ಪ್ರಧಾನ ಸುದ್ದಿ

ಊರೋರ ಲೆಕ್ಕ ಪಕ್ಕಾ ಮನೆದು ಹುಡುಕಿದರೂ ಸಿಕ್ಕ

Published On :

ಬೆಂಗಳೂರು: ಊರೋರ ಲೆಕ್ಕ ಕೇಳೋರ ಕಚೇರಿಯಲ್ಲಿ ವೆಚ್ಚವಾಗುವ ಹಣಕ್ಕೆ ಲೆಕ್ಕವೇ ಇಲ್ಲ. ಸರ್ಕಾರದ ಪ್ರತಿ ಇಲಾಖೆಗೂ ಸಿಂಹಸ್ವಪ್ನವಾಗಿರುವ ಸಿಎಜಿ ಕಚೇರಿಯ ಪರಿಸ್ಥಿತಿ ಇದು. ಅಲ್ಲಿನ ಖರ್ಚುವೆಚ್ಚಗಳಿಗೆ ಲೆಕ್ಕವನ್ನೇ ಇಡುವುದಿಲ್ಲವಂತೆ!
ಈ ಬಾರಿ ಅಧಿವೇಶನದಲ್ಲಿ ಸಿಎಜಿ ವರದಿ ಮಂಡನೆಯಾಗುತ್ತದೆ ಎಂದರೆ ರಾಜ್ಯದ ಬಹುತೇಕ ಇಲಾಖೆಗಳು ಆತಂಕಗೊಳ್ಳುತ್ತವೆ. ಅಧಿಕಾರಿಗಳ ನಿದ್ದೆ ಕೆಡುತ್ತದೆ. ಸಿಎಜಿ ವರದಿಗಿದೆ ಅಂತಹ 'ಪವರ್‌'. ಆದರೆ, ಇಂತಹ 'ಪವರ್ ಫುಲ್‌' ವರದಿ ತಯಾರಿಸಲು ಆಗುವ ವೆಚ್ಚಕ್ಕೆ ಲೆಕ್ಕವೇ ಇಲ್ಲವಂತೆ!
ಅಚ್ಚರಿ ಎನಿಸಿದರೂ ಸತ್ಯ. ಇಂತಹ ನಿಜಾಂಶವನ್ನು ಸಿಎಜಿ ಕಚೇರಿಯೇ ಮಾಹಿತಿ ಹಕ್ಕು ಕಾಯಿದೆಯನ್ವಯ ಹೊರಗೆಡಹಿದೆ. ಬೆಂಗಳೂರಿನಲ್ಲಿರುವ ಪ್ರಧಾನ ಮಹಾಲೆಕ್ಕಪರಿಶೋಧಕರ ಕಚೇರಿ (ಕರ್ನಾಟಕ)ಯಲ್ಲಿರುವ ಆಡಳಿತದ ಉಪ ಪ್ರಧಾನ ಲೆಕ್ಕಾಧಿಕಾರಿ ಹಾಗೂ ಕೇಂದ್ರ ಸಾರ್ವಜನಿಕ ಮಾಹಿತಿ ಅಧಿಕಾರಿ ಅವರು ಈ ಮಾಹಿತಿ ನೀಡಿದ್ದಾರೆ.
ರಾಜ್ಯ ಸರ್ಕಾರದ ಬಹುತೇಕ ಎಲ್ಲ ಇಲಾಖೆಯ ಬಗ್ಗೆಯೂ ಸಿಎಜಿ (ಲೆಕ್ಕನಿಯಂತ್ರಕರು ಮತ್ತು ಮಹಾಲೆಕ್ಕಪರಿಶೋಧಕರು) ವರದಿ ಸಿದ್ಧವಾಗುತ್ತದೆ. ಇಲಾಖೆ ಕಾರ್ಯಕ್ರಮಗಳಲ್ಲಿ, ಕಾಮಗಾರಿಗಳಲ್ಲಿ ಆಗಿರುವ ಕನಿಷ್ಠ, ಗರಿಷ್ಠ ಲೋಪಗಳನ್ನೂ ಗುರುತಿಸಿ ಬಹಿರಂಗಪಡಿಸಲಾಗುತ್ತದೆ. ಬಹುತೇಕ ಪ್ರತಿ ಅಧಿವೇಶನದಲ್ಲೂ ಇಂತಹ ಒಂದು ವರದಿ ಸಲ್ಲಿಕೆಯಾಗುತ್ತದೆ. ಅದು ಆ ಇಲಾಖೆಗಳನ್ನೇ ತಲ್ಲಣಗೊಳಿಸುತ್ತದೆ. ಆದರೆ, ಇಷ್ಟೆಲ್ಲ 'ಪವರ್‌' ಹೊಂದಿರುವ ಸಿಎಜಿ ಕಚೇರಿಯಲ್ಲಿ ಲೆಕ್ಕಪತ್ರಗಳಿಡುವುದಿಲ್ಲ ಎಂಬುದೇ ಸೋಜಿಗ.    11
ಪ್ರತಿ ವರ್ಷವೂ ಸಾಕಷ್ಟು ಇಲಾಖೆಗಳ ಲೆಕ್ಕಪರಿಶೋಧನೆ ಮಾಡುವ ಸಿಎಜಿ, ಇದಕ್ಕಾಗಿ ಅಧಿಕಾರಿಗಳ ಸಭೆ, ಭತ್ಯೆ ಸೇರಿದಂತೆ ನಾನಾ ಬಾಬ್ತುಗಳಿಗೆ ಎಷ್ಟು ವೆಚ್ಚ ಮಾಡುತ್ತದೆ ಎಂಬ ಮಾಹಿತಿಯನ್ನು ಕೋರಲಾಗಿತ್ತು. ಇದನ್ನು ವಾರ್ಷಿಕವಾಗಿ ನೀಡಲೂ ಮನವಿ ಮಾಡಿಕೊಳ್ಳಲಾಗಿತ್ತು. ಇದಕ್ಕೆ ಒಂದು ಸಮಜಾಯಿಷಿ ಪತ್ರವನ್ನು ಕಳುಹಿಸಿದ್ದ ಪಿಐಒ, ಯಾವ ಮಾಹಿತಿ ಬೇಕು ಎಂದು ಮತ್ತೆ ಕೇಳಿದ್ದರು. ಕೇಳಿದ್ದನ್ನೇ ಮತ್ತೆ ಇಂಗ್ಲಿಷ್‌ನಲ್ಲಿ ಕೇಳಿ ಫ್ಯಾಕ್ಸ್ ಮಾಡಿದ ಮೇಲೆ, ಪಿಐಒ ಎರಡು ಪುಟಗಳ ಮಾಹಿತಿ ಕಳುಹಿಸಿದ್ದಾರೆ.
ಇದರಲ್ಲಿ ಪುಸ್ತಕ ಮುದ್ರಣ ವಿವರಣೆ ಒಂದು ಪುಟದಲ್ಲಿದ್ದರೆ, ಮತ್ತೊಂದು ಪುಟದಲ್ಲಿ ಎರಡನೇ ಅಂಶವಾಗಿ ವೆಚ್ಚಕ್ಕೆ ಯಾವುದೇ ಲೆಕ್ಕಪತ್ರ ಇಲ್ಲ ಎಂದು ಹೇಳಿದ್ದಾರೆ. 'ಲೆಕ್ಕಪರಿಶೋಧನಾ ವರದಿ ತಯಾರಿಸಲು ಅಧಿಕಾರಿಗಳಿಗೆ ನೀಡಲಾಗುವ ಭತ್ಯೆಗಳ ಲೆಕ್ಕ ಲಭ್ಯವಿಲ್ಲ' ಎಂದು ಉತ್ತರಿಸಿದ್ದಾರೆ. ಅಂದರೆ, ಇಡೀ ರಾಜ್ಯದ ಇಲಾಖೆಗಳ ಲೆಕ್ಕದಲ್ಲಿ ಒಂದೊಂದು ಸಣ್ಣ ವಿಚಾರದಲ್ಲೂ ಅಳೆದುತೂಗಿ ಅಲ್ಲಿರುವ ಭ್ರಷ್ಟಾಚಾರವನ್ನು ಬಯಲಿಗೆಳೆದು ಮೆಚ್ಚುಗೆಯ ಕೆಲಸ ಮಾಡುವ ಸಿಎಜಿಯೇ ತನ್ನ ಲೆಕ್ಕಪತ್ರ ಹೊಂದಿಲ್ಲ.
ಊರೋರ ಲೆಕ್ಕ ಕೇಳಿ ಅವರನ್ನು ದಾರಿಗೆ ತರುವ ಕೆಲಸ ಮಾಡುವ ಸಿಎಜಿಯೇ ತನ್ನ ಹಾದಿಯಲ್ಲಿ ಎಡವಿರುವುದು ವಿಪರ್ಯಾಸವೇ? ಶೋಚನೀಯವೇ?
ವೆಚ್ಚವೇ ಇಲ್ಲ!
ಸರ್ಕಾರದ ಇಲಾಖೆಗಳು ಪುಸ್ತಕ ಮುದ್ರಣಕ್ಕೆ ಲಕ್ಷಾಂತರ ರುಪಾಯಿಗಳನ್ನು ಅತ್ಯಧಿಕವಾಗಿ ತೋರಿಸುವುದು, ಅದರಲ್ಲಿ ಅವ್ಯವಹಾರ ನಡೆಯುವುದು ಸಹಜ. ಇಂತಹ ವರದಿಗಳೂ ಬರುವುದು ಸಾಮಾನ್ಯ. ಆದರೆ, ಸಿಎಜಿ ಒಂದು ಪೈಸೆ ವೆಚ್ಚವೂ ಇಲ್ಲದ ಜಿಲ್ಲಾ ಪಂಚಾಯಿತಿ, ಸ್ಥಳೀಯ ಸಂಸ್ಥೆಗಳ ಲೆಕ್ಕಪರಿಶೋಧನಾ ಪುಸ್ತಕಗಳನ್ನು ಮುದ್ರಿಸಿದೆ. ಜಿಲ್ಲಾ ಪಂಚಾಯಿತಿಗಳ ಮೇಲೆ 2001ರ ಮಾರ್ಚ್ ಅಂತ್ಯಕ್ಕೆ ಸಿಎಜಿ ವರದಿ ಸಿದ್ಧಪಡಿಸಿ ಸಲ್ಲಿಸಲಾಗಿದೆ. ಇದಲ್ಲದೆ, ಬೆಂಗಳೂರು ನಗರ ಜಿಲ್ಲೆಯ ಸ್ಥಳೀಯ ಸಂಸ್ಥೆಗಳ ಸಿಎಜಿ ವರದಿ 1998-2002ರ ಅವಧಿಯಲ್ಲಿ ಮುದ್ರಣವಾಗಿದೆ. 2002ರ ಮಾರ್ಚ್ ಅಂತ್ಯಕ್ಕೆ ಜಿಲ್ಲಾ ಪಂಚಾಯಿತಿಗಳ ಲೆಕ್ಕಪರಿಶೋಧನಾ ವರದಿಯನ್ನು ಸಿಎಜಿ ಸಲ್ಲಿಸಿದೆ. ಈ ಮುದ್ರಣಗಳಿಗೆ ವೆಚ್ಚವೇ ಆಗಿಲ್ಲವಂತೆ. ಈ ಮೂರು ಮುದ್ರಣಗಳಿಗೆ ವೆಚ್ಚ 'ನಿಲ್‌' ಎಂದು ಪ್ರಧಾನ ಮಹಾಲೇಖಪಾಲರ ಕಚೇರಿ (ಕರ್ನಾಟಕ)ಯಿಂದ ಮಾಹಿತಿ ಹಕ್ಕು ಕಾಯಿದೆ ಮೂಲಕ ನೀಡಲಾಗಿರುವ ಮಾಹಿತಿಯಲ್ಲಿ ನಮೂದಿಸಲಾಗಿದೆ.



-ಕೆರೆ ಮಂಜುನಾಥ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.