ಪ್ರಧಾನ ಸುದ್ದಿ

ಪ್ರವಾಸಿಗರ ಅಚ್ಚುಮೆಚ್ಚಿನ ತಾಣ ಗೋವಾದಲ್ಲಿಲ್ಲವೇ ಕನ್ನಡಿಗರಿಗೆ ಉಳಿಗಾಲ?

ಪ್ರವಾಸಿಗರ ಅಚ್ಚುಮೆಚ್ಚಿನ ತಾಣ ಗೋವಾದಲ್ಲಿಲ್ಲವೇ ಕನ್ನಡಿಗರಿಗೆ ಉಳಿಗಾಲ?
Published On :

ಕನ್ನಡಪ್ರಭ ವಾರ್ತೆ, ವಾಸ್ಕೋ, ಜು. 18
ಬೈನಾ ನಿರಾಶ್ರಿತರು ಇನ್ನೂ ಬೀದಿಯಲ್ಲೇ ಇದ್ದಾರೆ. ಈಗ ಉಳಿದೆಡೆ ನೆಲೆಸಿರುವ ಕನ್ನಡದ ಕೂಲಿ ಕಾರ್ಮಿಕರಿಗೂ ಎತ್ತಂಗಡಿ ಭೀತಿ ಉಂಟಾಗಿದೆ. 5000ಕ್ಕೂ ಹೆಚ್ಚು ಮನೆಗಳ ಭವಿಷ್ಯ ತೂಗುಯ್ಯಾಲೆಯಲ್ಲಿದೆ. ಕೆಲವೆಡೆ ಈಗಾಗಲೆ ನೋಟಿಸ್ ನೀಡಲಾಗಿದೆ.
ಬೈನಾ ಕನ್ನಡಿಗರ ಮೊರೆಯೇ ಇನ್ನೂ ನಮ್ಮ ಕರ್ನಾಟಕದ ದೊರೆಗಳಿಗೆ ತಟ್ಟಿಲ್ಲ. ಅದಾಗಲೇ ಮತ್ತೊಂದು ಅನಾಹುತಕಾರಿ ಕ್ರಮಕ್ಕೆ ಕೈಹಾಕುವ ಸಾಧ್ಯತೆ ದಟ್ಟವಾಗಿದೆ.
ತೆರೆಮರೆಯ ಸಿದ್ಧತೆ: ಬೈನಾದಲ್ಲಿ ಕನ್ನಡಿಗರ ಇನ್ನೂ ಸಾವಿರದಷ್ಟು ಮನೆ ಇದೆ. ಇವೆಲ್ಲವೂ ಧ್ವಂಸಗೊಳ್ಳುತ್ತಿದೆ. ಆದರೆ, ಬಾಂಬೆ ಹೈಕೋರ್ಟ್‌ನ ಗೋವಾ ಬೆಂಚ್ ತೆರವಿಗೆ ತಡೆಯಾಜ್ಞೆ ನೀಡಿದ್ದರಿಂದ ತೆರವು ಪ್ರಕ್ರಿಯೆ ಸ್ಥಗಿತಗೊಂಡಿತ್ತು.
ಈಗ ಗೋವಾ ಸರ್ಕಾರ ತಡೆಯಾಜ್ಞೆ ತೆರವಿಗೆ ಕಾನೂನು ಹೋರಾಟ ನಡೆಸುತ್ತಿದ್ದು, ತೆರವುಗೊಳ್ಳುವುದನ್ನೆ ಕಾಯುತ್ತಿದೆ. ಹಸಿರು ನಿಶಾನೆ ಬಂದರೆ ಸಾಕು, ಜೆಸಿಬಿಗಳ ಸದ್ದು ಮೊಳಗಲಿದೆ. ಕನ್ನಡಿಗರ ಆಕ್ರಂದನ ಕೇಳಲಿದೆ.
ನೋಟಿಸ್: ಕೇವಲ ಬೈನಾದಲ್ಲಷ್ಟೇ ಅಲ್ಲ, ಮಡಗಾಂವ ಸಮೀಪದ ಮೋತಿಡೊಂಗರದಲ್ಲಿನ 200ಕ್ಕೂ ಹೆಚ್ಚು ಕನ್ನಡಿಗರ ಮನೆಗಳಿಗೆ ಗೋವಾ ಸರ್ಕಾರ ಈಚೆಗೆ ನೋಟಿಸ್ ನೀಡಿ ತೆರವುಗೊಳಿಸುವಂತೆ ಕಟ್ಟಪ್ಪಣೆ ಮಾಡಿದೆ. ಇಲ್ಲಿ ಉತ್ತರ ಕರ್ನಾಟಕದ ಬಂಜಾರಾ ಸಮಾಜಕ್ಕೆ ಸೇರಿದವರಿದ್ದಾರೆ.
ಇನ್ನು ದಾಮೋಲಿಂ ವಿಮಾನ ನಿಲ್ದಾಣದಿಂದ 5 ಕಿ.ಮೀ. ದೂರ ಇರುವ ಜುವಾರಿ ಎಗ್ರೋ ಫರ್ಟಿಲೈಸರ್ಸ್ ಕಾರ್ಖಾನೆಯಲ್ಲಿ ದುಡಿಯುತ್ತಿರುವ ಸುಮಾರು 3000ಕ್ಕೂ ಹೆಚ್ಚು ಉತ್ತರ ಕರ್ನಾಟಕದಿಂದ ವಲಸೆ ಬಂದ ಕಾರ್ಮಿಕರ ಕುಟುಂಬಗಳಿವೆ. ಇಲ್ಲಿನ ನಿವಾಸಿಗಳು ಮನೆಗೆ ನಂಬರ್ ಹಾಕುವಂತೆ ಸ್ಥಳೀಯ ಪೆನ್ ದ ಪ್ರಾಂತ್ (ಗ್ರಾಮ ಪಂಚಾಯಿತಿ)ಗೆ ಮನವಿ ಮಾಡಿದರೂ ಹಾಕುತ್ತಿಲ್ಲ. ಮನೆ ತೆರಿಗೆಯನ್ನೂ ಆಕರಿಸುತ್ತಿಲ್ಲ. ಹಾಗಂತ ವಿದ್ಯುತ್ ಸಂಪರ್ಕ ನೀಡಿದ್ದಾರೆ.
ಮತದಾರರ ಪಟ್ಟಿಯಲ್ಲೂ ಹೆಸರಿದೆ. 'ಮನೆ ನಂಬರ್ ಹಾಕಿ ತೆರಿಗೆ ವಸೂಲಿ ಮಾಡಿದರೆ ನೀವು ಇಲ್ಲೇ ತಳ ಊರುತ್ತೀರಿ, ಅದಕ್ಕಾಗಿ ಹಾಕಲ್ಲ' ಎಂದು ಮೌಖಿಕವಾಗಿ ಅಧಿಕಾರಿಗಳು ಹೇಳಿದ್ದಾರೆ. ಇನ್ನು ಕಾಟೆಬೈನಾ, ಸಡಾ, ಮಂಗೂರ್ ಹಿಲ್, ಸಾವರ್ಡೆ, ಬಿಚೋಲಿಂ ಮತ್ತಿತರ ಪ್ರದೇಶಗಳಲ್ಲಿ ಕನ್ನಡಿಗರು ಸಾಕಷ್ಟು ಸಂಖ್ಯೆಯಲ್ಲಿ ವಾಸವಾಗಿದ್ದು, ಇವರನ್ನೂ ಚಿಂತೆ ಆವರಿಸಿದೆ.
ಸಿಎಂ ಬಳಿ ನಿಯೋಗ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಶನಿವಾರ ಭೇಟಿ ಮಾಡಲು ಅಖಿಲ ಗೋವಾ ಕನ್ನಡ ಸಂಘದ ಅಧ್ಯಕ್ಷ ಸಿದ್ದಣ್ಣ ಮೇಟಿ ನೇತೃತ್ವದ ನಿರಾಶ್ರಿತರ ನಿಯೋಗ ತೆರಳಿದ್ದು, ಪರಿಸ್ಥಿತಿ ಮನವರಿಕೆ ಮಾಡಲಿದೆ. ಅವರು ಮಧ್ಯಸ್ಥಿಕೆಯನ್ನು ಇಲ್ಲಿನವರು ಎದುರು ನೋಡುತ್ತಿದ್ದಾರೆ.
ಬೈನಾ ಬೀಚಿನಲ್ಲಿ ವಾಸಿಸುತ್ತಿದ್ದವರು ಕರ್ನಾಟಕದ ಜನರೋ ಅಥವಾ ಇನ್ಯಾವ ರಾಜ್ಯದ ಜನರೋ ಎಂದು ಪರಿಶೀಲಿಸಿ ತೆರವು ಕಾಂರ್ಾಚರಣೆ ಕೈಗೊಂಡಿಲ್ಲ. ಮನೆಗಳು ಅಸುರಕ್ಷಿತವೆಂದು ಹೀಗೆ ಮಾಡಿದ್ದೇವೆ.
- ಮನೋಹರ ಪರಿಕ್ಕರ್, ಗೋವಾ ಸಿಎಂ
ನೀರು, ವಿದ್ಯುತ್ ಕಟ್
ವಾಸ್ಕೊ: ಇದೇ ವೇಳೆ ನಿರಾಶ್ರಿತರ ಮನೆ ತೆರವು ಪ್ರದೇಶಕ್ಕೆ ವಿದ್ಯುತ್, ನೀರಿನ ಸಂಪರ್ಕವನ್ನು ಕಡಿತಗೊಳಿಸಲಾಗಿದೆ. ಇದು ಇಲ್ಲಿನವರಿಗೆ ತೀವ್ರ ಸಮಸ್ಯೆ ತಂದೊಡ್ಡಿದೆ. ಬಯಲಿನಲ್ಲಿಂು ಟೆಂಟ್ ಹಾಕಿಕೊಂಡಿರುವ ನಿವಾಸಿಗಳಿಗೆ ಅದನ್ನೂ ತೆರವುಗೊಳಿಸುವಂತೆ ಪೊಲೀಸರು ಬೆದರಿಕೆ ಹಾಕುತ್ತಿದ್ದು, ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಿದೆ.


-ವಸಂತಕುಮಾರ್ ಕತಗಾಲ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.