ಪ್ರಧಾನ ಸುದ್ದಿ

ಮಹಾ ಖ್ಯಾತೆಗೆ ರಾಜ್ಯದ ಸಡ್ಡು ಫಲಕ ತೆರವು: ಲಾಠಿ, ನಿಷೇಧಾಜ್ಞೆ

ಮಹಾ ಖ್ಯಾತೆಗೆ ರಾಜ್ಯದ ಸಡ್ಡು ಫಲಕ ತೆರವು: ಲಾಠಿ, ನಿಷೇಧಾಜ್ಞೆ
Published On :

ಬೆಳಗಾವಿ: ತಾಲೂಕಿನ ಯಳ್ಳೂರಲ್ಲಿ ಎಂಇಎಸ್ ಪುಂಡಾಟಿಕೆಗೆ ಜಿಲ್ಲಾಡಳಿತ ಮತ್ತೆ ಸಡ್ಡು ಹೊಡೆದಿದೆ. ಭಾನುವಾರ ಪುನಃ ಹಾಕಲಾಗಿದ್ದ 'ಮಹಾರಾಷ್ಟ್ರ ರಾಜ್ಯ' ನಾಮಫಲಕವನ್ನು ಪೊಲೀಸ್ ಬಿಗಿ ಬಂದೋಬಸ್ತ್‌ನಲ್ಲಿ ತೆರವುಗೊಳಿಸಲಾಗಿದೆ.
ಕಾರ್ಯಾಚರಣೆಗೆ ಅಡ್ಡಿ ಮಾಡಿ ಪುಂಡಾಟಿಕೆ ನಡೆಸಿದ ಎಂಇಎಸ್ ಕಾರ್ಯಕರ್ತರ ಮೇಲೆ ರಾಜ್ಯ ಪೊಲಿಸರು ಲಾಠಿ ಪ್ರಹಾರ ನಡೆಸಿದ್ದಾರೆ. ಜುಲೈ 29ರ ಮಧ್ಯರಾತ್ರಿ 12ರ ವರೆಗೆ ನಿಷೇಧಾಜ್ಞೆ ಜಾರಿಗೊಳಿಸಿದ್ದು, ಏಳು ಮಂದಿ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗಿದೆ.


ಆಗಿದ್ದೇನು?
ಯಳ್ಳೂರಿನಲ್ಲಿ ಮಹಾರಾಷ್ಟ್ರದ ನಾಮಫಲಕವನ್ನು ಕರ್ನಾಟಕ ಹೈಕೋರ್ಟ್ ಆದೇಶದನ್ವಯ ಜಿಲ್ಲಾಡಳಿತ ಶುಕ್ರವಾರ ತೆರವುಗೊಳಿಸಿತ್ತು. ಆದರೆ ಎಂಇಎಸ್ ಕಾರ್ಯಕರ್ತರು ಶನಿವಾರ ಮತ್ತೆ ನಾಮಫಲಕ ಹಾಕಿದ್ದರು. ಇದನ್ನು ತಡೆಯಲು ಹೋದ ಪೊಲೀಸರ ಮೇಲೆ ಕಲ್ಲು ತೂರಿ, ಪುಂಡಾಟಿಕೆ ಮೆರೆದಿದ್ದರು. ಭಾನುವಾರ, ಹೆಚ್ಚುವರಿ ಪೊಲೀಸ್ ಪಡೆ ಹಾಗೂ ಅಪರಾಧ ವಿಭಾಗದ ಜಂಟಿ ಪೊಲೀಸ್ ಆಯುಕ್ತ ಹೇಮಂತ ನಿಂಬಾಳ್ಕರ ನೇತೃತ್ವದ ತಂಡ ಗ್ರಾಮಕ್ಕೆ ತೆರಳಿ  ನಾಮಫಲಕ ತೆರವುಗೊಳಿಸಿತು.

  ಪೊಲೀಸರ ಮೇಲೆ ಚಪ್ಪಲಿ

ಈ ಸಂದರ್ಭದಲ್ಲೂ ಪುನಃ ಪೊಲೀಸರ ಮೇಲೆ ಕೆಲ ಕಿಡಿಗೇಡಿಗಳು ಚಪ್ಪಲಿ, ಕೊಡಲಿ, ಖಡ್ಗ ಸೇರಿ ಮಾರಕಾಸ್ತ್ರಗಳನ್ನು ಎಸೆದರು. ತಕ್ಷಣ ಕಾರ್ಯಾಚರಣೆಗಿಳಿದ ಪೊಲೀಸರು ಪುಂಡರನ್ನು ಮನೆಯಿಂದ ಹೊರಕ್ಕೆಳೆದು ಥಳಿಸಿದರು. ಲಾಠಿ ಪ್ರಹಾರ ಆರಂಭವಾಗುತ್ತಿದ್ದಂತೆಯೇ ಯುವಕರ ಸಮೂಹ ಪರಾರಿಯಾಯಿತು. ಇದೇ ವೇಳೆ ಮಾಧ್ಯಮದವರನ್ನು 150ಕ್ಕೂ ಹೆಚ್ಚು ಜನರ ಗುಂಪು ಕೊಠಡಿಯೊಂದರಲ್ಲಿ ಕೂಡಿ ಹಾಕಿ ಹಲ್ಲೆಗೆ ಯತ್ನಿಸಿದೆ.  


ಬಿಗಿ ಬಂದೋಬಸ್ತ್

ಜಿಲ್ಲಾಧಿಕಾರಿ ಎನ್.ಜಯರಾಂ ಮಾತನಾಡಿ, 'ವಿವಾದಾತ್ಮಕ ನಾಮಫಲಕ ತೆರವುಗೊಳಿಸಿದ್ದೇವೆ. ಮತ್ತೆ ಇಲ್ಲಿ ಕೃತ್ಯ ನಡೆಸುವುದಿಲ್ಲ ಎಂದು ಎಂಇಎಸ್ ಭರವಸೆ ನೀಡಿದೆ. ಕಾನೂನು ಕೈಗೆತ್ತಿಕೊಳ್ಳಲು ಮುಂದಾದರೆ ಕೈಕಟ್ಟಿ ಕುಳಿತುಕೊಳ್ಳುವುದಿಲ್ಲ' ಎಂದರು. ಸ್ಥಳದಲ್ಲಿ 9 ಕೆಎಸ್‌ಆರ್‌ಪಿ ತುಕಡಿ, ಅಶ್ರುವಾಯು ದಳ, 10 ಜಿಲ್ಲಾ ಸಶಸ್ತ್ರ ಮೀಸಲು ಪಡೆ ಸೇರಿದಂತೆ 1 ಸಾವಿರಕ್ಕೂ ಅಧಿಕ ಪೊಲೀಸರನ್ನು ನಿಯೋಜಿಸಲಾಗಿದೆ. ಡಿಐಜಿ ಹೇಮಂತ ನಿಂಬಾಳ್ಕರರನ್ನು ವಿಶೇಷ ಅಧಿಕಾರಿಯಾಗಿ ನಿಯೋಜಿಸಲಾಗಿದೆ. ಸ್ಥಳದಲ್ಲಿ ಎಸ್ಪಿ ಡಾ. ಚಂದ್ರಗುಪ್ತ, ಐಜಿಪಿ ಭಾಸ್ಕರರಾವ್ ಮೊಕ್ಕಾಂ ಹೂಡಿದ್ದಾರೆ.

ನಿಷೇಧಾಜ್ಞೆ ಜಾರಿ: ಡಿಸಿ
ಬೆಳಗಾವಿ ತಾಲೂಕು, ಖಾನಾಪುರ ತಾಲೂಕು ಮತ್ತು ನಿಪ್ಪಾಣಿ ನಗರದಲ್ಲಿ ಮುಂಜಾಗ್ರತೆ ಕ್ರಮವಾಗಿ ಭಾನುವಾರ ಬೆಳಗ್ಗೆಯಿಂದ ಜುಲೈ 29ರ ಮಧ್ಯರಾತ್ರಿ 12ರವರೆಗೆ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಜತೆಗೆ ಏಳು ಜನರ ವಿರುದ್ಧ ಕ್ರಿಮಿನಲ್ ಕೇಸು ದಾಖಲಿಸಲಾಗಿದೆ ಎಂದು ಜಿಲ್ಲಾಧಿಕಾರಿ ಹೇಳಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.