ರಾಜ್ಯಪಾಲರಿಗೂ ತಟ್ಟಿತು ಬದಲು ಪರ್ವ; ಪದತ್ಯಾಗ ಮಾಡಿದ್ರು ಉತ್ತರ ಗೌರ್ನರ್

ನವದೆಹಲಿ: ಬದಲಾವಣೆ ರಾಜಕೀಯ ಈಗ ರಾಜ್ಯಪಾಲರ ಕಾಲುಬುಡಕ್ಕೆ ಬಂದಿದೆ. ಈ ಸಂಬಂಧದ ಮೊದಲ ಬಲಿ ಉತ್ತರ ಪ್ರದೇಶ ರಾಜ್ಯಪಾಲ. ಬನ್ವಾರಿ ಲಾಲ್ ಜೋಷಿ ಮಂಗಳವಾರ ರಾಜಿನಾಮೆ ಸಲ್ಲಿಸಿದ್ದಾರೆ.
ನಿವೃತ್ತ ಐಪಿಎಸ್ ಅಧಿಕಾರಿ ಆಗಿದ್ದ ಬಿ.ಎಲ್. ಜೋಷಿ 2009ರಲ್ಲಿ ಉತ್ತರ ಪ್ರದೇಶದ ರಾಜ್ಯಪಾಲರಾಗಿ ಆಯ್ಕೆಯಾಗಿದ್ದರು. ಈ ಹಿಂದೆ ಮಾಯಾವತಿ ಸಿಎಂ ಆಗಿದ್ದಾಗಲೂ, ಈಗಿನ ಅಖಿಲೇಶ್ ಯಾದವ್ ಜೊತೆಗೂ ಉತ್ತಮ ಸಂಬಂಧ ಹೊಂದಿದ್ದರು. ಯುಪಿಎ ಅವಧಿಯಲ್ಲಿ ಆಯ್ಕೆಯಾದ ರಾಜ್ಯಪಾಲರೆಲ್ಲ ರಾಜಿನಾಮೆ ಸಲ್ಲಿಸುವಂತೆ ಕೇಂದ್ರ ಸೂಚಿಸಿದ್ದೇ ಸೈ, ಜೋಷಿ ಹೊರ ನಡೆದಿದ್ದಾರೆ. ಅದರಲ್ಲೂ ವಿಶೇಷವಾಗಿ ಕೇರಳ (ಶೀಲಾ ದಿಕ್ಷಿತ್), ಪಂಜಾಬ್ (ಶಿವರಾಜ್ ಪಾಟೀಲ್), ಮಧ್ಯಪ್ರದೇಶ (ರಾಮ್ ನರೇಶ್ ಯಾದವ್), ಪಶ್ಚಿಮ ಬಂಗಾಳ (ಎಂ.ಕೆ. ನಾರಾಯಣನ್) ಹಾಗೂ ಕಮಲಾ ಬೇನಿವಾಲ್ (ಗುಜರಾತ್) ಮೇಲೆ ಎನ್ಡಿಎ ಸರ್ಕಾರ ವಿಶೇಷ ಕಣ್ಣಿಟ್ಟಿತ್ತು. ಆದರೆ, ಬಿ.ಎಲ್. ಜೋಷಿ ರಾಜಿನಾಮೆಯನ್ನು ಎನ್ಡಿಎ ಬಯಸಿರಲಿಲ್ಲ. ಇನ್ನು ಒಂದೆರಡು ತಿಂಗಳಲ್ಲಿ ಅವರ ಅಧಿಕಾರ ಮುಗಿಯುತ್ತಿದ್ದರಿಂದ ಕೇಂದ್ರಕ್ಕೆ ಅವರ ರಾಜಿನಾಮೆ ಬೇಕಿರಲಿಲ್ಲ.
ಖಾಸಗಿ ವಿಚಾರಕ್ಕೆ ಭೇಟಿ
ಕರ್ನಾಟಕ ರಾಜ್ಯಪಾಲ ಭಾರದ್ವಾಜ್ ಅಧಿಕಾರದ ಅವಧಿ ಜೂ.28ಕ್ಕೆ ಮುಗಿಯಲಿದ್ದು, 'ಯಾರೂ ನನಗೆ ರಾಜೀನಾಮೆ ನೀಡಿ ಎಂದು ಹೇಳುವ ಅಗತ್ಯವಿಲ್ಲ. ಖಾಸಗಿ ವಿಚಾರಕ್ಕೆ ರಾಷ್ಟ್ರಪತಿಯವರನ್ನು ಭೇಟಿಯಾದೆ' ಎಂದು ಸ್ಪಷ್ಟಪಡಿಸಿದರು.
ರಾಜಿನಾಮೆ ಏಕೆ?
ಎನ್ಡಿಎ ಸರ್ಕಾರಕ್ಕೆ ರಾಜ್ಯಪಾಲರ ವಿಕೆಟ್ಗಳನ್ನು ಉರುಳಿಸದೆ ವಿಧಿಯಿಲ್ಲ. 'ಕಡಿಮೆ ಖಾತೆ, ಹೆಚ್ಚು ಕೆಲಸ' ನೀತಿಯ ಮೋದಿ ಅವರು ಕ್ಯಾಬಿನೆಟ್ನಲ್ಲಿ ಹಲವು ಹಿರಿಯ ನಾಯಕರನ್ನು ಕೈಬಿಟ್ಟಿದ್ದಾರೆ. ಅವರಿಗೆಲ್ಲ ಈಗ ರಾಜ್ಯಪಾಲ ಹುದ್ದೆಯ ಮೂಲಕ ಸಾಂತ್ವನ ಹೇಳುವುದು ಮೋದಿಯವರ ಮುಂದಿನ ಹೆಜ್ಜೆ.
ಶೀಲಾಗೆ ಮುಖಭಂಗ
ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಹೀನಾಯವಾಗಿ ಸೋತ ಮೇಲೆ ಮಾಜಿ ಸಿಎಂ ಶೀಲಾ ದಿಕ್ಷಿತ್ಗೆ ಯುಪಿಎ ಸರ್ಕಾರ ಕೇರಳದ ರಾಜಪಾಲ ಹುದ್ದೆ ನೀಡಿತ್ತು. ಇದಾಗಿ ಇನ್ನೂ 3 ತಿಂಗಳೂ ಕಳೆದಿಲ್ಲ. ಅವರಿಗೂ ಈಗ ರಾಜಿನಾಮೆ ಸಲ್ಲಿಸುವ ಅನಿವಾರ್ಯತೆ ಇದೆ. ಆದರೀಗ 'ನಾನು ಯಾವುದೇ ವದಂತಿಗೆ ಕಿವಿಗೊಡುವುದಿಲ್ಲ ' ಎಂದು ನುಣುಚಿಕೊಳ್ಳುತ್ತಿದ್ದಾರೆ. ಒಂದು ವೇಳೆ ಶೀಲಾ ರಾಜಿನಾಮೆ ನೀಡದಿದ್ದರೆ ಈಶಾನ್ಯದ ಯಾವುದಾದರೂ ರಾಜ್ಯಕ್ಕೆ ಹೋಗಲೂ ಸಿದ್ಧವಿರಬೇಕೆನ್ನುತ್ತಿವೆ ಎನ್ಡಿಎ ಮೂಲಗಳು.
ವರ್ಗಾವಣೆಯೂ ಸಾಧ್ಯತೆ!
ಯುಪಿಎ ಅವಧಿಯಲ್ಲಿ ಆಯ್ಕೆಯಾದ ರಾಜ್ಯಪಾಲರಿಗೆ ಇದು ಸಂಕಷ್ಟ ಕಾಲ. 'ರಾಜಿನಾಮೆ ಸಲ್ಲಿಸಲು ನಿರಾಕರಿಸುವ ರಾಜ್ಯಪಾಲರು ವರ್ಗಾವಣೆಗೆ ಸಿದ್ಧವಾಗಲಿ' ಎಂಬ ಎನ್ಡಿಎಯ ಮುಂದಿನ ಆದೇಶಕ್ಕೂ ಅವರು ಮಾನಸಿಕವಾಗಿ ಸಿದ್ಧರಿರಬೇಕಿದೆ. ಹೀಗಾಗಿ, ಬಹುತೇಕ ಯುಪಿಎ ರಾಜ್ಯಪಾಲರು ಬುಧವಾರದಂದೇ ರಾಜಿನಾಮೆ ಸಲ್ಲಿಸುವ ಸಾಧ್ಯತೆ ಇದೆ. ಎನ್ಡಿಎ ಸಿದ್ಧಾಂತಕ್ಕೆ ವಿರುದ್ಧವಾಗಿರುವ ಒಟ್ಟು 12 ರಾಜ್ಯಪಾಲರು ಹುದ್ದೆಯಿಂದ ಕೆಳಗಿಳಿಯುತ್ತಾರೆ ಎನ್ನಲಾಗಿದೆ.
ಕೋರ್ಟ್ ಹೇಳಿದ್ದೇನು?
2004ರ ಪ್ರಕರಣ ವಿರುದ್ಧ ಬಿಜೆಪಿ ಸಂಸದ ಬಿ.ಪಿ. ಸಿಂಘಲ್ ಸುಪ್ರಿಂ ಮೆಟ್ಟಿಲೇರಿದ್ದರು. ಕೋರ್ಟ್ ಯುಪಿಎಗೆ ಛೀಮಾರಿ ಹಾಕಿತ್ತು. 'ಹುದ್ದೆಯಿಂದ ಕಿತ್ತೊಗೆಯುವುದಕ್ಕೆ ರಾಜ್ಯಪಾಲರೇನು ಕೆಲಸಗಾರರಲ್ಲ. ಅವರ ಸೇವೆ ತೃಪ್ತಿದಾಯಕವಾಗಿಲ್ಲ ಎಂದಾಗ ಮಾತ್ರ ರಾಜಿನಾಮೆ ಬಯಸಬಹುದು. ಸಿದ್ಧಾಂತಕ್ಕಾಗಿ ಬಲಿ ಪಡೆಯುವುದು ಸರಿಯಲ್ಲ' ಎಂದಿತ್ತು. ಅದಕ್ಕಾಗಿ ಎನ್ಡಿಎ ರಾಜ್ಯಪಾಲರನ್ನು ಕಿತ್ತೊಗೆಯುವ ಕೆಲಸಕ್ಕೆ ಮುಂದಾಗಲಿಲ್ಲ. ತಾವಾಗಿಯೇ ರಾಜಿನಾಮೆ ನೀಡಿ ಎಂದು ಕೇಳಿದೆ.
ಎನ್ಡಿಎ ತಿರುಗೇಟು
ರಾಜ್ಯಪಾಲರ ರಾಜಿನಾಮೆ ಪರ್ವ ಇದೇ ಮೊದಲೇನಲ್ಲ. 2004ರಲ್ಲಿ ಬಹುಮತ ಹೊಂದಿ, ಯುಪಿಎ ಸರ್ಕಾರ ಅಧಿಕಾರಕ್ಕೆ ಬಂದಾಗ ಹಿಂದೆ ಎನ್ಡಿಎ ನೇಮಿಸಿದ್ದ ರಾಜ್ಯಪಾಲರನ್ನು ಮರುಮಾತಿಲ್ಲದೆ ಕಿತ್ತೊಗೆದಿತ್ತು. ಆಗ ಬಾಬು ಪರಮಾನಂದ್ (ಹರ್ಯಾಣ), ವಿಷ್ಣು ಕಾಂತ್ ಶಾಸ್ತ್ರಿ (ಉತ್ತರ ಪ್ರದೇಶ), ಕಿದರ್ನಾಥ್ ಸಹಾನಿ (ಗೋವಾ) ಹಾಗೂ ಕೈಲಾಸ್ಪತಿ ಮಿಶ್ರಾ (ಗುಜರಾತ್) ಹುದ್ದೆಯಿಂದ ಕೆಳಗಿಳಿಯಬೇಕಾಗಿತ್ತು.
ಆಳ್ವ-ಮೋದಿ ಭೇಟಿ
ಬಿ.ಎಲ್. ಜೋಷಿ ರಾಜಿನಾಮೆ ಸಲ್ಲಿಸುತ್ತಿದ್ದಂತೆ ರಾಜಸ್ಥಾನ ರಾಜ್ಯಪಾಲ ಮಾರ್ಗರೇಟ್ ಆಳ್ವ, ಪ್ರಧಾನಿ ಮೋದಿ ಜತೆ ಮಾತುಕತೆ ನಡೆಸಿದರು. ಇದೊಂದು ಮಾಮೂಲಿ ಭೇಟಿ ಎಂದು ಪಿಎಂಒ ಹೇಳಿದೆ. ಇದಾದ ಬಳಿಕ ಆಳ್ವಾ ರಾಷ್ಟ್ರಪತಿ ಮುಖರ್ಜಿ ಅವರನ್ನೂ ಭೇಟಿಯಾದರು.
ರಾಜಿನಾಮೆ ಸಲ್ಲಿಸುವಂತೆ ಯಾರೂ ನನಗೆ ಆದೇಶಿಸಬೇಕಿಲ್ಲ. ಖಾಸಗಿ ವಿಚಾರಕ್ಕೆ ಸಂಬಂಧಿಸಿದಂತೆ ರಾಷ್ಟ್ರಪತಿಯವರನ್ನು ಭೇಟಿಯಾಗಿದ್ದೇನಷ್ಟೆ.
- ಹಂಸರಾಜ ಭಾರದ್ವಾಜ್, ಕರ್ನಾಟಕ ರಾಜ್ಯಪಾಲ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


