ಪ್ರಧಾನ ಸುದ್ದಿ

ಮಲೇಷ್ಯಾ ವಿಮಾನಕ್ಕೆ ಕ್ಷಿಪಣಿ ದಾಳಿ, 295 ಸಾವು

ಮಲೇಷ್ಯಾ ವಿಮಾನಕ್ಕೆ ಕ್ಷಿಪಣಿ ದಾಳಿ, 295 ಸಾವು
Published On :

ಕೌಲಾಂಪುರ/ಕೀವ್: ರಷ್ಯ ಮತ್ತು ಉಕ್ರೇನ್ ಸಂಘರ್ಷಕ್ಕೆ ಮಲೇಷ್ಯಾದ ವಿಮಾನ ಬಲಿಯಾಗಿದೆ. ಗಲಭೆ ಪೀಡಿತ ಪೂರ್ವ ಉಕ್ರೇನ್ ಮೇಲೆ ಸಾಗುತ್ತಿದ್ದ ಮಲೇಷ್ಯಾ ಏರ್‌ಲೈನ್ಸ್‌ಗೆ ಸೇರಿದ ವಿಮಾನವನ್ನು ಉಕ್ರೇನ್ ಉಗ್ರರು ಕ್ಷಿಪಣಿ ಮೂಲಕ ಹೊಡೆದು ಉರುಳಿಸಿದ್ದಾರೆ. ಈ ದುರಂತದಲ್ಲಿ 295 ಮಂದಿ ಅಸುನೀಗಿದ್ದಾರೆ.

ಕೇವಲ ನಾಲ್ಕು ತಿಂಗಳ ಹಿಂದಷ್ಟೇ ಬಂಗಾಳ ಕೊಲ್ಲಿಯಲ್ಲಿ ಮಲೇಷ್ಯಾದ ವಿಮಾನ ನಾಪತ್ತೆಯಾಗಿತ್ತು. ಅದರ ಬಗ್ಗೆ ಹಲವು ವದಂತಿಗಳು ಚಾಲ್ತಿಯಲ್ಲಿರುವಾಗಲೇ ಮತ್ತೊಂದು ದುರಂತ ಸಂಭವಿಸಿದೆ. ಕ್ಷಿಪಣಿ ದಾಳಿಗೆ ತುತ್ತಾದ ವಿಮಾನ ಆಮ್‌ಸ್ಟರ್‌ಡಾಮ್‌ನಿಂದ ಕೌಲಾಲಂಪುರಕ್ಕೆ ತೆರಳುತ್ತಿತ್ತು.

33 ಸಾವಿರ ಅಡಿ ಎತ್ತರ: ರಷ್ಯಾ ಮತ್ತು ಉಕ್ರೇನ್ ಗಡಿ ಭಾಗದಿಂದ 50 ಕಿಮೀ ದೂರದಲ್ಲಿ ಈ ದುರಂತ ಸಂಭವಿಸಿದೆ. ಸುಮಾರು 33 ಸಾವಿರ ಅಡಿ ಎತ್ತರದಲ್ಲಿ ಹಾರುತ್ತಿದ್ದ ವಿಮಾನವನ್ನು ಉಗ್ರರು ಭುವಿಯಿಂದ ಆಕಾಶಕ್ಕೆ ನೆಗೆಯುವ ಕ್ಷಿಪಣಿಯಿಂದ ಉಡಾಯಿಸಿದ್ದಾರೆ. ಭಾರತೀಯ ಕಾಲಮಾನ ಗುರುವಾರ ಬೆಳಗ್ಗೆ 8.45ಕ್ಕೆ ಈ ದುರಂತ ಸಂಭವಿಸಿದೆ. ಉಕ್ರೇನ್ ಏರ್‌ಟ್ರಾಫಿಕ್ ಕಂಟ್ರೋಲ್ ಕೊಠಡಿಯಿಂದ ವಿಮಾನ ನಿಯಂತ್ರಣ ಕಳೆದುಕೊಂಡದ್ದನ್ನು ಮಲೇಷ್ಯ ಖಚಿತಪಡಿಸಿಕೊಂಡಿದೆ.

15 ಕಿಮೀ ವಿಸ್ತಾರ:  ಕ್ಷಿಪಣಿ ಬಡಿದ ರಭಸಕ್ಕೆ ವಿಮಾನ ಛಿದ್ರವಾಗಿ ಹೋಗಿದೆ. 15 ಕಿಮೀ  ವಿಸ್ತಾರದಲ್ಲಿ ಪ್ರಯಾಣಿಕರ ದೇಹ, ವಿಮಾನದ ಅವಶೇಷ ಹರಡಿಹೋಗಿತ್ತು. ವಿಮಾನ ಬಿದ್ದ ಪ್ರದೇಶದ ಸ್ಥಳೀಯರು ಬೆಂಕಿಯ ಉಂಡೆಯಂತೆ ವಿಮಾನ ಪತನವಾಗುತ್ತಿರುವುದನ್ನು ನೋಡಿದ್ದಾಗಿ ತಿಳಿಸಿದರು.

ತನ್ನ ಸೇನೆಯ ಪಾತ್ರವಿಲ್ಲ: ಘಟನೆ ಬಗ್ಗೆ ಪ್ರತಿಕ್ರಿಯೆ ನೀಡಿರುವ ಉಕ್ರೇನ್ ಅಧ್ಯಕ್ಷ ಪೆಟ್ರೋ ಪೊರೊಶೆಂಕೋ ದುರಂತದಲ್ಲಿ ದೇಶದ ಸೈನ್ಯದ ಪಾತ್ರವಿಲ್ಲ ಎಂದಿದ್ದಾರೆ. ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ, ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ವಿಮಾನ ಹೊಡೆದು ಉರುಳಿಸಿದ್ದನ್ನು ಖಂಡಿಸಿದ್ದಾರೆ.

ಏನಿದು ಉಕ್ರೇನ್ ಬಿಕ್ಕಟ್ಟು?
ಉಕ್ರೇನಿನ ದಕ್ಷಿಣ ಭಾಗದಲ್ಲಿನ ಕ್ರಿಮಾ ಪ್ರದೇಶದ ಒಂದು ಭಾಗ ಐರೋಪ್ಯ ಒಕ್ಕೂಟಕ್ಕೆ ಸೇರಬೇಕು, ಮತ್ತೊಂದು ಪ್ರದೇಶ ರಷ್ಯ ಜತೆಯೇ ಇರಬೇಕು ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ಸಂಘರ್ಷ ನಡೆಯುತ್ತಿದೆ.  ಅಲ್ಲಿನ ಸರ್ಕಾರಕ್ಕೆ ರಷ್ಯಾದ ನಿರ್ಧಾರ ಕೋಪ ತಂದಿದೆ. ಈ ಭಾಗದಲ್ಲಿ ಉಂಟಾಗಿರುವ ಹೋರಾಟಕ್ಕೆ ರಷ್ಯಾ ಸೇನೆಯೇ ಶಸ್ತ್ರಾಸ್ತ್ರ ಪೂರೈಸುತ್ತಿದೆ ಎಂದು ಆರೋಪಿಸುತ್ತಿದೆ. ರಷ್ಯಾ ಬೆಂಬಲಿತ ಉಗ್ರರು ಇತ್ತೀಚಿನ ದಿನಗಳಲ್ಲಿ ಉಕ್ರೇನ್‌ನ ಹಲವು ವಿಮಾನಗಳನ್ನು ಹೊಡೆದು ಹಾಕಿದ್ದಾರೆ.

ಎಚ್ಚರಿಕೆ ಕಡೆಗಣಿಸಿದ ವಿಮಾನ
ಧರೆಗೆ ಉರುಳಿದ ಎಂಎಚ್ 17 ವಿಮಾನ ಆಂತರಿಕ ಸಂಘರ್ಷದಿಂದ ಕಂಗೆಟ್ಟ ಪೂರ್ವ ಉಕ್ರೇನ್‌ನ ವಾಯುಮಾರ್ಗವನ್ನೇಕೆ ಬಳಸಿಕೊಂಡಿತು ಎಂಬ ಪ್ರಶ್ನೆ ಈಗ ಉಂಟಾಗಿದೆ. ಗಲಭೆ ಕಾರಣದಿಂದಾಗಿ ದುರಂತಕ್ಕೀಡಾದ ವಿಮಾನದ ಸಿಬ್ಬಂದಿಗೆ ಹಾರಾಟಕ್ಕೆ ಈ ಪ್ರದೇಶ ಬಳಸಿಕೊಳ್ಳಬಾರದು ಎಂಬ ಖಡಕ್ ಎಚ್ಚರಿಕೆಯನ್ನೇ ನೀಡಲಾಗಿತ್ತು. ಆದರೂ ಸಿಬ್ಬಂದಿ ಅದನ್ನು ಉಲ್ಲಂಘಿಸಿದರೇ ಎಂಬ ಗುಮಾನಿ ಉಂಟಾಗಿದೆ. ಮೂಲಗಳ ಪ್ರಕಾರ ಆಮ್‌ಸ್ಟರ್‌ಡಾಮ್‌ನಿಂದ ಕೌಲಾಲಂಪುರಕ್ಕೆ ತೆರಳುವ ವೇಳೆ ಇಂಧನ ಉಳಿತಾಯಕ್ಕಾಗಿ ಪೈಲಟ್ ಈ ಮಾರ್ಗ ಬಳಸಿಕೊಂಡ ಎನ್ನಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.