಾರ್ಯಾಗಾರದಲ್ಲಿ ಭಾಗವಹಿಸಿದ್ದರೂ 6 ಜನರಿಗೆ ಬೇರೊಂದು ಕಾರ್ಯಾಗಾರದ ಹೆಸರು ನೀಡಲಾಗಿದೆ.
ಹಾಸನದ ಮಲ್ನಾಡ್ ಟೆಕ್ನಿಕಲ್ ಎಜುಕೇಷನ್ ಸೊಸೈಟಿಯ ಅಧ್ಯಕ್ಷ, ಕಾರ್ಯದರ್ಶಿ ಹಾಗೂ ಖಜಾಂಚಿಯನ್ನು ನೇಪಾಳದಲ್ಲಿ ನಡೆದ ಕಾರ್ಯಾಗಾರಕ್ಕೆ ಕಳುಹಿಸಲಾಗಿದೆ. ಅಲ್ಲಿ ನಾಯಕತ್ವ ಸುಧಾರಣೆಗೆ ಸಂಬಂಧಿಸಿ ಉಪನ್ಯಾಸ ನಡೆಸಲಾಗಿದೆ ಎಂದು ಇಲಾಖೆ ಹೇಳಿಕೊಳ್ಳುತ್ತಿದೆ. ಜನರ ಕಣ್ಣು ಕಟ್ಟಲು ತಾಂತ್ರಿಕ ಶಿಕ್ಷಣ ಇಲಾಖೆ ಈ ರೀತಿಯ ಒಂದು ಮಾಹಿತಿ ನೀಡಿದೆ.
ಟಿ ಅಧ್ಯಕ್ಷ, ಕಾರ್ಯದರ್ಶಿ, ಖಜಾಂಚಿ ಹಾಗೂ ಪಿಎಚ್ಡಿ!
ಬೇಜವಾಬ್ದಾರಿ ಸಂಯೋಜಕ
ಟೆಕ್ವಿಪ್ ಸಂಯೋಜಕರಾಗಿದ್ದವರು ಎರಡು ಬಾರಿ ವಿದೇಶ ಪ್ರವಾಸ ಮಾಡಿ ಬಂದಿದ್ದಾರೆ. ತಾಂತ್ರಿಕ ಶಿಕ್ಷಣ ಇಲಾಖೆಯು ನಿಯಮಗಳನ್ನು ಮೀರಿ ಅನುದಾನಿತ ಕಾಲೇಜಿನ ಖಾಸಗಿ ಸಿಬ್ಬಂದಿಯೊಬ್ಬರನ್ನು ಟೆಕ್ವಿಪ್ ಯೋಜನೆಯ ಸಂಯೋಜಕರನ್ನಾಗಿ ನೇಮಿಸಿದೆ. ಇಲ್ಲಿ ಇವರು ಹೇಳಿದ್ದೇ ಮಾತು. ಮತ್ತೊಂದು ಆರೋಪವೆಂದರೆ ಇಲಾಖೆಯಲ್ಲಿನ ಕೆಲ ಭ್ರಷ್ಟರು ಸೇರಿಕೊಂಡು ಒಂದು ಏಜೆನ್ಸಿ ಮಾಡಿಕೊಂಡಿದ್ದಾರೆ. ಸರ್ಕಾರ ಒಪ್ಪಿಗೆ ನೀಡಿರುವ ಎಲ್ಲ 10 ಏಜೆನ್ಸಿಗಳ ಹೆಸರು ಮಾತ್ರ ಬೇರೆ. ಇದೇ ಕಾರಣಕ್ಕೆ ಈ ಏಜೆನ್ಸಿಗಳು ನಡೆಸುವ ಎಲ್ಲ ಕಾರ್ಯಾಗಾರಗಳಲ್ಲ ಭಾಗವಹಿಸುವ ಸಂಪನ್ಮೂಲ ವ್ಯಕ್ತಿಗಳಲ್ಲಿ ಬದಲಾವಣೆಯಾಗುವುದಿಲ್ಲ.
-ರಾಜೀವ ಹೆಗಡೆ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

