ಥೂ! ಕಾಮುಕ
ಬೆಂಗಳೂರು: ಎಳೆ ಕಂದಮ್ಮಗಳ ಮೇಲೆ ಕಾಮುಕರ ಅಟ್ಟಹಾಸ ಮುಂದುವರಿದಿದೆ. ನಗರ ಹೊರವಲಯದ
ತಲಘಟ್ಟಪುರ ಬಳಿಯ ತಟ್ಟಗುಪ್ಪೆ ಗ್ರಾಮದಲ್ಲಿ ಹೃದಯ ಸಂಬಂಧಿ ಕಾಯಿಲೆ ಪೀಡಿತ 3 ವರ್ಷ ಬಾಲಕಿ ಮೇಲೆ 16 ವರ್ಷದ ಬಾಲಕ ಅತ್ಯಾಚಾರ ಎಸಗಿದ್ದಾನೆ.
ಜುಲೈ 18ರಂದು ಕೃತ್ಯ ನಡೆದಿದ್ದು ತಡವಾಗಿ ಪ್ರಕರಣ ದಾಖಲಾಗಿದೆ.
ತಟ್ಟಗುಪ್ಪೆ ಗ್ರಾಮದಲ್ಲಿ ಜು.18ರಂದು ಕೂಲಿ ಕಾರ್ಮಿಕರ ಮಗಳು ಹೃದಯ ಸಂಬಂಧಿ ಖಾಯಿಲೆಯಿಂದ ಬಳಲುತ್ತಿದ್ದ 3 ವರ್ಷದ ಬಾಲಕಿ ತನ್ನ ಮನೆ ಮುಂದೆ ಆಟವಾಡುತ್ತಿದ್ದಳು. ಆಗ ನೆರೆಮನೆಯ 16 ವರ್ಷದ ಬಾಲಕ, ಬಾಲಕಿಗೆ ಬಿಸ್ಕೇಟ್ ಕೊಡಿಸುವ ನೆಪದಲ್ಲಿ ಮನೆಯೊಳಗೆ ಕರೆದೊಯ್ದು ಅತ್ಯಾಚಾರ ಎಸಗಿದ್ದಾನೆ. ಹೊರಗೆ ಹೋಗಿದ್ದ ತಾಯಿ ಮನೆಗೆ ಬಂದಾಗ ಬಾಲಕಿ ಕಾಣಲಿಲ್ಲ. ನಂತರ ಸುತ್ತ ಮುತ್ತ ಹುಡುಕಾಡಿದಾಗ, ನೆರೆಮನೆಯಲ್ಲಿ ಬಾಲಕಿ ಅರೆಬೆತ್ತಲಾಗಿ ಸಿಕ್ಕಿದ್ದಳು. ಮನೆಯಲ್ಲಿದ್ದ ಬಾಲಕ ತನಗೇನು ಗೊತ್ತಿಲ್ಲದಂತೆ ಒಡಿ ಹೋಗಿದ್ದ. ಆದರೆ, ತಾಯಿ ಬಾಲಕಿಯನ್ನು ಸರಿಯಾಗಿ ವಿಚಾರಿಸದ ಕಾರಣ ಅತ್ಯಾಚಾರವಾಗಿರುವುದನ್ನು ಗಮನಿಸಿರಲಿಲ್ಲ. ಜುಲೈ 20ರಂದು ಹೃದಯ ಕಾಯಿಲೆ ಹಿನ್ನೆಲೆಯಲ್ಲಿ ಬಾಲಕಿಗೆ ಸಾಮಾನ್ಯ ಪರೀಕ್ಷೆಗೆಂದು
ನಗರದ ಸೇಂಟ್ ಸೆಂಜ್ ಜಾನ್ಸ್ ಆಸ್ಪತ್ರೆಗೆ ಕರೆತರಲಾಗಿತ್ತು. ವೈದ್ಯಕೀಯ ಪರೀಕ್ಷೆ ವೇಳೆ ವೈದ್ಯರು ಬಾಲಕಿ ಮೇಲೆ ಅತ್ಯಾಚಾರವಾಗಿದೆ ಎಂದು ಪೋಷಕರಿಗೆ ತಿಳಿಸಿದ್ದಾರೆ. ಪೋಷಕರು ಘಟನೆಯಲ್ಲಿ ಊರಿನ ಹಿರಿಯರ ಗಮನಕ್ಕೆ ತಂದಿದ್ದಾರೆ. ಅಲ್ಲದೆ ಜು.18ರಂದು ಬಾಲಕಿ ಅರೆಬೆತ್ತಲಾಗಿ ನೆರೆಮನೆಯಲ್ಲಿದ್ದಳು. ಅದೇ ವೇಳೆ ಬಾಲಕನು ಇದ್ದ ಕಾರಣ ಆತನ ಮೇಲೆ ಅನುಮಾನ ವ್ಯಕ್ತಪಡಿಸಿದ್ದರು.
ಕೊನೆಗೆ ಗ್ರಾಮಸ್ಥರು ಹಾಗೂ ಆರೋಪಿ ಪರ ಪಾಲಕರು, ಬಾಲಕಿ ಪೋಷಕರು ಸಂಧಾನ ನಡೆಸಿ ಪ್ರಕರಣ ಪ್ರಕರಣ ಮುಚ್ಚಿ ಹಾಕಲು ಯತ್ನಿಸಿದ್ದಾರೆ. ಆದರೆ, ಸಂಧಾನ ವಿಫಲವಾದ ಕಾರಣ ಪೋಷಕರು ತಲಘಟ್ಟಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಬಾಲಕ ನಾಪತ್ತೆಯಾಗಿದ್ದು ಆತನ ಬಂಧನಕ್ಕೆ ಕಾರ್ಯಾಚರಣೆ ಮುಂದುವರೆದಿದೆ ಎಂದು ರಾಮನಗರ ಎಸ್ಪಿ ಎಸ್ಪಿ ಅನುಪಮ್ ಅಗರವಾಲ್ ಮಾಹಿತಿ ನೀಡಿದರು.
ಜನರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಿ
ಪೊಲೀಸ್ ಆಯುಕ್ತರಿಂದ ಅಧಿಕಾರಿಗಳಿಗೆ ಕಿವಿಮಾತು
ಬೆಂಗಳೂರು: ಅಪರಾಧ ಪ್ರಕರಣಗಳ ತಡೆಗಟ್ಟಲು ಜನರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕರ್ತವ್ಯ ನಿರ್ವಹಿಸುವಂತೆ ನಗರ ಪೊಲೀಸ್ ಆಯುಕ್ತ ಎಂ.ಎನ್. ರೆಡ್ಡಿ ಅಧಿಕಾರಿಗಳಿಗೆ ಸಲಹೆ ನೀಡಿದ್ದಾರೆ.
ಪೊಲೀಸ್ ಆಯುಕ್ತರಾಗಿ ಅಧಿಕಾರವಹಿಸಿಕೊಂಡ ಬಳಿಕ ಸಂಪ್ರದಾಯದಂತೆ ನಗರದ ಡಿಸಿಪಿ, ಎಸಿಪಿಗಳು ಹಾಗೂ ಇನ್ಸ್ಪೆಕ್ಟರ್ಗಳೊಂದಿಗೆ ಆಯುಕ್ತರ ಕಚೇರಿಯಲ್ಲಿ ಮಂಗಳವಾರ ಸಭೆ ನಡೆಸಿದರು.
ಜನಸ್ನೇಹಿ ಪೊಲೀಸ್ ಆಡಳಿತದಿಂದ ಅಪರಾಧಗಳನ್ನು ತಡೆಗಟ್ಟಲು ಸಾಧ್ಯ. ಆರೋಪಿಗಳ ಹಿನ್ನೆಲೆ ಹಾಗೂ ಘಟನೆಗಳ ಬಗ್ಗೆ ಸಾರ್ವಜನಿಕರಲ್ಲಿ ಸಾಕಷ್ಟು ಮಾಹಿತಿ ಇರುತ್ತದೆ. ಹೀಗಾಗಿ ನಾಗರಿಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮಾಹಿತಿ ವಿನಿಮಯ ಮಾಡಿಕೊಳ್ಳುವುದರಿಂದ ಸಮಾಜಘಾತುಕ ಶಕ್ತಿಗಳನ್ನು ಮಟ್ಟಹಾಕಬೇಕು. ವೃತ್ತಿಪರ ಅಪರಾಧಿಗಳು, ರೌಡಿಗಳ ಮೇಲೆ ಹದ್ದಿನ ಕಣ್ಣಿಡಬೇಕು ಎಂದು ಸೂಚಿಸಿದರು.
ತಂತ್ರಜ್ಞಾನದ ಮೊರೆ: ಅಪರಾಧ ಪ್ರಕರಣಗಳ ತಡೆಗಟ್ಟಲು ವಾಟ್ಸ್ಆ್ಯಪ್ ಹಾಗೂ ಇತರ ತಂತ್ರಜ್ಞಾನ ಬಳಕೆ ಮಾಡಲು ಚಿಂತಿಸಲಾಗುತ್ತಿದೆ. ಅಲ್ಲದೇ ನಗರಕ್ಕೆ ಹೆಚ್ಚು ಅನುಕೂಲ ಹಾಗೂ ಹತ್ತಿರವಾಗುವಂತೆ ವಿಧಿವಿಜ್ಞಾನ ಪ್ರಯೋಗಾಲಯ ಸ್ಥಾಪನೆ ಮಾಡಲು ಸರ್ಕಾರದ ಜತೆ ಚರ್ಚೆ ನಡೆಸಲಾಗುತ್ತದೆ. ಅಗತ್ಯವಿರುವ ಕಡೆಗಳಲ್ಲಿ ಸಿಸಿ ಕ್ಯಾಮರಾ ಅಳವಡಿಕೆಗೆ ಕ್ರಮ ಕೈಗೊಳ್ಳಲಾಗುವುದು ಎಂದರು.
ಗೃಹಿಣಿ ಆತ್ಮಹತ್ಯೆ
ಬೆಂಗಳೂರು: ಬಸವೇಶ್ವರ ಕಮಲಾನಗರದಲ್ಲಿ ಚೆನ್ನೈ ಮೂಲದ ಆಶಾ (29) ಎಂಬ ಗೃಹಿಣಿ ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿದ್ದಾರೆ. ಮೂರು ವರ್ಷಗಳ ಹಿಂದೆ ರಾಜೇಶ್ ಎಂಬುವರನ್ನು ವಿವಾಹವಾಗಿದ್ದರು. ದಂಪತಿಗೆ 18 ತಿಂಗಳ ಮಗುವಿದೆ. ಎಲೆಕ್ಟ್ರಿಶಿಯನ್ ಕೆಲಸ ಮಾಡುವ ರಾಜೇಶ್ ಸೋಮವಾರ ಬೆಳಗ್ಗೆ ಕೆಲಸಕ್ಕೆ ಹೋಗಿದ್ದ ಸಂಜೆ ಮನೆಗೆ ವಾಪಸಾಗಿದ್ದಾರೆ. ಆಗ ಮನೆಯಲ್ಲಿ ಮಗು ಅಳುತ್ತಿದ್ದು ಆಶಾ ಕೊಠಡಿಯನ್ನು ನು ಬಿಗಿದುಕೊಂಡಿದ್ದರು. ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ. ಬಸವೇಶ್ವರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರೇಪ್ ಬಿಟ್ರೆ ಬೇರೆ ಏನೂ ಇಲ್ವಾ ನಿಮಗೆ?
ಮಾಧ್ಯಮಗಳ ವಿರುದ್ಧ ಹರಿಹಾಯ್ದ ಮುಖ್ಯಮಂತ್ರಿ ಸಿದ್ದರಾಮಯ್ಯ
ಬೆಂಗಳೂರು: ರೇಪಾ? ಅದು ಬಿಟ್ಟರೆ ಬೇರೆ ಏನು ವಿಚಾರ ಇಲ್ವಾ ನಿಮಗೆ?
ರಾಜ್ಯದಲ್ಲಿ ಹೆಚ್ಚುತ್ತಿರುವ ಅತ್ಯಾಚಾರ ಪ್ರಕರಣದ ಬಗ್ಗೆ ಪ್ರತಿಕ್ರಿಯೆ ಬಯಸಿದ ಮಾಧ್ಯಮ ಪ್ರತಿನಿಧಿಗಳ ವಿರುದ್ಧ ಮುಖ್ಯಮಂತ್ರಿ ಸಿದ್ದರಾಮಯ್ಯ ಈ ರೀತಿ ಕಿಡಿಕಾರಿದ್ದಾರೆ. ವಿಧಾನಸಭೆ ಕಲಾಪದ ಭೋಜನ ವಿರಾಮದ ಸಂದರ್ಭದಲ್ಲಿ ಎದುರಾದ ಸಿದ್ದರಾಮಯ್ಯ ಅವರ ಬಳಿ ಮಾಧ್ಯಮ ಪ್ರತಿನಿಧಿಗಳು ಈ ಬಗ್ಗೆ ಪ್ರಶ್ನೆ ಕೇಳಿದರು. ಇದರಿಂದ ಸಿಡಿಮಿಡಿಗೊಂಡ ಸಿದ್ದರಾಮಯ್ಯ 'ರೇಪಾ, ಅದು ಬಿಟ್ಟರೆ ಬೇರೆ ಏನೂ ವಿಚಾರ ಇಲ್ವಾ ನಿಮಗೇ? ನೀವು ಇದೊಂದೆ ಸುದ್ದಿಯನ್ನು ಹೊಂದಿದ್ದೀರಾ? ಎಂದು ಆಕ್ರೋಶ ವ್ಯಕ್ತಪಡಿಸಿದರು.
ಅದೇ ರೀತಿ ಮೈಸೂರಿನಲ್ಲಿ ನಡೆದ ಅತ್ಯಾಚಾರ ಪ್ರಕರಣದ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ. ಈ ಬಗ್ಗೆ ನಾನು ಮಾಹಿತಿ ತರಿಸಿಕೊಳ್ಳುತ್ತೇನೆ. ಎಲ್ಲ ರೀತಿಯ ಕ್ರಮವನ್ನು ತೆಗೆದುಕೊಳ್ಳುತ್ತೇವೆ. ಎಲ್ಲೆಲ್ಲಿ ಗೂಂಡಾ ಕಾಯ್ದೆ ಜಾರಿ ಮಾಡುವ ಅಗತ್ಯ ಇದೆಯೋ ಅಲ್ಲಲ್ಲಿ ಅನ್ವಯ ಮಾಡುತ್ತೇವೆ ಎಂದರು. ಬಿಜೆಪಿಯವರು ಈ ವಿಚಾರದಲ್ಲಿ ಅನಗತ್ಯವಾಗಿ ರಾಜಕಾರಣ ನಡೆಸುತ್ತಿದ್ದಾರೆ. ನಾವು ಅತ್ಯಾಚಾರಿಗಳ ವಿರುದ್ಧ ಕಠಿಣ ಕಾನೂನು ಕ್ರಮ ತೆಗೆದುಕೊಳ್ಳುತ್ತೇವೆ ಎಂದರು.
ಸ್ಪಷ್ಟೀಕರಣ: ಇದಾದ ಬಳಿಕ ಸ್ಪಷ್ಟೀಕರಣ ನೀಡಿರುವ ಸಿದ್ದರಾಮಯ್ಯ ನಾನು ಸಿಟ್ಟಿನಿಂದ ಮಾತನಾಡಿಲ್ಲ. ಅತ್ಯಾಚಾರ ಪ್ರಕರಣ ಬಿಟ್ಟರೆ ಬೇರೆ ಯಾವುದೇ ವಿಚಾರಗಳು ಪ್ರಶ್ನಿಸಿವುದಕ್ಕೆ ಇಲ್ಲವೇ ಎಂದು ಹೇಳಿದ್ದೇನೆ ಎಂದು ತಿಳಿಸಿದ್ದಾರೆ.
ರಾಜಕೀಯಕ್ಕೆ ಅತ್ಯಾಚಾರ ಬಳಸಿಕೊಳ್ಳಬೇಡಿ
ಬೆಂಗಳೂರು: ಅತ್ಯಾಚಾರದ ಪ್ರಕರಣಗಳನ್ನು ಬಿಜೆಪಿ ಪಕ್ಷ ರಾಜಕೀಯಕ್ಕೆ ಬಳಿಸಿಕೊಳ್ಳುವುದು ಸರಿಯಲ್ಲ. ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸಿ,ಪ್ರಕರಣಗಳು ಮರುಕಳಿಸದಂತೆ ನೋಡಿಕೊಳ್ಳುವುದು ಎಲ್ಲರ ಹೊಣೆಯಾಗಿದೆ ಎಂದು ಮಹಾನಗರ ಜಿಲ್ಲಾ ಕಾಂಗ್ರೆಸ್ ಸಮಿತಿ ಕಿವಿಮಾತು ಹೇಳಿದೆ. ಮುಗ್ಧ ಮಕ್ಕಳು ಹಾಗೂ ಅಸಹಾಯಕ ಯುವತಿಯರ ಮೇಲೆ ನಡೆಯುತ್ತಿರುವ ಅತ್ಯಾಚಾರ ಪ್ರಕರಣಗಳನ್ನು ಯಾರು ಸಮರ್ಥಿಸಲು ಸಾಧ್ಯವಿಲ್ಲ. ಕಾಂಗ್ರೆಸ್ ಸಮಿತಿ ಕೂಡ ಪ್ರಕರಣಗಳನ್ನು ತೀವ್ರವಾಗಿ ಖಂಡಿಸುತ್ತದೆ ಎಂದಿದೆ.
ನೀವೇನಂತೀರಾ?
ಮಗುವಿನ ಅತ್ಯಾಚಾರ ಪ್ರಕರಣದಲ್ಲಿ ಬೇಜವಾಬ್ದಾರಿ ಪ್ರದರ್ಶಿಸಿದ ಆಡಳಿತ ಮಂಡಳಿ ವಿರುದ್ಧ ಸರ್ಕಾರ ಕ್ರಮಕೈಗೊಳ್ಳಲಿ. ಅಂತಹ ಶಾಲೆಗಳ ವಿರುದ್ಧ ತನಿಖೆ ನಡೆಸಲಿ ಇದಕ್ಕೆ ಖಾಸಗಿ ಶಾಲೆಗಳ ವಿರೋಧವಿಲ್ಲ. ಆದರೆ ಈ ವ್ಯವಸ್ಥೆಗೆ ಸಂಬಂಧಿಸಿ ಖಾಸಗಿ ಶಾಲೆಗಳ ಕೆಲ ಬೇಡಿಕೆಯಿದೆ. ಕಳೆದ 2 ವರ್ಷದಿಂದ ಈ ಸಂಬಂಧ ಬೇಡಿಕೆ ಸಲ್ಲಿಸುತ್ತಿದ್ದೇವೆ. ಸರ್ಕಾರ ಯಾವುದೇ ತೀರ್ಮಾನ ಕೈಗೊಂಡಿಲ್ಲ. ಕೂಡಲೇ ಖಾಸಗಿ ಶಾಲೆಗಳ ಆಡಳಿತ ಮಂಡಳಿ ಸಭೆ ನಡೆಸಬೇಕು.
- ಎಲ್.ಆರ್.ಶಿವರಾಮೇಗೌಡ ಖಾಸಗಿ ಶಾಲೆಗಳ ಜಂಟಿ ಕ್ರಿಯಾ ಸಮಿತಿ ಅಧ್ಯಕ್ಷ
ಅಕ್ರಮ ನಡೆಸಿದ ಶಾಲೆಗಳ ವಿರುದ್ಧ ಕ್ರಮ ತೆಗೆದುಕೊಳ್ಳಲಿ, ನಮ್ಮ ವಿರೋಧವಿಲ್ಲ. ಆದರೆ ಎಲ್ಲ ಶಾಲೆಗಳನ್ನು ಒಂದೇ ತಕ್ಕಡಿಯಲ್ಲಿ ಹಾಕಿ ತೂಗುವುದು ಬೇಡ. ಜನರ ಕಣ್ಣೊರೆಸುವ ಸಲುವಾಗಿ ತರಾತುರಿಯಲ್ಲಿ ಮಾರ್ಗಸೂಚಿ ಹೊರಡಿಸಲಾಗಿದೆ. ಇದಕ್ಕೂ ಮುಂಚೆ ಶಾಲೆಗಳೊಂದಿಗೆ ಚರ್ಚೆ ನಡೆಸುವ ಸೌಜನ್ಯ ಸರ್ಕಾರಕ್ಕಿಲ
- ಶಶಿಕುಮಾರ್. ಡಿ, ಖಾಸಗಿ ಶಾಲೆ ಆಡಳಿತ ಮಂಡಳಿ ಒಕ್ಕೂಟದ ಕಾರ್ಯದರ್ಶಿ
ವಿಬ್ಗ್ಯೊರ್ ಶಾಲೆ ಪಾಲಕರ ಆತಂಕ ಹೋಗಲಾಡಿಸುವ ನಿಟ್ಟಿನಲ್ಲಿ ಶಾಲೆಯ ಆಡಳಿತ ಜವಾಬ್ದಾರಿಯನ್ನು ಸರ್ಕಾರ ವಹಿಸಿಕೊಳ್ಳಬೇಕು. ಒಂದು ವರ್ಷದ ಮಟ್ಟಿಗೆ ಸ್ಥಳೀಯ ಡಿಡಿಪಿಐಯನ್ನು ಆಡಳಿತಾಧಿಕಾರಿಯಾಗಿ ನೇಮಿಸಬೇಕು. ಈ ಮೂಲಕ ಪಾಲಕರಲ್ಲಿ ಆಡಳಿತ ಮಂಡಳಿ ಮೇಲಿರುವ ಹೇಸಿಗೆ ಹೊಗಲಾಡಿಸುವ ಪ್ರಯತ್ನ ಮಾಡಬಹುದು. ಸರ್ಕಾರ ಈ ನಿಟ್ಟಿನಲ್ಲಿ ಚರ್ಚೆ ನಡೆಸಿ ಪಾಲಕ ಸ್ನೇಹಿ ಕ್ರಮ ತೆಗೆದುಕೊಳ್ಳಬೇಕು
- ನಿರಂಜನ ಆರಾಧ್ಯ, ಶಿಕ್ಷಣ ತಜ್ಞ
ಶಾಲಾ ಆಡಳಿತ ಮಂಡಳಿಯ ಜವಾಬ್ದಾರಿ ಮರೆಯುವಂತಿಲ್ಲ. ಆದರೆ ಪಾಲಕರು ಜವಾಬ್ದಾರಿ ಮರೆತಿದ್ದಾರೆ. ಒಳ್ಳೆಯ ಶಾಲೆಗೆ ಸೇರಿಸಿದ್ದೇವೆ ಎಂದು ಕೈತೊಳೆದುಕೊಳ್ಳುತ್ತಾರೆ. ದಿನಕ್ಕೆ ಸ್ವಲ್ಪ ಹೊತ್ತಾದರೂ ಮಕ್ಕಳೊಂದಿಗೆ ಚರ್ಚಿಸಬೇಕು. ಆಗ ಕಷ್ಟ ಬಂದಾಗ ಮಕ್ಕಳು ತೊದಲಿಸುವುದು ಗೊತ್ತಾಗುತ್ತದೆ. ಪಾಲಕರು ಎಷ್ಟೆ ಕೆಲಸದಲ್ಲಿ ನಿರತರಾಗಿದ್ದರೂ ಶಾಲೆಯ ಚಟುವಟಿಕೆ ಬಗ್ಗೆ ಮಕ್ಕಳೊಂದಿಗೆ ಚರ್ಚಿಸಬೇಕು. ಆಗ ಸಮಸ್ಯೆಗಳಿಗೆ ಕೂಡಲೇ ಪರಿಹಾರ ದೊರೆಯುತ್ತವೆ
- ತಿಮ್ಮಪ್ಪ ಎಂ.ಎಸ್, ವಿಶ್ರಾಂತ ಕುಲಪತಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

