ಹಗಲು ದರೋಡೆಗೆ ಲೋಕೋಪಯೋಗಿ ಇಲಾಖೆ ಕುಮ್ಮಕ್ಕು
ವಿಧಾನಸಭೆ: ರಾಜ್ಯದಲ್ಲಿ ಮರಳು ಗಣಿಗಾರಿಕೆಯಿಂದ ಅಂತರ್ಜಲ ಕುಸಿಯುತ್ತಿದ್ದು, ಅದಿರು ಗಣಿಗಾರಿಕೆಗಿಂತ ಮರಳು ಗಣಿಗಾರಿಕೆ ದೊಡ್ಡ ದಂಧೆಯಾಗಿದೆ. ಫಿಲ್ಟರ್ ಮರಳು ಅಡ್ಡೆಗಳ ಮೇಲೆ ಕ್ರಮ ಕೈಗೊಳ್ಳದೆ ಹಗಲು ದರೋಡೆಗೆ ಲೋಕೋಪಯೋಗಿ ಇಲಾಖೆಯೇ ಕುಮ್ಮಕ್ಕು ನೀಡುತ್ತಿದೆ ಎಂದು ಪ್ರತಿಪಕ್ಷ ನಾಯಕ ಜಗದೀಶ್ ಶೆಟ್ಟರ್ ಆರೋಪಿಸಿದರು. ಹೊಸ ಮರಳು ನೀತಿ ಜಾರಿಗೆ ತಂದಿದ್ದೇವೆ ಎಂದಿದ್ದೀರಿ. ಆದರೆ ಅಕ್ರಮ ಮರಳು ಗಣಿಗಾರಿಕೆ ಇನ್ನೂ ನಡೆಯುತ್ತಲೇ ಇದೆ. ನೀತಿ ಕಾಗದದಲ್ಲಿ ಮಾತ್ರ ಇದೆ. ಅನುಷ್ಠಾನವಾಗಿಲ್ಲ. ಸಚಿವರ ಮಗನ ಮೇಲೂ ಮರಳುದಂಧೆಯ ಆರೋಪ ಕೇಳಿ ಬಂದಿದೆ. ಅದಕ್ಕೆ ಈ ಮರಳು ದಂಧೆ ಮೇಲೆ ಸೂಕ್ತ ತನಿಖೆ ಆಗಬೇಕು ಎಂದು ಆಗ್ರಹಿಸಿದರು.
ಹಾವೇರಿಯಲ್ಲಿ ನಡೆಯುತ್ತಿರುವ ಅಕ್ರಮ ಮರಳು ಗಣಿಗಾರಿಕೆಯನ್ನು ನಿಮ್ಮ ಗಮನಕ್ಕೆ ತಂದೆ. ಇನ್ನೂ ಅದನ್ನು ನಿಲ್ಲಿಸಿಲ್ಲ. ಆನೇಕಲ್ನ ಜಿಗಣಿ ಹಾಗೂ ಕಸಬಾ ಹೋಬಳಿಯಲ್ಲಿ ನಿತ್ಯ ಫಿಲ್ಟರ್ ಮರಳು ದಂಧೆ ನಡೆಯುತ್ತಿದೆ. ಅಕ್ರಮ ವಿದ್ಯುತ್ ಸಂಪರ್ಕ, ಬೋರ್ವೆಲ್ ಎಲ್ಲವೂ ಇದೆ. ಈ ದಾಖಲೆಗಳೆಲ್ಲವನ್ನೂ ನೀಡಿದ್ದೇನೆ. ಆದರೂ ಕ್ರಮ ಆಗಿಲ್ಲ. ಹೇಳಿದಾಗ, ಒಂದು ದಿನ ಅಲ್ಲಿ ಹೋಗಿ ಪರಿಶೀಲಿಸುತ್ತಾರೆ. ನಂತರ ಲೋಕೋಪಯೋಗಿ ಅಧಿಕಾರಿಗಳು ಹಾಗೂ ಪೊಲೀಸಿನವರು ಒಂದಾಗಿ ಸುಮ್ಮನಾಗುತ್ತಾರೆ. ಫಿಲ್ಟರ್ ಮರಳು ದಂಧೆ ಹಾಗೆಯೇ ನಡೆಯುತ್ತಲೇ ಇರುತ್ತದೆ. ಇದರಿಂದಲೇ ಕಟ್ಟಡ ಗುಣಮಟ್ಟ ಹಾಳಾಗುತ್ತಿದೆ ಎಂದು ಶೆಟ್ಟರ್ ದಾಖಲೆ ಸಹಿತ ಮಾಹಿತಿ ನೀಡಿದರು. ಅಕ್ರಮ ಮರಳು ದಂಧೆ ಎಲ್ಲೆಲ್ಲಿಯೂ ನಡೆಯುತ್ತಿದೆ. ಅದೇನೋ ಕಮಿಟಿ ಅಂತಾ ಮಾಡಿದರೂ ಈ ದಂಧೆ ನಿಂತಿಲ್ಲ. ಬೆಂಗಳೂರು-ಮೈಸೂರು ರಸ್ತೆಯಲ್ಲಿ ಇನ್ಸ್ಪೆಕ್ಟರ್ ಒಬ್ಬ 8-10 ಲಕ್ಷ ಆದಾಯ ಹೊಂದಿರುತ್ತಾನೆ. ಎಲ್ಲರಿಗೂ ಇದು ಹಂಚಿಕೆ ಆಗುತ್ತದೆ ಎಂದು ಜೆಡಿಎಸ್ನ ಕುಮಾರಸ್ವಾಮಿ ದೂರಿದರು.
ನಾವು ಯಾವುದೇ ದಂಧೆಯಲ್ಲಿ ತೊಡಗಿಲ್ಲ. ನಮ್ಮ ಕುಟುಂಬದವರೂ ಮರಳು ದಂಧೆಯಲ್ಲಿ ಇಲ್ಲ. ಮರಳುದಂಧೆ ವಿರುದ್ಧ ಇರುವವರ ಮೇಲೆ ಇಂತಹ ಆರೋಪ ಮಾಡುವುದು ಸಹಜ. ಆದರೆ, ನಮಗೆ ಸ್ಪಷ್ಟ ಮನೋಭಾವ ಇದ್ದು, ಸಂಘಟಿತ ಗೂಂಡಾಗಳ ತಾಣವಾಗಿರುವ ಮರಳುದಂಧೆಯನ್ನು ಸದೆಬಡಿಯಬೇಕು ಎಂಬ ಉದ್ದೇಶ ಇದೆ. ಎಲ್ಲರಿಗೂ ಮರಳು ಸಿಗುವಂತೆ ಮಾಡುವ ಗುರಿ ಇದೆ. ಮರಳುದಂಧೆ ಮಾಡುವವರ ಮೇಲೆ ಗೂಂಡಾಕಾಯಿದೆ ಹಾಕುವ ಚಿಂತನೆಯೂ ಇದೆ.
- ಎಚ್.ಸಿ. ಮಹದೇವಪ್ಪ, ಲೋಕೋಪಯೋಗಿ ಸಚಿವ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

