ಪ್ರಧಾನ ಸುದ್ದಿ

ಕಾರ್ಖಾನೆಗಳಿಂದ ಲೆವಿ ಸಕ್ಕರೆ ಸಂಗ್ರಹ, ಕೃಪಾಂಕ ನೌಕರರ ವೇತನ ಪರಿಷ್ಕರಣೆ

Published On :

-ಗೆಜೆಟೆಡ್ ಪ್ರೊಬೇಷನರಿ ಅಧಿಕಾರಿಗಳ ನೇಮಕ ವಿವಾದ: ಅಂತಿಮ ತೀರ್ಮಾನ ಇಲ್ಲ

ಕ.ಪ್ರಭ ವಾರ್ತೆ  |ಬೆಂಗಳೂರು | ಜು. 23

ಕೆಪಿಎಸ್‌ಸಿ ಮೂಲಕ 2010-11ನೇ ಸಾಲಿನಲ್ಲಿ ನಡೆದ ಗೆಜೆಟೆಡ್ ಪ್ರೊಬೇಷನರಿ ಅಧಿಕಾರಿಗಳ ನೇಮಕ ವಿವಾದದ ಬಗ್ಗೆ ಅಂತಿಮ ತೀರ್ಮಾನ ತೆಗೆದುಕೊಳ್ಳುವುದಕ್ಕೆ ಬುಧವಾರ ನಡೆದ ಸಚಿವ ಸಂಪುಟ ಸಭೆ ವಿಫಲವಾಗಿದ್ದು, ಸಹಕಾರಿ ಸಕ್ಕರೆ ಕಾರ್ಖಾನೆಗಳಿಂದ ಲೆವಿ ಸಕ್ಕರೆ ಸಂಗ್ರಹ ಸೇರಿದಂತೆ 24ಕ್ಕೂ ಹೆಚ್ಚು ಆಡಳಿತಾತ್ಮಕ ವಿಚಾರಗಳಿಗೆ ಸಂಪುಟ ಒಪ್ಪಿಗೆ ನೀಡಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಕೆಪಿಎಸ್‌ಸಿ ನೇಮಕ ವಿಚಾರ ಪ್ರಸ್ತಾಪವಾಯಿತಾದರೂ ಮುಂದಿನ ಸಭೆಯಲ್ಲಿ ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳಲು ನಿರ್ಣಯಿಸಲಾಯಿತು.
ಸಭೆ ಆರಂಭವಾಗುತ್ತಿದ್ದಂತೆ ಈ ಬಗ್ಗೆ ಪ್ರಸ್ತಾಪವಾಯಿತು. ಕೆಲವರು ಪರವಾಗಿ, ಕೆಲವರು ವಿರೋಧವಾಗಿ ಮಾತನಾಡಿದರು. ಯಾರೋ ಮಾಡಿದ ತಪ್ಪಿಗೆ ಪ್ರತಿಭಾವಂತರಿಗೆ ಅನ್ಯಾಯವಾಗಬಾರದು ಎಂಬ ಅಭಿಪ್ರಾಯ ವ್ಯಕ್ತವಾಯಿತು. ಹೀಗಾಗಿ ಒಟ್ಟಾಭಿಪ್ರಾಯ ರೂಪುಗೊಳ್ಳದ ಕಾರಣ ಮುಂದಿನ ಸಂಪುಟ ಸಭೆಯಲ್ಲಿ ಈ ಬಗ್ಗೆ ಅಂತಿಮ ನಿರ್ಧಾರ ತೆಗೆದುಕೊಳ್ಳಲು ತೀರ್ಮಾನಿಸಲಾಯಿತು.

ಸಭೆಯ ಪ್ರಮುಖ ನಿರ್ಣಯಗಳು...
- ಗ್ರಾಮೀಣ ಕೃಪಾಂಕ ಯೋಜನೆ ಅನ್ವಯ ರಾಜ್ಯ ಸರ್ಕಾರಿ ಸೇವೆಗೆ ನೇಮಕಗೊಂಡ ನೌಕರರ ವೇತನ ಮತ್ತು ಸೇವಾ ಜ್ಯೇಷ್ಠತೆ ಪರಿಷ್ಕರಣೆ. ಇದಕ್ಕಾಗಿ ರಾಜ್ಯ ನಾಗರಿಕ ಸೇವಾ ನಿಯಮ ತಿದ್ದುಪಡಿಗೆ ಕ್ರಮ.
-  ಜಿಲ್ಲಾ ಪಂಚಾಯಿತಿ ಸಿಇಒಗಳಿಗೆ ಹೆಚ್ಚಿನ ಅಧಿಕಾರ. ಅಕ್ರಮ ಹಾಗೂ ಲೋಪ ಎಸಗುವ ಸಿ ಮತ್ತು ಡಿ ಗ್ರೂಪ್ ನೌಕರರ ವಿರುದ್ಧ ಕ್ರಮ ತೆಗೆದುಕೊಳ್ಳುವುದಕ್ಕೆ ಸಿಇಒಗಳಿಗೆ ಅಧಿಕಾರ.
-  ಅಫ್ಜಲ್‌ಪುರ, ಚಿಂಚೋಳಿ, ಜೇವರ್ಗಿ, ಪಾಂಡವಪುರ, ಹುನಗುಂದ ಹಾಗೂ ಅಂಕೋಲಾ ಪಟ್ಟಣ ಪಂಚಾಯಿತಿ ಪುರಸಭೆಯಾಗಿ ಮೇಲ್ದರ್ಜೆಗೆ ಏರಿಕೆ. ಚಳ್ಳಕೆರೆ, ಅರಸೀಕೆರೆ, ಶಹಾಪುರ, ಸುರಪುರ ಪುರಸಭೆಯನ್ನು ನಗರಸಭೆಯಾಗಿ ಮೇಲ್ದರ್ಜೆಗೆ ಏರಿಕೆ.
-  ಕೂಡಗಿ ಉಷ್ಣ ವಿದ್ಯುತ್ ಸ್ಥಾವರಕ್ಕೆ 6.5 ಎಕರೆ ಜಾಗ ನೀಡುವುದಕ್ಕೆ ಒಪ್ಪಿಗೆ.
-  ಸಹಕಾರಿ ಸಕ್ಕರೆ ಕಾರ್ಖಾನೆಗಳಿಂದ ಲೆವಿ ಸಕ್ಕರೆ ಸಂಗ್ರಹಣೆಗೆ ನಿರ್ಧಾರ. ಈ ರೀತಿ ಸಂಗ್ರಹಿಸಿದ ಸಕ್ಕರೆಯನ್ನು ಪಡಿತರ ವಿತರಣೆ ವ್ಯವಸ್ಥೆ ಮೂಲಕ ಸಾರ್ವಜನಿಕರಿಗೆ ಹಂಚಿಕೆ.
-  ಬೆಳಗಾವಿ ಸುವರ್ಣಸೌಧ ಹಾನಿಗೊಂಡಿರುವ ವರದಿ ಹಿನ್ನೆಲೆಯಲ್ಲಿ ಈ ಕಟ್ಟಡ ನಿರ್ಮಾಣದ ಮೂಲ ಯೋಜನೆ ಬದಲಾವಣೆ, ಮೂರು ಹಂತದಲ್ಲಿ ನಡೆದ ಕಾಮಗಾರಿ ಮತ್ತು ಅವ್ಯವಹಾರದ ಬಗ್ಗೆ ತನಿಖೆ ನಡೆಸಲು ನಿರ್ಧಾರ. ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ನೇತೃತ್ವದಲ್ಲಿ ತನಿಖೆ.
-  ಯಲಹಂಕ ಬಳಿ ಗ್ಯಾಸ್ ಪ್ಲಾಂಟ್ ನಿರ್ಮಾಣಕ್ಕೆ ಒಪ್ಪಿಗೆ.
-  ಕೈಗಾರಿಕಾ ಉದ್ದೇಶಕ್ಕೆ ಭೂಮಿ ಭೋಗ್ಯಕ್ಕೆ ನೀಡುವ ಪದ್ಧತಿಯಲ್ಲಿ ಪರಿಷ್ಕರಣೆ.  ಕೈಗಾರಿಕೆಗಳಿಗೆ ಸೇಲ್ ಆ್ಯಂಡ್ ಲೀಸ್ ಆಧಾರದ ಮೇಲೆ ನೀಡಲಾಗುತ್ತಿದ್ದ ಭೂಮಿ ಇನ್ನು ಮುಂದೆ ಲೀಸ್ ರೂಪದಲ್ಲಿ ಮಾತ್ರ ಕೊಡಲು ನಿರ್ಧಾರ. ಲೀಸ್ ನೀಡುವಾಗ 30 ವರ್ಷ ಎಂದಿದ್ದ ನಿಯಮ 99 ವರ್ಷಕ್ಕೆ ಹೆಚ್ಚಳಕ್ಕೆ ನಿರ್ಧಾರ

ಜಾರ್ಜ್ ರಾಜಿನಾಮೆ ಊಹಾಪೋಹ

ಸಣ್ಣಪುಟ್ಟ ವಿಚಾರಗಳಿಗಾಗಿ ಗೃಹ ಸಚಿವ ಕೆ.ಜೆ.ಜಾರ್ಜ್ ರಾಜಿನಾಮೆ ನೀಡಬೇಕಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಸಂಪುಟ ಸಭೆ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಅವರು, ಹೈಕಮಾಂಡ್ ಜಾರ್ಜ್ ರಾಜಿನಾಮೆ ಕೇಳಿದೆ ಎಂಬುದು ಕೇವಲ ಊಹಾಪೋಹ. ಅಂಥ ಯಾವುದೇ ಬೆಳವಣಿಗೆ ನಡೆದಿಲ್ಲ. ಯಾವುದೇ ಕಾರಣಕ್ಕೂ ಅವರನ್ನು ಬದಲಾಯಿಸುವುದಿಲ್ಲ ಎಂದರು.
ಬಿಜೆಪಿಯವರು ರಾಜೀನಾಮೆ ಕೇಳಿದ ಮಾತ್ರಕ್ಕೆ ಜಾರ್ಜ್ ರಾಜಿನಾಮೆ ನೀಡಬೇಕಿಲ್ಲ. ಅವರು ಅಧಿಕಾರದಲ್ಲಿದ್ದಾಗ ನಾವು ಹಲವರ ರಾಜಿನಾಮೆಗೆ ಆಗ್ರಹಿಸಿದ್ದೆವು. ಸರ್ಕಾರ ಅತ್ಯಾಚಾರಿಗಳ ವಿರುದ್ಧ ಕಠಿಣ ಕಾನೂನು ಕ್ರಮ ತೆಗೆದುಕೊಂಡಿದೆ ಎಂದು ಹೇಳಿದರು. ಅದೇ ರೀತಿ ಧಾರವಾಡ ಬಳಿ ಕಾರ್ಯಾರಂಭ ಮಾಡಲು ಉದ್ದೇಶಿಸಿದ್ದ ಹೋಂಡಾ ಸಂಸ್ಥೆ ಆಂಧ್ರಪ್ರದೇಶಕ್ಕೆ ಸ್ಥಳಾಂತರಗೊಳ್ಳುವುದಿಲ್ಲ. ಆ ಯೋಜನೆಯನ್ನು ರಾಜ್ಯ ಸರ್ಕಾರ ಉಳಿಸಿಕೊಳ್ಳಲಿದೆ. ತೆರಿಗೆ ವಿನಾಯಿತಿ ಬಗ್ಗೆ ಚರ್ಚೆ ನಡೆಸುತ್ತೇವೆ ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.