ಅಪಹೃತ ಭಾರತೀಯರ ತಾಣ ಪತ್ತೆ

ನವದೆಹಲಿ/ಬಾಗ್ದಾದ್: ಸುನ್ನಿ ಬಂಡುಕೋರರಿಂದ ಅಪಹರಣಕ್ಕೆ ಒಳಗಾಗಿರುವ ಭಾರತೀಯ ಕಾರ್ಮಿಕರನ್ನು ಇರಿಸಿರುವ ತಾಣ ಪತ್ತೆ ಹಚ್ಚುವಲ್ಲಿ ಇರಾಕ್ನ ಭದ್ರತಾ ಪಡೆಗಳು ಯಶಸ್ವಿಯಾಗಿವೆ.
ಅಪಹೃತರನ್ನು ಸುನ್ನಿಗಳ ವಶದಲ್ಲಿರುವ ಮೊಸುಲ್ ಪಟ್ಟಣದ ಸನಿಹವೇ ಇರಿಸಿರುವ ಬಗ್ಗೆ ಮಾಹಿತಿ ಸಿಕ್ಕಿದೆ. ಎಲ್ಲರೂ ಜೀವಂತವಾಗಿದ್ದಾರೆ ಎಂಬುದಾಗಿ ಇರಾಕ್ ತಿಳಿಸಿದೆ. ಭದ್ರತಾ ಕಾರಣಗಳಿಂದಾಗಿ ತಾಣವನ್ನು ಬಹಿರಂಗಪಡಿಸುವಂತಿಲ್ಲ. ಅವರೆಲ್ಲರೂ ಜೀವಂತವಾಗಿದ್ದಾರೆ ಎಂದು ವಿದೇಶಾಂಗ ಇಲಾಖೆ ವಕ್ತಾರ ಸೈಯ್ಯದ್ ಅಕ್ಬರುದ್ದೀನ್ ತಿಳಿಸಿದ್ದಾರೆ.
ಕಾರ್ಮಿಕರ ಪಾಸ್ಪೋರ್ಟ್ ಅನ್ನು ಮಾಲೀಕರು ತಮ್ಮ ವಶದಲ್ಲಿಟ್ಟುಕೊಂಡಿದ್ದಾರೆ. ಹೀಗಾಗಿ ಕಾರ್ಮಿಕರು ಸ್ವದೇಶಕ್ಕೆ ಮರಳುವುದು ಸುಲಭವಲ್ಲ ಎಂದು ಅಪಹೃತ ಕಾರ್ಮಿಕರ ಬಂಧುಗಳ ಕಳವಳ ವ್ಯಕ್ತಪಡಿಸಿದ್ದರು. ಆ ಕುರಿತು ಪ್ರತಿಕ್ರಿಯಿಸಿರುವ ಅಕ್ಬರುದ್ದೀನ್, ನಮ್ಮ ಆದ್ಯತೆ ಅಪಹೃತರನ್ನು ಬಿಡುಗಡೆಗೊಳಿಸುವುದು. ಬಿಡುಗಡೆಯಾದ ಬಳಿಕ ದಾಖಲೆಗಳ ಪ್ರಕ್ರಿಯೆ ದೊಡ್ಡ ವಿಷಯವೇ ಅಲ್ಲ ಎಂದು ಹೇಳಿದ್ದಾರೆ.
ಇರಾಕ್ನಲ್ಲಿರುವ ಭಾರತೀಯರ ಸುರಕ್ಷತೆ ಮತ್ತು ಅವರೆಲ್ಲರನ್ನೂ ಭಾರತಕ್ಕೆ ವಾಪಸ್ ಕರೆ ತರುವ ಪ್ರಯತ್ನಗಳ ಬಗ್ಗೆ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಖುದ್ದು ನಿಗಾವಹಿಸಿದ್ದಾರೆ. 'ಸರ್ಕಾರ ತನ್ನಿಂದ ಏನು ಮಾಡಲು ಸಾಧ್ಯವಿದೆಯೊ ಆ ಎಲ್ಲ ಪ್ರಯತ್ನಗಳನ್ನೂ ಮಾಡಲಾಗುತ್ತಿದೆ. ಭಾರತೀಯರ ಭದ್ರತೆ ವಿಚಾರದಲ್ಲಿ ಯಾವುದೇ ರಾಜಿ ಇಲ್ಲ' ಎಂದು ಅವರು ಹೇಳಿದ್ದಾರೆ.
ಇನ್ನೂ ಅಮೆರಿಕ ನಿರ್ಧಾರವಿಲ್ಲ: ಬಂಡುಕೋರರ ಮೇಲೆ ವೈಮಾನಿಕ ದಾಳಿ ನಡೆಸುವಂತೆ ಇರಾಕ್ ಮಾಡಿರುವ ಮನವಿ ಸಂಬಂಧ ಅಮೆರಿಕ ಇನ್ನೂ ತೀರ್ಮಾನ ಕೈಗೊಂಡಿಲ್ಲ. ನಾಗರಿಕರು ಮತ್ತು ಬಂಡುಕೋರರನ್ನು ಗುರುತಿಸುವುದು ಕಷ್ಟ, ಹೀಗಾಗಿ ವೈಮಾನಿಕ ದಾಳಿ ನಡೆಸಿದರೆ ಅಮಾಯಕರು ಬಹುಸಂಖ್ಯೆಯಲ್ಲಿ ಹತ್ಯೆಗೀಡಾಗಬಹುದು ಎನ್ನುವ ಆತಂಕ ಅಮೆರಿಕದ್ದು.
ಇರಾಕ್ ಬಿಕ್ಕಟ್ಟು ಪರಿಹಾರಕ್ಕೆ ಹೊರಗಿನವರ ಪ್ರವೇಶ ಅಗತ್ಯವಿಲ್ಲ. ಅದನ್ನು ಅಲ್ಲಿನ ಸರ್ಕಾರವೇ ಮಾತುಕತೆ ಮೂಲಕ ಬಗೆಹರಿಸಿಕೊಳ್ಳಬೇಕು ಎನ್ನುವ ನಿಲುವಿಗೆ ಅಮೆರಿಕ, ಫ್ರಾನ್ಸ್, ಬ್ರಿಟನ್ಗಳು ಬಂದಿವೆ.
10000 ಭಾರತೀಯರು
ಮೊಸುಲ್ ಮತ್ತು ತಿಕ್ರಿತ್ 6,000
(ಎರಡೂ ಸುನ್ನಿಗಳ ವಶವಾಗಿವೆ. ಕಾರ್ಮಿಕರ ಅಪಹರಣ ನಡೆದದ್ದು ಮೊಸುಲ್ನಲ್ಲಿ)
ಬಾಗ್ದಾದ್, ಬಸ್ರಾ, ನಜಾಫ್ 3,000
ಇತರ ಕಡೆ 1,000
ಇರಾಕ್ನಲ್ಲಿ ಪರಿಸ್ಥಿತಿ ಅಪಾಯಕಾರಿ. ಬಂಡುಕೋರರ ಸಾಮರ್ಥ್ಯಕ್ಕೆ ಹೋಲಿಸಿದರೆ ಸೇನೆಯೇ ದುರ್ಬಲ.
-ಜುಲ್ಫೀಕರ್ ಅಬ್ಬಾಸ್ಸ್ವದೇಶಕ್ಕೆ ಮರಳಿರುವ ಭಾರತೀಯ
ತೈಲ ಘಟಕ ಸ್ವಾಧೀನಕ್ಕೆ ಕಾಳಗ
ಉತ್ತರ ಬಾಗ್ದಾದ್ನ ಸರ್ಕಾರಿ ಸ್ವಾಮ್ಯದ, ದೇಶದ 2ನೇ ಅತಿ ದೊಡ್ಡ ಬೈಜಿ ತೈಲ ಸಂಸ್ಕರಣಾ ಘಟಕ ಸ್ವಾಧೀನಪಡಿಸಿಕೊಳ್ಳಲು ಸುನ್ನಿ ಬಂಡುಕೋರರು ಮತ್ತು ಸೇನೆ ನಡುವೆ ಕಾದಾಟ ನಡೆಯುತ್ತಿದೆ. 'ಪರಿಸ್ಥಿತಿ ಸೇನೆ ಹಿಡಿತದಲ್ಲಿದೆ. ಬಂಡುಕೋರರು ಇನ್ನೂ ಘಟಕದ ಒಳಗಿರುವುದರಿಂದ ಅವರನ್ನು ತೆರವುಗೊಳಿಸುವ ಕಾರ್ಯಾಚರಣೆ ಮುಂದುವರಿದಿದೆ' ಎಂದು ಸರ್ಕಾರ ತಿಳಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


