ಪ್ರಧಾನ ಸುದ್ದಿ

ಇಟ್ಸ್ ಮೀ

ಇಟ್ಸ್ ಮೀ
Published On :

ಸೆಲ್ಫಿ! ಇದು ಸ್ಮಾರ್ಟ್‌ಫೋನ್ ಸೃಷ್ಟಿಸಿದ ಅಲೆ. ಮೊಬೈಲನ್ನು ಎದುರಲ್ಲಿಟ್ಟುಕೊಂಡು ತಮ್ಮದೇ ಚಿತ್ರವನ್ನು ಸ್ಟೈಲಿಶ್ ಆಗಿ ತೆಗೆದುಕೊಳ್ಳುವುದು. ಸೋಷಿಯಲ್ ನೆಟ್‌ವರ್ಕ್ ಬಂದ ಮೇಲಂತೂ ಇದರ ಹರಿದಾಟ ಅಷ್ಟಿಷ್ಟಲ್ಲ. ಅಷ್ಟಕ್ಕೂ ಸೆಲ್ಫಿ, ಸ್ಮಾರ್ಟ್‌ಫೋನ್ ಬಂದ ಮೇಲೆ, ಫೇಸ್‌ಬುಕ್- ಟ್ವಿಟರ್ ಹುಟ್ಟಿದ ಮೇಲೆ ಚಾಲನೆಗೊಂಡ ಪ್ರಕ್ರಿಯೆ ಅಲ್ಲ. 1939ರಲ್ಲೇ 'ಸೆಲ್ಫಿ'ಗೆ ಶಂಕುಸ್ಥಾಪನೆ ನಡೆದಿದೆ!
ಯಾರಪ್ಪಾ ಮೊದಲ ಸ್ವಯಂಚಿತ್ರ ಮಾನವ? ರಾಬರ್ಟ್ ಕಾರ್ನ್‌ಲೂಯಿಸ್ ಎಂಬ ಡಚ್ ಹುಡುಗ. ಕೆಮಿಸ್ಟ್ರಿಯಲ್ಲಿ ಮಹಾ ಪಂಡಿತನಾದರೂ ಫೋಟೋಗ್ರಫಿಯಲ್ಲಿ ಹೆಚ್ಚು ಅರ್ಪಿಸಿಕೊಂಡವ. ಆ ಕಾಲದಲ್ಲಿ ಲೆನ್ಸ್ ಈಗಿನಷ್ಟು ಚುರುಕಿರಲಿಲ್ಲ. ಮೊದಲು ಬ್ಲರ್ ದೃಶ್ಯವನ್ನು ಫಿಲ್ಟರ್ ಮಾಡುತ್ತಾ, ಎದುರಿನ ವಸ್ತು ಸಂಪೂರ್ಣ ಕ್ಲಿಯರಾಗಿ ಕಂಡಾಗಲೇ ಕ್ಯಾಮೆರಾ ಕ್ಲಿಕ್ ಎನ್ನುತ್ತಿತ್ತು. ಹಳೇ ಕ್ಯಾಮೆರಾದ ಇಷ್ಟೆಲ್ಲ ಸಂಭ್ರಮಕ್ಕೆ ಏನಿಲ್ಲವೆಂದರೂ 65- 73 ಸೆಕೆಂಡುಗಳಾದರೂ ಹಿಡಿಸುತ್ತಿದ್ದವು. ಈ ದೀರ್ಘ ಒಂದೂಕಾಲು ನಿಮಿಷವನ್ನು ವೇಸ್ಟ್ ಮಾಡೋದ್ಯಾಕೆ ಅಂತ ರಾಬರ್ಟ್ ಕ್ಯಾಮೆರಾದೆದುರು ಕೂತ. ಆಗಲೇ ಘಟಿಸಿದ್ದು ಜಗತ್ತಿನ ಮೊದಲ ಸೆಲ್ಫಿ!

ಕನ್ನಡಿಯೊಳಗೆ ಸೆಲ್ಫಿ!
ನಂತರ 1900ರ ಸುಮಾರಿನಲ್ಲಿ ಕೊಡಾಕ್ ಬ್ರೌನಿ ಬಾಕ್ಸ್ ಕ್ಯಾಮೆರಾಗಳು ಹುಟ್ಟಿಕೊಂಡವು. ಇವುಗಳ ಲೆನ್ಸ್, ಡೇಗ್ಯೂರ್‌ಟೈಪ್ ಕ್ಯಾಮೆರಾಗಳಿಗಿಂತ ಹೆಚ್ಚು ಚುರುಕಿದ್ದವು. ಇಂಗ್ಲೆಂಡಿನ ರಾಜ 7ನೇ ಎಡ್ವರ್ಡ್‌ನೇ ಅವಧಿಯಲ್ಲಿ ಈ ಕ್ಯಾಮೆರಾಗಳ ಜನಪ್ರಿಯತೆಯೂ ಹೆಚ್ಚಿತ್ತು. ಈತನ ರಾಜಕುಮಾರಿ ಕನ್ನಡಿಯ ತನ್ನ ಪ್ರತಿಬಿಂಬದಲ್ಲಿ ಮೊದಲ ಸೆಲ್ಫಿಯನ್ನು ಹೊಡೆದುಕೊಂಡಳು.
ಸ್ಮಾರ್ಟಿ ಬಂದಿದ್ದೇ ಬಂದಿದ್ದು...
ಅದೇ ಕೊನೆ. ಸೆಲ್ಫಿ ಬಗ್ಗೆ ನಿಮಗ್ಯಾವ ಮಾಹಿತಿಯೂ ಸಿಗುವುದಿಲ್ಲ. ಶತಮಾನಗಳ ನಂತರ ಅಂದರೆ 2005ರಲ್ಲಿ ಸೆಲ್ಫಿ ಮತ್ತೆ ಚರ್ಚೆಗೆ ಬರುತ್ತದೆ. ಜಿಮ್ ಕ್ರೌಸ್ ಎಂಬ ಅಮೆರಿಕನ್ ಫೋಟೋಗ್ರಾಫರ್ ಬಚ್ಚಲ ಮನೆಯಲ್ಲಿ ತೆಗೆದುಕೊಂಡ ಬೆತ್ತಲೆ ಫೋಟೋಗಳು ಸೆಲ್ಫಿ ಎನಿಸಿಕೊಂಡವು. ಇದೇ ವೇಳೆ ಫೇಸ್‌ಬುಕ್‌ನಂಥ ಸಾಮಾಜಿಕ ಜಾಲತಾಣಗಳೂ ಹುಟ್ಟಿಕೊಂಡಿದ್ದರಿಂದ ಸೆಲ್ಫಿಗೆ ಕಂಪ್ಲೀಟ್ ಮರುಜೀವ ಬಂತು. 2006-2009ರಲ್ಲಿ ಫೇಸ್‌ಬುಕ್‌ಗೆ ಸ್ಪರ್ಧೆಯೊಡ್ಡಿ ಸೋತ 'ಮೈ ಸ್ಪೇಸ್‌' ಜಾಲತಾಣವೂ ಇದರ ಉದ್ಧಾರದಲ್ಲಿ ಕೈಜೋಡಿಸಿತು. ಫ್ಲಿಕರ್‌ನಲ್ಲಂತೂ ಸೆಲ್ಫಿಯ ಜಾತ್ರೆಯೇ ನಡೆಯಿತು. ನಂತರ ದಕ್ಷಿಣ ಕೊರಿಯಾ, ಜಪಾನ್‌ನ ಸ್ಮಾರ್ಟ್‌ಫೋನ್‌ಗಳ ಭರಾಟೆ ಹೆಚ್ಚಾಯಿತು. ಅವು ಜಾಹೀರಾತಿಗಾಗಿ ಸೆಲ್ಫಿ ತಂತ್ರವನ್ನೇ ಬಳಸಿಕೊಂಡವು. ಬೆಡಗಿಯರು ಸ್ಮಾರ್ಟ್‌ಫೋನ್ ಹಿಡಿದು, 'ಇಟ್ ಈಸ್ ಮೀ' ಎನ್ನುತ್ತಾ ಪೋಸ್ಟ್‌ಗಳನ್ನು ಅಂಟಿಸಿದರು. 2012ರಲ್ಲಿ 'ಟೈಮ್‌' ಮ್ಯಾಗಜಿನ್ 'ಜಗತ್ತಿನ 20 ಕ್ರಾಂತಿಕಾರಕ ಸೂಚಕಗಳಲ್ಲಿ ಸೆಲ್ಫಿಯೂ ಒಂದು' ಎಂದು ಸಾರಿತು.  ಭಾರತದಲ್ಲೂ ನರೇಂದ್ರ ಮೋದಿ ಮತ ಹಾಕಿ, ತೆಗೆದುಕೊಂಡ ಸೆಲ್ಫಿ ಅಲೆ ಸೃಷ್ಟಿಸಿತು.
ಅಂತರಿಕ್ಷಕ್ಕೂ ಹಾರಿತು...
'ಸೆಲ್ಫಿ' ಭೂಮಂಡಲದಲ್ಲೆಲ್ಲ ಹರಡಿದ ಮೇಲೆ ಅಂತರಿಕ್ಷಕ್ಕೂ ದಾಟಿತು. ಬಾಹ್ಯಾಕಾಶ ನಿಲ್ದಾಣದಲ್ಲಿ ಗಗನಯಾತ್ರಿಗಳು ತಮ್ಮದೇ ಫೋಟೋವನ್ನು ಸೆಲ್‌ಫೋನ್‌ನಲ್ಲಿ ಕ್ಲಿಕ್ಕಿಸಿಕೊಂಡರು. 2014ರ ಸೋಚಿ ಒಲಿಂಪಿಕ್ಸ್ ಅಂತೂ 'ಸೆಲ್ಫಿ ಒಲಿಂಪಿಕ್ಸ್‌' ಅಂತಲೇ ಅನ್ವರ್ಥ ಪಡೆಯಿತು.
ಡಿಕ್ಷನರಿಗೆ ಸೇರಿತು...
ಶತಮಾನ ಕಳೆದರೂ ಸೆಲ್ಫಿ ಪದಕ್ಕೆ ಡಿಕ್ಷನರಿಯಲ್ಲಿ ಸ್ಥಾನವಿರಲಿಲ್ಲ. 2013ರಲ್ಲಿ ಆಕ್ಸ್‌ಫರ್ಡ್ ಡಿಕ್ಷನರಿ 'ಸೆಲ್ಫಿ'ಯನ್ನು ' ವರ್ಷದ ಪದ' ಎಂದು ತನ್ನ ಆನ್‌ಲೈನ್ ಪದಗುಚ್ಛಕ್ಕೆ ಸೇರಿಸಿತು. ಅಂದಹಾಗೆ, ಈ ಪದದ ಮೂಲ ಆಸ್ಟ್ರೇಲಿಯಾದ್ದು.
ಮೊನ್ನೆ ಮಾರ್ಚ್‌ನಲ್ಲಿ ಸ್ಪ್ಯಾನಿಷ್ ವ್ಯಕ್ತಿ ರೈಲನ್ನೇರಿ ಸೆಲ್ಫಿ ಹೊಡೆಯಲು ಹೋದ. ಆದರೆ, ಆಯಾ ತಪ್ಪಿ ಕಂಬಿ ಮೇಲೆ ಬಿದ್ದು, ವಿದ್ಯುತ್ ಹೊಡೆಸಿಕೊಂಡು ಮಡಿದ.
ಇಟಲಿಯ 'ಮಿಲನ್‌' ಮ್ಯೂಸಿಯಂನಲ್ಲಿ ಸೆಲ್ಫಿ ತೆಗೆದುಕೊಳ್ಳಲು ಹೋದ ಹುಡುಗ ಅಕಾಡೆಮಿ ಫೈನ್ ಆರ್ಟ್ಸ್ ಪ್ರಶಸ್ತಿ ಗಿಟ್ಟಿಸಿಕೊಂಡ ಪ್ರತಿಮೆಯನ್ನು ಒಡೆದುಹಾಕಿದ್ದ.
ಟೊರಾಂಟೋದಲ್ಲಿ ವಿದ್ಯಾರ್ಥಿ ಸೆಲ್ಫಿ ವೇಳೆ ಕಾಲು ಜಾರಿ, 60 ಅಡಿ ಮೇಲಿಂದ ಬಿದ್ದು ಸತ್ತ.
ಕಳೆದ ತಿಂಗಳು ಅಮೆರಿಕದ ಹೈವೇಯಲ್ಲಿ ಕಾರಿನಲ್ಲಿ ಸೆಲ್ಫಿ ತೆಗೆದುಕೊಂಡ ಮಹಿಳೆ, ಫೇಸ್‌ಬುಕ್‌ಗೆ ಅಪ್ಲೋಡ್ ಮಾಡೋವಾಗ ಅಪಘಾತಕ್ಕೀಡಾಗಿ ಸತ್ತಳು.
ಫ್ಲೋರಿಡಾದಲ್ಲೊಬ್ಬನಿಗೆ ಸೆಲ್ಫಿ ವೇಳೆ ಅಳಿಲು ಬೆನ್ನನ್ನು ತರಿದಿತ್ತು.


-ಕೀರ್ತಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.