ಪ್ರಧಾನ ಸುದ್ದಿ

ತೆಲಂಗಾಣಕ್ಕೆ ಕೃಷ್ಣಾ ನೀರು ಹಂಚಿಕೆ ಕರ್ನಾಟಕ ಸೇರಿ 4 ರಾಜ್ಯಗಳಿಗೆ ನ್ಯಾಯಾಧಿಕರಣ ನೋಟಿಸ್

ತೆಲಂಗಾಣಕ್ಕೆ ಕೃಷ್ಣಾ ನೀರು ಹಂಚಿಕೆ ಕರ್ನಾಟಕ ಸೇರಿ 4 ರಾಜ್ಯಗಳಿಗೆ ನ್ಯಾಯಾಧಿಕರಣ ನೋಟಿಸ್
Published On :

ಕನ್ನಡಪ್ರಭ ಪ್ರತಿನಿಧಿಯಿಂದ
ನವೆದಹಲಿ:
ನೂತನವಾಗಿ ರಚನೆಯಾಗಿರುವ ತೆಲಂಗಾಣ ರಾಜ್ಯಕ್ಕೆ ಕೃಷ್ಣಾ ನೀರು ಹಂಚಿಕೆ ಮಾಡುವುದಕ್ಕೆ ಅಭಿಪ್ರಾಯ ತಿಳಿಸುವಂತೆ ಭಾಗಿದಾರ ರಾಜ್ಯಗಳು ಹಾಗೂ ಕೇಂದ್ರ ಸರ್ಕಾರಕ್ಕೆ ಕೃಷ್ಣಾ ನ್ಯಾಯಾಧಿಕರಣ ನೋಟಿಸ್ ನೀಡಿದೆ.
ಆರು ವಾರಗಳಲ್ಲಿ ಕೇಂದ್ರ ಸರ್ಕಾರ, ಕರ್ನಾಟಕ, ಮಹಾರಾಷ್ಟ್ರ, ಆಂಧ್ರ ಮತ್ತು ತೆಲಂಗಾಣ ರಾಜ್ಯಗಳು ತಮ್ಮ ಅಭಿಪ್ರಾಯ ತಿಳಿಸಬೇಕಿದೆ.
ಈ ಅಭಿಪ್ರಾಯಗಳಿಗೆ ಪ್ರತಿಕ್ರಿಯೆ ನೀಡಲು ಮೂರು ವಾರಗಳ ಕಾಲಾವಕಾಶ ನೀಡಲಾಗಿದೆ. ಪ್ರತಿಕ್ರಿಯೆಗೆ ಮರು ಸ್ಪಷ್ಟನೆ ನೀಡಲು ಮತ್ತೆ ಎರಡು ವಾರಗಳ ಕಾಲಾವಕಾಶ ನೀಡಿರುವ ನ್ಯಾಯಾಧಿಕರಣ ಮುಂದಿನ ವಿಚಾರಣೆಯನ್ನು ಅ. 30ಕ್ಕೆ ನಿಗದಿ ಮಾಡಿದೆ.
ಆಂಧ್ರ ಇಬ್ಭಾಗ ಹಿನ್ನೆಲೆಯಲ್ಲಿ ತನಗೆ ಕೃಷ್ಣಾ ನದಿ ನೀರಿನಲ್ಲಿ ಪಾಲು ಬೇಕು ಎಂದು ತೆಲಂಗಾಣ ರಾಜ್ಯ ಕೋರಿತು. ವಿಭಜನಾಪೂರ್ವ ಆಂಧ್ರಪ್ರದೇಶ ಸರ್ಕಾರದಿಂದ ತೆಲಂಗಾಣ ಭಾಗಕ್ಕೆ ನೀರಿನ ಪಾಲು ಕೇಳಿಯೇ ಇಲ್ಲ. ಆದ್ದರಿಂದ ವಿಭಜಿತ ರಾಜ್ಯಗಳಿಗೆ ಯೋಜನೆಗಳನ್ನಾಧರಿಸಿ ವೈಜ್ಞಾನಿಕವಾಗಿ ನೀರು ಹಂಚಿಕೆ ಮಾಡುವಂತೆ ತೆಲಂಗಾಣ ಕೋರಿದೆ.
ಈ ಕೋರಿಕೆ ಹಿನ್ನೆಲೆಯಲ್ಲಿ ನ್ಯಾಯಾಧಿಕರಣದ ಅಧ್ಯಕ್ಷ ನ್ಯಾಯಮೂರ್ತಿ ಬ್ರಿಜೆಷ್ ಕುಮಾರ್ ಕರ್ನಾಟಕ, ಮಹಾರಾಷ್ಟ್ರ ಆಂಧ್ರ ರಾಜ್ಯಗಳಿಗೆ ಪ್ರತಿಕ್ರಿಯಿಸುವಂತೆ ನೋಟಿಸ್ ನೀಡಿದರು. ಸೀಮಾಂಧ್ರ ಮತ್ತು ತೆಲಂಗಾಣಗಳ ನಡುವೆ ವ್ಯಾಜ್ಯ ಇರುವುದರಿಂದ ಆ ಎರಡು ರಾಜ್ಯಗಳಿಗೆ ಮಾತ್ರ ಸದ್ಯಕ್ಕೆ ನೋಟಿಸ್ ನೀಡಿ, ನಾವು ಹಿಂದಿನ ಸೀಟಿನಲ್ಲಿ ಕುಳಿತವರು ನಂತರ ಪ್ರತಿಕ್ರಿಯಿಸುತ್ತೇವೆ ಎಂದು ಕರ್ನಾಟಕ ಪರ ವಕೀಲರಾದ ಫಾಲಿ ನಾರಿಮನ್ ಹೇಳಿದರು. ಆದರೂ ನಾಲ್ಕು ರಾಜ್ಯಗಳಿಗೆ ನೋಟಿಸ್ ನೀಡುವ ನಿಲುವಿಗೆ ನ್ಯಾಯಾಧಿಕರಣ ಅಂಟಿಕೊಂಡಿತು.
ಈ ಹಂತದಲ್ಲಿ ಫಾಲಿ ನಾರಿಮನ್ ಅವರು, ನಾವು ಅನಾಥಾಲಯದಲ್ಲಿ ಇಲ್ಲ. ನಮಗೂ(ರಾಜ್ಯಗಳಿಗೆ) ರಾಷ್ಟ್ರವಿದೆ, ಕೇಂದ್ರ ಸರ್ಕಾರ ಇದೆ. ಆದ್ದರಿಂದ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರಕ್ಕೂ ನೋಟಿಸ್ ಜಾರಿ ಮಾಡಿ ಎಂದು ಮನವಿ ಮಾಡಿದರು. ಮನವಿ ಒಪ್ಪಿದ ನ್ಯಾಯಾಧಿಕರಣ ಕೇಂದ್ರಕ್ಕೂ ನೋಟಿಸ್ ಜಾರಿ ಮಾಡಿತು.
ಮಹಾರಾಷ್ಟ್ರ ಪರ ವಕೀಲರು ನ್ಯಾಯಾಧಿಕರಣದ ತೀರ್ಪಿನ ಗೆಜೆಟ್ ಅಧಿಸೂಚನೆ ಹೊರಡಿಸಬೇಕು ಎಂದು ಒತ್ತಾಯಿಸಿದರು. ಕೃಷ್ಣಾ ನ್ಯಾಯಾಧಿಕರಣ ತನ್ನ ಐತೀರ್ಪಿನಲ್ಲಿ ಆಂಧ್ರ ರಾಜ್ಯಕ್ಕೆ 1005 ಟಿಎಂಸಿ, ಕರ್ನಾಟಕಕ್ಕೆ 907 ಟಿಎಂಸಿ ಹಾಗೂ ಮಹಾರಾಷ್ಟ್ರಕ್ಕೆ 666 ಟಿಎಂಸಿ ನೀರು ಹಂಚಿಕೆ ಮಾಡಿದೆ.
ತೆಲಂಗಾಣ- ಸೀಮಾಂಧ್ರ ನೀರು ಹಂಚಿಕೆಯನ್ನು ಆಂಧ್ರಕ್ಕೆ ಮೀಸಲಾಗಿರುವ ನೀರಿನ ಪ್ರಮಾಣದಲ್ಲೇ ಮಾಡಬೇಕು. ಕರ್ನಾಟಕಕ್ಕೆ ನೀಡಿರುವ 907 ಟಿಎಂಸಿ ನೀರು ಪ್ರಮಾಣದಲ್ಲಿ ಕಡಿತ ಮಾಡಬಾರದು ಮತ್ತು ಅಲಮಟ್ಟಿ ಅಣೆಕಟ್ಟೆ ಎತ್ತರಿಸಲು ಅಡ್ಡಿ ಮಾಡಬಾರದು ಎಂಬುದು ಕರ್ನಾಟಕದ ನಿಲವು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.