ಕೌನ್ಸಿಲ್ ಸಭೆಯಲ್ಲೂ ಅಧಿಕಾರಿಗಳಿಗೆ ಮಹಾಮಂಗಳಾರತಿ

ಕ.ಪ್ರ. ವಾರ್ತೆ | ಬೆಂಗಳೂರು |ಜೂ.15
ಕಸ ವಿವಾದ ಗದ್ದಲ ಮಂಗಳವಾರ ಬಿಬಿಎಂಪಿ ಕೌನ್ಸಿಲ್ ಸಭೆಯಲ್ಲೂ ಮುಂದುವರಿಯಿತು.
ಎಲ್ಲಾ ಸದಸ್ಯರೂ ಅಧಿಕಾರಿಗಳ ತಲೆ ಮೇಲೆಕಸವನ್ನೇ ಸುರಿದಂತೆ ಆರೋಪಗಳ ಸುರಿಮಳೆ ಸುರಿಸಿ ತರಾಟೆಗೆ ತೆಗೆದುಕೊಂಡರು. ಇದರೊಂದಿಗೆ ಕಸ ಸಮಸ್ಯೆಗೆ ಕಾರಣರಾದ ಜಂಟಿ ಆಯುಕ್ತರಿಗೆ ಕೌನ್ಸಿಲ್ ಸಭೆಯಲ್ಲೂ ಮಹಾಮಂಗಳಾರತಿ ಮುಂದುವರಿಯಿತು.
ಮುಖ್ಯಮಂತ್ರಿ ಸಿದ್ದರಾಮಯ್ಯ ಸೋಮವಾರವಷ್ಟೇ ಅಧಿಕಾರಿಗಳನ್ನು ನಿಲ್ಲಿಸಿಕೊಂಡು ಮಂಗಳಾರತಿ ಮಾಡಿದ್ದರು. ಅದೇ ಗುಂಗಿನಲ್ಲಿ ಸಭೆಗೆ ಬಂದಿದ್ದ ಸದಸ್ಯರು ಅಧಿಕಾರಿಗಳ ವಿರುದ್ಧ ಚಾಟಿ ಬಿಸಿದರು. ಕರ್ತವ್ಯ ನಿರ್ಲಕ್ಷಿಸಿದ ಅಧಿಕಾರಿಗಳಿಗೆ ಪ್ರಥಮ ಬಾರಿಗೆ ಮುಖ್ಯಮಂತ್ರಿ ಛೀಮಾರಿ ಹಾಕಿದ್ದನ್ನು ಅನೇಕ ಸದಸ್ಯರು ಪ್ರಶಂಸಿಸಿದರು. ಅದರಲ್ಲೂ ಬಿಜೆಪಿಯ ಎನ್.ನಾಗರಾಜ್ ಮುಖ್ಯಮಂತ್ರಿ ಅವರನ್ನು ಅಭಿನಂದಿಸಿದರು. ಸಭೆ ಆರಂಭವಾಗುತ್ತಿದ್ದಂತೆ ಮೇಯರ್ ಕಟ್ಟೆ ಸತ್ಯನಾರಾಯಣ ಮಾತನಾಡಿ, ಮುಖ್ಯಮಂತ್ರಿಗಳ ತರಾಟೆ ವಿಚಾರ ಪ್ರಸ್ತಾಪಿಸಿದರು. ಅಧಿಕಾರಿಗಳು ನಿರ್ವಹಿಸಿದ ಕರ್ತವ್ಯಗಳ ಮಾಹಿತಿ ಇರುವ ಡೈರಿಗಳನ್ನು ಮುಖ್ಯಮಂತ್ರಿ ನೇತೃತ್ವದ ಸಭೆಗೆ ತಂದಿಲ್ಲ ಎಂದರೆ ಅವರಿಗೆ ಏನು ಹೇಳುವುದು ಎಂದು ರೇಗಿದರು. ಇನ್ನುಮುಂದೆ ಪ್ರತಿ ಶನಿವಾರ ಸಮಗ್ರ ಸ್ವಚ್ಛತಾ ಕಾರ್ಯಕ್ರಮ ನಡೆಸಬೇಕು. ಆನಂತರ ಎಲ್ಲಾ ಪ್ರಮುಖ ನಾಯಕರಿಗೂ ಮಾಹಿತಿ ನೀಡಬೇಕು. ಇಲ್ಲದಿದ್ದರೆ ಕಠಿಣ ಶಿಕ್ಷೆ ಗ್ಯಾರಂಟಿ ಎಂದು ಮೇಯರ್ ಎಚ್ಚರಿಸಿದರು.
ಭಿಕ್ಷುಕರ ವಸತಿಗೃಹ: ಬಿಬಿಎಂಪಿ ಕಸ ವಿಂಗಡಣೆಗೆಂದೇ ಅನೇಕ ವಾರ್ಡ್ಗಳಲ್ಲಿ ಸೆಗ್ರಿಗೇಷನ್ ಸೆಂಟರ್ಗಳನ್ನು ಆರಂಭಿಸಿತು. ಆದರೆ ಅಧಿಕಾರಿಗಳು ಅದನ್ನು ಸರಿಯಾಗಿ ನಿರ್ವಹಿಸದೆ ಅವೆಲ್ಲಾ ಈಗ ಭಿಕ್ಷುಕರ ವಸತಿಗೃಹಗಳಾಗಿವೆ ಎಂದು ಪ್ರತಿಪಕ್ಷ ನಾಯಕ ಮಂಜುನಾಥ್ ರೆಡ್ಡಿ ಅಧಿಕಾರಿಗಳ ವಿರುದ್ಧ ಗುಡುಗಿದರು.
ಅನೇಕ ಕಡೆ ಗುತ್ತಿಗೆದಾರರು ಕಡಿಮೆ ಸಿಬ್ಬಂದಿ ನಿಯೋಜಿಸಿ ಹೆಚ್ಚಿನ ಸಿಬ್ಬಂದಿಗೆ ಬಿಲ್ ಪಡೆಯುತ್ತಿದ್ದಾರೆ. ಈ ಬಗ್ಗೆ ಆಡಳಿತ ಪಕ್ಷ ಸದಸ್ಯರೇ ದೂರು ನೀಡಿದ್ದಾರೆ. ಇದನ್ನು ತನಿಖೆ ಮಾಡಿ ಕ್ರಮಕೈಗೊಳ್ಳಬೇಕೆಂದೂ ರೆಡ್ಡಿ ಆಗ್ರಹಿಸಿದರು. ಇದೇ ವೇಳೆ ಮೇಯರ್ ಕಟ್ಟೆ ಸತ್ಯನಾರಾಯಣ ಮತ್ತು ಆಯುಕ್ತ ಲಕ್ಷ್ಮೀನಾರಾಯಣ ಅವರು ಮುಖ್ಯಮಂತ್ರಿಗಳು ಅಧಿಕಾರಿಗಳನ್ನು ಹೇಗೆಲ್ಲಾ ತರಾಟೆಗೆ ತೆಗೆದುಕೊಂಡರು, ಏನೆಲ್ಲಾ ಪ್ರಶ್ನೆ ಮಾಡಿ ತಪ್ಪುಗಳನ್ನು ಗುರುತಿಸಿದರು ಎಂದು ಸಭೆಗೆ ಮಾಹಿತಿ ನೀಡಿದರು. ಇದರಿಂದ ತಮಗಾದ ಮುಜುಗರವನ್ನೂ ಸಭೆಯಲ್ಲಿ ಹಂಚಿಕೊಂಡರು.
ಆಯುಕ್ತರ ಅಸಹಾಯಕತೆ
ನಗರದ ಕಸ ಸಮಸ್ಯೆ ಬಗೆಹರಿಸಲು ಶಾಸಕರಿಂದ ಸಹಕಾರ ಸಿಗುತ್ತಿಲ್ಲ ಎಂದು ಬಿಬಿಎಂಪಿ ಆಯುಕ್ತ ಎಂ.ಲಕ್ಷ್ಮೀನಾರಾಯಣ ನೇರವಾಗಿಯೇ ಆರೋಪಿಸಿದರು. ಚಿಕ್ಕಮಂಗಲದಲ್ಲಿ ಕಸ ಸಂಸ್ಕರಣಾ ಘಟಕ ಸ್ಥಾಪಿಸಲು ಕಟ್ಟಡ ನಿರ್ಮಿಸಲಾಗಿತ್ತು. ಆದರೆ ಆ ಪ್ರದೇಶದಲ್ಲಿ ಬಡಾವಣೆಗಳು, ಅಪಾರ್ಟ್ಮೆಂಟ್ಗಳು ಬರುತ್ತಿವೆ ಎನ್ನುವ ಕಾರಣಕ್ಕೆ ದುಷ್ಕರ್ಮಿಗಳ ಬಿಬಿಎಂಪಿ ನಿರ್ಮಿಸಿದ್ದ ಕಟ್ಟಡವನ್ನೇ ನೆಲಸಮಗೊಳಿಸಿದ್ದಾರೆ. ಇಂಥ ಸಮಸ್ಯೆ ಬಗೆಹರಿಸಲು ಶಾಸಕರು ಸಹಕಾರ ನೀಡಬೇಕು. ಇದೇರೀತಿ ಬೇರೆ ಕ್ಷೇತ್ರಗಳಲ್ಲೂ ವಿರೋಧವಿದೆ, ಅನೇಕ ಕಡೆ ಕಸ ಸಂಸ್ಕರಣಾ ಘಟಕಕ್ಕೆ ಜಾಗ ನೀಡಲು ಯಾರೂ ಮುಂದೆ ಬರುತ್ತಿಲ್ಲ. ಅಂಥ ಕಡೆ ಶಾಸಕರೂ ಮುಂದೆ ನಿಲ್ಲಬೇಕು. ಆದರೆ ಶಾಸಕರು ಸಹಕಾರ ನೀಡುತ್ತಿಲ್ಲ. ಆದರೂ ಶಾಸಕರಿಗೆ ಮತ್ತೆ ಮನವಿ ಮಾಡುತ್ತೇನೆ ಎಂದು ಹೇಳಿದರು.
ತೆರಿಗೆ ಸಂಗ್ರಹದ ಶ್ವೇತಪತ್ರ ಹೊರಡಿಸಿ
ಬಿಬಿಎಂಪಿ ಅಧಿಕಾರಿಗಳು ಆಸ್ತಿ ತೆರಿಗೆ ಸಂಗ್ರಹದಲ್ಲಿ ಹಿಂದುಳಿದಿದ್ದು, ಎಷ್ಟು ಆಸ್ತಿಗಳಿಂದ ಎಷ್ಟು ಆಸ್ತಿ ಸಂಗ್ರಹಿಸಲಾಗಿದೆ ಎಂದು ಶ್ವೇತಪತ್ರ ಹೊರಡಿಸಬೇಕೆಂದು ಆಡಳಿತ ಪಕ್ಷದವರೇ ಆದ ಮಂಜುನಾಥ್ರಾಜು ಆಗ್ರಹಿಸಿದರು. ಅಧಿಕಾರಿಗಳು ಹೇಳಿರುವ ಪ್ರಕಾರ ಕೇವಲ 20 ಆಸ್ತಿಗಳಿಂದಲೇ 80 ಕೋಟಿ ತೆರಿಗೆ ಬಾಕಿ ಇದೆ ಎಂದರೆ, ಒಟ್ಟು 6ಲಕ್ಷ ಆಸ್ತಿಗಳಿಂದ ಎಷ್ಟು ತೆರಿಗೆ ಬಾಕಿ ಇದೆ? ಅದರಲ್ಲಿ ಎಷ್ಟು ವಸೂಲಿ ಮಾಡಲಾಗಿದೆ ಎಂದು ಅಧಿಕಾರಿಗಳು ಸಭೆಗೆ ದಾಖಲೆ ಸಹಿತ ವಿವರಿಸಬೇಕು ಎಂದು ಒತ್ತಾಯಿಸಿದರು.
ಬಿಬಿಎಂಪಿ ವ್ಯಾಪ್ತಿಯಲ್ಲಿ ರು. 1ಲಕ್ಷಕ್ಕೂ ಹೆಚ್ಚಿನ ತೆರಿಗೆ ಪಾವತಿಸುವ 3 ಲಕ್ಷ ಆಸ್ತಿಗಳಿವೆ. ಇವುಗಳಿಂದ ಏಕೆ ತೆರಿಗೆ ವಸೂಲಿ ಮಾಡುತ್ತಿಲ್ಲ. ಹಾಗಾದರೆ ತೆರಿಗೆ ವಸೂಲಿಗೆ ಇರುವ 2000 ಸಿಬ್ಬಂದಿ ಏನು ಮಾಡುತ್ತಿದ್ದಾರೆ ಎಂದು ಮಂಜುನಾಥ್ ರಾಜು ತರಾಟೆಗೆ ತೆಗೆದುಕೊಂಡರು.
ಅಧಿಕಾರಿಗಳ ಅಮಾನತಿಗೆ ಆಗ್ರಹ
ಬೆಂಗಳೂರು: ಅನಧಿಕೃತ ಜಾಹೀರಾತುಗಳಿಗೆ ಅವಕಾಶ ನೀಡಿರುವ ಭ್ರಷ್ಟ ಅಧಿಕಾರಿಗಳನ್ನು ಅಮಾನತುಗೊಳಿಸಬೇಕು ಪ್ರತಿಪಕ್ಷ ಕಾಂಗ್ರೆಸ್ ಸದಸ್ಯರು ಮಂಗಳವಾರ ಬಿಬಿಎಂಪಿ ಕೌನ್ಸಿಲ್ ಸಭೆಯಲ್ಲಿ ಧರಣಿ ನಡೆಸಿದರು. ಜಾಹೀರಾತು ಅಧಿಕಾರಿಗಳು ಕಾಯ್ದೆ ಉಲ್ಲಂಘಿಸಿ, ನಿಯಮಗಳನ್ನು ಗಾಳಿಗೆ ತೂರಿ ಎಲ್ಲೆಂದರಲ್ಲಿ ಜಾಹಿರಾತು ಫಲಕ ಹಾಕುವುದಕ್ಕೆ ಅವಕಾಶ ನೀಡಿರುವ ಬಗ್ಗೆ ದಾಖಲೆ ಸಹಿತ ಸಭೆಗೆ ಬಿಜೆಪಿಯ ಎಸ್.ಹರೀಶ್ ವಿವರಿಸಿದರು. 'ನಮ್ಮ ಅಧಿಕಾರಿಗಳು ಸತ್ತವರನ್ನೂ ಬಿಡುವುದಿಲ್ಲ. ಅವರೇಕೆ ತಣ್ಣಗೆ ಮಲಗಿದ್ದಾರೆ ಎಂದು ಕೆಲವು ಸ್ಮಶಾನಗಳಲ್ಲೂ ಅಕ್ರಮ ಜಾಹೀರಾತು ಹಾಕಿದ್ದಾರೆ. ಅದೂ ಹೆಣ್ಣುಮಕ್ಕಳ ಅರೆಬೆತ್ತಲೆ ಚಿತ್ರದ ಜಾಹೀರಾತು ಹಾಕಿದ್ದಾರೆ. ಇದನ್ನು ಪ್ರಶ್ನಿಸಿದವರ ಮೇಲೆ ಹಲ್ಲೆ ನಡೆಸುವ ಪ್ರಯತ್ನವೂ ಆಗಿದೆ' ಎಂದೂ ಆರೋಪಿಸಿದರು. ಇದಕ್ಕೆ ಅನೇಕ ಸದಸ್ಯರು ದನಿಗೂಡಿಸಿದರು.
ಅಮಾನತಿಗೆ ಆಗ್ರಹ: ಆಡಳಿತಪಕ್ಷದ ಮಾಜಿ ನಾಯಕ ಎನ್.ನಾಗರಾಜು, 'ಜಾಹೀರಾತು ವಿಭಾಗದ ಸಹಾಯಕ ಆಯುಕ್ತರು ಹವಾನಿಯಂತ್ರಿತ ಕಚೇರಿ, ಕಾರುಗಳಲ್ಲಿ ಕುಳಿತು ಅಕ್ರಮ ಜಾಹೀರಾತು ನೀಡುವ ಕಡತಗಳಿಗೆ ಸಹಿ ಹಾಕುತ್ತಿದ್ದಾರೆ. ಹೀಗಾಗಿ ಅಧಿಕಾರಿಗಳಿಗೆ ಅಕ್ರಮ ಜಾಹಿರಾತು ಕಾಣುತ್ತಿಲ್ಲ' ಎಂದು ಲೇವಡಿ ಮಾಡಿದರು. ಇತ್ತೀಚಿಗೆ ಅಧಿಕಾರಿಗಳು ಹೊಸದಾಗಿ 80 ಅಕ್ರಮ ಜಾಹೀರಾತುಗಳಿಗೆ ಅನುಮತಿ ನೀಡಿದ್ದಾರೆ.
ಅದರಲ್ಲೂ ಸಹಾಯಕ ಆಯುಕ್ತ ಜಗದೀಶ್ ಎಂಬ ಅಧಿಕಾರಿ ಯಾರಿಗೂ ತಿಳಿಯದಂತೆ ಅನೇಕ ಜಾಹೀರಾತುಗಳಿಗೆ ಅನುಮತಿ ನೀಡಿ ಅಕ್ರಮ ಎಸಗಿದ್ದಾರೆಂದು ಆರೋಪಿಸಿದರು. ಇಷ್ಟೇ ಅಲ್ಲದೆ, ಜಗದೀಶ್ 5000 ಕುರ್ಚಿಗಳನ್ನು ಫುಟ್ಪಾತ್ನಲ್ಲಿ ಅಳವಡಿಸುವ ನಿರ್ಧಾರ ಕೈಗೊಂಡು ಕೋಟ್ಯಂತರ ರುಪಾಯಿ ಅಕ್ರಮಕ್ಕೆ ಕೈ ಹಾಕಿದ್ದಾರೆ. ಈ ಅಧಿಕಾರಿ ಯಾರಿಗೂ ತಿಳಿಯದಂತೆ ಮಾಡಿದ್ದಾರೆ. ಇವರನ್ನು ಅಮಾನತುಗೊಳಿಸಬೇಕೆಂದು ಆಗ್ರಹಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


