ನಾನೇ ಕೃತಿ ಬರೆಯುತ್ತೇನೆ, ಸತ್ಯ ಬಹಿರಂಗಪಡಿಸುತ್ತೇನೆ

ನವದೆಹಲಿ: ಮಾಜಿ ವಿದೇಶಾಂಗ ಸಚಿವ ನಟವರ್ ಸಿಂಗ್ ಅವರ ಆತ್ಮಚರಿತ್ರೆಯಿಂದ ಇರುಸು ಮುರುಸಿಗೆ ಒಳಗಾಗಿರುವ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ತೀವ್ರ ಕಿಡಿಕಿಡಿಯಾಗಿದ್ದಾರೆ. ತಮ್ಮ ಜೀವನದ ಕುರಿತು ತಾವೇ ಕೃತಿ ಬರೆಯುವುದಾಗಿ ಘೋಷಿಸಿದ್ದಾರೆ.
'ಆ ಕೃತಿಯಲ್ಲಿ ಎಲ್ಲ ಸತ್ಯಾಂಶಗಳನ್ನು ಬಹಿರಂಗಪಡಿಸುತ್ತೇನೆ. ಅದರ ಮೂಲಕ ಸತ್ಯ ಏನೆಂಬುದು ನಿಮಗೆಲ್ಲ ಗೊತ್ತಾಗಲಿದೆ. ನಾನು ಈ ವಿಚಾರದಲ್ಲಿ ಗಂಭೀರವಾಗಿದ್ದೇನೆ' ಎಂದು ಸೋನಿಯಾ ತಿಳಿಸಿದ್ದಾರೆ. ನಟವರ್ಸಿಂಗ್ ಆತ್ಮಚರಿತ್ರೆ ಹುಟ್ಟುಹಾಕಿದ ವಿವಾದದ ಹಿನ್ನೆಲೆಯಲ್ಲಿ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಸೋನಿಯಾ ಈ ಉತ್ತರ ನೀಡಿದ್ದಾರೆ.
'ಪತಿ ರಾಜೀವ್ಗಾಂಧಿ ಮೇಲಿನ ಆತ್ಮಾಹುತಿ, ಅತ್ತೆ ಇಂದಿರಾ ಗಾಂಧಿ ಹತ್ಯೆಯಂಥ ಘೋರ ದುರಂತಗಳನ್ನು ಬದುಕಿನಲ್ಲಿ ಕಂಡಿದ್ದೇನೆ. ಹಾಗಾಗಿ ನಟವರ್ ಸಿಂಗ್ ವಿವಾದದಿಂದ ನೋವಾಗುವ ಮಾತೇ ಇಲ್ಲ. ನನಗೆ ಸಂಬಂಧಿಸದ ವಿಚಾರಗಳ ಕುರಿತು ನಾನು ಹೆಚ್ಚು ತಲೆಕೆಡಿಸಿಕೊಳ್ಳುವುದೂ ಇಲ್ಲ ಎಂದು ಸೋನಿಯಾ ಹೇಳಿದ್ದಾರೆ.
ಸೋನಿಯಾ 2004ರಲ್ಲಿ ಸ್ವಇಚ್ಛೆಯಿಂದ ಪ್ರಧಾನಿ ಹುದ್ದೆ ನಿರಾಕರಿಸಿದ್ದಲ್ಲ. ಅಪ್ಪ, ಅಜ್ಜಿಯಂತೆ ತಾಯಿ ಕೂಡ ಹತ್ಯೆಗೀಡಾಗಬಹುದು ಎನ್ನುವ ಭೀತಿಯಿಂದ ಪುತ್ರ, ರಾಹುಲ್ ಹೇರಿದ ಒತ್ತಡದಿಂದಾಗಿ ಪ್ರಧಾನಿ ಹುದ್ದೆಗೇರುವ ಅವಕಾಶದಿಂದ ಹಿಂದೆ ಸರಿದಿದ್ದರು ಎಂದು ನಟವರ್ ಸಿಂಗ್ ಕೆಲವೇ ದಿನಗಳಲ್ಲಿ ಬಿಡುಗಡೆಯಾಗಲಿರುವ ತಮ್ಮ ಕೃತಿ 'ಒನ್ಲೈಫ್ ಈಸ್ ನಾಟ್ ಇನಫ್'ನಲ್ಲಿ ಹೇಳಿಕೊಂಡಿದ್ದಾರೆ. ಈ ಕುರಿತು ಖಾಸಗಿ ಸುದ್ದಿವಾಹಿನಿಯೊಂದಕ್ಕೆ ಸಂದರ್ಶನವನ್ನೂ ನೀಡಿದ್ದರು. ಈ ಮೂಲಕ ಹೊಸ ವಿವಾದ ಹುಟ್ಟುಹಾಕಿದ್ದರು.
ಸಿಂಗ್ ಬೆಂಬಲ
ನಟವರ್ ವಿವಾದಕ್ಕೆ ಸಂಬಂಧಿಸಿ ಸೋನಿಯಾ ಗಾಂಧಿ ಅವರಿಗೆ ಮಾಜಿ ಪ್ರಧಾನಿ ಮನಮೋಹನ ಸಿಂಗ್ರಿಂದವೂ ಬೆಂಬಲ ವ್ಯಕ್ತವಾಗಿದೆ. ನಟವರ್ ಸಿಂಗ್ ಅವರು ತಮ್ಮ ಕೃತಿಗೆ ಮಾರುಕಟ್ಟೆ ಕುದುರಿಸುವ ತಂತ್ರ ಅನುಸರಿಸುತ್ತಿದ್ದಾರೆ ಎಂದು ಸಿಂಗ್ ವ್ಯಂಗ್ಯವಾಡಿದ್ದಾರೆ. ತಮ್ಮ ಮಾಜಿ ಮಾಧ್ಯಮ ಸಲಹೆಗಾರ ಸಂಜಯ್ ಬರೂ ಅವರ 'ದಿ ಆ್ಯಕ್ಸಿಡೆಂಟಲ್ ಪ್ರೈಮ್ ಮಿನಿಸ್ಟರ್' ಕುರಿತೂ ಕಿಡಿಕಿಡಿಯಾಗಿರುವ ಸಿಂಗ್, ಬರು ಕೂಡ ಇದೇ ರೀತಿಯ ತಂತ್ರದಲ್ಲಿ ತೊಡಗಿದ್ದಾರೆ ಎಂದು ದೂರಿದ್ದಾರೆ. ಪ್ರಧಾನಿ ಕಾರ್ಯಾಲಯದಿಂದ ಮಹತ್ವದ ಕಡತಗಳನ್ನು ಸೋನಿಯಾ ಗಾಂಧಿ ಅವರಿಗೆ ಕಳುಹಿಸಿಕೊಡಲಾಗುತ್ತಿತ್ತು ಎನ್ನುವ ನಟವರ್ ಸಿಂಗ್ ಹಾಗೂ ಬರು ಆರೋಪದಲ್ಲಿ ನಿಜವಿಲ್ಲ. ಖಾಸಗಿ ವಿಚಾರವನ್ನು ಹಣ ಮಾಡುವ ಉದ್ದೇಶಕ್ಕಾಗಿ ಬಳಸುವುದು ಸರಿಯಲ್ಲ ಎಂದು ಮಾಜಿ ಪ್ರಧಾನಿ ಹೇಳಿದ್ದಾರೆ.
ಅಭಿಷೇಕ್
ಸಿಂಘ್ವಿ ಆಕ್ರೋಶ
ನಟವರ್ ಸಿಂಗ್ ವಿರುದ್ಧ ಕಾಂಗ್ರೆಸ್ ಮುಖಂಡರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಟವರ್ ಸಿಂಗ್ ತಮ್ಮ ಕೃತಿಯ ಮಾರಾಟ ಹೆಚ್ಚಿಸಲು ಈ ರೀತಿಯ ಮಾರ್ಕೆಟಿಂಗ್ ತಂತ್ರ ಅನುಸರಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ನಟವರ್ಸಿಂಗ್ ಅವರನ್ನು ವಿಶ್ವಾಸದ್ರೋಹಿ ಎಂದು ಕರೆದಿರುವ ಕಾಂಗ್ರೆಸ್ ವಕ್ತಾರ ಅಭಿಷೇಕ್ ಸಿಂಘ್ವಿ, ಪಕ್ಷದಿಂದ ಉಚ್ಚಾಟಿಸಲ್ಪಟ್ಟ ಬಳಿಕ ಅವರು ಬಿಜೆಪಿ ಸೇರಲು ಪ್ರಯತ್ನಿಸಿದ್ದರು ಎಂದು ಆರೋಪಿಸಿದ್ದಾರೆ.
ಕಾಂಗ್ರೆಸ್ನಲ್ಲಿದ್ದುಕೊಂಡು ಉನ್ನತ ಸ್ಥಾನಮಾನ ಅನುಭವಿಸಿದ, ಹಲವು ಸೂಕ್ಷ್ಮ ವಿಚಾರಗಳನ್ನು ಬಲ್ಲ ವ್ಯಕ್ತಿಯೊಬ್ಬ ಪಕ್ಷದಿಂದ ಉಚ್ಚಾಟಿಸಲ್ಪಟ್ಟ ಬಳಿಕ ಅದನ್ನು ದುರುಪಯೋಗಪಡಿಸಿಕೊಳ್ಳುವ ಹಾಗೂ ತಪ್ಪು ಮಾಹಿತಿ ನೀಡುವ ವಿಚಾರಗಳನ್ನು ಪ್ರಕಟಿಸುತ್ತಿರುವುದನ್ನು ನಾವು ಖಂಡಿಸುತ್ತೇವೆ. ಸುಳ್ಳು ಸುದ್ದಿ ಹಬ್ಬುವ ಮೂಲಕ ಪುಸ್ತಕದ ಮಾರಾಟ ಹೆಚ್ಚಿಸಲು ಪ್ರಯತ್ನಿಸುತ್ತಿದ್ದಾರೆ. ಇದನ್ನು ಒಪ್ಪಿಕೊಳ್ಳಲಾಗದು ಎಂದು ಹೇಳಿದ್ದಾರೆ. ಇದೇ ವೇಳೆ, ನಟವರ್ ಸಿಂಗ್ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸುವ ಕುರಿತು ಈವರೆಗೆ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ ಎಂದು ಇದೇ ವೇಳೆ ಸಿಂಘ್ವಿ ಹೇಳಿದ್ದಾರೆ.
ನಟವರ್ ಸಿಂಗ್ ಅವರೊಬ್ಬ ಮಾಮೂಲಿ ರಾಜಕಾರಣಿ ಅಲ್ಲ.
ನೆಹರೂ ಕುಟುಂಬಕ್ಕೆ ಹತ್ತಿರವಾಗಿದ್ದವರು. ಹಾಗಾಗಿ ಅವರು ಬರೆದದ್ದನ್ನು ಗಂಭೀರವಾಗಿ ತೆಗೆದುಕೊಳ್ಳಬೇಕಾಗುತ್ತದೆ. ಪ್ರಧಾನಿ ಸಿಂಗ್
ಸರ್ಕಾರಾವಧಿಯಲ್ಲಿ ಸುಪ್ರೀಂ ಆಗಿದ್ದವರು ಸೋನಿಯಾ ಅವರೇ.
- ಡಿ.ಪಿ. ತ್ರಿಪಾಠಿ, ಎನ್ಸಿಪಿ ನಾಯಕ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


