ಪ್ರಧಾನ ಸುದ್ದಿ

ನೈಗರ್ ನದಿಗೆ ವಿಮಾನ; 116 ಸಾವು

ನೈಗರ್ ನದಿಗೆ ವಿಮಾನ; 116 ಸಾವು
Published On :

ಅಲ್ಜೀರ್ಸ್: ಅಲ್ಜೀರಿಯಾದ ಎಎಚ್ 5017 ವಿಮಾನ ಪತನಗೊಂಡಿದ್ದು, ಅದರಲ್ಲಿದ್ದ 116 ಪ್ರಯಾಣಿಕರು ಮೃತಪಟ್ಟಿದ್ದಾರೆ. ಬುಧವಾರವಷ್ಟೇ ತೈವಾನ್ ವಿಮಾನ ಪತನಗೊಂಡು 48 ಜನ ಮೃತಪಟ್ಟ ಘಟನೆ ನಡೆದ ಒಂದು ದಿನದೊಳಗೇ ಅಲ್ಜೀರಿಯಾಕ್ಕೆ ಸೇರಿದ ವಿಮಾನ ಪತನಗೊಂಡಿರುವುದು ನಾಗರಿಕ ವಿಮಾನ ಯಾನದ ಬಗ್ಗೆ ಸಾರ್ವಜನಿಕರಲ್ಲಿ ಭೀತಿ ಹುಟ್ಟಿಸಿದೆ. ಜು.23ರಂದು ತೈವಾನ್‌ನ ಜಿಇ 222 ವಿಮಾನ ಅಪಘಾತಕ್ಕೀಡಾಗಿತ್ತು. ಈ ಘಟನೆ ಮಾಸುವ ಮುನ್ನವೇ ಎಎಚ್ 5017 ವಿಮಾನ ದುರಂತಕ್ಕೀಡಾಗಿರುವುದು ಎಲ್ಲರನ್ನೂ ದಿಗ್ಭ್ರಮೆಗೊಳಿಸಿದೆ.   
ವಿಮಾನದಲ್ಲಿದ್ದವರು:
110 ಜನ ಪ್ರಯಾಣಿಕರು, ಇಬ್ಬರು ಪೈಲಟ್‌ಗಳು, ನಾಲ್ವರು ಸಿಬ್ಬಂದಿ ಸೇರಿ ಒಟ್ಟು 116 ಜನ ಪ್ರಯಾಣಿಕರು ವಿಮಾನದೊಳಗಿದ್ದರು. ಪ್ರಯಾಣಿಕರಲ್ಲಿ 50 ಜನ ಫ್ರಾನ್ಸ್‌ಗೆ ಸೇರಿದವರು.
ಪತ್ತೆಯಾಗಿದ್ದು ಹೇಗೆ?: ಗುರುವಾರ ಬೆಳಗ್ಗೆ ಉವಾಂಗಡೊಗುವ್‌ನಿಂತ ಹೊರಟ 50 ನಿಮಿಷಗಳ ನಂತರ, ಎಎಚ್ 5017 ವಿಮಾನ ರೇಡಾರ್‌ನ ಸಂಪರ್ಕ ಕಡಿದುಕೊಂಡಿತ್ತು. ತಕ್ಷಣವೇ ಕಂಟ್ರೋಲ್ ರೂಂನಲ್ಲಿದ್ದ ಸಿಬ್ಬಂದಿ ವಿಮಾನ ಕಾಣೆಯಾದ ಬಗ್ಗೆ ಎಲ್ಲೆಡೆ ಸಂದೇಶ ಕಳುಹಿಸಿದರು. ತಕ್ಷಣವೇ ಕಾರ್ಯಪ್ರವೃತ್ತರಾದ ಏರ್ ಅಲ್ಜೀರಿಯಾ ಸಂಸ್ಥೆ ಸಿಬ್ಬಂದಿ 'ತುರ್ತು ಕಾರ್ಯಾಚರಣೆ'ಗೆ ಮುಂದಾದರು. ಪಶ್ಚಿಮ ಆಫ್ರಿಕಾದಲ್ಲಿನ ಫ್ರಾನ್ಸ್ ಸೇನೆಯ ಏರ್‌ಬೇಸ್‌ನ ಅಧಿಕಾರಿಗಳನ್ನು ಸಂಪರ್ಕಿಸಿದ ಏರ್ ಅಲ್ಜೀರಿಯಾ ಸಂಸ್ಥೆಯ ಅಧಿಕಾರಿಗಳು, ವಿಮಾನ ಪತ್ತೆ ಮಾಡುವಲ್ಲಿ ಸಹಾಯ ಕೋರಿದರು. ಅಧಿಕಾರಿಗಳ ಕೋರಿಕೆ ಮೇರೆಗೆ, ಎರಡು 'ಮೈರೇಜ್ 2000' ಜೆಟ್ ವಿಮಾನಗಳನ್ನು ಕಾರ್ಯಾಚರಣೆಗೆ ಕಳುಹಿಸಲಾಯಿತು.
ರಾಡಾರ್ ಸಂಪರ್ಕ ಕಡಿದುಕೊಂಡ ಸ್ಥಳದಿಂದ ಮುಂದಕ್ಕೆ ಎಎಚ್ 5017 ವಿಮಾನ ಸಾಗಬೇಕಿದ್ದ ವಾಯುಮಾರ್ಗವನ್ನು ಜಾಲಾಡಿದ ಜೆಟ್ ವಿಮಾನಗಳು, ವಿಮಾನ ಪತನಗೊಂಡಿರುವುದನ್ನು ಖಚಿತಪಡಿಸಿದವು.
ವರ್ಷದ ನಾಲ್ಕನೇ ಆಘಾತ: ಎಎಚ್ 5017 ವಿಮಾನ ಅಪಘಾತವೂ ಸೇರಿ, 2014ರಲ್ಲಿ ಈವರೆಗೆ 4 ವಿಮಾನಗಳು ದುರಂತಕ್ಕೀಡಾಗಿವೆ. ಜುಲೈನಲ್ಲೇ ಮೂರು ವಿಮಾನ ಅಪಘಾತಗಳು ಜರುಗಿವೆ. ಮಾ. 8ರಂದು ಮಲೇಷ್ಯಾ ಏರ್‌ಲೈನ್ಸ್‌ಗೆ ಸೇರಿದ ಎಂಎಚ್ 370 ವಿಮಾನ ನಾಪತ್ತೆಯಾಗಿತ್ತು. ಜು. 17ರಂದು ಮಲೇಷ್ಯಾ ಏರ್‌ಲೈನ್ಸ್‌ಗೆ ಸೇರಿದ ಎಂಎಚ್ 17 ವಿಮಾನವನ್ನು ಉಕ್ರೇನ್‌ನ ಪೂರ್ವಭಾಗದಲ್ಲಿನ ಬಂಡುಕೋರರು ಹೊಡೆದುರುಳಿಸಿದ್ದರು. ಜು. 23ರಂದು ತೈವಾನ್‌ಗೆ ಸೇರಿದ ಜಿಇ 222 ವಿಮಾನ ಪತನಗೊಂಡಿತ್ತು. ಇದೀಗ, ಅಲ್ಜೀರಿಯಾದ ಎಎಚ್ 5017 ವಿಮಾನವೂ ದುರಂತಕ್ಕೀಡಾಗಿದೆ.
ಎಲ್ಲಾಯ್ತು, ಹೇಗಾಯ್ತು?
ಆಫ್ರಿಕಾದ ಬರ್ಕಿನೊ ಫಾಸೊ ದೇಶದ ಉವಾಂಗಡೊಗುವ್ ನಗರದಿಂದ ತವರಿಗೆ ಮರಳುತ್ತಿದ್ದ ವಿಮಾನ, ಆಗಸಕ್ಕೆ ಹಾರಿದ 50 ನಿಮಿಷಗಳ ನಂತರ ರಾಡಾರ್‌ಸಂಪರ್ಕ ಕಡಿದುಕೊಂಡಿತ್ತು. ಆ ವೇಳೆಗೆ ವಿಮಾನ ನೈಗರ್ ಗಡಿ ಪ್ರವೇಶಿಸಿತ್ತು. ನಂತರ ನದಿಗೆ ಬಿತ್ತು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.