ಪ್ರಧಾನ ಸುದ್ದಿ

ನಾಗರಹೊಳೆ ವಲಯದಲ್ಲಿ ಅಕ್ರಮ ರೆಸಾರ್ಟ್, ಕೇಂದ್ರದ ಪತ್ರ ಬಂದರೂ ರಾಜ್ಯದ ಕ್ರಮವಿಲ್ಲ

Published On :

ಮೈಸೂರು: ನಾಗರಹೊಳೆ ಹುಲಿ ಯೋಜನೆಯ ಸೂಕ್ಷ್ಮ ಅರಣ್ಯ ವಲಯದ 1.30 ಎಕರೆ ಪ್ರದೇಶದಲ್ಲಿರುವ ಅಕ್ರಮ ರೆಸಾರ್ಟ್ ಬಗ್ಗೆ ಕ್ರಮ ಕೈಗೊಂಡು ತಕ್ಷಣ ವರದಿ ನೀಡುವಂತೆ ಕೇಂದ್ರ ಸರ್ಕಾರದಿಂದ ಸೂಚನೆ ಬಂದಿದ್ದರೂ ರಾಜ್ಯ ಸರ್ಕಾರ ಮೀನಮೇಷ ಎಣಿಸುತ್ತಿದೆ.
ಎಚ್.ಡಿ. ಕೋಟೆ ತಾಲೂಕು ಅಂತರಸಂತೆ ಹೋಬಳಿಯ ಕಡೆಗದ್ದೆ ಎಂಬ ಗ್ರಾಮದಲ್ಲಿ ಈ ರೆಸಾರ್ಟ್ ಇದೆ. ಇದರ ಐವರು ಪಾಲುದಾರರ ಪೈಕಿ ಒಬ್ಬರು ರಾಜ್ಯ ಸರ್ಕಾರದ ಪ್ರಭಾವಿ ಸಚಿವರೊಬ್ಬರ ಸಂಬಂಧಿಯಾಗಿದ್ದೇ ಇಷ್ಟಕ್ಕೆಲ್ಲ ಕಾರಣ.
ಇಲ್ಲಿ ಅಕ್ರಮ ರೆಸಾರ್ಟ್ ಕಮ್ ಬಾರ್ ಮತ್ತು ಲಿಕ್ಕರ್ ಚಿಲ್ಲರೆ ಮಾರಾಟ ಅಂಗಡಿ ಬಗ್ಗೆ ದೂರಿತ್ತು. ಇದರ ವಾಸ್ತವ ವರದಿ, ಕ್ರಮ ತೆಗೆದುಕೊಂಡಿರುವ ಬಗ್ಗೆ ತ್ವರಿತವಾಗಿ ತಿಳಿಸುವಂತೆ ಕೇಂದ್ರ ಪರಿಸರ ಮತ್ತು ಅರಣ್ಯ ಸಚಿವಾಲಯದ ವನ್ಯಜೀವಿ ವಿಭಾಗದ ಡಿಐಜಿ ಡಾ. ವಿವೇಕ್ ಸಕ್ಸೇನ ಏಪ್ರಿಲ್ 11ರಂದೇ ರಾಜ್ಯ ಸರ್ಕಾರದ ಅರಣ್ಯ, ಪರಿಸರ ಮತ್ತ ಜೀವಿಶಾಸ್ತ್ರ ವಿಭಾಗದ ಪ್ರಧಾನ ಕಾರ್ಯದರ್ಶಿಗೆ ಪತ್ರ ಬರೆದಿದ್ದಾರೆ. ಮೂರು ತಿಂಗಳಾದರೂ ಕ್ರಮ ಆಗಿಲ್ಲ.
ಮೈಸೂರು ಜಿಲ್ಲಾಧಿಕಾರಿ ಕಾರ್ಯಾಲಯವು ಸೂಕ್ಷ್ಮ ವಲಯ ಕರಡು ಅಧಿಸೂಚನೆ ಹೊರಡಿಸುವುದಕ್ಕೆ ಮುಂಚಿತವಾಗಿಯೇ ಸಂಬಂಧಪಟ್ಟ ಜಮೀನನ್ನು ರೆಸಾರ್ಟ್ ಉದ್ದೇಶಕ್ಕೆ ಅನ್ಯಕ್ರಾಂತ ಮಾಡಿಕೊಟ್ಟಿತ್ತು. ಆದರೆ ಗ್ರಾಪಂ ಹಾಗೂ ಅರಣ್ಯ ಇಲಾಖೆಯಿಂದ ನಿರಾಕ್ಷೇಪಣ ದೃಢೀಕರಣ ಪತ್ರ (ಎನ್‌ಒಸಿ) ಪಡೆಯಬೇಕಿತ್ತು. ಆದರೆ ಸ್ಥಳೀಯ ಗ್ರಾಪಂ ಮತ್ತು ರಾಜ್ಯ ಪ್ರವಾಸೋದ್ಯಮ ಇಲಾಖೆಯಿಂದ ನಿರಾಕ್ಷೇಪಣಾ ಪತ್ರ ಹಾಗೂ ಜಿಲ್ಲಾಡಳಿತದಿಂದ ಬಾರ್ ನಡೆಸಲು ಪರವಾನಗಿ ಪಡೆದಿದ್ದರು.  ಈ ಪ್ರದೇಶ ಹುಲಿ ಸಂರಕ್ಷಿತ ಪ್ರದೇಶಕ್ಕೆ ಹೊಂದಿಕೊಂಡಂತೆ 20 ಮೀಟರ್ ಅಂತರದಲ್ಲಿರುವುದರಿಂದ ಬಾರ್ ನಡೆಸಲು ಅನುಮತಿ ನೀಡಬಾರದು, ಬಾರ್ ಪರವಾನಗಿ ನವೀಕರಿಸಬಾರದು ಎಂದು ಅರಣ್ಯ ಇಲಾಖೆಯು ಜಿಲ್ಲಾಡಳಿತಕ್ಕೆ ಪದೇ ಪದೇ ಮನವಿ ಮಾಡಿದರೂ ಪ್ರಯೋಜನವಾಗಿರಲಿಲ್ಲ.  ಡಿ.ಬಿ. ಕುಪ್ಪೆ ವನ್ಯಜೀವಿ ವಲಯ ಅರಣ್ಯಾಧಿಕಾರಿ ಕಳೆದ ವರ್ಷ ಜು.12 ರಂದು ದಾಳಿ ಮಾಡಿ ಎಫ್‌ಐಆರ್ ದಾಖಲಿಸಿದ್ದರು. ಆದರೆ ರೆಸಾರ್ಟ್ ಮಾಲೀಕರು ಹೈಕೋರ್ಟ್‌ಗೆ ಹೋಗಿ ಮುಂದಿನ ವಿಚಾರಣೆಗೆ ತಡೆಯಾಜ್ಞೆ ತಂದರು.
ಆದರೆ ಅಂದಿನಿಂದ ತಡೆಯಾಜ್ಞೆ ತೆರವಿಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಇದನ್ನು ತೆರವು ಮಾಡಬೇಕು ಎಂದು ಅರಣ್ಯ ಇಲಾಖೆಯ ಪಿಸಿಸಿಎಫ್ (ವನ್ಯಜೀವಿ) ಮೂಲಕ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ ಎಂದು ನಾಗರಹೊಳೆಯ ರಾಜೀವ್‌ಗಾಂಧಿ ರಾಷ್ಟ್ರೀಯ ಉದ್ಯಾನದ ಅರಣ್ಯ ಸಂರಕ್ಷಣಾಧಿಕಾರಿ ಮತ್ತು ನಿರ್ದೇಶಕ ಆರ್. ಗೋಕುಲ್ ಹೇಳಿದ್ದಾರೆ.


-ಅಂಶಿ ಪ್ರಸನ್ನಕುಮಾರ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.