ಪ್ರಧಾನ ಸುದ್ದಿ

ಶಾಲಾ ಬಸ್‌ಗೆ ಅಪ್ಪಳಿಸಿದ ರೈಲು: ಮಕ್ಕಳು ಸೇರಿ 15 ಸಾವು

ಶಾಲಾ ಬಸ್‌ಗೆ ಅಪ್ಪಳಿಸಿದ ರೈಲು: ಮಕ್ಕಳು ಸೇರಿ 15 ಸಾವು
Published On :

ಹೈದರಾಬಾದ್: ತೆಲಂಗಾಣದ ಮೇಡಕ್ ಜಿಲ್ಲೆಯ ಮಾನವರಹಿತ ರೈಲ್ವೆ ಕ್ರಾಸಿಂಗ್‌ನಲ್ಲಿ ಖಾಸಗಿ ಶಾಲಾ ಬಸ್‌ಗೆ ರೈಲು ಅಪ್ಪಳಿಸಿ 12 ಮಕ್ಕಳು ಸೇರಿ 15 ಜನ ಮೃತಪಟ್ಟರು. ಬಸ್‌ನಲ್ಲಿದ್ದ ಇತರ 15 ಮಕ್ಕಳು ತೀವ್ರ ಗಾಯಗೊಂಡಿದ್ದು, ಕೆಲವರ ಸ್ಥಿತಿ ಗಂಭೀರವಾಗಿದೆ. ಸಾವಿನ ಸಂಖ್ಯೆ ಏರುವ ಸಂಭವವಿದೆ. ಚಾಲಕ ಸ್ಥಳದಲ್ಲೇ ಮೃತಪಟ್ಟಿದ್ದಾನೆ.  ಮೂವರು ಮಕ್ಕಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಬಸ್ ಚಾಲಕನ ನಿರ್ಲಕ್ಷವೇ ಅಪಘಾತಕ್ಕೆ ಕಾರಣವೆನ್ನಲಾಗಿದೆ.
ಎಲ್ಲಾಯ್ತು, ಹೇಗಾಯ್ತು?
ಮಸಾಯ್‌ಪೇಟ್ ಹಾಗೂ ವಾಡಿಯಾರಾಮ್  ಸ್ಟೇಷನ್‌ಗಳ ನಡುವೆ ದುರಂತ ನಡೆದಿದೆ. ತುಪ್ರಾನ್‌ನ ಕಾಕತೀಯ ಟೆಕ್ನೋ ಶಾಲೆ ಬಸ್ ಬೆಳಗ್ಗೆ ಮಕ್ಕಳ ತುಂಬಿಸಿಕೊಂಡು ಮಸಾಯ್‌ಪೇಟ್ ಕ್ರಾಸಿಂಗ್ ದಾಟುತ್ತಿತ್ತು. ಅದೇ ಸಂದರ್ಭ ಮಹಾರಾಷ್ಟ್ರದ ನಾಂದೇಡ್‌ನಿಂದ ಹೈದರಾಬಾದ್‌ಗೆ ಸಿಕಂದರಾಬಾದ್ ಎಕ್ಸ್‌ಪ್ರೆಸ್ ರೈಲು ನುಗ್ಗಿ ಬಂದು ಅಪ್ಪಳಿಸಿತು.
ಘಟನೆಯ ತೀವ್ರತೆ
ರೈಲಿನ ರಭಸಕ್ಕೆ ಬಸ್ ಸುಮಾರು ನೂರು ಮೀಟರ್‌ಗಳಷ್ಟು ದೂರ ಹೋಗಿ ಬಿದ್ದಿತ್ತು. ಛಿದ್ರಗೊಂಡ ದೇಹಗಳ ಚೂರುಗಳು ರೈಲ್ವೆ ಹಳಿಯ ಇಕ್ಕೆಲಗಳಲ್ಲಿ ಬಿದ್ದಿದ್ದವು. ಸುತ್ತಮುತ್ತಲ ಜಾಗವೆಲ್ಲಾ ರಕ್ತಸಿಕ್ತವಾಗಿತ್ತು.
ಪರಿಹಾರ ಕಾರ್ಯ
ಗಾಯಗೊಂಡವರನ್ನು ಮೊದಲು ಹತ್ತಿರದ ಕೊಂಪಲ್ಲಿಯ ಆಸ್ಪತ್ರೆಗೆ ಸೇರಿಸಿ, ಹೆಚ್ಚಿನ ಚಿಕಿತ್ಸೆಗಾಗಿ ಹೈದರಾಬಾದ್‌ಗೆ ಕರೆದೊಯ್ಯಲಾಗಿದೆ. ಸುದ್ದಿ ತಿಳಿಯುತ್ತಿದ್ದಂತೆ ಮುಖ್ಯಮಂತ್ರಿ ಕೆ. ಚಂದ್ರಶೇಖರ ರಾವ್ ಸೇರಿ ಗಣ್ಯರು ಘಟನಾ ಸ್ಥಳಕ್ಕೆ ಭೇಟಿ ನೀಡಿದರು. ಮೃತ ಮಕ್ಕಳ ಕುಟುಂಬಕ್ಕೆ ರೈಲ್ವೆ ಇಲಾಖೆ ತಲಾ 2 ಲಕ್ಷ ಪರಿಹಾರ ಘೋಷಿಸಿದೆ. ಗಂಭೀರ ಗಾಯಗೊಂಡವರಿಗೆ 1 ಲಕ್ಷ ಹಾಗೂ ಚಿಕ್ಕಪುಟ್ಟ ಗಾಯಗೊಂಡವರಿಗೆ ತಲಾ ರು. 20 ಸಾವಿರ ಪರಿಹಾರ ಘೋಷಿಸಲಾಗಿದೆ.
ಸಾವಿಗೆ ಶಾರ್ಟ್‌ಕಟ್?
ಬಸ್ ನಿತ್ಯ ಹೋಗುತ್ತಿದ್ದ ಮಾರ್ಗವನ್ನು ಬದಲಿಸಿದ್ದೇ ಅಪಘಾತಕ್ಕೆ ಕಾರಣವಾಯಿತು. ಸಮಯ ಉಳಿತಾಯಕ್ಕಾಗಿ ಶಾರ್ಟ್‌ಕಟ್ ಮೂಲಕ ಸಾಗಲು ನಿರ್ಧರಿಸಿದ ಚಾಲಕ, ರೈಲ್ವೇ ಕ್ರಾಸಿಂಗ್‌ನಲ್ಲಿ ಮಾಡಿದ ಎಡವಟ್ಟು ಕಾರಣ.
ಘಟನೆ ನಡೆದಿರುವುದು ದುರದೃಷ್ಟಕರ. ಇಂಥ ಘಟನೆಗಳು ಮರುಕಳಿಸದಂತೆ ಕ್ರಮ ಕೈಗೊಳ್ಳಲಾಗುವುದು.
- ಸದಾನಂದ ಗೌಡ, ರೈಲ್ವೆ ಸಚಿವ



Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.