ಗೋವಾ ಕನ್ನಡಿಗ ತತ್ತರ, ನಿದ್ದೆ ಮಾಡುತ್ತಿದೆಯೇ ಸರ್ಕಾರ?

ವಾಸ್ಕೋ: ಬೈನಾದಲ್ಲಿ ಗೋವಾ ಸರ್ಕಾರ ಅಕ್ಷರಶಃ ಸರ್ವಾಧಿಕಾರಿ ಧೋರಣೆ ತಳೆದಿದೆ. ನಿರಾಶ್ರಿತ ಗೋವಾ ಕನ್ನಡಿಗರ ಮೇಲೆ ದಬ್ಬಾಳಿಕೆ ಆರಂಭಿಸಿದೆ. ಕನ್ನಡ ಸಂಘಟನೆಗಳಿಗೆ ಕಾಲಿಡದಂತೆ ಎಚ್ಚರಿಕೆ ನೀಡಿದೆ. ಮಾಧ್ಯಮ ಪ್ರವೇಶಕ್ಕೂ ನಿಷೇಧ ವಿಧಿಸಿದೆ. ದುರಂತ ಎಂದರೆ ನಮ್ಮ ರಾಜ್ಯ ಸರ್ಕಾರ ಮಾತ್ರ ಇನ್ನೂ ನಿದ್ದೆ ಮಾಡುತ್ತಿದೆ.
'ನಿರಾಶ್ರಿತರ ಬೆಂಬಲಿಸಿದರೆ ಹುಷಾರ್!, ಅವರಿಗೆ ಊಟ, ತಿಂಡಿ ಕೊಡುವಂತಿಲ್ಲ. ನಿರಾಶ್ರಿತರ ಪ್ರಚೋಸಿದರೆ ನಿಮ್ಮನ್ನು ಅರೆ ಬೆತ್ತಲೆ ಮಾಡಿ, ಜೈಲಿಗಟ್ಟುತ್ತೇವೆ. ಮಾಧ್ಯಮದವರಿಗೂ ಇಲ್ಲಿ ಪ್ರವೇಶವಿಲ್ಲ. ಯಾವುದೇ ಫೋಟೋ ತೆಗೆಯುವಂತಿಲ್ಲ'.
ಇದು ಬುಧವಾರ ಬೆಳಗ್ಗೆ 10 ಗಂಟೆ ಸುಮಾರಿಗೆ ಬೈನಾ ನಿರಾಶ್ರಿತರಿಗೆ ನೆರವು ನೀಡಲು ಹೋದ ಕನ್ನಡ ಸಂಘಟನೆಗಳ ಮುಖಂಡರು ಹಾಗೂ ಖಾಸಗಿ ಪತ್ರಕರ್ತರಿಗೆ ಗೋವಾ ಪೊಲೀಸರು ನೀಡಿದ ಖಡಕ್ ಎಚ್ಚರಿಕೆ. ಈ ಮೂಲಕ ಪ್ರಜಾಪ್ರಭುತ್ವದ ಎಲ್ಲ ಹಕ್ಕುಗಳನ್ನೂ ಪೊಲೀಸರು ಕಸಿದುಕೊಂಡಿದ್ದಾರೆ.
ಬುಧವಾರ ಬೆಳಗ್ಗೆ ಗೋವಾ ಕನ್ನಡಿಗರ ಮುಖಂಡ ಸಿದ್ದಣ್ಣ ಮೇಟಿ, ವಾಸ್ಕೋ ಕನ್ನಡ ಸಂಘದ ಅಧ್ಯಕ್ಷ ಜಗ್ಗಲ್, ಮಂಜುನಾಥ ನಾಟೇಕರ್ ಹಾಗೂ ವರದಿ ಮಾಡಲು ತೆರಳಿದ್ದ ಖಾಸಗಿ ಟಿವಿ ವಾಹಿನಿ ಪತ್ರಕರ್ತರು ತೆರಳಿದ್ದರು. ಇವರನ್ನು ಮಧ್ಯೆದಲ್ಲೇ ತಡೆದ ಪೊಲೀಸರು ಸೀದಾ ಠಾಣೆಗೆ ಎಳೆದೊಯ್ದಿದ್ದಾರೆ. ನಂತರ ಈ ಮೇಲಿನ ಬೆದರಿಕೆ ಹಾಕಿ ಕಳುಹಿಸಿದ್ದಾರೆ.
ಬಾವುಟ ಕಿತ್ತೆಸೆದರು
ಮಂಗಳವಾರ ರಾತ್ರಿ ನಿರಾಶ್ರಿತ ಕನ್ನಡಿಗರು ಬೈನಾದ ಬಯಲಿನಲ್ಲೇ ಕನ್ನಡ ಬಾವುಟ ಹಾಕಿ ಕುಳಿತಿದ್ದರು. ಅಲ್ಲಿಗೆ ತೆರಳಿದ ಗೋವಾ ಪೊಲೀಸರು ಕನ್ನಡ ಬಾವುಟವನ್ನು ಕಿತ್ತೆಸೆದರು. ತಡೆಯಲು ಮುಂದಾದವರಿಗೆ ಏಟು ಕೊಟ್ಟು ತಳ್ಳಿದರು. ಎದ್ದು ಹೋಗುವಂತೆ ಬೆದರಿಸಿದರು.
ಕನ್ನಡಿಗರ ಧ್ವನಿ ಅಡಿಗಿಸುವ ತಂತ್ರವೇ?
2004ರಲ್ಲಿ ಬೈನಾದಲ್ಲಿ ಕನ್ನಡಿಗರ ಮನೆಗಳನ್ನು ಭಾರಿ ಸಂಖ್ಯೆಯಲ್ಲಿ ನೆಲಸಮಗೊಳಿಸಿದ್ದಾಗಲೂ ಕನ್ನಡ ಸಂಘಟನೆಗಳು, ಪ್ರತಿಭಟನಾಕಾರರು ಹಾಗೂ ನಿರಾಶ್ರಿತರ ಮೇಲೆ ಪೊಲೀಸರು ದಬ್ಬಾಳಿಕೆ ನಡೆಸಿದ್ದರು. ಹೋರಾಟವನ್ನು ಹತ್ತಿಕ್ಕುವ ಎಲ್ಲ ತಂತ್ರಗಳನ್ನೂ ನಡೆಸಿದ್ದರು. ಈಗಲೂ ಅಲ್ಲಿನ ಪೊಲೀಸರು ಅದೇ ತಂತ್ರ ಅನುಸರಿಸಿ, ಕನ್ನಡಿಗರ ಧ್ವನಿಯನ್ನೇ ಅಡಗಿಸಲು ಹೊರಟಿದ್ದಾರೆ.
ರಾಜ್ಯಕ್ಕೇನಾಗಿದೆ?
ಬೈನಾದಲ್ಲಿ ಆಸ್ತಿ ಹಕ್ಕು, ಬದುಕಿನ ಹಕ್ಕು, ಅಭಿವ್ಯಕ್ತಿ ಸ್ವಾತಂತ್ರ್ಯದ ಹಕ್ಕು ಸೇರಿದಂತೆ ಎಲ್ಲ ಹಕ್ಕುಗಳೂ ಇಲ್ಲದಂತಾಗಿದೆ. ಈ ರೀತಿ ಗೋವಾ ಸರ್ಕಾರ ಸರ್ವಾಧಿಕಾರಿ ಧೋರಣೆ ಅನುಸರಿಸುತ್ತಿದ್ದರೆ, ಕನ್ನಡಿಗರ ಪರ ನಿಲ್ಲಬೇಕಾದ ಕರ್ನಾಟಕ ಸರ್ಕಾರ ಮಾತ್ರ ಯಾವುದೇ ಕ್ರಮ ಕೈಗೊಂಡಿಲ್ಲ. ಇವರ ದಯನೀಯ ಪರಿಸ್ಥಿತಿ ಬಗ್ಗೆ ಅಧಿಕಾರಿಗಳು ಕರ್ನಾಟಕದ ಗೃಹ ಇಲಾಖೆಗೆ ವರದಿಯನ್ನೂ ರವಾನಿಸಿದ್ದಾರೆ. ಇಷ್ಟಾದರೂ ರಾಜ್ಯ ಸರ್ಕಾರ, ಸಚಿವರು, ಪ್ರತಿಪಕ್ಷದವರು ಮಾತ್ರ ಏನೂ ಆಗಿಯೇ ಇಲ್ಲ ಎಂಬಂತೆ ಕುಳಿತಿದ್ದಾರೆ. ಕನಿಷ್ಠ ಅವರ ನೋವಿಗೆ ಸ್ಪಂದಿಸುವ ಪ್ರಯತ್ನವನ್ನೂ ಮಾಡಿಲ್ಲ. ಇದರ ಲಾಭವನ್ನು ಪಡೆಯುತ್ತಿರುವ ಗೋವಾ ಸರ್ಕಾರ ಮನಬಂದಂತೆ ವರ್ತಿಸುತ್ತಿದೆ.
ನಮ್ಮ ತಾಯಂದಿರು ಮಳೆಯಲ್ಲಿದ್ದಾರೆ. ಮಕ್ಕಳು ರೋದಿಸುತ್ತಿದ್ದಾರೆ. ಅವರ ನೆರವಿಗೆ ಹೋದರೆ ಪೊಲೀಸರು ದೌರ್ಜನ್ಯ ನಡೆಸುತ್ತಾರೆ. ಇಂಥ ಬೆದರಿಕೆಗಳಿಗೆ ಮಣಿಯಲ್ಲ.
- ಸಿದ್ದಣ್ಣ ಮೇಟಿ, ಕನ್ನಡಿಗರ ಮುಖಂಡ
-ವಸಂತಕುಮಾರ್ ಕತಗಾಲ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


