ಅಕ್ರಮಕ್ಕೆ ಸಹಿಸದೆ ಆತ್ಮಹತ್ಯೆಗೆ ಶರಣಾದ ಯುವ ಎಂಜಿನಿಯರ್

ಚಾಮರಾಜನಗರ: ಉದ್ಯೋಗ ಖಾತ್ರಿ (ನರೇಗಾ)ಯಲ್ಲಿನ ಭ್ರಷ್ಟಾಚಾರ ಯುವ ಎಂಜಿನಿಯರ್ ಒಬ್ಬರನ್ನು ಬಲಿ ತೆಗೆದುಕೊಂಡಿದೆ.
ಕುರಟ್ಟಿ ಹೊಸೂರು ಸೇರಿದಂತೆ 5 ಗ್ರಾ.ಪಂ. ವ್ಯಾಪ್ತಿಗೆ ಹೊರಗುತ್ತಿಗೆ ಆಧಾರದ ಮೇಲೆ ಸೇವೆಗೆ ಸೇರಿದ್ದ ಚಾಮರಾಜನಗರ ತಾಲೂಕಿನ ಕಾಗಲವಾಡಿ ಮೋಳೆಯ ಸುರೇಶ್ (24) ಗ್ರಾಪಂನ ಮಾಜಿ ಅಧ್ಯಕ್ಷ ಹಾಗೂ ಪಿಡಿಒ ಅಕ್ರಮಕ್ಕೆ ಸಹಕರಿಸಲು ಸಾಧ್ಯವಾಗದೆ ಮೈಮೇಲೆ ಸೀಮೆಎಣ್ಣೆ ಸುರಿದುಕೊಂಡು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಇತ್ತೀಚೆಗಷ್ಟೇ ಸಿವಿಲ್ ಎಂಜಿನಿಯರಿಂಗ್ ಮುಗಿಸಿದ್ದ ಸುರೇಶ್ ಉದ್ಯೋಗ ಖಾತ್ರಿ ಯೋಜನೆಯಡಿ 8 ತಿಂಗಳ ಹಿಂದೆ ಕೊಳ್ಳೇಗಾಲ ತಾಲೂಕಿನ ಕುರಟ್ಟಿಹೊಸೂರು ಸೇರಿದಂತೆ 5 ಗ್ರಾಪಂಗಳ ನರೇಗಾ ಉಸ್ತುವಾರಿಗೆ ಹೊರಗುತ್ತಿಗೆ ಆಧಾರದ ಮೇಲೆ ನೇಮಕವಾಗಿದ್ದರು. ಆದರೆ, ಕುರಟ್ಟಿ ಹೊಸೂರಿನ ಗ್ರಾಪಂ ಅಧ್ಯಕ್ಷ ಹಾಗೂ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯ ಕಿರುಕುಳದಿಂದ ಸುರೇಶ್ ತೀವ್ರ ನೊಂದಿದ್ದರು. ಈ ಹಿನ್ನೆಲೆಯಲ್ಲಿ ಸೋಮವಾರ ಸ್ವಗ್ರಾಮದ ಕಾಗಲವಾಡಿ ಮೋಳೆಯಲ್ಲಿ ಮೈಮೇಲೆ ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚಿಕೊಂಡಿಡರು. ಆಗ ಮನೆಯಲ್ಲೇ ಇದ್ದ ತಾಯಿ ರಕ್ಷಣೆಗೆ ಧಾವಿಸಿ ಜಿಲ್ಲಾ ಆಸ್ಪತ್ರೆಗೆ ಸಾಗಿಸಿದರು. ಶೇ. 90ರಷ್ಟು ಭಾಗ ಸುಟ್ಟು ಹೋಗಿದ್ದರಿಂದ ಸುರೇಶ್ ಚಿಕಿತ್ಸೆ ಫಲಕಾರಿಯಾಗಿ ಮೃತಪಟ್ಟಿದ್ದಾರೆ.
2013-14 ನೇ ಸಾಲಿನಲ್ಲಿ ಲಕ್ಷಾಂತರ ರು. ವೆಚ್ಚದಲ್ಲಿ ನರೇಗಾ ಕಾಮಗಾರಿ ನಡೆಸಲಾಗಿತ್ತು. ಇದರಲ್ಲಿ ಸಕ್ರಮಕ್ಕಿಂತ ಅಕ್ರಮವೇ ಹೆಚ್ಚಾಗಿದ್ದು ಸುಳ್ಳು ದಾಖಲೆ ಸಿದ್ಧಪಡಿಸುವಂತೆ ಹಿಂದಿನ ಗ್ರಾಪಂ ಅಧ್ಯಕ್ಷ ಸರ್ದಾರ್, ಪಿಡಿಒ ವೈರಮುಡಿ ಮಾಣಿಕ್ಯಂ ಹಾಗೂ ಸರ್ದಾರ್ ಪತ್ನಿ ಸರೋಜಾ ಈತನಿಗೆ ಕಿರುಕುಳ ನೀಡುತ್ತಾ ಬಂದ್ದಿದ್ದರು. ಆದರೆ ಸುರೇಶ್ ಇದಕ್ಕೆ ಸಹಕರಿಸಿರಲಿಲ್ಲ. ಇದರಿಂದ ಆತ ಸಾವಿಗೆ ಶರಣಾಗಿರುವುದಾಗಿ ಮೃತನ ತಂದೆ ಮರಿಸ್ವಾಮಿ ಶೆಟ್ಟಿ ರಾಮಸಮದ್ರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಮಗನಿಗೆ ಪ್ರಾಮಾಣಿಕ ಸೇವೆಯೇ ಮುಳುವಾಯಿತು. ಭ್ರಷ್ಟರ ಕಿರುಕುಳ ತಾಳಲಾರದೆ ನನ್ನ ಮಗ ಆತ್ಮಹತ್ಯೆಗೆ ಶರಣಾಗಿದ್ದಾನೆ. ತಪ್ಪಿತಸ್ಥರಿಗೆ ತಕ್ಕ ಶಿಕ್ಷೆಯಾಗಬೇಕು.
-ಮರಿಸ್ವಾಮಿಶೆಟ್ಟಿ, ಕಾಗಲವಾಡಿ ಮೋಳೆ, ಮೃತನ ತಂದೆ
ವಾರದ ಹಿಂದಷ್ಟೇ ಸಂಸದರು ಸುರೇಶ್‌ನನ್ನು ಬೇರಡೆಗೆ ವರ್ಗಾವಣೆ ಮಾಡುವಂತೆ ಸೂಚಿದ್ದರು. ಆತನ ವರ್ಗಾವಣೆಗೆ ಮುಂದಾಗಿದ್ದೆವು. ಅಷ್ಟರಲ್ಲೇ ಸಾವನಪ್ಪಿದ್ದಾನೆ. ಪ್ರಕರಣಕ್ಕೆ ಸಂಬಂಧಿಸಿ ತನಿಖೆ ನಡೆಸಲಾಗುವುದು.
- ಡಾ. ಕೆ.ಎಚ್. ನರಸಿಂಹಮೂರ್ತಿ,
ಜಿಪಂ ಸಿಇಓ, ಚಾಮರಾಜನಗರ
ದೇವರಾಜು ಕಪ್ಪಸೋಗೆ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


