ಸಬ್ಸಿಡಿ, ಆಹಾರ ಸಂಗ್ರಹ ನಿಲುವು ಸ್ಪಷ್ಟಪಡಿಸಿ, ಆಗ ಮಾತ್ರ ಟಿಎಫ್‌ಎಗೆ ಸಹಿ

ನವದೆಹಲಿ/ವಾಷಿಂಗ್ಟನ್: ಆಹಾರ ಸಬ್ಸಿಡಿಗೆ ಸಂಬಂಧಿಸಿ ಭಾರತವು ಅಭಿವೃದ್ಧಿ ಹೊಂದಿದ ರಾಷ್ಟ್ರಗಳನ್ನೇ ಎದುರುಹಾಕಿಕೊಂಡಿದೆ. ಶಾಶ್ವತ ಪರಿಹಾರ ಸೂಚಿಸುವವರೆಗೆ ವಾಣಿಜ್ಯ ಸೌಲಭ್ಯ ಒಪ್ಪಂದಕ್ಕೆ ಸಹಿ ಹಾಕುವುದಿಲ್ಲ ಎಂದು ಭಾರತವು ನಿಷ್ಠುರವಾಗಿ ತಿಳಿಸಿದೆ.
ಈ ಒಪ್ಪಂದವು ತೃತೀಯ ಮತ್ತು ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳ ಕೋಟ್ಯಂತರ ಬಡವರ ಆಹಾರ ಭದ್ರತೆಗೆ ಕಲ್ಲು ಹಾಕಲಿದೆ ಎಂದಿರುವ ಭಾರತ, ಜಿನೇವಾದಲ್ಲಿ ನಡೆದ 2 ದಿನಗಳ ಸಾಮಾನ್ಯ ಸಭೆಯಲ್ಲಿ ವಿಶ್ವ ವಾಣಿಜ್ಯ ಸಂಸ್ಥೆ(ಡಬ್ಲ್ಯುಟಿಒ)ಗೆ ಟಾಂಗ್ ನೀಡಿದೆ. ಸಬ್ಸಿಡಿ ಮತ್ತು ಆಹಾರ ಸಂಗ್ರಹದ ವಿಚಾರದಲ್ಲಿ ಸ್ಪಷ್ಟವಾದ ನಿಲುವು ವ್ಯಕ್ತಪಡಿಸುವವರೆಗೆ ಸಹಿ ಸಾಧ್ಯವಿಲ್ಲ ಎಂದು ಹೇಳಿದೆ. ಭಾರತದ ಈ ಖಡಕ್ ನಿಲುವು ಅಮೆರಿಕ, ಆಸ್ಟ್ರೇಲಿಯಾ ಸೇರಿದಂತೆ ಶ್ರೀಮಂತ ರಾಷ್ಟ್ರಗಳಿಗೆ ಆಘಾತ ಉಂಟುಮಾಡಿದೆ. ಇನ್ನೊಂದೆಡೆ ಅಚ್ಚರಿಯೆಂಬಂತೆ ಈ ವಿಚಾರದಲ್ಲಿ ಚೀನಾ ಸೇರಿದಂತೆ ತೃತೀಯ ರಾಷ್ಟ್ರಗಳು ಭಾರತದ ಬೆನ್ನಿಗೆ ನಿಂತಿವೆ.
ಟಿ ದೇಶ ಬಯಸುವುದೇನು?
ಆಹಾರ ವಸ್ತುಗಳ ಸಾರ್ವಜನಿಕ ದಾಸ್ತಾನು ಸಮಸ್ಯೆಗೆ ಶಾಶ್ವತ ಪರಿಹಾರ ಸಿಗಬೇಕು ಎನ್ನುವುದು ಭಾರತದ ಒತ್ತಾಯ. ಕೃಷಿ ಉತ್ಪನ್ನಗಳಿಗೆ ಸಬ್ಸಿಡಿ ನೀಡಿ, ಬಡವರಿಗೆ ಕಡಿಮೆ ಬೆಲೆಯಲ್ಲಿ ನೀಡುವ ನಿಲುವನ್ನು ಚೀನಾ ಸೇರಿದಂತೆ ಜಿ33 ಸದಸ್ಯರು ಸ್ವಾಗತಿಸಿದ್ದಾರೆ.
ಡಬ್ಲ್ಯುಟಿಒಗೆ ತಲೆನೋವು
ಈ ಬಾರಿ ಹೇಗಾದರೂ ಮಾಡಿ ಜು.31ರೊಳಗೆ ವಾಣಿಜ್ಯ ಸೌಲಭ್ಯ ಒಪ್ಪಂದ(ಟಿಎಫ್‌ಎ)ಕ್ಕೆ ಎಲ್ಲ ರಾಷ್ಟ್ರಗಳಿಂದ ಸಹಿ ಹಾಕಿಸಿಕೊಳ್ಳಬೇಕು ಎಂದು ಡಬ್ಲ್ಯುಟಿಒ ಯೋಜಿಸಿತ್ತು. ಆದರೆ ಭಾರತವು ಒಮ್ಮಿಂದೊಮ್ಮೆಲೇ ತಿರುಗಿ ಬಿದ್ದಿರುವುದು ಡಬ್ಲ್ಯುಟಿಒಗೆ ತಲೆನೋವು ಉಂಟುಮಾಡಿದೆ.
ಏನಿದು ಟಿಎಫ್‌ಎ?
ಟಿಎಫ್‌ಎ ಅಂದರೆ ವಾಣಿಜ್ಯ ಸೌಲಭ್ಯ ಒಪ್ಪಂದ (ಟ್ರೇಡ್ ಫೆಸಿಲಿಟೇಷನ್ ಅಗ್ರಿಮೆಂಟ್). ಆಡಳಿತಾತ್ಮಕ ಹೊಣೆಯನ್ನು ಕಡಿತಗೊಳಿಸಿ ಎಲ್ಲ ರಾಷ್ಟ್ರಗಳ ನಡುವೆಯೂ ತ್ವರಿತಗತಿಯಲ್ಲಿ ಆಹಾರ ವಸ್ತುಗಳ ಚಲನೆಗೆ ಅವಕಾಶ ಕಲ್ಪಿಸುವುದೇ ಈ ಒಪ್ಪಂದದ ಉದ್ದೇಶ. ಆದರೆ, ಕೃಷಿ ಉತ್ಪನ್ನಗಳಿಗೆ ನೀಡುವ ಸಬ್ಸಿಡಿಯು ಒಟ್ಟು ಕೃತಿ ಉತ್ಪಾದನೆಯ ಮೌಲ್ಯದ ಶೇ.10ಕ್ಕಿಂತ ಹೆಚ್ಚಿರಬಾರದು ಎನ್ನುತ್ತದೆ ಈ ಒಪ್ಪಂದ. ಈ ಮಿತಿಯನ್ನು ಯಾವುದಾದರೂ ದೇಶ ಉಲ್ಲಂಘಿಸಿದ್ದೇ ಆದಲ್ಲಿ ಅಂತಹ ದೇಶದ ವಿರುದ್ಧ ವಾಣಿಜ್ಯ ನಿಷೇಧ ಹೇರುವ ಅವಕಾಶ ಬೇರೆ ರಾಷ್ಟ್ರಗಳಿಗಿರುತ್ತದೆ. ಇದುವೇ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳ ಚಿಂತೆಗೆ ಕಾರಣ.
ಭಾರತದ ವಿರೋಧ ಏಕೆ?
ಭಾರತವು ದೇಶದ ಬಡವರಿಗೆ ಕಡಿಮೆ ಬೆಲೆಯಲ್ಲಿ ಆಹಾರ ಧಾನ್ಯಗಳನ್ನು ಒದಗಿಸುತ್ತಿದೆ. ಪಡಿತರ ವ್ಯವಸ್ಥೆ ಮೂಲಕ ಗ್ರಾಹಕರಿಗೆ ಸಬ್ಸಿಡಿ ನೀಡುವುದಷ್ಟೇ ಅಲ್ಲದೆ ರೈತರಿಗೂ ಸಬ್ಸಿಡಿ ಒದಗಿಸುತ್ತಿದೆ. ಕನಿಷ್ಠ ಬೆಂಬಲ ಬೆಲೆ ನೀಡಿ ರೈತರಿಂದ ಉತ್ಪನ್ನಗಳನ್ನು ಖರೀದಿಸುತ್ತದೆ ಹಾಗೂ ಅವರಿಗೆ ವಿದ್ಯುತ್ ಮತ್ತು ರಸಗೊಬ್ಬರದಲ್ಲೂ ಸಬ್ಸಿಡಿ ಒದಗಿಸುತ್ತಾ ಬಂದಿದೆ. ಸಬ್ಸಿಡಿ ಮೇಲೆ ಶೇ.10ರ ಮಿತಿಯನ್ನು ಭಾರತದಲ್ಲಂತೂ ಹೇರಲು ಸಾಧ್ಯವೇ ಇಲ್ಲ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


