ಹೆಣದ ಮನೆಯ ರತಿಕ್ರೀಡೆ
ಜಾನ್ ಮಿಲ್ಲಿಂಗ್ಟನ್ ಎಂಬ ಹೆಸರಾಂತ ಐರಿಷ್ ನಾಟಕಕಾರ ದೆವ್ವಗಳ ಹಿಂದೆ ಬಿದ್ದವ. ಐರ್ಲೆಂಡಿನ ದ್ವೀಪಗಳ ಸ್ಮಶಾನಗಳಲ್ಲಿ ಕೂತು ದೆವ್ವ ದರ್ಶನ ಕೊಡುತ್ತಾ ಅಂತ ರಾತ್ರಿಯಿಡೀ ಕಾದು, ವಾಪಸ್ ಮನೆಗೆ ಬಂದರೆ ಹೆಂಡತಿ ಒಳಗೆ ಸೇರಿಸಿಕೊಳ್ಳುತ್ತಿರಲಿಲ್ಲ. ಅಲ್ಲಿನ ಹಿರೀ ತಲೆಗಳಿಗೆ ಸಿಕ್ಕಾಪಟ್ಟೆ ವೈನ್ ಕುಡಿಸಿ, ಅವರಿಂದ ಪ್ರೇತದ ಸ್ಟೋರಿಗಳನ್ನು ನಿರೀಕ್ಷಿಸುತ್ತಿದ್ದ. ಹಾಗೆ ಸಿಕ್ಕಿದ್ದನ್ನು ನಾಟಕವಾಗಿಸುತ್ತಿದ್ದ.
ಒಮ್ಮೆ ಆತನಿಗೆ ಐರ್ಲೆಂಡಿನ ಲೆಮೆರಿಕ್ನಲ್ಲಿ ಒಬ್ಬ ತಾತ ತನ್ನ ತಾರುಣ್ಯದ ಕಥೆ ಹೇಳುತ್ತಾನೆ...
ಮೋಡದ ಮೂಟೆಗಳಿಗೆ ದೊಡ್ಡ ತೂತಾದಂತೆ ಮಳೆ ಸುರಿಯುತ್ತಿದೆ. ಆ ರಾತ್ರಿಯಲ್ಲಿ ಈತ ದಾರಿ ತಪ್ಪಿದ. ಮನೆಯ ದಿಕ್ಕು ಯಾವುದೆಂದು ತಿಳಿಯುತ್ತಿಲ್ಲ. ಅಷ್ಟರಲ್ಲೇ ಅಲ್ಲೊಂದು ಮಗುಚಿಬಿದ್ದ ಗೋಡೆ ಕಾಣಿಸುತ್ತದೆ. ಅದರ ಬಳಿ ಹೋದ. ಆದರೆ, ಗೋಡೆ ಅವನಿಗೆ ಮಳೆಯಿಂದ ಕಾಪಾಡಲಿಲ್ಲ. ಮತ್ತೂ ನೆನೆದ. ಅಲ್ಲೇ ಹತ್ತಾರು ಹೆಜ್ಜೆ ಆಚೆ ಹೋದಾಗ, ಅಲ್ಲೊಂದು ಮನೆಯಲ್ಲಿ ದೀಪ ಕಂಡಿತು. ಅವಳು ಹೆಣದ ಪಕ್ಕ ಕೂತಿದ್ದಳು. ಈತ 'ಅಯ್ಯೋ' ಎಂದು ಥರಥರನೆ ನಡುಗಿದ. ಅದಕ್ಕವಳು, 'ಹೆದರಬೇಡಿ, ಬನ್ನಿ. ಕುಳಿತುಕೊಳ್ಳಿ' ಎಂದು ಬಿಸಿಬಿಸಿ ಚಹಾ ಮಾಡಿಕೊಟ್ಟಳು. ಮತ್ತೆ ಹೇಳಿದಳು, 'ಏನೂ ತಿಳಿಯುವುದಿಲ್ಲ ಅಂತಾದರೆ ಈ ಹೆಣವನ್ನು ಕಾಯುತ್ತಿರಿ. ಹತ್ತು ನಿಮಿಷದಲ್ಲಿ ಬರುತ್ತೇನೆ' ಎಂದಳು. ಈತನಿಗೆ ಆಗ ಏನೂ ಹೆದರಿಕೆ ಆಗಲಿಲ್ಲ. ಮಳೆಯಿಂದ ರಕ್ಷಣೆ ಸಿಕ್ಕರೆ ಸಾಕಂತನ್ನಿಸಿತ್ತು. ಅವಳು ಹೋದಳು. ಕೂಡಲೇ ಆ ಹೆಣ ಎದ್ದು ಕುಳಿತಿತು. ಈತನ ಎದೆಯಲ್ಲಿ ಭಯಾಗ್ನಿಸ್ಫೋಟ. ಆ ಹೆಣ ಈತನ ಕೈಹಿಡಿದು ಹೇಳಿತು, 'ಹೆದರಬೇಡಿ. ನನಗೆ ನಿಮ್ಮ ಸಹಾಯ ಬೇಕು. ಈಗ ಎದ್ದು ಹೋದಳಲ್ಲ ಅವಳು ನನ್ನ ಹೆಂಡತಿ. ನನಗೆ ತಿಳಿಯದಂತೆ ಹಾದರ ಮಾಡ್ತಾಳೆ. ತಗೊಳ್ಳಿ ಈ ಕೋಲು. ಈಗವಳು ಬಂದರೆ ಇಬ್ಬರೂ ಸೇರಿ ಬಾರಿಸೋಣ'. ಈತ ಒಪ್ಪಿದ. ಕೆಲವೇ ನಿಮಿಷಗಳಲ್ಲಿ ಆಕೆ ಪ್ರಿಯಕರನೊಂದಿಗೆ ಬಂದಳು. ಅಲ್ಲಿ ಹೆಣ ಇಲ್ಲದಿದ್ದರ ಬಗ್ಗೆಯೇನು ಅವಳ ತಲೆಕೆಡಿಸಿಕೊಳ್ಳಲಿಲ್ಲ. ಸೀದಾ ಮಂಚದಕೋಣೆಗೆ ಹೋಗಿ, ಪ್ರಿಯಕರನನ್ನು ಮುತ್ತಿಕ್ಕಿ ರತಿಕ್ರೀಡೆಗಿಳಿದಳು. ಇದನ್ನು ಕದ್ದು ನೋಡುತ್ತಿದ್ದ ಇಬ್ಬರೂ, ಒಟ್ಟಾಗಿ ಆಕೆಗೆ- ಆತನ ಪ್ರಿಯಕರನಿಗೆ ಬಾರಿಸಿದರಂತೆ.
ಹಾರಲಾಗದ ಹಾರರ್ ಕಥೆಗಳು
ನಾನು ಬ್ಯಾಚಲರ್. ಇರೋದು ರೂಮಲ್ಲಿ. ಆಫೀಸಿನಿಂದ ರೂಮಿಗೆ ಬಂದೆ. ತುಂಬಾ ಸುಸ್ತಾಗಿತ್ತು. ರೆಸ್ಟ್ ತಗೊಳೋಣ ಅಂತನಿಸಿ ಲೈಟ್ ಆಫ್ ಮಾಡಲು ಸ್ವಿಚ್ಚಿನತ್ತ ಕೈ ಚಾಚಿದೆ. ಆದರೆ, ಸ್ವಿಚ್ಚಿನ ಮೇಲೆ ಆಗಲೇ ಬೇರೊಂದು ಕೈ ಇತ್ತು! ಅದು ನನಗಿಂತ ಮೊದಲೇ ಸ್ವಿಚ್ ಆಫ್ ಮಾಡಿತು!
***
ಗಂಡ ಹೆಂಡತಿ ಹಾಗೂ ಅವರ ಐದು ವರ್ಷದ ಮಗ ಮಂಚದಲ್ಲಿ ಮಲಗಿರ್ತಾರೆ. ಗಂಡ ತನ್ನ ಹೆಂಡತಿಯನ್ನು ಉಸಿರುಗಟ್ಟಿಸಿ ಸಾಯಿಸ್ತಾನೆ. ಶವ ಸಾಗಿಸಿಯೂ ಬಿಡ್ತಾನೆ. ಅಚ್ಚರಿ ಅಂದ್ರೆ ಆ ಮಗು ಮೂರು ದಿನ ಕಳೆದರೂ ತನ್ನ ತಾಯಿಯನ್ನು ಕೇಳುವುದೇ ಇಲ್ಲ.
ಅಪ್ಪ ಕೇಳ್ತಾನೆ 'ಮಗೂ... ನೀನೇನೋ ಕೇಳಬೇಕು ಅಂತಿದೀಯ ಅನಿಸ್ತಿದೆ. ಏನದು ಕೇಳು'.
ಮಗು: ಏನಿಲ್ಲ ಅಪ್ಪಾ. ಮೂರು ದಿನದಿಂದ ಅಮ್ಮ ಯಾಕೆ ನಿನ್ನ ಬೆನ್ನ ಹಿಂದೆಯೇ ಬಚ್ಚಿಟ್ಕೊಂಡು ನಿಲ್ತಿದಾಳೆ?
***
ನಾನು ನನ್ನ ಮಗನನ್ನು ಮಂಚದ ಮೇಲೆ ಮಲಗಿಸಿಕೊಂಡು ತಟ್ಟಿ ತಟ್ಟಿ ನಿದ್ದೆ ಮಾಡಿಸಲು ಪ್ರಯತ್ನಿಸುತ್ತಿದ್ದೆ. ಅವನು ಹೇಳಿದ 'ಡ್ಯಾಡಿ ಮಂಚದ ಕೆಳಗೆ ರಾಕ್ಷಸರು ಬಚ್ಚಿಟ್ಕೊಂಡಿದಾರೆ ಅಂತನಿಸ್ತಿದೆ. ಒಮ್ಮೆ ನೋಡು ಪ್ಲೀಸ್'.
ಅವನಿಗೆ ಹೆದರಿಸಿ ಮಲಗಿಸಲು ಮಾರ್ಗ ಸಿಕ್ಕಿತು. ಕೆಳಗೆ ಬಗ್ಗಿ ನೋಡಿ 'ಹೌದು ರಾಕ್ಷಸರಿದ್ದಾರೆ' ಅನ್ನೋಣ ಅಂದುಕೊಂಡೆ. ಮಂಚದ ಕೆಳಗೆ ಬಗ್ಗಿ ನೋಡಿದೆ. ಕೆಳಗಡೆ ಅದೇ ನನ್ನ ಮಗ ಮಲಗಿದ್ದ. ಅವನ ಪಕ್ಕದಲ್ಲಿ ಇನ್ನೊಬ್ಬ ಅವನೇ. ಅವನ ಪಕ್ಕದಲ್ಲಿ ಮತ್ತೊಬ್ಬ ಅವನೇ. ನನ್ನನ್ನು ಗುರಾಯಿಸಿ ಪಿಸುಗುಟ್ಟುತ್ತಿದರು... 'ಡ್ಯಾಡಿ ಡ್ಯಾಡಿ ಮಂಚದ ಮೇಲೆ ರಾಕ್ಷಸ ಇದ್ದಾನಾ ಅಂತ ಒಮ್ಮೆ ನೋಡಿ ಹೇಳಿ ಪ್ಲೀಸ್'.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

