ಪ್ರಧಾನ ಸುದ್ದಿ

ಪೊಲೀಸರಿಗೇ ಇಲ್ಲ ಮಾಹಿತಿ!

ಪೊಲೀಸರಿಗೇ ಇಲ್ಲ ಮಾಹಿತಿ!
Published On :

ಮಂಗಳೂರು: ಸಾಕ್ಷಿ ನಾಶವಾಗಬಹುದು ಎಂದು ಸಂತ್ರಸ್ತೆ ಅತ್ಯಾಚಾರ ನಡೆದು ದಿನವೇ ಕಳೆದಿದ್ದರೂ ತೊಟ್ಟು ನೀರು ಕುಡಿಯದೆ ಪೊಲೀಸರ ಬಳಿ ಬಂದರೆ, ಪೊಲೀಸರು ವೈದ್ಯಕೀಯ ಪರೀಕ್ಷೆಗೆ ಕಳುಹಿಸುವುದೇ ಇಲ್ಲ!
ಅಂದರೆ ಇಲ್ಲಿ ಪೊಲೀಸರಿಗೆ ಸರಿಯಾದ ಮಾಹಿತಿ ಇಲ್ಲ. ಇನ್ನು ಜನಸಾಮಾನ್ಯರ ಪಾಡೇನು ಎಂಬುದೇ ಈಗಿನ ಪ್ರಶ್ನೆಯಾಗಿದೆ. ಅತ್ಯಾಚಾರವಾದರೆ ತಕ್ಷಣ ವೈದ್ಯಕೀಯ ಪರೀಕ್ಷೆ ನಡೆಸಬೇಕು ಎನ್ನುವುದು ಸಾಮಾನ್ಯ ಜ್ಞಾನ. ದೇರಳಕಟ್ಟೆ ವೈದ್ಯ ವಿದ್ಯಾರ್ಥಿನಿ ಅಪಹರಿಸಿ, ಸಾಮೂಹಿಕ ಅತ್ಯಾಚಾರಗೈದ ಪ್ರಕರಣದಲ್ಲಿ ಪೊಲೀಸರು ಸಂತ್ರಸ್ತೆಯ ವೈದ್ಯಕೀಯ ಪರೀಕ್ಷೆ ನಡೆಸೇ ಇಲ್ಲ.
ಈ ಪ್ರಕರಣದಲ್ಲಿ 2013 ಡಿ. 21ರಂದು ನಡೆದ ಅತ್ಯಾಚಾರ ಪ್ರಕರಣ. ಆರೋಪಿಗಳು ವೈದ್ಯ ವಿದ್ಯಾರ್ಥಿ, ವಿದ್ಯಾರ್ಥಿನಿಯರನ್ನು ಬಲವಂತದ ಸಂಪರ್ಕಕ್ಕೆ ಒಳಪಡಿಸಿದ್ದರಿಂದ ಅದು ಅತ್ಯಾಚಾರವಲ್ಲ, ಕೇವಲ ಲೈಂಗಿಕ ಕಿರುಕುಳ ಎಂದು ಪೊಲೀಸರು ಪ್ರಕರಣ ದಾಖಲಿಸಿದ್ದರು.
ಆದರೆ ಅವರು ಈ ಕೃತ್ಯವನ್ನು ಮೊಬೈಲ್‌ನಲ್ಲಿ ಚಿತ್ರೀಕರಿಸಿದ್ದಲ್ಲದೆ, ಮುಖ ಮೈಥುನ ನಡೆಸಿದ್ದರು. ಆದರೂ ಇದು ಸಾಮೂಹಿಕ ಅತ್ಯಾಚಾರ ಪ್ರಕರಣವಾಗಿ ದಾಖಲಾಗಬೇಕು ಎಂದು 'ಕನ್ನಡಪ್ರಭ' ತಜ್ಞರ ಅಭಿಪ್ರಾಯ ಪಡೆದು ಲೇಖನ ಅಭಿಯಾನ ನಡೆಸಿದ ಬಳಿಕ ಪೊಲೀಸರು ಸಾಮೂಹಿಕ ಅತ್ಯಾಚಾರ ಪ್ರಕರಣ ದಾಖಲಿಸಿದ್ದರು. ಅದು ಅತ್ಯಾಚಾರ ನಡೆದು 15 ದಿನದ ಬಳಿಕ!
'ಸಂತ್ರಸ್ತೆ ಮ್ಯಾಜಿಸ್ಟ್ರೇಟ್ ಮುಂದೆ ನೀಡಿದ ಹೇಳಿಕೆ ಅಧಿಕೃತ ಪ್ರತಿ ಸಿಗುವವರೆಗೆ ಆಕೆ ಮೇಲೆ ಅತ್ಯಾಚಾರ ನಡೆದ ಕುರಿತು ಯಾವುದೇ ಪುರಾವೆ ನಮ್ಮ ಬಳಿ ಇರಲಿಲ್ಲ. ಬಳಿಕ 8 ಮಂದಿ ಆರೋಪಿಗಳ ವಿರುದ್ಧ ಅತ್ಯಾಚಾರ, ಸಾಮೂಹಿಕ ಅತ್ಯಾಚಾರ ಪ್ರಕರಣ ದಾಖಲಿಸಿಕೊಳ್ಳಬೇಕಾಯಿತು' ಎಂಬುದು ಪೊಲೀಸರ ವಾದವಾಗಿತ್ತು.
ಮೊದಲು ಒಪ್ಪಿದ್ದಳು: ಅತ್ಯಾಚಾರ ನಡೆದ ಮರುದಿನ ಬೆಳಗ್ಗೆ ವೈದ್ಯ ವಿದ್ಯಾರ್ಥಿಯನ್ನು ಒತ್ತೆಸೆರೆಯಾಗಿ ಇಟ್ಟು ಹಣ ತರುವಂತೆ ವಿದ್ಯಾರ್ಥಿನಿಯನ್ನು ಮುಖ್ಯರಸ್ತೆವರೆಗೆ ಬಿಟ್ಟು ಬಂದಿದ್ದರು. ಹಣ ತಾರದಿದ್ದರೆ ವಿದ್ಯಾರ್ಥಿಯ ಕೊಲೆ ಮಾಡುವುದಾಗಿ ಬೆದರಿಸಿದ್ದರು.
'ಸಂತ್ರಸ್ತೆ ನನ್ನ ಬಳಿ ನೆರವು ಕೇಳಿ ಬಂದಳು. ನಾನು ಪೊಲೀಸರ ಬಳಿ ಕರೆದುಕೊಂಡು ಹೋಗುವಾಗ ಮಧ್ಯಾಹ್ನವಾಗಿತ್ತು. ಅಲ್ಲಿಯವರೆಗೂ ಸಂತ್ರಸ್ತೆ ನೀರು ಕುಡಿದಿರಲಿಲ್ಲ ನಿಜ. ವೈದ್ಯಕೀಯ ಪರೀಕ್ಷೆಗೆ ಒಳಪಡಲು ಸಿದ್ಧನಿದ್ದೀಯ ಎಂದು ಕೇಳಿದೆ ಆಕೆ ಒಪ್ಪಿದ್ದಳು. ಆದರೆ ಅಂದು ಆಕೆಯ ವೈದ್ಯಕೀಯ ಪರೀಕ್ಷೆ ಮಾಡಲಿಲ್ಲ' ಎಂದು ನೆರವು ನೀಡಿದ್ದ ಮಕ್ಕಳ ಕಲ್ಯಾಣ ಸಮಿತಿ ಮಾಜಿ ಅಧ್ಯಕ್ಷೆ ಆಶಾ ನಾಯಕ್ ಹೇಳುತ್ತಾರೆ.
ಆದರೆ ಮರುದಿನ ಆಕೆಯನ್ನು ಪರೀಕ್ಷೆಗೆ ಒಳಪಡಿಸುವುದಾಗಿ ಪೊಲೀಸರು ಹೇಳಿದರೂ, ಬೆದರಿದ ವಿದ್ಯಾರ್ಥಿನಿ ಒಪ್ಪಲಿಲ್ಲ. ಇದಾದ ಎರಡು ದಿನಗಳ ಬಳಿಕ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದು, ಇದೀಗ ಜೈಲಿನಲ್ಲಿದ್ದಾರೆ. ಈ ಪ್ರಕರಣ ನ್ಯಾಯಾಲಯದಲ್ಲಿದೆ.
ಪೊಲೀಸರು ಏನು ಮಾಡಬೇಕಿತ್ತು?
ಆರೋಪಿಗಳ ವೀರ್ಯ, ಸಂತ್ರಸ್ತೆ ಖಾಸಗಿ ಜಾಗದಲ್ಲಿ ಆರೋಪಿಗಳ ಬೆರಳ ಗುರುತುಗಳು, ರಕ್ತಸ್ರಾವ ಆಗಿದ್ದರೆ ಡಿಎನ್‌ಎ ಪರೀಕ್ಷೆಯಿಂದ ಆತ್ಯಾಚಾರಿಗಳ ಆರೋಪ ಸಾಬೀತಾಗುತ್ತದೆ. ಮುಖ ಮೈಥುನಕ್ಕೆ ಒಳಪಡಿಸಿದ್ದರೆ ಆರೋಪಿಗಳ ಅಥವಾ ಸಂತ್ರಸ್ತೆಯ ಬಟ್ಟೆಯಲ್ಲಿ ಜೊಲ್ಲು, ಕೂದಲು ಸಿಕ್ಕಿದರೂ ಡಿಎನ್‌ಒ ಪರೀಕ್ಷೆಗೆ ಒಳಪಡಿಸಬಹುದು. ಇದು ಪ್ರಬಲ ಸಾಕ್ಷಿ. ಅತ್ಯಾಚಾರ ನಡೆಸಿದ ಮನೆಯಲ್ಲಿ ಬೆಡ್, ಅಪಹರಿಸಿದ ವಾಹನದಲ್ಲಿ ಆರೋಪಿಗಳ ಬೆರಳಚ್ಚು ತೆಗೆಯಬೇಕಿತ್ತು. ಆದರೆ ಪೊಲೀಸರು ಇವ್ಯಾವುದನ್ನೂ ಮಾಡಿಲ್ಲ.


-ಜಿತೇಂದ್ರ ಕುಂದೇಶ್ವರ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.