ಪ್ರಧಾನ ಸುದ್ದಿ

ಸರ್ಕಾರ ಬದಲಾದರೆ ರಾಜ್ಯಪಾಲರ ಬದಲಾವಣೆ ಸೂಕ್ತವಲ್ಲ: ಭಾರದ್ವಾಜ್

ಸರ್ಕಾರ ಬದಲಾದರೆ ರಾಜ್ಯಪಾಲರ ಬದಲಾವಣೆ ಸೂಕ್ತವಲ್ಲ: ಭಾರದ್ವಾಜ್
Published On :

 ಕನ್ನಡಪ್ರಭ ಪ್ರತಿನಿಧಿಯಿಂದ
ನವದೆಹಲಿ:
ಸರ್ಕಾರ ಬದಲಾದಂತೆ ರಾಜ್ಯಪಾಲರ ಬದಲಾವಣೆ ಮಾಡುವುದು ಸೂಕ್ತ ಅಲ್ಲ ಎಂದು ಕರ್ನಾಟಕ ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಪ್ರಧಾನಿ ನರೇಂದ್ರಮೋದಿ ಅವರಿಗೆ ತಿಳಿಸಿದ್ದಾರೆ.
ಕೇಂದ್ರದಲ್ಲಿ ಸರ್ಕಾರ ಬದಲಾದಂತೆ ರಾಜ್ಯಪಾಲರ ಬದಲಾವಣೆ ಬಗ್ಗೆ ರಾಜಕೀಯ ಮತ್ತು ಕಾನೂನು ಸೂಕ್ಷ್ಮಗಳನ್ನು ಅವರು ಪ್ರಧಾನಿಗೆ ವಿವರಿಸಿದ್ದಾರೆ.
ಗುರುವಾರ ಪ್ರಧಾನಿ ಭೇಟಿ ಮಾಡಿ ಶುಭ ಹಾರೈಸಿದ ರಾಜ್ಯಪಾಲ ಭಾರದ್ವಾಜ್ ನೂತನ ಸರ್ಕಾರ ಯುಪಿಎ ಸರ್ಕಾರದ ಅವಧಿಯಲ್ಲಿ ನೇಮಕ ಮಾಡಿರುವ ರಾಜ್ಯಪಾಲರ ರಾಜಿನಾಮೆಗೆ ಒತ್ತಾಯಿಸುತ್ತಿರುವ ವಿಚಾರವನ್ನು ಪ್ರಸ್ತಾಪಿಸಿದರು.
ಭೇಟಿ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಭಾರದ್ವಾಜ್, ರಾಜ್ಯಪಾಲರ ರಾಜಿನಾಮೆ ಕುರಿತಂತೆ ಪ್ರಧಾನಿ ಅವರೊಂದಿಗೆ ಸುಧೀರ್ಘವಾಗಿ ಚರ್ಚಿಸಿದ್ದೇನೆ ಎಂದರು.
ಯಾವ ರಾಜ್ಯಪಾಲರೂ ಅವಧಿಗೆ ಮುನ್ನ ರಾಜಿನಾಮೆ ನೀಡುವ ಅಗತ್ಯ ಇಲ್ಲ. ನಾವು (ರಾಜ್ಯಪಾಲರು) ರಾಷ್ಟ್ರಪತಿಗಳಿಂದ ನೇಮಕಗೊಂಡವರು ಮತ್ತು ಅವರ ಕಾರ್ಯವ್ಯಾಪ್ತಿಯಲ್ಲಿ ಕರ್ತವ್ಯ ನಿರ್ವಹಿಸುವವರು. ಸರ್ಕಾರ ಬದಲಾದಂತೆ ರಾಜಿನಾಮೆ ನೀಡಬೇಕಿಲ್ಲ ಎಂದರು.
ಇದು ಸೌಜನ್ಯದ ಭೇಟಿ, ಪ್ರಧಾನಿಗೆ ಶುಭ ಹಾರೈಸಿದ್ದೇನೆ ಎಂದೂ ಅವರು ಹೇಳಿದರು. ಹಂಸರಾಜ್ ಭಾರದ್ವಾಜ್ ಅವರ ಅವಧಿ ಜೂ.29ಕ್ಕೆ ಮುಗಿಯಲಿದೆ.

ಪ್ರಧಾನಿಯೊಂದಿಗೆ ಕಾವೇರಿ ಪ್ರಸ್ತಾಪ ಇಲ್ಲ
ಕಾವೇರಿ ನಿರ್ವಹಣಾ ಮಂಡಳಿ ಕುರಿತಂತೆ ಪ್ರಧಾನಿಗಳ ಜತೆ ರಾಜ್ಯಪಾಲ ಭಾರದ್ವಾಜ್  ಮಾತುಕತೆ ನಡೆಸಿಲ್ಲ. ಈ ಕುರಿತ ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗೆ, ರಾಜ್ಯ ಸರ್ಕಾರಕ್ಕೆ ಈ ಬಗ್ಗೆ ತಿಳಿವಳಿಕೆ ಇದೆ. ಅವರ್ಯಾರು (ರಾಜ್ಯ ಸರ್ಕಾರ) ನನ್ನೊಂದಿಗೆ ಸಮಾಲೋಚನೆ ನಡೆಸಿಲ್ಲ. ನಾನೇಕೆ ಈ ವಿಷಯವನ್ನು ಪ್ರಧಾನಿಗಳ ಮುಂದೆ ಪ್ರಸ್ತಾಪಿಸಲಿ ಎಂದು ಮರು ಪ್ರಶ್ನಿಸಿದರು. ವಿಧಾನಪರಿಷತ್ ನಾಮ ನಿರ್ದೇಶನ ಕುರಿತಂತೆ ಕೇಳಿದ ಪ್ರಶ್ನೆಗೆ, ಮುಖ್ಯಮಂತ್ರಿಗಳ ಕಚೇರಿಯಿಂದ ಯಾವ ಪಟ್ಟಿಯೂ ನಮಗೆ ಬಂದಿರಲಿಲ್ಲ. ನಾಮನಿರ್ದೇಶನ ವೇಳೆ ಹಿಂದಿನ(ಬಿಜೆಪಿ) ಸರ್ಕಾರ ಅನುಸರಿಸಿದ ಮಾನದಂಡವನ್ನೇ ಅನುಸರಿಸಬೇಕು ಎಂದು ಸೂಚ್ಯವಾಗಿ ಹೇಳಿದರು.

ಛತ್ತೀಸ್‌ಗಡ ರಾಜ್ಯಪಾಲ ದತ್ತ ರಾಜಿನಾಮೆ
ರಾಯ್ಪುರ/ಜೈಪುರ: ಯುಪಿಎ ಸರ್ಕಾರ ನೇಮಿಸಿದ್ದ ರಾಜ್ಯಪಾಲರ ರಾಜಿನಾಮೆ ಮುಂದುವರಿದಿದೆ. ಗುರುವಾರ ಛತ್ತೀಸ್‌ಗಡ ರಾಜ್ಯಪಾಲ ಶೇಖರ್ ದತ್ತ ಪದತ್ಯಾಗ ಮಾಡಿದ್ದಾರೆ. ಕೇಂದ್ರದ ಸೂಚನೆ ಹಿನ್ನೆಲೆಯಲ್ಲಿ ರಾಜ್ಯಪಾಲರು ರಾಷ್ಟ್ರಪತಿಗೆ ರಾಜಿನಾಮೆ ಕಳುಹಿಸಿಕೊಟ್ಟಿದ್ದಾರೆ ಎಂದು ಛತ್ತೀಸ್‌ಗಡ ರಾಜಭವನ ತಿಳಿಸಿದೆ. 2010ರ ಜನವರಿಯಲ್ಲಿ ಅವರು ಅಧಿಕಾರ ಸ್ವೀಕರಿಸಿದ್ದರು.
ಸೂಚನೆ ಬಂದಿಲ್ಲ: ಇದೇ ವೇಳೆ, ರಾಜಸ್ಥಾನ ರಾಜ್ಯಪಾಲ ಮಾರ್ಗರೆಟ್ ಆಳ್ವರಿಗೆ ರಾಜಿನಾಮೆ ಸೂಚನೆ ಬಂದಿಲ್ಲ ಎಂದು ರಾಜಭವನ ಸ್ಪಷ್ಟನೆ ನೀಡಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.