ಪ್ರಧಾನ ಸುದ್ದಿ

ರಾಜ್ಯದಲ್ಲಿ ಕಾಮುಕರ ಅಟ್ಟಹಾಸ

ರಾಜ್ಯದಲ್ಲಿ ಕಾಮುಕರ ಅಟ್ಟಹಾಸ
Published On :

ಕನ್ನಡಪ್ರಭ ವಾರ್ತೆ, ಬೆಂಗಳೂರು, ಜು.17
ಉತ್ತರ ಪ್ರದೇಶದಂತೆ ರಾಜ್ಯವೂ ಕಾಮುಕರ ನಾಡಾಗುತ್ತಿದೆ. ಬೆಂಗಳೂರಿನ ಯುವತಿ ಅತ್ಯಾಚಾರ ಪ್ರಕರಣ ಚರ್ಚೆಯಲ್ಲಿರುವಾಗಲೇ, ರಾಜ್ಯದ ಹಲವೆಡೆ ಗುರುವಾರವೊಂದೇ ದಿನ ಎಂಟು ಅತ್ಯಾಚಾರ ಪ್ರಕರಣಗಳು ಬೆಳಕಿಗೆ ಬಂದಿವೆ.
 ರಾಜಧಾನಿಯಲ್ಲಿ ಮತ್ತೊಂದು
ಹೆಣ್ಣೂರಿನ ಕ್ರೈಸ್ತ ಮಿಶನರಿಯೊಂದರಲ್ಲಿ ಬಾಲಕಿ ಮೇಲೆ ದುಷ್ಕರ್ಮಿಗಳು ಅತ್ಯಾಚಾರ ಎಸಗಿದ್ದಾರೆ. ಭೈರವೇಶ್ವರ ಬಡಾವಣೆಯಲ್ಲಿರುವ 'ಸಿಸ್ಟರ್ ಆಫ್ ಹೋಲಿ ನೇಟಿವಿಟಿ' ಮಿಶನರಿಗೆ ತರಬೇತಿ ಪಡೆಯಲು ಬಂದಿದ್ದ 16 ವರ್ಷದ ಬಾಲಕಿಗೆ ಪ್ರಜ್ಞೆ ತಪ್ಪಿಸುವ ಸ್ಪ್ರೇ ಮಾಡಿದ ಇಬ್ಬರು ಈ ಕೃತ್ಯ ಎಸಗಿದ್ದಾರೆ.
 ವೃದ್ಧನ ಹೇಯ ಕೃತ್ಯ
ಬಿಜಾಪುರ ಜಿಲ್ಲೆಯ ಸಿಂದಗಿ ಪಟ್ಟಣದ ಗೋಲಿಬಾರ್ ಮಡ್ಡಿಯಲ್ಲಿ ಆಡುತ್ತಿದ್ದ 5 ವರ್ಷದ ಬಾಲಕಿ ಮೇಲೆ ವಯೋವೃದ್ಧ ಅತ್ಯಾಚಾರನವೆಸಗಿದ್ದಾನೆ. ಆರೋಪಿ ಅಲ್ಲಾಭಕ್ಷ ಲಾಳೆಸಾಬ ಮುಲ್ಲಾ(62)ನನ್ನು ಸಾರ್ವಜನಿಕರು ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ.
 ಮಾನಸಿಕ ಅಸ್ವಸ್ಥೆ ಮೇಲೂ...
ಕೋಲಾರ ಜಿಲ್ಲೆ ಮಾಲೂರಿನ ಕುಂಬಾರ ಪೇಟೆ ಅಗ್ರಹಾರ ಬೀದಿಯಲ್ಲಿ ಗುರುವಾರ ಮಾನಸಿಕ ಅಸ್ವಸ್ಥಳೊಬ್ಬಳ ಮಾನಭಂಗ ಮಾಡಲಾಗಿದೆ. ಮನೆ ಮುಂದೆ ಕುಳಿತಿದ್ದ 21 ವರ್ಷದ ಯುವತಿಯನ್ನು ಪುಸಲಾಯಿಸಿದ ಆರೋಪಿ ನಾಗರಾಜ್ (23) ಮಾನಭಂಗ ಮಾಡಿದ್ದಾನೆ. ಆರೋಪಿಯ ಬಂಧಿಸಲಾಗಿದೆ.
ಮೂರು ವರ್ಷದ ಬಾಲೆ
 ಮುಳಬಾಗಲು ತಾಲೂಕಿನ ಕೆಂಪಾಪುರದಲ್ಲಿ ಮೂರು ವರ್ಷದ ಬಾಲಕಿ ಮೇಲೂ 19 ವರ್ಷದ ನಾಗರ್ಜುನ ಅತ್ಯಾಚಾರವೆಸಗಿದ್ದಾನೆ. ತೀವ್ರ ರಕ್ತಸ್ರಾವಕ್ಕೊಳಗಾದ ಬಾಲಕಿಯನ್ನು ಆಸ್ಪತ್ರೆಗೆ ದಾಖಲಿಸಿದ್ದು, ಆರೋಪಿಯನ್ನು ಬಂಧಿಸಲಾಗಿದೆ.
 ಆರೋಪಿ ಪರಾರಿ
ಗುಲ್ಬರ್ಗ ಜಿಲ್ಲೆ ಜೇವರ್ಗಿ ತಾಲೂಕು ನೆಲೋಗಿ ವ್ಯಾಪ್ತಿಯ ಕಾಸರಭೋಸಗಾ ಗ್ರಾಮದಲ್ಲಿ ಏಳು ವರ್ಷದ ಬಾಲಕಿ ಮೇಲೆ ಮಹಿಬೂಬ್ ಪಾಟೀಲ್ (45) ಅತ್ಯಾಚಾರವೆಸಗಿ ತಪ್ಪಿಸಿಕೊಂಡಿದ್ದಾನೆ. 
 ಅಪಹರಿಸಿ ಅತ್ಯಾಚಾರ
ಮಗಳನ್ನು ಅಪಹರಿಸಿ ಅತ್ಯಾಚಾರ ನಡೆಸಲಾಗಿದೆ ಎಂದು ಮಂಡ್ಯ ಜಿಲ್ಲೆಯ ನಾಗಮಂಗಲದ ಜಿ.ಬೊಮ್ಮನಹಳ್ಳಿ ಗ್ರಾಮದ ಪೋಷಕರು ದೂರು ದಾಖಲಿಸಿದ್ದಾರೆ. 16 ವರ್ಷದ ಬಾಲಕಿ ಮೇಲೆ ಪಕ್ಕದ ಮದ್ದೇನಹಟ್ಟಿ ಗ್ರಾಮದ ಸಿದ್ದರಾಜು (25) ಅತ್ಯಾಚಾರವೆಸಗಿದ್ದಾನೆ ಎಂದು ಆರೋಪಿಸಲಾಗಿದೆ. ಆರೋಪಿ ನ್ಯಾಯಾಂಗ ಬಂಧನಕ್ಕೊಳಪಟ್ಟಿದ್ದಾನೆ.
 ಅತ್ತೆ ಎದುರು ಅತ್ಯಾಚಾರ
ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಹಿಡಕಲ್ಲ ಗ್ರಾಮದಲ್ಲಿ ಅತ್ತೆಯ ಸಮ್ಮುಖದಲ್ಲಿಯೇ ಸೊಸೆ ಮೇಲೆ ದೂರದ ಸಂಬಂಧಿಯೊಬ್ಬ ಅತ್ಯಾಚಾರವೆಸಗಿದ್ದಾನೆ. ಸೊಸೆಯನ್ನು ಬಿಡಿಸಿಕೊಳ್ಳಲು ಯತ್ನಿಸಿದ ಅತ್ತೆಯನ್ನು ತಳ್ಳಿ ಈ ಕೃತ್ಯ ಎಸಗಿದ್ದಾನೆ. ಆರೋಪಿ ವಿಠಲ ಪಾಟೀಲ್ (38) ಅನ್ನು ಬಂಧಿಸಲಾಗಿದೆ. 
 ಬಾಲಕಿ ಮೇಲೆ
ನೆಲಮಂಗಲದ ಅರಿಶಿನಕುಂಟೆಯಲ್ಲಿ ಮದುವೆಯಾಗುವುದಾಗಿ ನಂಬಿಸಿ 15 ವರ್ಷದ ಬಾಲಕಿ ಮೇಲೆ ಅತ್ಯಾಚಾರ ನಡೆಸಿದ ಅದೇ ಗ್ರಾಮದ ಯೋಗೀಶ್ ಎಂಬಾತನನ್ನು ಬಂಧಿಸಲಾಗಿದೆ.
ಕೀಚಕರು ಬಲೆಗೆ
ಬೆಂಗಳೂರು: ಚಲಿಸುವ ಕಾರಿನಲ್ಲಿ ಯುವತಿ ಮೇಲೆ ನಡೆದ ಅತ್ಯಾಚಾರ ಪ್ರಕರಣ ಸಂಬಂಧ ನಾಪತ್ತೆಯಾಗಿದ್ದ ನಾಲ್ವರು ಆರೋಪಿಗಳ ಪೈಕಿ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಕಾರ್ ಡೀಲರ್ ಮಹಮ್ಮದ್ ಅಲಿ ಅಲಿಯಾಸ್ ಶೇಖ್ ಅಲಿ (40) ಹಾಗೂ ವಾಸೀಂ ಖಾನ್(28) ಬಂಧಿತರು.       
 ಅತ್ಯಾಚಾರ ಯತ್ನ ಪ್ರಕರಣಗಳು
ಅತ್ಯಾಚಾರಕ್ಕೆ ಯತ್ನಿಸಿ, ಕೊಲೆ ಬೆದರಿಕೆ ಹಾಕಿದವನನ್ನು ತುಮಕೂರು ಜಿಲ್ಲೆ ಅಮೃತೂರು ಪೊಲೀಸರು ಬಂಧಿಸಿದ್ದಾರೆ. ಹೊಲಕ್ಕೆ ಹೋದ 14 ವರ್ಷದ ಬಾಲಕಿಯನ್ನು ಮುನಿರಾಜು ನಿರ್ಜನ ಪ್ರದೇಶದಲ್ಲಿ ಅತ್ಯಾಚಾರವೆಸಗಲು ಯತ್ನಿಸಿದ್ದ.
ಕೋಲಾರದಲ್ಲಿ: ಹೊರಪ್ರದೇಶದಲ್ಲಿ ಕುರಿಗಾಹಿ ಯುವತಿ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಪೌರಕಾರ್ಮಿಕ ಮುನಿಯಪ್ಪ (30) ಸಿಕ್ಕಿಬಿದ್ದಿದ್ದು, ಇದೀಗ ಪೊಲೀಸರ ಅತಿಥಿಯಾಗಿದ್ದಾನೆ. ಕುರಿ ಮೇಯಿಸುತ್ತಿದ್ದಾಗ ಬಲವಂತವಾಗಿ ಬಟ್ಟೆ ಬಿಚ್ಚಲು ಮುಂದಾದಾಗ ಯುವತಿ ಕಿರುಚಿದ್ದಾಳೆ. ಆಗ ಸ್ಥಳೀಯರು ಧಾವಿಸಿ, ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ.
ಬೆಂಗಳೂರಿನ ಶಾಲೆಯೊಂದರಲ್ಲಿ ಬಾಲಕಿ ಮೇಲೆ ಅತ್ಯಾಚಾರ ಎಸಗಿದ ಪ್ರಕರಣ, ಹೇಯ ಘಟನೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಪಡೆದುಕೊಳ್ಳುವಂತೆ ಸಚಿವಾಲಯದ ಕಾರ್ಯದರ್ಶಿಗೆ ಸೂಚಿಸಲಾಗಿದೆ.
- ಸ್ಮೃತಿ ಇರಾನಿ, ಮಾನವ ಸಂಪನ್ಮೂಲ ಸಚಿವೆ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.