ಕಾಮುಕರಿಗಿಲ್ಲ ಕಡಿವಾಣ

ವಿಧಾನಸಭೆ: ರಾಜ್ಯ ಸರ್ಕಾರ ಅತ್ಯಾಚಾರಿಗಳ ಮೇಲೆ ಕಠಿಣ ಕ್ರಮ ಕೈಗೊಳ್ಳದೆ, 'ಕಾಮುಕರ ರಾಜ್ಯ'ವಾಗಲು ಕಾರಣವಾಗಿದೆ. 24 ಗಂಟೆಯಲ್ಲಿ 7 ಅತ್ಯಾಚಾರ ಪ್ರಕರಣಗಳು ವರದಿಯಾಗಿದ್ದರೂ ಸರ್ಕಾರ ದಿಟ್ಟ ಕ್ರಮ ಕೈಗೊಂಡಿಲ್ಲ ಎಂದು ಬಿಜೆಪಿ ಶುಕ್ರವಾರ ಕಪ್ಪುಪಟ್ಟ್ಟಿ ಧರಿಸಿ ವಿಧಾನಸೌಧದಲ್ಲಿ ಧರಣಿ ನಡೆಸಿದರು. ಬಳಿಕ ನಿಲುವಳಿ ಸೂಚನೆ ಪ್ರಸ್ತಾವಕ್ಕೆ ಉತ್ತರಿಸಲು ವಿಫಲವಾದ ಸರ್ಕಾರದ ನಿಲುವು ಖಂಡಿಸಿ ಸಭಾತ್ಯಾಗ ಮಾಡಿದರು.
ಕಲಾಪ ಆರಂಭವಾಗುತ್ತಿದ್ದಂತೆಯೇ ರಾಜ್ಯದಲ್ಲಿ ಅತ್ಯಾಚಾರ ಪ್ರಕರಣಗಳು ಹೆಚ್ಚುತ್ತಿರುವ ಬಗ್ಗೆ ಚರ್ಚೆಗೆ ಅವಕಾಶ ನೀಡುವಂತೆ ಬಿಜೆಪಿ ನಿಲುವಳಿ ಸೂಚನೆ ಮಂಡಿಸಿತ್ತು. ಸ್ಪೀಕರ್ ಅವಕಾಶ ನೀಡದಿದ್ದಾಗ ಬಾವಿಗಳಿದು ಧರಣಿ ನಡೆಸಿದರು. ನಿಲುವಳಿ ಸೂಚನೆ ಪ್ರಸ್ತಾಪವಾಗಿ ಸರ್ಕಾರ ಉತ್ತರ ನೀಡಲು ಹಿಂದೇಟು ಹಾಕಿದಾಗ ಬಿಜೆಪಿ ಸದಸ್ಯರು ಸಭಾತ್ಯಾಗ ಮಾಡಿದರು. ಮಹಿಳೆಯರು ಆತಂಕದಲ್ಲಿದ್ದಾರೆ. ಮಕ್ಕಳನ್ನು ಶಾಲೆಗೆ ಕಳುಹಿಸಲು ಪೋಷಕರು ಭಯಗೊಂಡಿದ್ದಾರೆ. ಈ ವಿಷಯವಾಗಿ ಸರ್ಕಾರ ವಿಶ್ವಾಸ ತುಂಬಬೇಕು ಎಂದು ವಿಶ್ವೇಶ್ವರ ಹೆಗಡೆ ಕಾಗೇರಿ, ಕೆ.ಜಿ.ಬೋಪಯ್ಯ, ಸುನೀಲ್ಕುಮಾರ್ ಆಗ್ರಹಿಸಿದರು. ನಿಲುವಳಿ ಸೂಚನೆಗೆ ಅವಕಾಶ ನೀಡದ ಸ್ಪೀಕರ್ ಕಲಾಪವನ್ನು ಅರ್ಧ ಗಂಟೆ ಮುಂದೂಡಿದರು.
ಪುನಃ ಕಲಾಪ ಆರಂಭವಾದಾಗ ನಿಲುವಳಿ ಸೂಚನೆಯ ಪ್ರಾಥಮಿಕ ಪ್ರಸ್ತಾವನೆಗೆ ಸ್ಪೀಕರ್ ಕಾಗೋಡು ತಿಮ್ಮಪ್ಪ ಅವಕಾಶ ಮಾಡಿಕೊಟ್ಟರು. ವಿಷಯ ಪ್ರಸ್ತಾಪಿಸಿದ ಕಾಗೇರಿ, ಇತ್ತೀಚಿನ ಅತ್ಯಾಚಾರ ಘಟನೆಗಳು ಬೆಂಗಳೂರು, ಕರ್ನಾಟಕಗಳು ಜಗತ್ತಿನ ಎದುರು ತಲೆತಗ್ಗಿಸುವಂತೆ ಮಾಡಿವೆ. ಅನಾಚಾರಿಗಳಿಗೆ ಸರ್ಕಾರ ಸ್ಪಷ್ಟ ಸಂದೇಶ ರವಾನಿಸುತ್ತಿಲ್ಲ. ಗೃಹ ಮಂತ್ರಿಗಳಿಗೆ ನೈತಿಕ ಹೊಣೆಗಾರಿಕೆ ಇಲ್ಲ. ಮುಖ್ಯಮಂತ್ರಿಯವರೇ ಉತ್ತರ ನೀಡಬೇಕು ಎಂದು ಆಗ್ರಹಿಸಿದರು.
ಬೆಂಗಳೂರು ಮಾರತ್ಹಳ್ಳಿಯ ವಿಬ್ಗ್ಯೋರ್ ಶಾಲೆಯಲ್ಲಿ ಬಾಲಕಿ ಮೇಲಿನ ಲೈಂಗಿಕ ದೌರ್ಜನ್ಯ ಬೆಳಕಿಗೆ ಬಂದು 72 ಗಂಟೆ ಕಳೆದರೂ ಸರ್ಕಾರದಿಂದ ಉತ್ತರವಿಲ್ಲ. ಇದಲ್ಲದೆ ಪವಿತ್ರವಾದ ಚರ್ಚ್ನಲ್ಲಿಯೂ ಅತ್ಯಾಚಾರ ಮಾಡಲಾಗಿದೆ. ಈ ವಿಚಾರಗಳ ಕುರಿತು ಪ್ರತಿಪಕ್ಷಗಳು ನೋಟಿಸ್ ನೀಡಲಿ, ಉತ್ತರ ನೀಡುತ್ತೇವೆ ಎನ್ನುವ ಧೋರಣೆ ಬಿಟ್ಟು ಸರ್ಕಾರ ಸ್ವಯಂಪ್ರೇರಣೆಯಿಂದ ಹೇಳಿಕೆ ನೀಡಬೇಕಿತ್ತು ಎಂದು ಅರವಿಂದ ಲಿಂಬಾವಳಿ ಟೀಕಿಸಿದರು. ಅಪರಾಧಿಗಳು ನಮಗೆ ಸರ್ಕಾರ ಇದೆ ಎನ್ನುತ್ತಿದ್ದರೆ, ನಾಗರಿಕ ಸಮಾಜಕ್ಕೆ ಸರ್ಕಾರ ಇಲ್ಲ ಎಂಬಂತಾಗಿದೆ ಸರ್ಕಾರದ ವರ್ತನೆ ಎಂದು ಸುರೇಶ್ಕುಮಾರ್ ದೂರಿದರು.
ವಿಬ್ಗ್ಯೋರ್ ಶಾಲೆಯ ಲೈಂಗಿಕ ದೌರ್ಜನ್ಯ ಪ್ರಕರಣ 2 ವಾರದ ನಂತರ ಬೆಳಕಿಗೆ ಬಂದಿದೆ. ಪ್ರಕರಣ ಮುಚ್ಚಿಹಾಕಲೂ ಪ್ರಯತ್ನಿಸಲಾಗಿದೆ. ಪೋಷಕರಿಂದ ಮುಚ್ಚಳಿಕೆ ಬರೆಯಿಸಿಕೊಳ್ಳುವ ಹಂತಕ್ಕೆ ಶಾಲೆ ಹೋಗಿದೆ. ಅವರಿಗೆ ಸ್ಪಷ್ಟ ಸಂದೇಶ ರವಾನೆಯಾಗಬೇಕು ಎಂದು ಜೆಡಿಎಸ್ನ ವೈ.ಎಸ್.ವಿ. ದತ್ತ, ಚಲುವರಾಯಸ್ವಾಮಿ ಆಗ್ರಹಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


