ಪ್ರಧಾನ ಸುದ್ದಿ

ಭಾರತದಲ್ಲಿ ಅಂತಿಮ ಜಿಹಾದ್!

ಭಾರತದಲ್ಲಿ ಅಂತಿಮ ಜಿಹಾದ್!
Published On :

-ಕಾಶ್ಮೀರದಲ್ಲಿ ಸದಸ್ಯರನ್ನು ಒಟ್ಟುಗೂಡಿಸುತ್ತಿರುವ ಅಲ್‌ಖೈದಾ

ನವದೆಹಲಿ:
ಭಾರತದ ಗಡಿಯ ಬಾಗಿಲಲ್ಲೇ ಅಲ್‌ಖೈದಾ ನಿಂತಿದೆ. ಒಳಗೆ ಜಿಹಾದಿಗಳು ಸರ್ವಸನ್ನದ್ಧರಾಗಿದ್ದಾರೆ. ಸ್ವಲ್ಪ ಹೆಚ್ಚು ಕಮ್ಮಿಯಾದರೂ ಅಲ್‌ಖೈದಾ ಉಗ್ರರು ದೇಶದೊಳಕ್ಕೂ ನುಗ್ಗಲಿದ್ದಾರೆ. ಅವರು ಅಂತಿಮ ಜಿಹಾದ್‌ಗೆ ಭಾರತವನ್ನೇ ಆಯ್ಕೆ ಮಾಡಿಕೊಂಡಿದ್ದಾರೆ.
ಹೌದು. ಇಂತಹುದೊಂದು ಆತಂಕಕಾರಿ ಹಾಗೂ ಆಘಾತಕಾರಿ ವಿಚಾರವನ್ನು ಗುಪ್ತಚರ ವರದಿ ಬಹಿರಂಗಪಡಿಸಿದೆ. ಭಾರತದಲ್ಲಿ ಅಲ್‌ಖೈದಾ ಜಿಹಾದ್‌ನ ವಿಷಬೀಜ ಬಿತ್ತಲು ಸಿದ್ಧತೆ ನಡೆಸುತ್ತಿದೆ. ಅದಕ್ಕಾಗಿ ಸಂಪನ್ಮೂಲಗಳ ಕ್ರೋಡೀಕರಣದಲ್ಲಿ ತೊಡಗಿದೆ. ಅಲ್‌ಖೈದಾ ನಡೆಸಿರುವ ಈ ಕಾರ್ಯಯೋಜನೆಯ ಗುರಿ ಒಂದೇ. 'ಘಜ್ವಾ-ಇ-ಹಿಂದ್‌' ಅಂದರೆ 'ಕೊನೆಯ ಯುದ್ಧ ಭಾರತದಲ್ಲಿ'.
- ಆಕ್ರಮಣಕ್ಕೆ ಸಿದ್ಧತೆ
ಜಿಹಾದಿ ಸೇನೆಯ ಮೂಲಕ ಭಾರತದ ಮೇಲೆ ಆಕ್ರಮಣ ಮಾಡಬೇಕು. ಈ ಸೇನೆಯಲ್ಲಿರುವ ಎಲ್ಲ ಸೈನಿಕರಿಗೂ 'ಸ್ವರ್ಗದಲ್ಲಿ ಸ್ಥಳಾವಕಾಶ' ಖಚಿತ ಎಂದು ಹೇಳುವ ಮೂಲಕ ಉಗ್ರ ಸಂಘಟನೆಗಳು ಭಾರತದಲ್ಲೂ ರಕ್ತಪಾತ ಹರಿಸಲು ಮುಂದಾಗಿವೆ. ಅಲ್‌ಖೈದಾದ ಈ ಅಪಾಯಕಾರಿ ಮಾರ್ಗಸೂಚಿಯ ವಿವರಗಳನ್ನು ಗುಪ್ತಚರ ಇಲಾಖೆಯು ಸಂಗ್ರಹಿಸಿದೆ. ಅರಬ್ ಹೋರಾಟಗಾರರು ಆರಂಭಿಸಿರುವ ಉಗ್ರ ಸಂಘಟನೆಗಳು ಈಗ ಕಾಶ್ಮೀರ ಕೇಂದ್ರಿತ ಸಂಘಟನೆಗಳ ಸದಸ್ಯರನ್ನೂ ತಮ್ಮ ಗುಂಪಿಗೆ ಸೇರಿಸಿಕೊಳ್ಳುತ್ತಿವೆ. ತಾಲಿಬಾನ್ ಕೂಡ ಇದಕ್ಕೆ ಸಾಥ್ ನೀಡುತ್ತಿದೆ.
- ತಾಲಿಬಾನ್ ಧ್ವಜ
ಕಾಶ್ಮೀರದಲ್ಲಿ ಕಚೇರಿ ಸ್ಥಾಪಿಸುವುದಾಗಿ ತೆಹ್ರಿಕ್-ಎ-ತಾಲಿಬಾನ್ ಸಂಘಟನೆ ಈಗಾಗಲೇ ಘೋಷಿಸಿದೆ. ಕಳೆದ ವರ್ಷ ಶ್ರೀನಗರದತ್ತ ಕೇಂದ್ರೀಕೃತವಾಗಿರುವ ಪ್ರದೇಶವೊಂದರಲ್ಲಿ ತಾಲಿಬಾನ್ ಧ್ವಜವನ್ನು ನೆಡಲಾಗಿದೆ. ಹರಿಪ್ರಭಾತ್ ಕೋಟೆಯ ಗೋಡೆಯಲ್ಲಿ 'ತಾಲಿಬಾನ್‌ಗೆ ಸ್ವಾಗತ' ಎಂದು ದೊಡ್ಡ ಅಕ್ಷರಗಳಲ್ಲಿ ಬರೆಯಲಾಗಿದೆ. ಉಗ್ರ ಸಂಘಟನೆಗಳ ಸಿದ್ಧಾಂತವನ್ನು ದೇಶದಲ್ಲಿ ಹರಡಲಾಗುತ್ತಿದೆ. ಇದನ್ನು ಪತ್ತೆಹಚ್ಚುವುದು ಕಷ್ಟ. ಆದರೆ ಇದು ದೇಶಕ್ಕೆ ಭಾರಿ ಅಪಾಯ ತಂದೊಡ್ಡಬಲ್ಲದು ಎಂಬ ಆತಂಕವನ್ನು ಗುಪ್ತಚರ ಇಲಾಖೆ ವ್ಯಕ್ತಪಡಿಸಿದೆ.
-ಭಾರತದತ್ತ ಫೋಕಸ್
ಅಮೆರಿಕದ ಡ್ರೋಣ್ ದಾಳಿಯಿಂದ ಹತ್ಯೆಗೀಡಾದ ಟಿಟಿಪಿ ನಾಯಕ ವಲೀವುರ್ ರೆಹಮಾನ್, ಕಾಶ್ಮೀರಕ್ಕೆ ಉಗ್ರರನ್ನು ಕಳುಹಿಸಿಕೊಡುವ ಹಾಗೂ ಭಾರತದಲ್ಲಿ ಶರಿಯಾ ಕಾನೂನು ಜಾರಿ ಮಾಡುವ ಇರಾದೆ ಹೊಂದಿದ್ದ ಎನ್ನಲಾಗಿದೆ.
ಈಗ ಇರಾಕ್‌ನ ಇಸಿಸ್ ಉಗ್ರರ ಜತೆ ಅನೇಕ ಭಾರತೀಯರೂ ಕೈಜೋಡಿಸಿದ್ದಾರೆ. ಇಂಡಿಯನ್ ಮುಜಾಹಿದೀನ್ ಸೇರಿದಂತೆ ಅನೇಕ ಸಂಘಟನೆಗಳ ಸದಸ್ಯರು ಜಾಗತಿಕ ಜಿಹಾದ್‌ನತ್ತ ಆಕರ್ಷಿತರಾಗಿದ್ದಾರೆ. ಇವರನ್ನು ಮುಂದೆ ಭಾರತದ ಜಿಹಾದ್‌ನಲ್ಲಿ ಬಳಸುವುದು ಅಲ್‌ಖೈದಾದ ಯೋಜನೆಯಾಗಿದೆ.

ಇರಾಕ್ ಸೇರಿದಕರ್ನಾಟಕ ಯುವಕ?
ಮುಂಬೈ:
ಕರ್ನಾಟಕದಿಂದ ನಾಪತ್ತೆಯಾಗಿರುವ ಯುವಕನೊಬ್ಬ ಇರಾಕ್ ಸೇರಿದ್ದಾನೆ ಎಂದು ಹೇಳಲಾಗಿದೆ. ಮಹಾರಾಷ್ಟ್ರದಿಂದ ನಾಪತ್ತೆಯಾಗಿರುವ ನಾಲ್ವರು ಯುವಕರ ಪೈಕಿ ಆತ ಯುದ್ಧಗ್ರಸ್ಥ ರಾಷ್ಟ್ರದ ಮಸೂಲ್ ಪಟ್ಟಣದಲ್ಲಿದ್ದಾನೆ ಎಂದು ಮೂಲಗಳು ತಿಳಿಸಿವೆ. ಮಹಾರಾಷ್ಟ್ರದ ನಾಲ್ವರು ಯುವಕರು ಉಗ್ರ ಸಂಘಟನೆ ಇಸಿಸ್ ಬೆಂಬಲಿಸಲು ಇಬ್ಬರು ಉದ್ಯಮಿಗಳು ಪ್ರೇರಣೆ ನೀಡಿದ್ದಾರೆ ಎಂಬ ಅಂಶ ಈಗ ಬಹಿರಂಗವಾಗಿದೆ.  ಈ ವರ್ಷದ ಮೇ ತಿಂಗಳಲ್ಲಿ ತೀರ್ಥಯಾತ್ರೆಗೆಂದು ಯುವಕರು ಮುಂಬೈನಿಂದ ಇರಾಕ್‌ಗೆ ತೆರಳಿದ್ದರು. ನಂತರ ಅವರ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಮತ್ತೊಂದು ಬೆಳವಣಿಗೆಯಲ್ಲಿ ಮಹಾರಾಷ್ಟ್ರದಿಂದ ನಾಪತ್ತೆಯಾಗಿರುವ ಯುವಕರ ಕುಟುಂಬ ಸದಸ್ಯರ ವಿಚಾರಣೆ ನಡೆಸಲು ಎಟಿಎಸ್ ತೀರ್ಮಾನಿಸಿದೆ. ಅವರ ಮನೆಗಳಲ್ಲಿ ಶೋಧ ನಡೆಸಿದ ವೇಳೆ ಲ್ಯಾಪ್‌ಟಾಪ್, ಪೆನ್‌ಡ್ರೈವ್ ವಶಪಡಿಸಿಕೊಳ್ಳಲಾಗಿದೆ.

ಕಾಶ್ಮೀರದ ಮೇಲೆ ಕಣ್ಣು
ಬಹುತೇಕ ವಿದೇಶಿಯರನ್ನು(ಪಾಕ್ ತಾಲಿಬಾನ್ ಸೇರಿದಂತೆ) ಒಳಗೊಂಡ ಸುಮಾರು 800 ಉಗ್ರರು ಗಡಿ ನಿಯಂತ್ರಣ ರೇಖೆ ದಾಟಲು ಸಿದ್ಧರಾಗಿದ್ದಾರೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಉಗ್ರ ಚಟುವಟಿಕೆ ವಿಸ್ತರಿಸುವುದು ಇವರ ಉದ್ದೇಶ. ಸದ್ಯದಲ್ಲೇ ಇಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದ್ದು, ಆಗ ಉಗ್ರ ಕೃತ್ಯ ಹೆಚ್ಚಳವಾಗುವ  ಸಾಧ್ಯತೆಯಿದೆ ಎಂದೂ ಗುಪ್ತಚರ ಸಂಸ್ಥೆಗಳು ಅಭಿಪ್ರಾಯಪಟ್ಟಿವೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.