ಪ್ರಧಾನ ಸುದ್ದಿ

ಟಿಬಿ ಡ್ಯಾಂ ಹೂಳಿನ ಸಮಸ್ಯೆಗೆ ಜಲಾಶಯದಲ್ಲೇ ಪರಿಹಾರ!

ಟಿಬಿ ಡ್ಯಾಂ ಹೂಳಿನ ಸಮಸ್ಯೆಗೆ ಜಲಾಶಯದಲ್ಲೇ ಪರಿಹಾರ!
Published On :

ಕನ್ನಡಪ್ರಭ ವಾರ್ತೆ, ಬಳ್ಳಾರಿ, ಜೂ.2
ತನ್ನೊಡಲಲ್ಲಿ 31 ಟಿಎಂಸಿಗಳಷ್ಟು ಹೂಳು ಹುದುಗಿಸಿಟ್ಟುಕೊಂಡಿರುವ ತುಂಗಭದ್ರಾ ಜಲಾಶಯದ ನೀರು ಸಂಗ್ರಹಣಾ ಸಾಮರ್ಥ್ಯ ವೃದ್ಧಿಗೆ ತಜ್ಞರು ಹೊಸ ಐಡಿಯಾ ನೀಡಿದ್ದಾರೆ.
ಜಲಾಶಯದ ಹೂಳೆತ್ತುವುದು ದುಬಾರಿ ಸಾಹಸ. ಅದರ ಬದಲು ಜಲಾಶಯದ ಮೂಲೆಯೊಂದರಲ್ಲಿ ಪರ್ಯಾಯ ಜಲಾಶಯ ನಿರ್ಮಿಸುವುದೇ ಸೂಕ್ತ ಎಂದು ನೀರಾವರಿ ತಜ್ಞರು ಸರ್ಕಾರಕ್ಕೆ ಸಲಹೆ ನೀಡಿದ್ದಾರೆ!
ಅಚ್ಚರಿ ಪಡಬೇಡಿ! ತುಂಗಭದ್ರಾ ಜಲಾಶಯದ ಇಂಧ್ರಭವನ ಬೆಟ್ಟದ  ಕ್ಯಾಸನಕಂಡಿ ಪ್ರದೇಶದಲ್ಲಿ 2 ಕಿ.ಮೀ. ವ್ಯಾಪ್ತಿಯಲ್ಲಿ ಎರಡು ದಡಗಳನ್ನು ಕೂಡಿಸುವ ಕಣಿವೆಯಂಥ ಸ್ಥಳವೊಂದಿದೆ. ಇದು ಮತ್ತೊಂದು ಅಣೆಕಟ್ಟು ನಿರ್ಮಿಸುವುದಕ್ಕೆ ಹೇಳಿ ಮಾಡಿಸಿದಂತಿದೆ. ಒಂದು ವೇಳೆ ಈ ಕಣಿವೆಯನ್ನು ನೀರು ಸಂಗ್ರಹಿಸುವ ಜಲಾಶಯವಾಗಿ ಪರಿವರ್ತಿಸಿದರೆ ಹೆಚ್ಚುವರಿ ನೀರು ಸಂಗ್ರಹಿಸಿದಂತಾಗುತ್ತದೆ.
ತುಂಗಭದ್ರಾ ಜಲಾಶಯದ ಗರಿಷ್ಠ ಎತ್ತರ 1633 ಅಡಿ(ಸಮುದ್ರಮಟ್ಟದಿಂದ). ಆದರೆ, 1635 ಅಡಿ ಎತ್ತರಕ್ಕೇರಿಸಿದರೆ ಸಂಗ್ರಹವಾಗುವಷ್ಟು ನೀರಿಗೆ ಬೇಕಾಗುವಷ್ಟು ಭೂಮಿಯನ್ನು ಸ್ವಾಧೀನ ಮಾಡಿಕೊಳ್ಳಲಾಗಿದೆ. ಒಂದು ವೇಳೆ ಕಣಿವೆಯಂತಿರುವ ಭಾಗದಲ್ಲಿ ಪರ್ಯಾಯ ಅಣೆಕಟ್ಟು ಕಟ್ಟಿ ಅದರ ಎತ್ತರವನ್ನು 1640 ಅಡಿಗೆ ಎತ್ತರಿಸಿದೆ ಇನ್ನೂ 5 ಅಡಿಗಳಷ್ಟು ನೀರು ಸಂಗ್ರಹಿಸಲು ಸಾಧ್ಯವಾಗಲಿದೆ. ಗಮನಿಸಬೇಕಾದ ವಿಚಾರವೇನೆಂದರೆ 1500 ಎಕರೆ ವ್ಯಾಪ್ತಿಯಷ್ಟು ವಿಸ್ತಾರದ ಈ ಕಣಿವೆಯಂಥ ಜಾಗದ ಸುತ್ತಮುತ್ತ ಯಾವುದೇ ಗ್ರಾಮಗಳಿಲ್ಲ. ಬೆಟ್ಟ-ಗುಡ್ಡಗಳಿಂದ ಕೂಡಿರುವ ಕಾಯ್ದಿಟ್ಟ ಪ್ರದೇಶ ಅದು. ಹಾಗಾಗಿ ಇಲ್ಲಿ ಭೂಸ್ವಾಧೀದಂಥ ಸಮಸ್ಯೆಯೇ ಸೃಷ್ಟಿಯಾಗದು.
ಒಟ್ಟಾರೆ ಭೂಸ್ವಾಧೀನ ಇಲ್ಲದೆ ಸಮಾನಾಂತರ ಜಲಾಶಯದ ಮಾದರಿಯಲ್ಲಿ ಇದನ್ನು ನಿರ್ಮಿಸಿದಂತಾಗುತ್ತದೆ ಎಂಬುದು ತಜ್ಞರ ಲೆಕ್ಕಾಚಾರ.
ಮಳೆಗಾಲ ಕಳೆದ ಮೇಲೆ ಮುಖ್ಯ ಜಲಾಶಯದಲ್ಲಿ ನೀರು ಕಡಿಮೆಯಾದಾಗ ಈ ಪರ್ಯಾಯ ಜಲಾಶಯದಿಂದ ಅರ್ಧ ಟಿಎಂಸಿ ನೀರನ್ನು ಹೊರಕ್ಕೆ ಬಿಡಬಹುದು. ಅರ್ಧ ಟಿಎಂಸಿ ನೀರಿನಿಂದ 2400 ಎಕರೆ ಪ್ರದೇಶದಲ್ಲಿ ಬತ್ತ ಬೆಳೆಯಬಹುದು.
ಎಷ್ಟು ವೆಚ್ಚ?: ಎರಡು ಕಿ.ಮೀ. ಉದ್ದದ 1640 ಅಡಿಗಳ ಅಣೆಕಟ್ಟು ನಿರ್ಮಿಸಲು ಅಂದಾಜು 100 ಕೋಟಿ ವೆಚ್ಚವಾಗುತ್ತದೆ. ಜಲಾಶಯದಲ್ಲಿ 31.613 ಟಿಎಂಸಿ ಹೂಳು ತುಂಬಿದೆ. ಒಂದು ಟಿಎಂಸಿ ಹೂಳೆತ್ತಲು ಸುಮಾರು 250 ಕೋಟಿ ವೆಚ್ಚವಾಗುತ್ತದೆ. ಇಷ್ಟಾದರೂ ನೀರು ಕಡಿಮೆಯಾದಾಗ ಕೇವಲ 0.2 ಟಿಎಂಸಿಯಷ್ಟು ಹೂಳು ತೆಗೆಯಲಷ್ಟೇ ಸಾಧ್ಯ. ಆದರೆ ಪ್ರತಿ ವರ್ಷ ಹೂಳಿನ ಪ್ರಮಾಣ ಅರ್ಧ ಟಿಎಂಸಿಯಷ್ಟು ಹೆಚ್ಚಾಗುತ್ತಿದೆ.
ಜಲಾಶಯದ ಹೊರಗೆ ಸಮಾನಾಂತರ ಜಲಾಶಯ ನಿರ್ಮಿಸಬೇಕಾದರೆ ಮತ್ತೆ ಭೂಸ್ವಾಧೀನ ಮಾಡಿಕೊಳ್ಳಬೇಕು. ಅದಕ್ಕೆ ಹತ್ತಾರು ಸಮಸ್ಯೆಗಳು ಎದುರಾಗುತ್ತವೆ. ಭೂಸ್ವಾಧೀನಕ್ಕೇ 100 ಕೋಟಿ ಖರ್ಚಾಗುತ್ತದೆ.
ಅದಕ್ಕಿಂತ ಜಲಾಶಯದೊಳಗೇ ಈ ಪರ್ಯಾಯ ಜಲಾಶಯ ನಿರ್ಮಿಸುವುದೇ ಸೂಕ್ತ ಎಂದು ತಜ್ಞರು ಹೇಳುತ್ತಾರೆ.
ಮನವರಿಕೆ ಮಾಡಿಕೊಟ್ಟ ಗೋವಿಂದಲು: ನೀರಾವರಿ ಇಲಾಖೆ ನಿವೃತ್ತ ಅಧೀಕ್ಷಕ ಅಭಿಯಂತರ ಕೆ. ಗೋವಿಂದಲು ತುಂಗಭದ್ರಾ ಮಂಡಳಿ ಅಧ್ಯಕ್ಷರಿಗೆ ಪತ್ರ ಬರೆದು, ಜಲಾಶಯ ಎದುರಿಸುತ್ತಿರುವ ಹೂಳಿನ ಸಮಸ್ಯೆಗೆ ಇದು ಸೂಕ್ತ ಪರಿಹಾರ ಎಂದು ತಿಳಿಸಿದ್ದಾರೆ.
ಇಂಥ ಯೋಜನೆಯನ್ನು ಪೈಲಟ್ ಪ್ರಾಜೆಕ್ಟ್ ಆಗಿ ತೆಗೆದುಕೊಂಡು ಯಶಸ್ವಿಯಾದರೆ, ಜಲಾಶಯದ ಇತರ ಭಾಗದಲ್ಲಿ ಇದೇ ತೆರನಾಗಿ ಅಣೆಕಟ್ಟು ನಿರ್ಮಿಸಬಹುದು. ಕ್ಯಾಸನಕಿಂಡಿ ಭಾಗದಲ್ಲಿ ಎರಡೂ ದಡಗಳನ್ನು ಕೂಡಿಸಲು ಕೇವಲ 2 ಕಿ.ಮೀ. ಅಂತರ ಇರುವುದರಿಂದ ಅಣೆಕಟ್ಟು ಕಟ್ಟುವುದೂ ಸಹಕಾರಿ ಎಂಬ ಅಂಶವನ್ನು ಮನವರಿಕೆ ಮಾಡಿಕೊಟ್ಟಿದ್ದಾರೆ.



ತುಂಗಭದ್ರಾ ಜಲಾಶಯದ ವಿಸ್ತಾರ
378 ಚದರ ಕಿ.ಮೀ.
ನೀರು ಸಂಗ್ರಹಣಾ ಸಾಮರ್ಥ್ಯ
132.46 ಟಿಎಂಸಿ
ತುಂಬಿರುವ ಹೂಳು
31.61 ಟಿಎಂಸಿ
ಸದ್ಯ ಜಲಾಶಯದಲ್ಲಿ ಸಂಗ್ರಹವಾಗುತ್ತಿರುವ ನೀರು
100.85 ಟಿಎಂಸಿ
ಪರ್ಯಾಯ ಜಲಾಶಯದ ವಿರ್ಸ್ತೀರ್ಣ
1500 ಎಕರೆ

ಶಶಿಧರ ಮೇಟಿ


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.