ನೀವು ಅಲ್ಪರಾಗಿಯೇ ಉಳಿಯಿರಿ!

- ಅಲ್ಪಸಂಖ್ಯಾತ ಸಮುದಾಯಕ್ಕೆ ರಾಜ್ಯ ಸರ್ಕಾರದ ಹೊಸ ಸಂದೇಶ
- ಸುಪ್ರೀಂಕೋರ್ಟ್ ತೀರ್ಪಿಗೆ ವಿರುದ್ಧವಾಗಿ ನಿಯಮ ರೂಪಿಸಿ ಅಹಿಂದಕ್ಕೆ ಹೊಸ ಭಾಷ್ಯ ಬರೆದ ಸರ್ಕಾರ
- ಶೇ.25ರ ನೀತಿ ಬಗ್ಗೆ ಶಿಕ್ಷಣ ಇಲಾಖೆಗೇ ಗೊತ್ತಿರಲಿಲ್ಲ
- ಭಾಷಾ ಹಾಗೂ ಧಾರ್ಮಿಕ ಅಲ್ಪಸಂಖ್ಯಾತ ಶಿಕ್ಷಣೋದ್ಯಮಿಗಳ ಪರ ನಿಂತ ಸರ್ಕಾರ
ಕನ್ನಡಪ್ರಭ ವಾರ್ತೆ, ಬೆಂಗಳೂರು, ಜೂ.17
ಅಹಿಂದ ಎಂದರೆ ಅಲ್ಪಸಂಖ್ಯಾತರನ್ನು ಹಿಂದುಳಿಸುವುದು!
ಸರ್ಕಾರದ ಅಲ್ಪಸಂಖ್ಯಾತರ ಮೇಲಿನ ಪ್ರೀತಿ ಇರುವುದು ಉದ್ಯಮಿಗಳ ಮೇಲೆ ಹೊರತು ಬಡ ಅಲ್ಪಸಂಖ್ಯಾತ ವಿದ್ಯಾರ್ಥಿಗಳ ಮೇಲಲ್ಲ ಎನ್ನುವುದು ಸಾಬೀತಾಗಿದೆ. ಅಲ್ಪಸಂಖ್ಯಾತ, ಹಿಂದುಳಿದ, ದಲಿತರ ಶ್ರೇಯೋಭಿವೃದ್ಧಿಯೇ ನಮ್ಮ ಮಂತ್ರ ಎಂದು ಆಡಳಿತ ನಡೆಸುತ್ತಿರುವ ರಾಜ್ಯ ಸರ್ಕಾರ ಅಲ್ಪಸಂಖ್ಯಾತರ ಮೇಲಿನ ನೈಜ ಪ್ರೀತಿ ಹೊರಗೆಡವಿದೆ.
ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಗಳಲ್ಲಿ ಶೇ.25ರಷ್ಟು ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ಅವಕಾಶ ನೀಡಿದರೆ ಸಾಕು ಎಂದು ಹೇಳಿದೆ. ವಿಚಿತ್ರವೆಂದರೆ ಸಂವಿಧಾನ ವಿರೋಧಿಯಾದ ಈ ನೀತಿಯನ್ನು ಶಿಕ್ಷಣ ಇಲಾಖೆಯ ಶಿಫಾರಸು ಹಾಗೂ ಶಿಕ್ಷಣ ಸಂಸ್ಥೆಗಳ ಒಕ್ಕೂಟದ ಬೇಡಿಕೆಗೆ ಮಿಗಿಲಾಗಿ ಮಾಡಲಾಗಿದೆ. ವಕ್ಫ್ ಸಚಿವ ಖಮರುಲ್ ಇಸ್ಲಾಂ ಅವರ 'ಅಲ್ಪಸಂಖ್ಯಾತ' ಪ್ರೀತಿಗೆ ಸೋತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಅಲ್ಪಸಂಖ್ಯಾತ ಮಾನ್ಯತೆಗೆ ಕತ್ತರಿ ಪ್ರಯೋಗ ಮಾಡಿದ್ದಾರೆ.
ಪ್ರಾಥಮಿಕ ಶಿಕ್ಷಣ ಅಲ್ಪಸಂಖ್ಯಾತ ಸಂಸ್ಥೆಗಳಿಗೆ ನೂತನ ಮಾರ್ಗದರ್ಶಿ ಹೊರಡಿಸಿರುವ ರಾಜ್ಯ ಸರ್ಕಾರ, ಅಲ್ಪಸಂಖ್ಯಾತ ವಿದ್ಯಾರ್ಥಿಗಳ ಪರ ನಿಲ್ಲುವುದರ ಬದಲಾಗಿ ಶಿಕ್ಷಣೋದ್ಯಮಿಗಳಿಗೆ ಶರಣಾಗಿದೆ. ಅಲ್ಪಸಂಖ್ಯಾತ ಮಾನ್ಯತೆಗೆ ಹೊಸ ಭಾಷ್ಯ ಬರೆದಿದೆ. ಅಲ್ಪಸಂಖ್ಯಾತರ ಹೆಸರಲ್ಲಿ ಶಿಕ್ಷಣ ಸಂಸ್ಥೆಗಳನ್ನು ನಡೆಸಿ ದುಡ್ಡು ಮಾಡಿಕೊಳ್ಳಿ, ಅಲ್ಪಸಂಖ್ಯಾತರನ್ನು ಶಿಕ್ಷಣ ರಂಗದಲ್ಲಿ ಮುಂದುವರಿಯುವಂತೆ ಮಾಡುವ ಅಗತ್ಯವಿಲ್ಲ ಎಂಬ ಸಂದೇಶ ನೀಡಿದೆ.
ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಗಳ ಸೀಟುಗಳಿಗೆ ಸಂಬಂಧಿಸಿ ರಾಜ್ಯ ಸರ್ಕಾರ ಕಳೆದ ಶುಕ್ರವಾರ ಹೊಸ ಸುತ್ತೋಲೆ ಹೊರಡಿಸಿದೆ. ಇದರ ಪ್ರಕಾರ ಯಾವ ಆಧಾರದಲ್ಲಿ ಅಲ್ಪಸಂಖ್ಯಾತ ಮಾನ್ಯತೆ ಪಡೆದಿದ್ದಾರೆಯೋ ಆ ಸಮುದಾಯಕ್ಕೆ ಶೇ.25ರಷ್ಟು ಸೀಟುಗಳನ್ನು ನೀಡಬೇಕು ಎಂದು ರಾಜ್ಯ ಸರ್ಕಾರ ಹೇಳಿದೆ. ಹಿಂದಿನ ಬಿಜೆಪಿ ಸರ್ಕಾರ ಇದನ್ನು ಶೇ.75ಕ್ಕೆ ಏರಿಸಿತ್ತು.
ಸುಪ್ರೀಂಕೋರ್ಟ್ ತೀರ್ಪು ಉಲ್ಲಂಘನೆ
ಕಳೆದ 2013ರ ಏಪ್ರಿಲ್ನಲ್ಲಿ ಶಿಕ್ಷಣ ಹಕ್ಕು ಕಾಯಿದೆ ಕುರಿತಂತೆ ತೀರ್ಪು ನೀಡುವಾಗ 121ನೇ ಪ್ಯಾರಾದಲ್ಲಿ ಒಂದು ವಿಚಾರ ಪ್ರಸ್ತಾಪಿಸಿದೆ. ಸೇಂಟ್ ಸ್ಟೀನ್ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಹೇಳಿರುವಂತೆ ಅಲ್ಪಸಂಖ್ಯಾತ ಮಾನ್ಯತೆ ಹೊಂದಿದ ಶಿಕ್ಷಣ ಸಂಸ್ಥೆಗಳು ಆ ಸಮುದಾಯಕ್ಕೆ ಶೇ.50ಕ್ಕೆ ಕಡಿಮೆಯಿಲ್ಲದಂತೆ ಸೀಟುಗಳನ್ನು ನೀಡಲೇಬೇಕು. ಇದನ್ನು ಆಧರಿಸಿ ನ್ಯಾ.ರಾಧಾಕೃಷ್ಣನ್ ಅವರನ್ನೊಳಗೊಂಡ ಸುಪ್ರೀಂ ನ್ಯಾಯಪೀಠವು ಹೀಗೆ ಹೇಳಿದೆ. 'ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಗಳು ಹೆಚ್ಚಿನ ಸಂಖ್ಯೆಯಲ್ಲಿ ಅದೇ ಸಮುದಾಯಕ್ಕೆ ಸೀಟು ಮೀಸಲು ನೀಡಲೇಬೇಕು. ಇದನ್ನು ಕಡ್ಡಾಯಗೊಳಿಸುವ ವಿಚಾರ ಆಯಾ ರಾಜ್ಯ ಸರ್ಕಾರಕ್ಕೆ ಸಂಬಂಧಿಸಿದ್ದು' ಎಂದಿದೆ.
ಇದೇ ವಿಚಾರವನ್ನು ಗಮನದಲ್ಲಿಟ್ಟುಕೊಂಡು ಶಿಕ್ಷಣ ಇಲಾಖೆ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿತ್ತು. ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಗಳಲ್ಲಿ ಶೇ.50ರಷ್ಟು ಅದೇ ಸಮುದಾಯಕ್ಕೆ ಸೇರಿದ ವಿದ್ಯಾರ್ಥಿಗಳಿಗೆ ಸೀಟು ನೀಡಬೇಕು ಎಂದು ಸರ್ಕಾರಕ್ಕೆ ಹೇಳಿತ್ತು. ಆದರೆ ಅಂತಿಮ ಆದೇಶ ಹೊರಬರುವಾಗ ಶೇ.25ಕ್ಕೆ ಇಳಿಸಲಾಗಿತ್ತು.
ಯಾರ ಉದ್ಧಾರಕ್ಕೆ ಈ ನೀತಿ?
ಸುಪ್ರೀಂ ಕೋರ್ಟ್ ಹಾಗೂ ಸಂವಿಧಾನದಲ್ಲಿ ಹೇಳಿರುವಂತೆ ಅಲ್ಪಸಂಖ್ಯಾತರಿಗೆ ವಿಶೇಷ ಮಾನ್ಯತೆ ನೀಡುವುದು ಯಾವುದೋ ಒಬ್ಬ ಉದ್ಯಮಿಯ ಹೊಟ್ಟೆ ತುಂಬಿಸಲಲ್ಲ. ಆ ಉದ್ಯಮಿಯ ಸಮುದಾಯ ಪ್ರಾಥಮಿಕ ಸವಲತ್ತುಗಳಿಂದ ವಂಚಿತವಾಗಿದೆ. ಈ ಮಾನ್ಯತೆ ಮೂಲಕ ಆ ಸಮುದಾಯವನ್ನು ಮೇಲೆತ್ತಬೇಕು ಎನ್ನುವುದರಿಂದ ಶಿಕ್ಷಣ ಹಕ್ಕು ಕಾಯಿದೆ ಹಾಗೂ ಇನ್ನಿತರ ಸರ್ಕಾರಿ ನಿಯಮಗಳಿಂದ ರಿಯಾಯಿತಿ ನೀಡಲಾಗುತ್ತಿದೆ. ಆದರೆ ಇದನ್ನು ಇಂತಹ ಉದ್ಯಮಿಗಳು ತಮ್ಮ ಹೊಟ್ಟೆ ತುಂಬಿಸಿಕೊಳ್ಳಲು ಬಳಸಿಕೊಳ್ಳುತ್ತಿದ್ದಾರೆ.
ಈ ಸರ್ಕಾರಕ್ಕೆ ಅಲ್ಪಸಂಖ್ಯಾತರ ಮೇಲೆ ಅಷ್ಟೊಂದು ಪ್ರೀತಿಯಿದ್ದರೆ ಈ ಪ್ರಮಾಣವನ್ನು ಶೇ.25ಕ್ಕೆ ಇಳಿಸುತ್ತಿರಲಿಲ್ಲ. ಬದಲಾಗಿ ಅಲ್ಪಸಂಖ್ಯಾತರ ಹೆಸರಲ್ಲಿ ಕೋಟಿ ಕೋಟಿ ಲೂಟಿ ಮಾಡುತ್ತಿರುವ ಶಿಕ್ಷಣ ಸಂಸ್ಥೆಗಳಿಗೆ ಬುದ್ಧಿ ಹೇಳಿ, ಅಲ್ಪಸಂಖ್ಯಾತರ ಶಿಕ್ಷಣದ ಪರ ವಕಾಲತ್ ವಹಿಸಿ ಎನ್ನುತ್ತಿತ್ತು.
ಬಿಜೆಪಿ ಸರ್ಕಾರ ಮಾಡಿದ್ದ ನೀತಿ ಪ್ರಕಾರ ಅಲ್ಪಸಂಖ್ಯಾತ ಮಾನ್ಯತೆ ಪಡೆದ ಶಿಕ್ಷಣ ಸಂಸ್ಥೆಗಳಲ್ಲಿ ಆ ಸಮುದಾಯಕ್ಕೆ ಸೇರಿದ ಶೇ.75ರಷ್ಟು ವಿದ್ಯಾರ್ಥಿಗಳಿರಬೇಕಿತ್ತು. ಇದನ್ನು ಸಂವಿಧಾನ ವಿರೋಧಿ ಎಂದು ಶಿಕ್ಷಣೋದ್ಯಮಿಗಳು ಕಾನೂನು ಹೋರಾಟ ನಡೆಸಿದ್ದರು. ಆದರೆ ಈಗ ರಾಜ್ಯ ಸರ್ಕಾರ ಇದಕ್ಕೆ ಸಂಪೂರ್ಣ ವಿರೋಧವಾಗಿ ಉದ್ಯಮಿಗಳ ಎದುರು ಮಖಾಡೆ ಮಲಗಿದೆ.
-ರಾಜೀವ ಹೆಗಡೆ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


