ಅತ್ಯಾಚಾರಿಗಳ ಮಾನಭಂಗ

ಬೆಂಗಳೂರು: ಗೂಂಡಾ ಕಾಯಿದೆ ತಿದ್ದುಪಡಿ ವಿಧೇಯಕವನ್ನು ವಿಧಾನಸಭೆಯ ಇದೇ ಅಧಿವೇಶನದಲ್ಲಿ ಮಂಡಿಸಲು ನಿರ್ಧರಿಸಿರುವ ರಾಜ್ಯ ಸರ್ಕಾರ, ಅತ್ಯಾಚಾರ ಆರೋಪಿಗಳ 'ಸಾರ್ವಜನಿಕ ಮಾನಭಂಗ'ಕ್ಕೆ ಕ್ರಮ ತೆಗೆದುಕೊಳ್ಳಲು ನಿರ್ಧರಿಸಿದೆ.
ಈ ಸಂಬಂಧ ಗೃಹ ಸಚಿವ ಕೆ.ಜೆ.ಜಾರ್ಜ್, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಟಿ.ಬಿ.ಜಯಚಂದ್ರ, ಕಾನೂನು ಹಾಗೂ ಗೃಹ ಇಲಾಖೆ ಅಧಿಕಾರಿಗಳು ವ್ಯಾಪಕ ಚರ್ಚೆ ನಡೆಸಿದ್ದಾರೆ. ಭಾರತೀಯ ದಂಡ ಸಂಹಿತೆ ಅಧ್ಯಾಯ 16ರಲ್ಲಿ ವಿವರಿಸಿರುವ ಅಪರಾಧ ವಿಧಗಳ ಯಾದಿಯಲ್ಲಿ ಬಳಕೆಯಾದ ಶಬ್ದಗಳ ರಕ್ಷಣೆ ಪಡೆಯಲು ಸರ್ಕಾರ ನಿರ್ಧರಿಸಿದೆ. ಮಾತ್ರವಲ್ಲ 'ಕರ್ನಾಟಕ ಡೇಂಜರಸ್ ಆಕ್ಟಿವಿಟೀಸ್ ಪ್ರಿವೆನ್ಷನ್ ಆಕ್ಟ್' ಅಡಿಯಲ್ಲಿ ಬರುವ ಅಪರಾಧಗಳ ಪಟ್ಟಿಗೆ 'ಅತ್ಯಾಚಾರ' ಮತ್ತು 'ಅತ್ಯಾಚಾರಿ' ಎಂಬ ಶಬ್ದವನ್ನು ಸೇರಿಸಲು ನಿರ್ಧರಿಸಲಾಗಿದೆ.
ಜತೆಗೆ ಅತ್ಯಾಚಾರಿಗಳ ಬಗ್ಗೆ (ಹಾಬಿಚ್ಯುವಲ್ ಅಫೆಂಡರ್ - ಪದೇ ಪದೇ ಇಂಥ ಕೃತ್ಯದಲ್ಲಿ ಭಾಗಿಯಾಗುವವರಿಗೆ)ಸಾರ್ವಜನಿಕ ಪ್ರಚಾರ ನಡೆಸಲು ನಿರ್ಧರಿಸಿದೆ. ಅಂದರೆ ಕಳ್ಳತನ, ದರೋಡೆ, ರೌಡಿಸಂ, ಗೂಂಡಾ ಕೃತ್ಯ, ಕಳ್ಳಭಟ್ಟಿ ಇತ್ಯಾದಿ ದಂಧೆಗಳಲ್ಲಿ ಭಾಗಿಯಾಗಿ ಸಮಾಜದ ಸ್ವಾಸ್ಥ್ಯ ಕೆಡಿಸುವವರ ಹೆಸರು ಮತ್ತು ಭಾವಚಿತ್ರವನ್ನು ಪೊಲೀಸ್ ಠಾಣೆಯ ಎಂಒಬಿ ಬೋರ್ಡ್, ಸಾರ್ವಜನಿಕ ಸ್ಥಳಗಳಲ್ಲಿ ಹಾಕುವ ರೀತಿ ಅತ್ಯಾಚಾರಿಗಳ ಹೆಸರು ಮತ್ತು ಭಾವಚಿತ್ರವನ್ನೂ ಪ್ರಕಟಿಸಲು ನಿರ್ಧರಿಸಿದೆ.
ಈ ಮೂಲಕ ಅತ್ಯಾಚಾರ ಪ್ರಕರಣದಲ್ಲಿ ಭಾಗಿಯಾಗುವವರತ್ತ ಸಮಾಜ ತಿರಸ್ಕಾರ ದೃಷ್ಟಿ ಬೀರಬೇಕು, ಸಾರ್ವಜನಿಕವಾಗಿ ಮರ್ಯಾದೆ ಕಳೆಯಬೇಕು ಎಂಬುದು ಸರ್ಕಾರದ ಉದ್ದೇಶ. ಅಸಹಾಯಕರ ಮಾನಭಂಗ ಮಾಡಿ ವಿಕೃತ ಆನಂದ ಪಡೆದು ಸಿಕ್ಕಿಬಿದ್ದವರನ್ನು ಪ್ರತಿ ಹಂತದಲ್ಲಿ ಮಾನಭಂಗ ಮಾಡುವ ಕಠಿಣ ನೀತಿಯನ್ನು ಜಾರಿಗೆ ತರಲು ನಿರ್ಧರಿಸಿದೆ.
ನಿಲ್ಲದ ಅತ್ಯಾಚಾರ ಸರಣಿ
ಬೆಂಗಳೂರು: ರಾಜ್ಯದಲ್ಲಿ ಅತ್ಯಾಚಾರ ಸರಣಿ ನಿಲ್ಲುವಂತೆ ಕಾಣುತ್ತಿಲ್ಲ. ಬುಧವಾರ ಮತ್ತೆ ಮೂವರ ಮೇಲೆ ಅತ್ಯಾಚಾರ ಹಾಗೂ ಒಬ್ಬರ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಘಟನೆ ಬೆಳಕಿಗೆ ಬಂದಿದೆ.
ಕೊಪ್ಪಳ ಸಮೀಪದ ಭಾಗ್ಯನಗರದಲ್ಲಿ 17 ವರ್ಷದ ಮಲ ಮಗಳಿಗೆ ತಂದೆ ಸತತವಾಗಿ ದೈಹಿಕ, ಮಾನಸಿಕ ಚಿತ್ರಹಿಂಸೆ ನೀಡಿ, ಅತ್ಯಾಚಾರವೆಸಗಿದ ಘಟನೆ ಈಗ ಬಹಿರಂಗವಾಗಿದೆ. ಆರೋಪಿ ರಾಜೇಶ್ ಪೂಜಾರನನ್ನು ಪೊಲೀಸರು ಬಂಧಿಸಿದ್ದಾರೆ. ಒಂದೂವರೆ ತಿಂಗಳ ಹಿಂದಷ್ಟೇ ಈತ ಮಲಮಗಳ ಮೇಲೆ ಬಲಾತ್ಕಾರಕ್ಕೆ ಯತ್ನಿಸಿ ಬಂಧಿತನಾಗಿದ್ದ ರಾಜೇಶ್, 15 ದಿನಗಳ ಹಿಂದಷ್ಟೇ ಜೈಲಿನಿಂದ ಹೊರಬಂದಿದ್ದ. ಈಗ ಮತ್ತೆ ಹೀನ ಕೃತ್ಯ ಎಸಗಿದ್ದಾನೆ. ಇದರಿಂದ ನೊಂದ ಯುವತಿ ಮನೆ ಬಿಟ್ಟು ಹೋಗಲು ನಿರ್ಧರಿಸಿ ಧೈರ್ಯ ಸಾಲದೆ ಅರ್ಧ ದಾರಿಯಲ್ಲಿ ನಿಂತು ಅಳುತ್ತಿದ್ದಳು.
ವಿಬ್ಗ್ಯೊರ್ ಶಾಲೆ ಅಧ್ಯಕ್ಷನ ಬಂಧನ
ಬೆಂಗಳೂರು: ತೂಬರಹಳ್ಳಿ ವಿಬ್ಗ್ಯೊರ್ ಅಂತಾರಾಷ್ಟ್ರೀಯ ಶಾಲೆಯ ಒಂದನೇ ತರಗತಿ ವಿದ್ಯಾರ್ಥಿನಿ ಮೇಲೆ ನಡೆದ ಅತ್ಯಾಚಾರ ಪ್ರಕರಣ ಸಂಬಂಧ ಶಾಲೆಯ ಅಧ್ಯಕ್ಷ ರುಸ್ತುಂ ಕೇರವಾಲನನ್ನು ಗೋವಾ ಸಮೀಪದ ದಮನ್ ಮತ್ತು ದಿಯು ದ್ವೀಪದಲ್ಲಿ ಬಂಧಿಸಲಾಗಿದೆ. ದೇಶದ ವಿವಿಧ ನಗರಗಳಲ್ಲಿ ವಿಬ್ಗ್ಯೊರ್ ಹೆಸರಿನಲ್ಲಿ 20 ಶಾಲೆಗಳನ್ನು ನಡೆಸುತ್ತಿರುವ ರುಸ್ತುಂ, ತೂಬರಹಳ್ಳಿ ಶಾಲೆಯಲ್ಲಿ ನಡೆದ ಅತ್ಯಾಚಾರ ಪ್ರಕರಣದ ಬಗ್ಗೆ ದೂರು ದಾಖಲಾದ ಬಳಿಕ ತಲೆಮರೆಸಿಕೊಂಡಿದ್ದ. ಮಂಗಳವಾರ ರಾತ್ರಿ ಆತನನ್ನು ಬಂಧಿಸಲಾಗಿದೆ ಎಂದು ಪತ್ರಿಕಾಗೋಷ್ಠಿಯಲ್ಲಿ ನಗರ ಪೊಲೀಸ್ ಆಯುಕ್ತ ಎಂ.ಎನ್.ರೆಡ್ಡಿ ತಿಳಿಸಿದರು.
ಎಟಿಎಂ ಕೇಂದ್ರಗಳು, ಬಸ್ಸ್ಟ್ಯಾಂಡ್, ಮಾಲ್ಗಳು ಇನ್ನಿತರ ಜನನಿಬಿಡ ಪ್ರದೇಶಗಳಲ್ಲಿ ಈಗಾಗಲೇ ಪಿಕ್ ಪಾಕೇಟ್ ಮಾಡುವವರು, ದರೋಡೆಕೋರರು, ಶಂಕಿತ ಭಯೋತ್ಪಾದಕರ ಭಾವಚಿತ್ರವನ್ನು ಸರ್ಕಾರ ಈಗಾಗಲೇ ಹಾಕುತ್ತಿದೆ. ಇನ್ನು ಮುಂದೆ ಆ ಜಾಗದಲ್ಲಿ ಅತ್ಯಾಚಾರಿಗಳೂ ಇರುತ್ತಾರೆ. ಐಪಿಸಿಯ ಅಧ್ಯಾಯ 16ರಲ್ಲಿ ಪದೇ ಪದೇ ಅಪರಾಧದಲ್ಲಿ ಭಾಗಿಯಾಗುವವರು,ಪ್ರಯತ್ನ ನಡೆಸುವವರು ಹಾಗೂ ಪ್ರೇರಣೆ ನೀಡುವವರು ಎಂಬ ಪ್ರಯೋಗ ಇದೆ. ಇದನ್ನು ಅತ್ಯಂತ ಜಾಗರೂಕವಾಗಿ ಅಧ್ಯಯನ ನಡೆಸಿರುವ ರಾಜ್ಯ ಸರ್ಕಾರ, ಇದೇ ಅಧ್ಯಾಯದಲ್ಲಿ ವಿವರಿಸಿರುವ ದೈಹಿಕ ಅಪರಾಧ ( ಅಪೆನ್ಸ್ ಅಗೆನೆಸ್ಟ್ ಹ್ಯೂಮನ್ ಬಾಡಿ ) ಎಂಬ ಪದದ ಸಹಾಯ ಪಡೆದಿದೆ. ಆ ಅಧ್ಯಾಯದಲ್ಲಿ ಅತ್ಯಾಚಾರ ಎಂಬ ಪದವೂ ಇದೆ.
ಹೀಗಾಗಿ ಪದೇ ಪದೇ ಅತ್ಯಾಚಾರ ನಡೆಸುವವರು, ಪ್ರಯತ್ನ ಮಾಡುವವರು ಹಾಗೂ ಆ ಕೃತ್ಯಕ್ಕೆ ಪ್ರೇರಣೆ, ಸಹಕಾರ ನೀಡುವವರನ್ನು ಗೂಂಡಾ ಕಾಯ್ದೆ ವ್ಯಾಪ್ತಿಗೆ ಸೇರಿಸುವುದಕ್ಕೆ ಐಪಿಸಿಯಲ್ಲೇ ಅವಕಾಶವಿದೆ. ಈ ಮೂಲಕ ಗೂಂಡಾ ಕಾಯ್ದೆ ವ್ಯಾಪ್ತಿಯಲ್ಲಿ ಅತ್ಯಾಚಾರ ಪ್ರಕರಣಗಳನ್ನು ತರುವುದಕ್ಕೆ ರಾಜ್ಯ ಸರ್ಕಾರ ನಿರ್ಧರಿಸಿದೆ.
ಬಂಧನಕ್ಕೂ ಅವಕಾಶ
ಸಾರ್ವಜನಿಕ ಪ್ರಚಾರ ಮಾತ್ರವಲ್ಲ ಅತ್ಯಾಚಾರ ಆರೋಪಿಗಳನ್ನು ಪ್ರಿವೆಂಟಿವ್ ಕಸ್ಟಡಿ (ಅಪರಾಧ ತಡೆಯುವುದಕ್ಕಾಗಿ ಕೃತ್ಯಕ್ಕೆ ಮುನ್ನ ಬಂಧಿಸುವುದು ) ತೆಗೆದುಕೊಳ್ಳುವುದಕ್ಕೆ ಪೊಲೀಸರಿಗೆ ಅವಕಾಶ ನೀಡುವುದಕ್ಕೆ ಚಿಂತನೆ ನಡೆಸಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಈ ಅಧಿವೇಶನದಲ್ಲೇ ಗೃಹ ಸಚಿವ ಜಾರ್ಜ್ ಈ ವಿಧೇಯಕವನ್ನು ಮಂಡಿಸಲಿದ್ದಾರೆ.
ಎಲ್ಲವೂ, ಎಲ್ಲರೂ ಅಲ್ಲ
ಅತ್ಯಾಚಾರ ಎಂದರೆ 376 ಮತ್ತು ನಿರ್ಭಯಾ ಪ್ರಕರಣದ ನಂತರ ಕೇಂದ್ರ ಸರ್ಕಾರ ಜಾರಿಗೆ ತಂದಿರುವ 376 ಎ ತಿದ್ದುಪಡಿಯಲ್ಲಿ ಬರುವಂಥದ್ದು ಮಾತ್ರವಾಗಿರುತ್ತದೆ. ಸಮ್ಮತಿಯ ಸಹಜೀವನ, ವೈಷಮ್ಯಕ್ಕೆ ತಿರುಗಿದ ಪ್ರೇಮ ಪ್ರಕರಣ, ದ್ವೇಷಕ್ಕೆ ನೀಡುವ ಅತ್ಯಾಚಾರದ ದೂರುಗಳು ಈ ವ್ಯಾಪ್ತಿಯಲ್ಲಿ ಬರುವುದಿಲ್ಲ.
ರಾಘವೇಂದ್ರ ಭಟ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


