ಮೋದಿ ಕನಸಿಗೆ ಬುಲೆಟ್ ವೇಗ

ನವದೆಹಲಿ: ಹೀಗೊಂದು 'ಬುಲೆಟ್' ಕನಸು, ಅದು ಮೋದಿಯದ್ದಾಗಿರಬಹುದು ಅಥವಾ ಜನರದ್ದಾಗಿರಬಹುದು. ಆದರೆ ಈ ಕನಸು ಈಡೇರಿದರೆ, ಬೆಳಗ್ಗೆ ಬೆಂಗಳೂರಲ್ಲಿ ತಿಂಡಿ ತಿಂದು, ಮಧ್ಯಾಹ್ನ ಮುಂಬೈನಲ್ಲಿ ಊಟ ಮಾಡಿ, ರಾತ್ರಿ ದೆಹಲಿಯಲ್ಲಿ ಭೋಜನ ಮುಗಿಸಿ ಅಲ್ಲೇ ಮಲಗಬಹುದು.
ಶ್ರೀಮಂತರಾಗಿದ್ರೆ ಇದು ದೊಡ್ಡದೇನಲ್ಲ ಬಿಡಿ, ಕಾರಣ, ಅವರ ಬಳಿ ದುಡ್ಡಿರುತ್ತೆ, ವಿಮಾನದಲ್ಲಿ ಹೋಗ್ತಾರೆ, ಇಷ್ಟೆಲ್ಲ ಸುಖ ಅನುಭವಿಸ್ತಾರೆ. ಆದರೆ ಮಧ್ಯಮ ವರ್ಗದವರೋ, ಬಡವರೋ ಆಗಿದ್ದಲ್ಲಿ? ಮೋದಿ ಸರ್ಕಾರ ಈ ವರ್ಗಗಳಿಗೂ ಇಂಥ ಕನಸನ್ನು ನನಸು ಮಾಡಲು ಅಜೆಂಡಾ ಹಾಕಿದೆ. ಲೋಕಲ್ ರೇಟ್ನಲ್ಲಿ ಎಸ್ಟಿಡಿ ಕಾಲ್, ಜಿಲ್ಲಾ ಆಸ್ಪತ್ರೆಯಲ್ಲೊಂದು ಆರೋಗ್ಯ ಜ್ಞಾನ ಸಂಸ್ಥೆ, ಒಪ್ಪಂದದ ಆಧಾರದ ಕೆಲಸಕ್ಕಿಂತ ನಿಗದಿತ ಅವಧಿಯ ಕೆಲಸ... ಈ ರೀತಿಯ 17ಅಂಶಗಳ ಅಜೆಂಡಾ ಸಿದ್ಧವಾಗಿದೆ.
ಆಗಸ್ಟ್ ಅಂತ್ಯಕ್ಕೆ ಮೋದಿ ಸರ್ಕಾರಕ್ಕೆ 100 ದಿನ ತುಂಬುವ ವೇಳೆಗೆ ಈ ಕನಸಿಗೆ ರೆಕ್ಕೆ ಪುಕ್ಕ ಸಿಗಲಿವೆ.
ಬುಲೆಟ್ ಸಂಪರ್ಕ
ಇದು ಮೋದಿ ಸರ್ಕಾರದ ಅತ್ಯಂತ ದೊಡ್ಡ ಕನಸು. ಕಾಶ್ಮೀರದಿಂದ ಕನ್ಯಾಕುಮಾರಿಗೆ 24ಗಂಟೆಗಳಲ್ಲಿ ರಸ್ತೆ ಮತ್ತು ರೈಲು ಮೂಲಕ ಪ್ರಯಾಣಿಸಬೇಕು ಎಂಬುದು ಇದರ ಸಾರಾಂಶ.
ಇದಕ್ಕಾಗಿ ಕೋಸ್ಟಲ್ ಎಕ್ಸ್ಪ್ರೆಸ್ವೇಗಳನ್ನು ನಿರ್ಮಿಸಿ, ರಸ್ತೆ ಮತ್ತು ರೈಲು ಮಾರ್ಗಗಳಲ್ಲಿ ಮೇಲ್ದರ್ಜೆಗೇರಿಸುವುದು.
ಸಂಪರ್ಕ ಮತ್ತು ವಿದ್ಯುತ್ ಕ್ಷೇತ್ರದಲ್ಲಿ ಕ್ರಾಂತಿ ತರುವ ಸಲುವಾಗಿ ಈ ಎರಡು ಕ್ಷೇತ್ರಗಳನ್ನು ಮೋದಿ ಸರ್ಕಾರ 'ಸೇವಾ ಗುರಿ'ಗಳಾಗಿ ಪರಿಗಣಿಸಿದೆ. ಇದರ ಮೊದಲ ಹಂತವೇ ಸಾರಿಗೆ ಸುಧಾರಣೆ. ಪೂರ್ವ ಮತ್ತು ಪಶ್ಚಿಮ ಕರಾವಳಿಗಳ ಸಂಪರ್ಕಕ್ಕಾಗಿ ಕೋಸ್ಟಲ್ ಎಕ್ಸ್ಪ್ರೆಸ್ವೇಗಳ ನಿರ್ಮಾಣ ಮಾಡುವುದು. ಇದಕ್ಕೆ ಅಕ್ಷಾಂಶ ಮಾರ್ಗ ಎಕ್ಸ್ಪ್ರೆಸ್ ವೇಗಳು ಎಂದು ಹೆಸರಿಡುವುದು. ಅಂದರೆ 13 ಡಿಗ್ರಿ ಅಕ್ಷಾಂಶ, 15 ಡಿಗ್ರಿ ಅಕ್ಷಾಂಶ ಮತ್ತು 17 ಡಿಗ್ರಿ ಅಕ್ಷಾಂಶಗಳಲ್ಲಿ ಮಾರ್ಗ ನಿರ್ಮಿಸುವುದು.
ಇನ್ನೊಂದು ಯೋಜನೆಯಲ್ಲಿ ಮಧ್ಯ ಪ್ರದೇಶದಿಂದ ಆಂಧ್ರ ಪ್ರದೇಶಕ್ಕೆ ಹೆದ್ದಾರಿ ಮತ್ತು ರೈಲ್ವೆಗಳ ಮೂಲಕ ಸಂಪರ್ಕ ಸಾಧಿಸುವುದು. ಇದಕ್ಕೆ ಕನ್ಹಾ - ಕೃಷ್ಣ ಕಾರಿಡಾರ್ ಎಂಬ ಹೆಸರಿಡುವುದು. ಜೊತೆ ಜೊತೆಯಲ್ಲೇ ತೈಲ ಮತ್ತು ಗ್ಯಾಸ್ ಪೈಪ್ಲೈನ್ಗಳನ್ನೂ ನಿರ್ಮಾಣ ಮಾಡುವ ಗುರಿ ಇಟ್ಟುಕೊಳ್ಳಲಾಗಿದೆ.
ಸಾರಿಗೆ ಸುಧಾರಣೆಯ ಹಂತದಲ್ಲೇ ನಗರ ಸಾರಿಗೆಯನ್ನೂ ಸೇರಿಸಿಕೊಳ್ಳಲಾಗಿದೆ. ಇದರಲ್ಲಿ ನಗರ ಮತ್ತು ಪಟ್ಟಣ ಪ್ರದೇಶಗಳ ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಕೇವಲ ಒಂದು ಗಂಟೆಯಲ್ಲಿ ತಲುಪುವ ಉದ್ದೇಶ ಇಟ್ಟುಕೊಳ್ಳಲಾಗಿದೆ. ಅದೂ ಅತ್ಯಂತ ಕಡಿಮೆ ಬೆಲೆಯಲ್ಲಿ.
ಅಜೆಂಡಾದಲ್ಲಿ ಏನೇನಿದೆ?
ಲೋಕಲ್ ರೇಟ್ನಲ್ಲೇ ಎಸ್ಟಿಡಿ ಕಾಲ್
ಅವಿರತ ವಿದ್ಯುತ್ಗಾಗಿ ಸಣ್ಣ ನಗರ, ಪಟ್ಟಣಗಳಲ್ಲಿ ಖಾಸಗಿ ವ್ಯಾಪಾರಿಗಳು ಅಥವಾ ಸಹಕಾರ ಸಂಸ್ಥೆಗಳ ಮೂಲಕ ಮಿನಿ ಗ್ರಿಡ್ಗಳ ನಿರ್ಮಾಣ
ಇದರ ಜೊತೆಯಲ್ಲೇ ಗ್ರಾಮಗಳ ವ್ಯಾಪ್ತಿಯಲ್ಲೂ ಗ್ರಾಮ ಗ್ರಿಡ್
ನಾಗ್ಪುರದಲ್ಲಿ ಲಾಜಿಸ್ಟಿಕ್ ಡಿಸ್ಟ್ರಿಬ್ಯೂಷನ್ ಹಬ್ ಮತ್ತುಎಲೆಕ್ಟ್ರಿಸಿಟಿ ಹಬ್ಗಳ ನಿರ್ಮಾಣ
ಒಪ್ಪಂದದ ಆಧಾರದ ಕೆಲಸ ತೆಗೆದು, ನಿಶ್ಚಿತ ಅವಧಿಯ ಉದ್ಯೋಗ
ಸಣ್ಣ ಇಂಡಸ್ಟ್ರಿಗಳಿಗೆ ಕಂಪನಿಗಳ ಕಾಯ್ದೆ ಅನ್ವಯವಾಗದಂತೆ ನೋಡಿಕೊಳ್ಳುವುದು.
ಕಪ್ಪುಹಣ ನಿಯಂತ್ರಣಕ್ಕಾಗಿ ಪಾನ್ ಮತ್ತು ಆಧಾರ್ ಸಂಖ್ಯೆ ಬಳಕೆ
ಈ ಮೂಲಕ ಹಣಕಾಸು ಮತ್ತು ಚರಾಸ್ತಿಗಳ ವ್ಯವಹಾರದಲ್ಲಿ ಇವುಗಳ ಬಳಕೆ
ಸರ್ಕಾರದಲ್ಲಿ ಇ - ಟೆಂಡರಿಂಗ್ ವ್ಯವಸ್ಥೆ ಅನುಷ್ಠಾನ
ಚುನಾಯಿತ ಪ್ರತಿನಿಧಿಗಳು ಮತ್ತು ಸರ್ಕಾರಿ ನಾಗರಿಕ ಸೇವಾ ಅಧಿಕಾರಿಗಳ ಕಡ್ಡಾಯ ಆಸ್ತಿ ಘೋಷಣೆ
ಮಹಿಳೆಯರ ಆರೋಗ್ಯ ಸುಧಾರಣೆಗಾಗಿ ಇರುವ ಆಶಾ ಕಾರ್ಯಕರ್ತೆಯರಂತೆ ಪುರುಷರಿಗಾಗಿ ಅಶೋಕ ಕಾರ್ಯಕರ್ತರ ನೇಮಕ
ಪ್ರತಿ ಜಿಲ್ಲಾಸ್ಪತ್ರೆಯಲ್ಲೂ ಆರೋಗ್ಯ ಜ್ಞಾನ ಕೇಂದ್ರ, ಇದಕ್ಕಾಗಿ ಮೂರು ವರ್ಷಗಳ ಬಿಎಸ್ಸಿ ಕೋರ್ಸ್ ಪರಿಚಯ.
ಇದರ ಜೊತೆಗೆ ಜನ ಸೇವಾ ವಿತರಣಾ ಗ್ಯಾರಂಟಿ ನೀಡುವಿಕೆ ಕೂಡ ಅಜೆಂಡಾದಲ್ಲಿ ಸೇರಿದೆ.
17 ಅಂಶಗಳ ಅಜೆಂಡಾ
ಆಗಸ್ಟ್ ಅಂತ್ಯಕ್ಕೆ ಮೋದಿ ಸರ್ಕಾರಕ್ಕೆ 100 ದಿನ ತುಂಬಲಿದೆ. ಈ ಸಂದರ್ಭದಲ್ಲಿ ಪ್ರಧಾನಿ 17 ಅಂಶಗಳ ಅಜೆಂಡಾವನ್ನು ಇಡಲಿದ್ದಾರೆ. ಇವುಗಳನ್ನು ಈಗಾಗಲೇ ಪಟ್ಟಿ ಮಾಡಿ ಆಯಾ ಸಚಿವಾಲಯಗಳಿಗೆ ಜು. 10 ರಂದು ಕಳುಹಿಸಲಾಗಿತ್ತು. ಅಲ್ಲದೆ ಇದಕ್ಕೆ 10 ದಿನಗಳ ಗಡುವು ನೀಡಿ ಜು. 20 ರಂದು ಅಭಿಪ್ರಾಯ ಪಡೆಯಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


