ಪ್ರಧಾನ ಸುದ್ದಿ

ನೊಂದವಳ ಸಾಂತ್ವನಕ್ಕೂ ಬರ!

ನೊಂದವಳ ಸಾಂತ್ವನಕ್ಕೂ ಬರ!
Published On :

ಬೆಂಗಳೂರು: ನಮ್ಮ ರಾಜ್ಯದಲ್ಲಿ ಮಹಿಳೆಯರ ಸ್ಥಿತಿ ಹೇಗಾಗಿದೆಯೆಂದರೆ ನ್ಯಾಯ ಬಿಡಿ, ಕನಿಷ್ಠ ಸಾಂತ್ವನ ಕೂಡ ಸಿಗುತ್ತಿಲ್ಲ!
ನಮ್ಮ ರಾಜ್ಯದಲ್ಲಿರುವ ಮಹಿಳಾ ಆಯೋಗಕ್ಕೆ ಸಂಬಂಧಿಸಿದ ಸಾಂತ್ವನ ಕೇಂದ್ರಗಳ ದುಸ್ಥಿತಿ. ನೋವು ಹೇಳಿಕೊಂಡು ನ್ಯಾಯಕ್ಕಾಗಿ ಇಲ್ಲಿಗೆ ಬಂದರೆ, ಸಾಂತ್ವನ ಕೇಂದ್ರದಲ್ಲಿರುವವರಿಗೇ ಸಾಂತ್ವನ ಹೇಳಬೇಕಾದ ಸ್ಥಿತಿ.
ಕೇಂದ್ರಗಳು ನೆಪಮಾತ್ರಕ್ಕೆ ಅಸ್ತಿತ್ವದಲ್ಲಿವೆ. ಸರ್ಕಾರಕ್ಕೆ 'ಸಾಂತ್ವನ ಕೇಂದ್ರಗಳನ್ನು ಸ್ಥಾಪಿಸಿದ್ದೇವೆ' ಹೇಳಿಕೊಳ್ಳಲು, ಸಾಧನೆಯ ಪಟ್ಟಿಯಲ್ಲಿ ಸೇರಿಸಿಕೊಳ್ಳಬಹುದು. ಆದರೆ ನಿಜವಾದ ಉಪಯೋಗ ಸೊನ್ನೆ.
ಈ ವಿಷಯವನ್ನು ಸ್ವತಃ ಮಹಿಳಾ ಆಯೋಗದ ಅಧ್ಯಕ್ಷರೇ ಬಹಿರಂಗಪಡಿಸಿದ್ದು, ಅಂತಹ ಮಹಿಳಾ ಸಾಂತ್ವನ ಕೇಂದ್ರಗಳಿಗೆ ಹೊಸ ರೂಪ ನೀಡಿ, ಆ ನಿಟ್ಟಿನಲ್ಲಿ ನೊಂದವರಿಗೆ ನ್ಯಾಯ ಒದಗಿಸಲು ಈಗಿನ್ನೂ ಚಿಂತನೆ ಆರಂಭಿಸಿದ್ದಾರೆ. ಆಯೋಗದ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ನಂತರ ರಾಜ್ಯದ ಎರಡು ಮಹಿಳಾ ಸಾಂತ್ವನ ಕೇಂದ್ರಗಳಿಗೆ ಧಿಡೀರ್ ಭೇಟಿ ನೀಡಿದಾಗ ಸಾಂತ್ವನ ಕೇಂದ್ರಗಳಿಗೆ ಸಾಂತ್ವನ ಹೇಳಬೇಕಾದ ದುಃಸ್ಥಿತಿ ಇರುವುದು ಅವರ ಗಮನಕ್ಕೆ ಬಂದಿದೆ. ಮಹಿಳಾ ಆಯೋಗ ಸಾಂತ್ವನ ಕೇಂದ್ರ ಉಸ್ತುವಾರಿಯ ಒಂದು ಭಾಗವಾಗಿದ್ದು, ಅಲ್ಲಿನ ಮಹಿಳೆಯರ ಬಗ್ಗೆ ಗಮನಹರಿಸುವ ಜವಾಬ್ದಾರಿ ಆಯೋಗದ ಸಿಬ್ಬಂದಿಯದ್ದು.  ಈ ಹಿನ್ನೆಲೆಯಲ್ಲಿ ಮಹಿಳಾ ಸಾಂತ್ವನ ಕೇಂದ್ರಗಳಿಗೆ ಎಂಎಸ್‌ಡಬ್ಲ್ಯೂ ಅಥವಾ ಮಹಿಳಾ ಮತ್ತು ಮಕ್ಕಳ ಅಧ್ಯಯನದಲ್ಲಿ ವ್ಯಾಸಂಗ ಮಾಡಿರುವವರನ್ನು ನೇಮಿಸಿ, ಅವುಗಳಿಗೆ ಮರುಜೀವ ನೀಡಲು ಆಯೋಗ ಮುಂದಾಗಿದೆ. ಸಾಂತ್ವನ ಕೇಂದ್ರಕ್ಕೆ ಬರುವವರು ಯಾರು, ಸಮಸ್ಯೆಯೇನು ಎಂಬಿತ್ಯಾದಿ ಬಗ್ಗೆ ಪುಸ್ತಕದಲ್ಲಿ ಮಾಹಿತಿ ಸಂಗ್ರಹಿಸುವಂತೆ ಸೂಚಿಸಲು ನಿರ್ಧರಿಸಿದೆ.
ಹತ್ತಾರು ವರ್ಷದಿಂದಲೂ ಇದೇ ಸ್ಥಿತಿ: ರಾಜ್ಯದಲ್ಲಿರುವ ಈ ಸಾಂತ್ವನ ಕೇಂದ್ರಗಳು ಮಹಿಳಾ ಮತ್ತು ಮಕ್ಕಳ ಅಭಿವದ್ಧಿ ಇಲಾಖೆ ಅಧೀನದಲ್ಲಿದ್ದು, ಹತ್ತಾರು ವರ್ಷಗಳ ಹಿಂದಿನಿಂದಲೂ ಕೆಲಸ ನಿರ್ವಹಿಸುತ್ತಿವೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ನಿರ್ದೇಶಕರೇ ಸಾಂತ್ವನ ಕೇಂದ್ರ ನಡೆಸಲು ಎನ್‌ಜಿಓಗಳಿಗೆ ಒಪ್ಪಿಗೆ ನೀಡಿದ್ದು, ಪ್ರತಿ ತಾಲೂಕಿನಲ್ಲೂ ಇಂತಹ ಕೇಂದ್ರಗಳಿವೆ. ಆದರೆ ಸಾಂತ್ವನ ಕೇಂದ್ರಗಳಿಗೆ ಒಪ್ಪಿಗೆ ನೀಡುವ ಮುನ್ನ ಸೂಕ್ತ ಪರಿಶೀಲನೆ ನಡೆಸದೇ ನೀಡಿದ್ದಾರೆ ಎಂಬ ಬಗ್ಗೆ ದೂರು ಕೇಳಿಬಂದಿದೆ.
ಮೂಲಭೂತ ಸೌಕರ್ಯವೂ ಇಲ್ಲ: ಸಾಂತ್ವನ ಕೇಂದ್ರಗಳಿಗೆ ಬಂದು ಹೋಗುವವರಿಗೆ ಹಾಗೂ ಅಲ್ಲಿ ನೆಲೆಸುವವರಿಗೆ ಸಾಂತ್ವನ ಮರೀಚಿಕೆಯೇ ಸರಿ. ಆ ಕೇಂದ್ರಗಳಲ್ಲಿ ಕೇಂದ್ರದಲ್ಲಿ ನಿರ್ಗತಿಕ ಮಹಿಳೆಯರು ತಂಗಲೂ ಅವಕಾಶವಿರುತ್ತದೆ. ಆದರೆ ಮೂಲಭೂತ ಸೌಕರ್ಯಗಳೂ ಇಲ್ಲ. ಸಂಬಂಧಪಟ್ಟ ಇಲಾಖೆ ಸಚಿವರಿಗೆ, ನಿರ್ದೇಶಕರಿಗೆ ಪತ್ರ ಬರೆದು ಸಮಸ್ಯೆ ಬಗೆಹರಿಸಲು ಮನವಿ ಮಾಡಲು ಆಯೋಗ ನಿರ್ಧರಿಸಿದೆ.
ಕೆಲ ಜಿಲ್ಲೆಗಳಿಗೆ ಧಿಡೀರ್ ಭೇಟಿ ನೀಡಿ ಅಲ್ಲಿನ ಸಾಂತ್ವನ ಕೇಂದ್ರಗಳನ್ನು ಪರಿಶೀಲಿಸಿದಾಗ ಅಲ್ಲಿ, ಅರ್ಹತೆ ಇಲ್ಲದವರೆಲ್ಲ ಕೌನ್ಸಿಲಿಂಗ್ ಮಾಡುತ್ತಿರುವುದು ಗಮನಕ್ಕೆ ಬಂದಿದೆ. ಅಂತಹ ಸಿಬ್ಬಂದಿಯನ್ನು ಗುರುತಿಸಿ, ಅವರ ಜಾಗಕ್ಕೆ ಬೇರೆ ಸಿಬ್ಬಂದಿ ನೇಮಿಸಲಾಗುವುದು.
- ಮಂಜುಳಾ ಮಾನಸ, ಅಧ್ಯಕ್ಷೆ, ಮಹಿಳಾ ಆಯೋಗ


-ಶಾಂತ ತಮ್ಮಯ್ಯ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.