ನವೋತ್ಸಾಹಕ್ಕೆ ಹಳಬರು ಚಿತ್, ಲೋಕಸಭೆಯಲ್ಲಿ ಹೊಸಬರದ್ದೇ ಪಾರಮ್ಯ

ನವದೆಹಲಿ: 'ಸದನದಲ್ಲಿ ಕಡ್ಡಾಯ ಹಾಜರಿರಿ, ಕಲಾಪದಲ್ಲಿ ಸಕ್ರಿಯ ಭಾಗವಹಿಸಿ' ಎಂದು ಪಕ್ಷದ ನೂತನ ಸಂಸದರಿಗೆ ಪ್ರಧಾನಿ ಮೋದಿ ಹೇಳಿದ್ದ ಕಿವಿಮಾತು ಎಲ್ಲ ಪಕ್ಷಗಳ ಹೊಸ ಸಂಸದರ ಮೇಲೂ ಪ್ರಭಾವ ಬೀರಿದೆ. ಮುಂಗಡಪತ್ರ ಅಧಿವೇಶನದಲ್ಲಿ ಹೊಸಬರದ್ದೇ ಪಾರುಪತ್ಯ.
ಹೊಸಬರು ಸದನದಲ್ಲಿ ಹಾಜರಿರುವುದು ಮಾತ್ರವಲ್ಲ, ಕಲಾಪದಲ್ಲಿಯೂ ಅತ್ಯುತ್ಸಾಹದಿಂದ ಭಾಗವಹಿಸುತ್ತಿದ್ದಾರೆ. ಹೀಗಾಗಿ ಹಳಬರು ತಮ್ಮ ನಿರಾಸಕ್ತಿ, ನಿರ್ಲಕ್ಷ್ಯಗಳನ್ನು ಬದಿಗೊತ್ತಿ ಅಧಿವೇಶನವನ್ನು ಗಂಭೀರವಾಗಿ ಪರಿಗಣಿಸುವಂತಾಗಿದೆ.
ಹೊಸ ಸರ್ಕಾರದ ಬಜೆಟ್ ಅಧಿವೇಶನ ಜುಲೈ 7ರಂದು ಆರಂಭವಾಗಿದೆ. 8ರಂದು ರೈಲ್ವೆ ಮತ್ತು 10ಕ್ಕೆ ಸಾಮಾನ್ಯ ಬಜೆಟ್ ಮಂಡನೆಯಾಗಿದೆ. ಈವರೆಗೆ ಎರಡೂ ಬಜೆಟ್ಗಳ ಮೇಲಿನ ಚರ್ಚೆಯಲ್ಲಿ ಭಾಗವಹಿಸಿದವರಲ್ಲಿ ಹೆಚ್ಚಿನವರು ಹೊಸಬರು. ಈ ಉತ್ಸಾಹದಿಂದಾಗಿ ಕಲಾಪದ ಅವಧಿಯೂ ವಿಸ್ತರಣೆಯಾಗಿರುವುದು ವಿಶೇಷ.
ರೈಲ್ವೆ ಬಜೆಟ್ನ ಮೊದಲ ದಿನ ಮಾತನಾಡಿದವರು 45 ಮಂದಿ, ಅವರಲ್ಲಿ 27 ನವಸಂಸದರು. ಸಾಮಾನ್ಯ ಬಜೆಟ್ ಚರ್ಚೆಯಲ್ಲೂ ಇದೇ ಟ್ರೆಂಡ್ ಮುಂದುವರಿದಿದೆ. ಬಜೆಟ್ ಚರ್ಚೆಯಲ್ಲಿ ಪ್ರಥಮ ದಿನ ಪಾಲ್ಗೊಂಡಿದ್ದ 44 ಸಂಸದರಲ್ಲಿ 33 ಮಂದಿ ಮೊದಲ ಸಲ ಆಯ್ಕೆಯಾದವರು.
16ನೇ ಲೋಕಸಭೆ ಇತ್ತೀಚಿನ ವರ್ಷಗಳಲ್ಲಿ ಅತಿಹೆಚ್ಚು ಹೊಸಬರನ್ನು ಹೊಂದಿರುವ ಹೆಗ್ಗಳಿಕೆಗೆ ಪಾತ್ರವಾಗಿದೆ.
1977ರಲ್ಲಿ ತುರ್ತು ಪರಿಸ್ಥಿತಿ ಬಳಿಕ ಮೊದಲ ಚುನಾವಣೆಯಲ್ಲಿ 376 ಸದಸ್ಯರು ಲೋಕಸಭೆಗೆ ಪದಾರ್ಪಣೆ ಮಾಡಿದ್ದರೆ, 2014ರ ಲೋಕಸಮರದಲ್ಲಿ 315 ಮಂದಿ ಹೊಸಬರು (ಶೇ 58) ಗೆಲವು ಸಾಧಿಸಿದ್ದಾರೆ.
ರಾಜ್ಯ ಸಂಸದರ ಮಾದರಿ
ಹಾಜರಿ ವಿಚಾರದಲ್ಲಿ ರಾಜ್ಯದ ಸಂಸದರಿಗೆ ಪೂರ್ಣ ಅಂಕ. ಲೋಕಸಭೆಯ ಈವರೆಗಿನ ಕಲಾಪದಲ್ಲಿ ಎಲ್ಲ 28 ಸದಸ್ಯರದ್ದು ಶೇ 100 ಹಾಜರಿ. ಮಾತ್ರವಲ್ಲ, ಚರ್ಚೆಯಲ್ಲೂ ಸಕ್ರಿಯವಾಗಿ ಭಾಗವಹಿಸುತ್ತಿದ್ದಾರೆ; ಪ್ರಶ್ನೆಗಳನ್ನು ಕೇಳುತ್ತಿದ್ದಾರೆ. ಕೊಡಗು-ಮೈಸೂರಿನ ಪ್ರತಾಪ್ ಸಿಂಹ, ಚಾಮರಾಜನಗರದ ಆರ್.ಧ್ರುವನಾರಾಯಣ, ಮಂಗಳೂರಿನ ನಳಿನ್ಕುಮಾರ ಕಟೀಲು ತಲಾ 20 ಪ್ರಶ್ನೆಗಳನ್ನು ಕೇಳಿದ್ದಾರೆ. ರಾಯಚೂರಿನ ಬಿ.ವಿ.ನಾಯಕ್ 19, ಉಡುಪಿ-ಚಿಕ್ಕಮಗಳೂರಿನ ಶೋಭಾ ಕರಂದ್ಲಾಜೆ 18 ಪ್ರಶ್ನೆ ಕೇಳಿದ್ದಾರೆ.
543
ಲೋಕಸಭೆ ಸದಸ್ಯ ಬಲ
315
ಹೊಸ ಸಂಸದರು
162
ಬಿಜೆಪಿಯ
ಹೊಸಮುಖಗಳು
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


