ಪ್ರಧಾನ ಸುದ್ದಿ

ಭಿನ್ನಾಟಕ್ಕೆ ಕೈ ಪೀಕಲಾಟ

ಭಿನ್ನಾಟಕ್ಕೆ ಕೈ ಪೀಕಲಾಟ
Published On :

-ಅಧಿಕಾರ ಹಂಚಿಕೆಯಲ್ಲಿ ಅಹಿಂದ ಕಲ್ಪನೆ ಬಿಡಿ: ರಾಜಶೇಖರನ್

ಕನ್ನಡಪ್ರಭ ವಾರ್ತೆ ಬೆಂಗಳೂರು  ಜೂ 20

ರಾಜ್ಯ ಕಾಂಗ್ರೆಸ್‌ನಲ್ಲಿ ಎಲ್ಲವೂ ಸರಿ ಇಲ್ಲ ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ಅಭಿವೃದ್ಧಿಗಿಂತ ಭಿನ್ನಾಭಿಪ್ರಾಯ, ಲಾಬಿ, ಒಳಜಗಳಗಳೇ ನಿತ್ಯದ ಮಾತಾಗಿದ್ದು, ಅಸಮಾಧಾನ ಭುಗಿಲೆದ್ದಿದೆ.
ಒಂದೆಡೆ, ಬೆಂಗಳೂರಿನಲ್ಲಿ ಮಾತನಾಡಿದ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ, ಬಿ.ಕೆ. ಹರಿಪ್ರಸಾದ್ ವಿರುದ್ದ ಕಿಡಿಕಾರಿದ್ದಾರೆ. ಇನ್ನೊಂದೆಡೆ, ಮಂಡ್ಯದಲ್ಲಿ ಸುದ್ದಿಗೋಷ್ಠಿ ನಡೆಸಿದ ಕೇಂದ್ರ ಮಾಜಿ ಸಚಿವ ಎಂ.ವಿ. ರಾಜಶೇಖರನ್, ಅಹಿಂದ ಬಿಟ್ಟು ಹೊರ ಬನ್ನಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಸಲಹೆ ನೀಡಿದ್ದಾರೆ.
ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲುಂಡ ಕಡೆಸಚಿವರು ಸ್ವಯಂ ಪ್ರೇರಣೆಯಿಂದ ರಾಜಿನಾಮೆ ನೀಡಬೇಕೆಂದು  'ಕನ್ನಡಪ್ರಭ' ಸಂದ ರ್ಶನದಲ್ಲಿ ಹರಿಪ್ರಸಾದ್ ಹೇಳಿದ್ದರು. ಇದಕ್ಕೆ ತೀಕ್ಷ್ಣಪ್ರತಿಕ್ರಿಯೆ ನೀಡಿರುವ ರಾಮಲಿಂಗಾ ರೆಡ್ಡಿ, ಹರಿಪ್ರಸಾದ್ ಉಸ್ತುವಾರಿ ವಹಿಸಿರುವ ರಾಜ್ಯಗಳಲ್ಲಿ ಕಾಂಗ್ರೆಸ್ ಸ್ಥಿತಿ ಏನಾಗಿದೆ? ಅವರ ಸ್ವಕ್ಷೇತ್ರದಲ್ಲಿ ಎಷ್ಟು ಮುನ್ನಡೆ ಸಿಕ್ಕಿದೆ? ಎಂದಿದ್ದಾರೆ.
ಸಚಿವರು ಮಾತ್ರವೇ? ನಾನು ಅಧಿಕಾರಕ್ಕೆ ಅಂಟಿಕೊಂಡಿಲ್ಲ, ದುಂಬಾಲು ಬಿದ್ದು ಅಧಿಕಾರ ಪಡೆದಿಲ್ಲ. ಸಿಎಂ ಬೇಡ ಎಂದರೆ ಮನೆಯಲ್ಲಿ ಇರು ತ್ತೇನೆ. ಸೋಲಿಗೆ ಸಚಿವರು ಮಾತ್ರ ಜವಾಬ್ದಾರರೇ? ಪ್ರತಿ ಜಿಲ್ಲೆಯಲ್ಲಿ ಶಾಸಕರು, ಮುಖಂಡರು, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಉಸ್ತುವಾರಿಗೆ ಇರುತ್ತಾರೆ. ಅವರಿಗೂ ಜವಾಬ್ದಾರಿ ಇರುತ್ತದೆ ಎಂದೂ ಗುಡುಗಿದ್ದಾರೆ.
ಸಿಎಂಗೆ ಸಲಹೆ: ಅಧಿಕಾರ ಹಂಚಿಕೆ ಹಾಗೂ ಯೋಜನೆ ಜಾರಿ ಸಂದರ್ಭ ಅಹಿಂದ ಕಲ್ಪನೆ ಕೈಬಿಟ್ಟು ಎಲ್ಲ ವರ್ಗವನ್ನೂ ಗಣನೆಗೆ ತೆಗೆದುಕೊಳ್ಳಬೇಕು. ಮುಖ್ಯಮಂತ್ರಿ ಹುದ್ದೆ ಕೇವಲ ಒಂದು ಪಕ್ಷ, ಸಮುದಾಯಕ್ಕೆ ಸೀಮಿತವಲ್ಲ ಎಂದು ರಾಜಶೇಖರನ್ ಹೇಳಿದ್ದಾರೆ.
ಅಂಬರೀಷ್ ಸೇರಿ ಕೆಲವರ ಕೈಬಿಡುವ  ಚರ್ಚೆ ನಡೆಯುತ್ತಿದೆ. ಅನಾ ರೋಗ್ಯದಿಂದ ಅಂಬರೀಷ್‌ಗೆ ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ. ಅವರನ್ನು ಬಿಟ್ಟರೆ ಸರ್ಕಾರದ ಮೇಲೆ ಪರಿಣಾಮ ಆಗಬಹುದು ಎಂಬ ಎಚ್ಚರಿಕೆಯನ್ನೂ ನೀಡಿದ್ದಾರೆ.
ಕೇಂದ್ರಕ್ಕೆ ಪತ್ರ: ಎಸ್.ಎಂ. ಕೃಷ್ಣಗೆ ರಾಜ್ಯಸಭಾ ಸ್ಥಾನ ಹಾಗೂ ಡಾ. ಜಿ. ಪರಮೇಶ್ವರ್‌ಗೆ ಉಪ ಮುಖ್ಯಮಂತ್ರಿ ಹುದ್ದೆ ನೀಡುವಂತೆ ವರಿಷ್ಠರಿಗೆ ಪತ್ರಬರೆದಿದ್ದಾಗಿ  ತಿಳಿಸಿದರು. ಇಬ್ಬರೂ ಅನುಭವಿಗಳು. ಇವರನ್ನು ಅಧಿಕಾರದಿಂದ ದೂರ ಇಟ್ಟರೆ ಒಕ್ಕಲಿಗ ಮತ್ತು ದಲಿತ ಸಮುದಾಯಕ್ಕೆ ತಪ್ಪು ಸಂದೇಶ ನೀಡಿದಂತಾಗುತ್ತದೆ ಎಂದೂ ಹೇಳಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.