ಪ್ರಧಾನ ಸುದ್ದಿ

ಟು ಫಿಂಗರ್ ಟೆಸ್ಟ್ ಪರ್ಯಾಯ ಏನು?

ಟು ಫಿಂಗರ್ ಟೆಸ್ಟ್ ಪರ್ಯಾಯ ಏನು?
Published On :

ಮಂಗಳೂರು: ಅತ್ಯಾಚಾರ ಪ್ರಕರಣದಲ್ಲಿ ಸಂತ್ರಸ್ತ ಯುವತಿ ಅಥವಾ ಮಹಿಳೆಯ ಗುಪ್ತಾಂಗದ 'ಟು ಫಿಂಗರ್ ಟೆಸ್ಟ್‌'ಗೆ ಸುಪ್ರೀಂ ಕೋರ್ಟ್ ನಿಷೇಧಿಸಿದ್ದರೂ ಸರ್ಕಾರಿ ಆಸ್ಪತ್ರೆಗಳಲ್ಲಿ ಇನ್ನೂ ನಡೆಯುತ್ತಿದೆ. ಆದರೆ ಇದಕ್ಕೆ ಪರ್ಯಾಯ ಮಾರ್ಗ ಏನು ಮಾಡಬೇಕು ಎಂಬುದರ ಬಗ್ಗೆಯೂ ಚರ್ಚೆ ಅಗತ್ಯವಾಗಿದೆ.
ಅತ್ಯಾಚಾರದಿಂದ ಮೊದಲೇ ಕಂಗೆಟ್ಟಿರುವ ಸಂತ್ರಸ್ತೆಯನ್ನು ಟು ಫಿಂಗರ್ ಟೆಸ್ಟ್ ಹೆಸರಿನಲ್ಲಿ ಮತ್ತಷ್ಟು ಶೋಷಿಸಿದಂತಾಗುತ್ತದೆ. ಈ ರೀತಿ ಪರೀಕ್ಷಿಸುವ ವಿಧಾನ ಅವೈಜ್ಞಾನಿಕ ಎಂದು ಸುಪ್ರೀಂ ಕೋರ್ಟ್ ಹೇಳಿದ್ದರೂ ಆಸ್ಪತ್ರೆಗಳಲ್ಲಿ 'ಟು ಫಿಂಗರ್‌' ಪರೀಕ್ಷೆ ಮುಂದುವರಿಯುತ್ತಿದೆ. ಆದರೆ ಕೆಲವೊಮ್ಮೆ ಇದು ಅನಿವಾರ್ಯ ಎಂದು ವೈದ್ಯರು ಹೇಳುತ್ತಾರೆ.
ಸಂತ್ರಸ್ತೆಯ ಖಾಸಗಿತನಕ್ಕೆ ಧಕ್ಕೆ ತರುವ ಈ ಪರೀಕ್ಷೆ ಆಕೆಯ ಮಾನಸಿಕ ಹಾಗೂ ದೈಹಿಕತೆ ಮೇಲೂ ಪ್ರತಿಕೂಲ ಪರಿಣಾಮ ಬೀರುತ್ತದೆ. ಹಾಗಾಗಿ ಅತ್ಯಾಚಾರ ಪ್ರಕರಣಗಳಲ್ಲಿ ಟು ಫಿಂಗರ್ ಟೆಸ್ಟ್ ಮಾಡಬಾರದು. ಅದರ ಬದಲು ಪರ್ಯಾಯ ಮಾರ್ಗ ಅನುಸರಿಸಬೇಕು ಎಂದು ಸುಪ್ರೀಂ ಆದೇಶದಲ್ಲಿ ಉಲ್ಲೇಖವಾಗಿತ್ತು.
ಏನಿದು ಟು ಫಿಂಗರ್ ಟೆಸ್ಟ್?: ಅತ್ಯಾಚಾರಕ್ಕೆ ಒಳಗಾದವರು ಯಾರೇ ಇರಲಿ ಬಾಲಕಿಯಿಂದ, ವೃದ್ಧೆವರೆಗೂ ಆಸ್ಪತ್ರೆಗಳಲ್ಲಿ 'ಟು ಫಿಂಗರ್ ಟೆಸ್ಟ್‌' ಗೆ ಒಳಪಡಬೇಕಾಗುತ್ತದೆ. ಸಂತ್ರಸ್ತೆಯ ಗುಪ್ತಾಂಗಕ್ಕೆ ಬೆರಳು ಹಾಕಿ ಕನ್ಯಾಪೊರೆ ಪರೀಕ್ಷಿಸುವುದಕ್ಕೆ 'ಟು ಫಿಂಗರ್ ಟೆಸ್ಟ್‌' ಎನ್ನುತ್ತಾರೆ. ಆದರೆ ಅತ್ಯಾಚಾರ ನಡೆದಾಗಲೂ ಸಾಕ್ಷಿ ಹಾಗೂ ಆರೋಪಿಗಳ ಡಿಎನ್‌ಎ ಸಂಗ್ರಹಿಸಲು ಈ ಪರೀಕ್ಷೆಯನ್ನು ಮಾಡಬೇಕಾಗುತ್ತದೆ. ಈಗ ಸುಪ್ರೀಂ ಆದೇಶದ ಪ್ರಕಾರ ಈ ಕ್ರಮ ಸರಿಯಲ್ಲ.
2ನೇ ಅತ್ಯಾಚಾರದಂತೆ: ಅತ್ಯಾಚಾರ ಸಂತ್ರಸ್ತೆಯನ್ನು ಟು ಫಿಂಗರ್ ಟೆಸ್ಟ್‌ಗೆ ಒಳಪಡಿಸುವುದು 2ನೇ ಬಾರಿ ಅತ್ಯಾಚಾರ ಮಾಡಿದಂತೆ ಎಂದು ಈ ಹಿಂದೆ ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿತ್ತು. 1966ರ ಆರ್ಥಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ಹಕ್ಕುಗಳ ಅಂತಾರಾಷ್ಟ್ರೀಯ ಒಪ್ಪಂದ, ಅಪರಾಧ ಮತ್ತು ನಿಂದನೆ ಪ್ರಕರಣದಲ್ಲಿ ಸಂತ್ರಸ್ತೆಗೆ ನ್ಯಾಯ ಒದಗಿಸುವ ಅಧಿಕಾರ ಕುರಿತ ಅಮೆರಿಕ ಮೂಲ ಕಾನೂನು ಒಪ್ಪಂದ ಉಲ್ಲೇಖಿಸಿ ಸುಪ್ರೀಂ ಕೋರ್ಟ್ 1985ರಲ್ಲೇ ಟು ಫಿಂಗರ್ ಟೆಸ್ಟ್ ಅವೈಜ್ಞಾನಿಕ ಎಂದಿತ್ತು. 2003ರಲ್ಲಿ ಸುಪ್ರೀಂ ಕೋರ್ಟ್ ಈ ಕ್ರಮವನ್ನು ನಿಷೇಧಿಸಿತ್ತು. ದೆಹಲಿ ನಿರ್ಭಯಾ ಪ್ರಕರಣ ಬಳಿಕವೂ ಈ ಬಗ್ಗೆ ಕಟ್ಟುನಿಟ್ಟಾಗಿ ಹೇಳಿತ್ತು.
ಸರ್ಕಾರ ಏನು ಮಾಡಬೇಕು?
ಅತ್ಯಾಚಾರ ನಡೆದ ಸಂದರ್ಭದಲ್ಲಿ ವೈದ್ಯಕೀಯ ಸಾಕ್ಷಿಗಳ ಕಲೆಹಾಕಲು ವೈದ್ಯರು ಯಾವ ಕ್ರಮ ಅನುಸರಿಸಬೇಕು ಎಂಬ ಬಗ್ಗೆ ನಿಯಮ ರೂಪುಗೊಳ್ಳಬೇಕಿದೆ. ಇದಕ್ಕಾಗಿ ಸರ್ಕಾರ ತಜ್ಞರ ಸಮಿತಿಯೊಂದನ್ನು ರಚಿಸಿ ಸಮರ್ಪಕ ವರದಿ ತರಿಸಿಕೊಳ್ಳುವ ಅಗತ್ಯವೂ ಇದೆ. ಪರ್ಯಾಯ ಮಾರ್ಗಗಳ ಬಗ್ಗೆ ಶೀಘ್ರ ಕ್ರಮ ಕೈಗೊಳ್ಳುವುದೇ ಸರ್ಕಾರ ಎಂಬುದೇ ಈಗಿನ ಪ್ರಶ್ನೆ.
'ಅತ್ಯಾಚಾರ ಸಂತ್ರಸ್ತೆಯ ಟು ಫಿಂಗರ್ ಟೆಸ್ಟ್ ಮಾಡಲೇ ಬಾರದು. ಏನಿದ್ದರೂ ಪೂರಕ ಇತರೆ ಸಾಕ್ಷ್ಯಗಳನ್ನು ವೈದ್ಯರು ಪರಿಗಣಿಸಬೇಕು. ಸರ್ಕಾರಿ ಆಸ್ಪತ್ರೆಗಳಲ್ಲಿ ಈಗಲೂ ಟು ಫಿಂಗರ್ ಟೆಸ್ಟ್ ಮಾಡುವುದು ಗಮನಕ್ಕೆ ಬಂದಿಲ್ಲ. ಈ ವಿಚಾರವನ್ನು ಸರ್ಕಾರದ ಗಮನಕ್ಕೆ ತರಲಾಗುವುದು.'
- ಶಕುಂತಳಾ ಶೆಟ್ಟಿ, ಶಾಸಕರು


-ಆತ್ಮಭೂಷಣ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.