ಸ್ಥಳೀಯ ಅಭಿವೃದ್ಧಿಗೆ ಆರ್ಥಿಕ ಸಂಕಷ್ಟ
ಕೊಪ್ಪಳ: ರಾಜ್ಯಾದ್ಯಂತ ನಗರ ಸ್ಥಳೀಯ ಸಂಸ್ಥೆಗಳು ಆರ್ಥಿಕ ಸಂಕಷ್ಟಕ್ಕೆ ಸಿಲುಕಿವೆ. ಕುಡಿಯುವ ನೀರಿನ ಪೈಪ್ ಒಡೆದರೂ ಜೋಡಿಸಲಾಗದ ಸ್ಥಿತಿಯಲ್ಲಿವೆ. ಅಷ್ಟೇ ಏಕೆ? ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷರ ವಾಹನಕ್ಕೆ ಇಂಧನ ತುಂಬಿಸಲಾಗದಂತಹ ಸ್ಥಿತಿ ಎದುರಾಗಿದೆ. ಇದೆಲ್ಲದಕ್ಕೂ ಕಾರಣ ಸರ್ಕಾರದ ಒಂದು ಆದೇಶ.
ನಗರಸಭೆಯ ದಿನಗೂಲಿ ನೌಕರರ ವೇತನ ನೀಡಲು ಇನ್ನುಮುಂದೆ ಆಗುವುದಿಲ್ಲ, ನಗರ ಸ್ಥಳೀಯ ಸಂಸ್ಥೆಗಳೇ ಸ್ಥಳೀಯ ಆದಾಯದಲ್ಲಿ ಪಾವತಿಸಿಕೊಳ್ಳಬೇಕು. ಇದು ನಮ್ಮ ಹೊಣೆಗಾರಿಕೆ ಅಲ್ಲ ಎಂದು ಕಡ್ಡಿಮುರಿದಂತೆ ಸರ್ಕಾರ ಹೇಳಿದೆ. ಪೌರಕಾರ್ಮಿಕರ ವೇತನ ಪಾವತಿ ವಿಳಂಬವಾಗುತ್ತಿರುವ ಕುರಿತು ಕೋರ್ಟ್ ಎಚ್ಚರಿಕೆಯಿಂದ ಜಾರಿಕೊಳ್ಳಲು ಸರ್ಕಾರ ಈ ಸುತ್ತೋಲೆ ಹೊರಡಿಸಿದೆ. ಈಗ ಇದರ ಹೊಣೆ ಹೊತ್ತ ನಗರ ಸ್ಥಳೀಯ ಸಂಸ್ಥೆಗಳು ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿವೆ.
ಜು. 17ರಂದು ಈ ಕುರಿತು ಆದೇಶ ಹೊರಡಿಸಿ, ನಗರ ಸ್ಥಳೀಯ ಸಂಸ್ಥೆಯಲ್ಲಿ ಕೆಲಸ ನಿರ್ವಹಿಸುತ್ತಿರುವ (ಕಾಯಂ ನೌಕರರನ್ನು ಹೊರತುಪಡಿಸಿ) ನೌಕರರ ವೇತನ ಬಟವಾಡೆಯನ್ನು ನಗರ ಸ್ಥಳೀಯ ಸಂಸ್ಥೆಗಳ ಸಂಪನ್ಮೂಲದಿಂದ ಪ್ರಥಮ ಆದ್ಯತೆ ಮೇರೆಗೆ ವೇತನ ನೀಡಬೇಕು. ಯಾವುದೇ ನೌಕರರಿಗೆ ವೇತನ ಬಟವಾಡೆ ಮಾಡದೆ ಇತರ ಯಾವುದೇ ಖರ್ಚು-ವೆಚ್ಚಗಳನ್ನು ಮಾಡತಕ್ಕದ್ದಲ್ಲ ಎಂದು ಕಟ್ಟುನಿಟ್ಟಾಗಿ ಆದೇಶಿಸಿದೆ.
ಕೊಪ್ಪಳ ನಗರಸಭೆಯಲ್ಲಿ 143 ಗುತ್ತಿಗೆ ಆಧಾರದ ನೌಕರರು ಇದ್ದಾರೆ. ಅವರೆಲ್ಲರ ವೇತನ ಮೊತ್ತ ಪ್ರತಿ ತಿಂಗಳು 14-15 ಲಕ್ಷ ಆಗುತ್ತದೆ. ಆದರೆ, ನಗರಸಭೆಯ ಪ್ರತಿ ತಿಂಗಳ ಆದಾಯ 12-13 ಲಕ್ಷ ಮಾತ್ರ. ಈಗ ಬಂದಿರುವ ಆದಾಯವನ್ನೆಲ್ಲ ಕೇವಲ ವೇತನಕ್ಕಾಗಿ ನೀಡಿದರೆ ನಗರಸಭೆಯಲ್ಲಿ ಉಳಿದ್ಯಾವುದಕ್ಕೂ ಖರ್ಚು ಮಾಡುವುದಕ್ಕೆ ಹಣ ಇಲ್ಲದಂತಾಗಿದೆ. ಕುಡಿಯುವ ನೀರಿನ ಒಂದು ಪೈಪ್ ಒಡೆದರೆ, ಅಧ್ಯಕ್ಷ, ಉಪಾಧ್ಯಕ್ಷರ ವಾಹನಗಳಿಗೆ ತೈಲ ತುಂಬಿಸಲು ಒಂದು ಪೈಸೆ ಹಣವಿಲ್ಲ. ಇದು ರಾಜ್ಯಾದ್ಯಂತ ಇರುವ ನಗರ ಸ್ಥಳೀಯ ಸಂಸ್ಥೆಗಳ ಸಮಸ್ಯೆ.
ಈ ಹಿಂದೆ ಎಸ್‌ಎಫ್‌ಸಿ ಅನುದಾನದಲ್ಲಿ ನೀಡುತ್ತಿದ್ದ ದಿನಗೂಲಿ ಕಾರ್ಮಿಕರ ವೇತನವನ್ನು ಈಗ ನಗರಸಭೆ ಅನುದಾನದಲ್ಲೇ ಬಳಕೆ ಮಾಡಿಕೊಳ್ಳುವಂತೆ ಆದೇಶ ಮಾಡಿರುವುದರಿಂದ ಆರ್ಥಿಕ ಸಮಸ್ಯೆಯಾಗಿದೆ. ಒಂದು ಪೈಸೆಯೂ ತುರ್ತು ಸಮಸ್ಯೆಗೆ ಖರ್ಚು ಮಾಡಲಾರದಂತಾಗಿದೆ.
- ಲತಾ ವೀರಣ್ಣ ಸಂಡೂರು, ಕೊಪ್ಪಳ ನಗರಸಭೆ ಅಧ್ಯಕ್ಷೆ
ಸೋಮರಡ್ಡಿ ಅಳವಂಡಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

