ಕಾಮುಕರ ವಿರುದ್ಧ ರಾಜ್ಯಾದ್ಯಂತ ಭಾರೀ ಆಕ್ರೋಶ, ಪ್ರತಿಭಟನೆ

ಬೆಂಗಳೂರು: ಹೆಚ್ಚುತ್ತಿರುವ ಅತ್ಯಾಚಾರ ಪ್ರಕರಣ ಖಂಡಿಸಿ ರಾಜ್ಯಾದ್ಯಂತ ಜನರು ಸರ್ಕಾರದ ವಿರುದ್ಧ ತಿರುಗಿ ಬಿದ್ದಿದ್ದಾರೆ. ಶುಕ್ರವಾರ ಎಲ್ಲೆಡೆ ವ್ಯಾಪಕ ಪ್ರತಿಭಟನೆ ನಡೆದಿದೆ. ಗೃಹ ಸಚಿವರ ರಾಜಿನಾಮೆಗೆ ಒಕ್ಕೊರಲ ಒತ್ತಾಯ ಕೇಳಿಬಂದಿದೆ.
ಬೆಳಗಾವಿ, ಬಿಜಾಪುರ, ಧಾರವಾಡ, ಬಳ್ಳಾರಿ, ಕೊಪ್ಪಳ, ಉತ್ತರ ಕನ್ನಡ, ಹಾವೇರಿ ಜಿಲ್ಲೆಗಳಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಧಾರವಾಡದಲ್ಲಿ ಬಿಜೆಪಿ ಮಹಿಳಾ ಮೋರ್ಚಾ ಭಾರಿ ಪ್ರತಿಭಟನೆ ನಡೆಸಿದೆ. ಬಳ್ಳಾರಿಯಲ್ಲಿ ಎಐಎಂಎಸ್ಎಸ್, ಗೃಹ ಸಚಿವರ ರಾಜಿನಾಮೆಗೆ ಆಗ್ರಹಿಸಿದೆ. ಹಾವೇರಿಯಲ್ಲಿ ಕರವೇ, ಎಬಿವಿಪಿ ಪ್ರತಿಭಟಿಸಿದೆ.
ದಾವಣಗೆರೆ, ಮಂಡ್ಯ, ರಾಯಚೂರು, ಹಾಸನ, ಗುಲ್ಬರ್ಗಗಳಲ್ಲೂ ಖಂಡನೆ ವ್ಯಕ್ತವಾಗಿದ್ದು, ಹಲವೆಡೆ ರಸ್ತೆ ತಡೆ ನಡೆದಿದೆ. 'ಗೋ ಬ್ಯಾಕ್ ಜಾರ್ಜ್' ಎಂಬ ಘೋಷಣೆಯನ್ನಿಟ್ಟುಕೊಂಡು ಶನಿವಾರ ಮಡಿಕೇರಿ ಜಿಲ್ಲಾ ಬಿಜೆಪಿ ಪ್ರತಿಭಟನೆ ಹಮ್ಮಿಕೊಂಡಿದೆ.
ಸಲಹೆಗಳು: ಅತ್ಯಾಚಾರ ಪ್ರಕರಣಗಳನ್ನು ಮೂರು ತಿಂಗಳೊಳಗೆ ವಿಲೇವಾರಿ ಮಾಡುವ ಮೂಲಕ ತಪ್ಪಿತಸ್ಥರ ವಿರುದ್ಧ ಕಟ್ಟುನಿಟ್ಟಿನ ಕ್ರಮಕೈಗೊಳ್ಳಬೇಕು. ಅತ್ಯಾಚಾರಿಗಳಿಗೆ ಗಲ್ಲು ಶಿಕ್ಷೆ ವಿಧಿಸಬೇಕು ಎಂಬ ಅಭಿಪ್ರಾಯಗಳು ವ್ಯಕ್ತವಾದವು.
ಜತೆಗೆ ಅತ್ಯಾಚಾರ ಪ್ರಕರಣದಲ್ಲಿ ಆರೋಪಿಗೆ ವಿಧಿಸುವ ಶಿಕ್ಷೆಗೆ ಯಾವ ಕಾರಣಕ್ಕೂ ತಡೆಯಾಜ್ಞೆ ನೀಡಬಾರದು. ಹಣ ಮತ್ತಿತರ ಆಮಿಷಕ್ಕೊಳಗಾಗಿ ಇಂಥ ಆರೋಪಿಗಳ ವಕಾಲತು ವಹಿಸಲು ನ್ಯಾಯವಾದಿಗಳು ಮುಂದಾಗಬಾರದೆಂಬ ಆಕ್ರೋಶಭರಿತ ಸಲಹೆಯೂ ಹಲವೆಡೆ ವ್ಯಕ್ತವಾಗಿವೆ.
ಅತ್ಯಾಚಾರ ಮಾಡಿ ಜೈಲಿಗೆ ಬಂದರೆ ಅಂಥವರ ಕೈಯನ್ನು ಸಹ ಖೈದಿಗಳು ಕತ್ತರಿಸಬೇಕು. ಅವರಿಗೆ ಕಾನೂನು ನೆರವು ನೀಡುತ್ತೇವೆ.
- ಪ್ರಮೋದ ಮುತಾಲಿಕ,
ಶ್ರೀರಾಮ ಸೇನೆ ಮುಖ್ಯಸ್ಥ
ಅತ್ಯಾಚಾರಿಗಳ ಮೇಲೆ ಕಠಿಣ ಕ್ರಮ ತಗೋತೀವಿ. ಸರ್ಕಾರ ಅತ್ಯಾಚಾರ ಪ್ರಕರಣಗಳನ್ನು ಗಂಭೀರವಾಗಿ ತೆಗೆದುಕೊಂಡಿದೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಉತ್ತಮವಾಗಿದೆ. ಯಾವಾಗಲೂ ಅದರ ಬಗ್ಗೆಯೇ ಉತ್ತರ ನೀಡಬೇಕು ಎಂದರೆ ಆಗುವುದಿಲ್ಲ.
- ಸಿದ್ದರಾಮಯ್ಯ, ಮುಖ್ಯಮಂತ್ರಿ
ಬಿಜೆಪಿ ಸಭಾತ್ಯಾಗ
ರಾಜ್ಯ ಸರ್ಕಾರ ಅತ್ಯಾಚಾರಿಗಳ ಮೇಲೆ ಕಠಿಣ ಕ್ರಮ ಕೈಗೊಳ್ಳದೆ, 'ಕಾಮುಕರ ರಾಜ್ಯ'ವಾಗಲು ಕಾರಣವಾಗಿದೆ. 24 ಗಂಟೆಯಲ್ಲಿ ಏಳು ಅತ್ಯಾಚಾರ ಪ್ರಕರಣಗಳು ವರದಿಯಾಗಿದ್ದರೂ ಸರ್ಕಾರ ದಿಟ್ಟ ಕ್ರಮ ಕೈಗೊಂಡಿಲ್ಲ ಎಂದು ಬಿಜೆಪಿ ಶುಕ್ರವಾರ ಕಪ್ಪುಪಟ್ಟಿ ಧರಿಸಿ ವಿಧಾನಸೌಧದಲ್ಲಿ ಧರಣಿ ನಡೆಸಿದೆ. ಬಳಿಕ ನಿಲುವಳಿ ಸೂಚನೆ ಪ್ರಸ್ತಾವಕ್ಕೆ ಉತ್ತರಿಸಲು ವಿಫಲವಾದ ಸರ್ಕಾರದ ನಿಲುವು ಖಂಡಿಸಿ ಮುಖಂಡರು ಸಭಾತ್ಯಾಗ ಮಾಡಿದರು.
ಸಿಎಂ ಗಡದ್ದು ನಿದ್ದೆ
ವಿಧಾನಸಭೆ: ರಾಜ್ಯದ ಅತ್ಯಾಚಾರ ಪ್ರಕರಣಗಳು ಹೆಚ್ಚುತ್ತಿವೆ. ಆದರೆ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಮಾತ್ರ ಅದರ ಪರಿವೆಯೇ ಇರಲಿಲ್ಲ. ವಿಧಾನಸಭೆಯಲ್ಲಿ ಶುಕ್ರವಾರ ಈ ಸಂಬಂಧ ಬಿರುಸಿನ ಚರ್ಚೆ ನಡೆಯುತ್ತಿದ್ದರೂ ಸಿದ್ದರಾಮಯ್ಯ ಗಾಢನಿದ್ದೆಗೆ ಜಾರಿದ್ದರು. ಅಷ್ಟೊಂದು ಕೂಗಾಟ ಇದ್ದರೂ ಮುಖ್ಯಮಂತ್ರಿಯವರು ನಿದ್ದೆ ಮಾಡುತ್ತಿದ್ದದು ಬಿಜೆಪಿಯವರನ್ನು ಮತ್ತಷ್ಟು ಕೆರಳಿಸಿತು. ಒಂದೆರಡು ಬಾರಿ ಅವರನ್ನು ಏಳಿಸುವ ಪ್ರಯತ್ನವಾಯಿತು. ಕೊನೆಗೆ ಸಚಿವಾಲಯದ ಸಿಬ್ಬಂದಿಯೊಬ್ಬರು ಸಿಎಂ ಅವರನ್ನು ಎಚ್ಚರಿಸಿ ಲವಂಗ ನೀಡಿದರು. ಅದನ್ನು ಬಾಯಿಗೆ ಹಾಕಿಕೊಂಡು ಸಿಎಂ ಎಚ್ಚರವಾಗಿ ಕುಳಿತುಕೊಂಡರು. ಸಚಿವ ವಿನಯ್ಕುಮಾರ್ ಸೊರಕೆಯವರೂ ನಿದ್ದೆ ಮಾಡುತ್ತಿದ್ದದ್ದು ಕಂಡುಬಂತು. ಮುಖ್ಯಮಂತ್ರಿ ನಿದ್ದೆ ಮಾಡುತ್ತಿದ್ದ ವಿಚಾರ ರಾಷ್ಟ್ರೀಯ ಸುದ್ದಿವಾಹಿನಿ ಮತ್ತು ಮಾಧ್ಯಮದಲ್ಲೂ ಚರ್ಚೆಯಾಗಿತ್ತು. ಸಿದ್ದರಾಮಯ್ಯ ವರ್ತನೆ ಬಗ್ಗೆ ಆಕ್ರೋಶ ವ್ಯಕ್ತವಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


