ಪ್ರಧಾನ ಸುದ್ದಿ

ಬಿಜೆಪಿ ಕೇಳಿದಾಕ್ಷಣ ನಾನೇಕೆ ರಾಜಿನಾಮೆ ಕೊಡಲಿ? ಜಾರ್ಜ್

ಬಿಜೆಪಿ ಕೇಳಿದಾಕ್ಷಣ ನಾನೇಕೆ ರಾಜಿನಾಮೆ ಕೊಡಲಿ? ಜಾರ್ಜ್
Published On :

ಬೆಂಗಳೂರು: 'ಬಿಜೆಪಿಯವರು ನನ್ನ ರಾಜಿನಾಮೆ ಕೇಳಲೇಬೇಕು! ಏಕೆಂದರೆ ನಾನು ಈ ರಾಜ್ಯದ ಗೃಹ ಸಚಿವನಾದ ನಂತರ, ಅವರ ನೈತಿಕ ಪೊಲೀಸಿಂಗ್‌ಗೆ ಕಡಿವಾಣ ಹಾಕಿದ್ದೇನೆ. ಕೋಮು ದಳ್ಳುರಿ ನಡೆಯುವುದಕ್ಕೆ ಅವಕಾಶ ಕೊಟ್ಟಿಲ್ಲ. ಅವರು ನನ್ನ ರಾಜಿನಾಮೆಗೆ ಆಗ್ರಹಿಸುತ್ತಿದ್ದಾರೆ ಎಂದರೆ ನಾನು ಸರಿಯಾಗಿ ಕೆಲಸ ಮಾಡುತ್ತಿದ್ದೇನೆ ಎಂದೇ ಅರ್ಥ.'
ರಾಜ್ಯದಲ್ಲಿ ಹೆಚ್ಚುತ್ತಿರುವ ಅತ್ಯಾಚಾರ ಪ್ರಕರಣ ಹಿನ್ನೆಲೆಯಲ್ಲಿ ತಮ್ಮ ರಾಜೀನಾಮೆಗೆ ಪಟ್ಟು ಹಿಡಿದಿರುವ ಬಿಜೆಪಿ ಮುಖಂಡರಿಗೆ ಗೃಹ ಸಚಿವ ಕೆ.ಜೆ.ಜಾರ್ಜ್ 'ಕನ್ನಡಪ್ರಭ'ಕ್ಕೆ ನೀಡಿರುವ ವಿಶೇಷ ಸಂದರ್ಶನದಲ್ಲಿ ನೀಡಿರುವ ತಿರುಗೇಟು ಇದು.
ಸಂದರ್ಶನದ ಪೂರ್ಣಪಾಠ: 'ಅತ್ಯಾಚಾರ ಪ್ರಕರಣ ತಡೆಗೆ ರಾಜ್ಯ ಸರ್ಕಾರ ಎಲ್ಲ ಕ್ರಮಗಳನ್ನು ತೆಗೆದುಕೊಂಡಿದೆ. ಈ ರಾಜ್ಯದ ಗೃಹ ಸಚಿವನಾಗಿರುವ ಜತೆಗೆ ನಾನೂ ಒಬ್ಬ ಕುಟುಂಬಸ್ಥ. ಹೆಣ್ಣುಮಕ್ಕಳಿಗೆ ಗೌರವ ನೀಡಬೇಕೆಂಬ ಪ್ರಾಥಮಿಕ ಪಾಠವನ್ನು ತಾಯಿ ಹೇಳಿಕೊಟ್ಟಿದ್ದಾರೆ. ಶಿಸ್ತನ್ನೂ ಕಲಿಸಿದ್ದಾರೆ. ಹೀಗಿರುವಾಗ ಬಿಜೆಪಿ ಏಕಾಏಕಿ ನಮ್ಮ ಸರ್ಕಾರವನ್ನು ಅತ್ಯಾಚಾರಿಗಳ ಸರ್ಕಾರ ಎಂದು ಕರೆದರೆ ಹೇಗೆ ಸಹಿಸಲು ಸಾಧ್ಯ? ಅವರು ಕೇಳುತ್ತಾರೆ ಎಂದು ರಾಜಿನಾಮೆ ಕೊಡುವುದಕ್ಕೆ ಸಾಧ್ಯವೇ?
ಅತ್ಯಾಚಾರಿಗಳ ವಿರುದ್ಧ ನಮ್ಮದು ಝೀರೊ ಟಾಲರೆನ್ಸ್. ಈ ಕಾರಣಕ್ಕಾಗಿಯೇ ನಾವು ಅತ್ಯಾಚಾರಿಗಳ ವಿರುದ್ಧ ಗೂಂಡಾ ಕಾಯ್ದೆ ಅಸ್ತ್ರ ಬಳಸುತ್ತೇವೆ. ಅತ್ಯಾಚಾರಿಗಳು ಬೂಟ್‌ಲೆಗರ್ಸ್‌ಕ್ಕಿಂತ ದೊಡ್ಡ ಕ್ರಿಮಿನಲ್‌ಗಳು. ಹೀಗಾಗಿ ರೇಪಿಸ್ಟ್‌ಗಳನ್ನು ಗೂಂಡಾ ಕಾಯ್ದೆ ವ್ಯಾಪ್ತಿಗೆ ತರುವುದಕ್ಕೆ ಅಗತ್ಯ ಕಾನೂನು ತಿದ್ದುಪಡಿ ತರುತ್ತೇವೆ. ಮಾತ್ರವಲ್ಲ ಇಂಥ ಪ್ರಕರಣಗಳಲ್ಲಿ ಪೊಲೀಸ್ ನಿರ್ಲಕ್ಷ್ಯವನ್ನೂ ಸರ್ಕಾರ ಸಹಿಸುವುದಿಲ್ಲ. ಭಾರತೀಯ ದಂಡ ಸಂಹಿತೆಯ ಸೂಕ್ತ ಕಲಂಗಳನ್ನು ಜಾರಿಗೊಳಿಸಿ ಎಫ್‌ಐಆರ್ ದಾಖಲಿಸದಿದ್ದರೆ ಅಂಥ ಅಧಿಕಾರಿಗಳ ವಿರುದ್ಧವೂ 166 (ಎ) ಅನ್ವಯ ಪ್ರಕರಣ ದಾಖಲಿಸುತ್ತೇವೆ. ಜತೆಗೆ ಅತ್ಯಾಚಾರ ಪ್ರಕರಣಗಳಿಗೆಂದೇ ಪ್ರತ್ಯೇಕ ನ್ಯಾಯಾಧೀಶರನ್ನು ನಿಯೋಜನೆಗೊಳಿಸುವಂತೆ ಕೇಳಿದ್ದೇವೆ. ಇದಕ್ಕಿಂತ ಬೇರೆ ಕ್ರಮಗಳು ಬೇಕೆ?

ಕಪ್ಪು ಕುರಿಗಳಿವೆ
ಮುಂಬಯಿ ಮಾದರಿಯಲ್ಲಿ ಬೆಂಗಳೂರು ಪೊಲೀಸ್ ಕಮಿಷನರೇಟ್ ವಿಭಜಿಸುವ ಪ್ರಸ್ತಾಪ ಸರ್ಕಾರದ ಮುಂದೆ ಇಲ್ಲ. ಹಿಂದೆ ಇಂಥ ಚರ್ಚೆ ನಡೆದಿರುವುದು ನನ್ನ ಗಮನಕ್ಕೆ ಬಂದಿಲ್ಲ. ಈಗಿನ ವ್ಯವಸ್ಥೆಯಲ್ಲೇ ಕಾನೂನು ಸುವ್ಯವಸ್ಥೆ ಕಾಪಾಡುವುದಕ್ಕೆ ಸಾಧ್ಯವಿದೆ. ನಮ್ಮಲ್ಲಿ ಒಳ್ಳೆಯ ಅಧಿಕಾರಿಗಳಿದ್ದಾರೆ, ಬ್ಲಾಕ್‌ಶಿಪ್‌ಗಳೂ ಇವೆ.

ನಾನು ಕುಬೇರ ಅಲ್ಲ, ಸಾಲಗಾರ
'ನಾನು ಕುಬೇರ ಅಲ್ಲ, ಸಾಲಗಾರ. ನನ್ನ ಬಳಿ ಇರುವ ಆಸ್ತಿಗಿಂತ ಹೆಚ್ಚು ಸಾಲ ಇದೆ.' ಜಾರ್ಜ್ ವೈಯಕ್ತಿಕವಾಗಿ ಶುದ್ಧಹಸ್ತರು. ಅವರಿಗೆ ಹಫ್ತಾ ವಸೂಲಿ ಮಾಡಿ ಹಣ ಸಂಗ್ರಹಿಸುವ ಅಗತ್ಯ ಇಲ್ಲ. ಏಕೆಂದರೆ ನೀವು ಕುಬೇರರು. ಆದರೂ ಇಲಾಖೆ ಬಿಗಿ ಕಳೆದುಕೊಂಡು ಭ್ರಷ್ಟಾಚಾರ ಹೆಚ್ಚಿದ್ದೇಕೆ ಎಂಬ ಪ್ರಶ್ನೆಗೆ ಜಾರ್ಜ್ ಈ ರೀತಿ ಉತ್ತರಿಸಿದ್ದಾರೆ. ಮೇಲಿನವರಿಗೆ ಕೊಡಬೇಕು ಎಂದು ಅಧಿಕಾರಿಗಳು ನಮ್ಮತ್ತ ಕೈ ತೋರಿ ಲಂಚ ಕೇಳಿದರೆ ಕೊಡಬೇಡಿ. ನನಗೆ ಭ್ರಷ್ಟಾಚಾರದ ಮೂಲಕ ಹಣ ಮಾಡಬೇಕಾದ ಅಗತ್ಯವಿಲ್ಲ ಎಂದು ಹೇಳಿದರು.

'ಸಿಎಂ ಹಸ್ತಕ್ಷೇಪ ಮಾಡಿಲ್ಲ'
ಸಿಎಂ ಸಿದ್ದರಾಮಯ್ಯ ನನ್ನ ಇಲಾಖೆಯಲ್ಲಿ ಹಸ್ತಕ್ಷೇಪ ಮಾಡಿಲ್ಲ. ಆದರೆ ಸಲಹೆ, ಮಾರ್ಗದರ್ಶನ ನೀಡುತ್ತಾರೆ ಎಂದು ರಾಜ್ಯದಲ್ಲಿ ಹೆಚ್ಚುತ್ತಿರುವ ಅತ್ಯಾಚಾರ ಪ್ರಕರಣ ಹಿನ್ನೆಲೆಯಲ್ಲಿ ತಮ್ಮ ರಾಜೀನಾಮೆಗೆ ಪಟ್ಟು ಹಿಡಿದಿರುವ ಬಿಜೆಪಿ ಮುಖಂಡರ ಆರೋಪಕ್ಕೆ 'ಕನ್ನಡಪ್ರಭ'ಕ್ಕೆ ನೀಡಿರುವ ವಿಶೇಷ ಸಂದರ್ಶನದಲ್ಲಿ ಗೃಹ ಸಚಿವ ಕೆ.ಜೆ.ಜಾರ್ಜ್ ನೀಡಿರುವ ಉತ್ತರವಿದು.  
ಬಿಜೆಪಿ ನಾಯಕರ ಆರೋಪಗಳಿಗೆ ಪ್ರತಿಕ್ರಯಿಸಿದ ಅವರು, 'ನಾನು ಮೊದಲ ಬಾರಿಗೆ ಮಂತ್ರಿಯಾದಾಗ, ಈಗ ನನ್ನ ವಿರುದ್ಧ ಆರೋಪ ಮಾಡುತ್ತಿರುವ ಬಿಜೆಪಿ ಸ್ನೇಹಿತರ ಪೈಕಿ ಕೆಲವರು ಇನ್ನೂ ರಾಜಕಾರಣಕ್ಕೆ ಬಂದಿರಲಿಲ್ಲ. ನನಗೆ ಸಚಿವ ಸ್ಥಾನ ಹೇಗೆ ನಿರ್ವಹಿಸಬೇಕೆಂದು ಗೊತ್ತು.' ಎಂದರು.
'ಇನ್ನು ಕೆಂಪಯ್ಯನವರ ವಿಚಾರ, ನಾನು ಸಾರಿಗೆ ಸಚಿವನಾಗಿದ್ದಾಗ ಅವರು ಬೆಂಗಳೂರು ನಗರದಲ್ಲಿ ಡಿಸಿಪಿಯಾಗಿದ್ದರು. ಅವರೊಬ್ಬ ದಕ್ಷ ಅಧಿಕಾರಿ. ಅವರು ನನ್ನ ಇಲಾಖೆಯಲ್ಲಿ ಹಸ್ತಕ್ಷೇಪ ನಡೆಸುತ್ತಿದ್ದಾರೆ ಎಂಬುದು ಶುದ್ಧ ಸುಳ್ಳು 'ಎಂದರು.
ಮಿನಿಟ್, ಶಿಫಾರಸು ಇಲ್ಲ
ಪೋಸ್ಟಿಂಗ್‌ಗಾಗಿ ಗೃಹ ಸಚಿವರ ಮಿನಿಟ್ ಹಾಕಿಸಿಕೊಳ್ಳುವ ಪ್ರವೃತ್ತಿ ಹಿಂದೆ ಇದ್ದಿರಬಹುದು. ಆದರೆ ಈಗ ಇಲ್ಲ. ನಾನು ಯಾವುದೇ ಶಿಫಾರಸು ಮತ್ತು ಒತ್ತಡಕ್ಕೆ ಮಣಿದು ಅಧಿಕಾರಿಗಳಿಗೆ ಪೋಸ್ಟಿಂಗ್ ನೀಡುವುದಿಲ್ಲ. ಪ್ರತಿ ವರ್ಗಾವಣೆಯೂ ಪೊಲೀಸ್ ಎಸ್ಟಾಬ್ಲಿಶ್ಮೆಂಟ್ ಮಂಡಳಿ ಮೂಲಕವೇ ನಡೆಯುತ್ತದೆ. ಲೋಕಾಯುಕ್ತ ದಾಳಿಗೆ ಒಳಗಾದವರಿಗೆ, ಭ್ರಷ್ಟರಿಗೆ, ಆರೋಪಿಗಳಿಗೆ ಎಕ್ಸಿಕ್ಯೂಟಿವ್ ಪೋಸ್ಟ್ ನೀಡದೇ ಇರುವುದಕ್ಕೆ ಸರ್ಕಾರ ನಿರ್ಧರಿಸಿದೆ ಎಂದು ಗೃಹ ಸಚಿವ ಕೆ.ಜೆ.ಜಾರ್ಜ್ ಹೇಳಿದರು.



-ರಾಘವೇಂದ್ರ ಭಟ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.