ಅರಣ್ಯ ಒತ್ತುವರಿ ತೆರವು ಸ್ಥಗಿತಕ್ಕೆ ಸ್ಪೀಕರ್ ಸೂಚನೆ, ಚರ್ಚೆ ನಡೆಸಿ ಮುಂದಿನ ನಡೆ ತೀರ್ಮಾನಿಸೋಣ

ವಿಧಾನಸಭೆ: ವಿಧಾನಸಭೆಯಲ್ಲಿ ಸೂಕ್ತ ನಿರ್ಣಯವಾಗುವವರೆಗೂ ರಾಜ್ಯದಲ್ಲಿ ಅರಣ್ಯ ಒತ್ತುವರಿ ತೆರವು ಕಾರ್ಯ ಸ್ಥಗಿತಗೊಳಿಸಬೇಕು ಎಂದು ಸ್ಪೀಕರ್ ಕಾಗೋಡು ತಿಮ್ಮಪ್ಪ ಸರ್ಕಾರಕ್ಕೆ ಸೂಚಿಸಿದ್ದಾರೆ.
ಅರಣ್ಯ ಕಾಯ್ದೆ ಪ್ರಕಾರ ಗ್ರಾಮ ಅರಣ್ಯ ಹಕ್ಕು ಸಂರಕ್ಷಣೆ ಸಮಿತಿಗೆ ಅರ್ಜಿ ಸಲ್ಲಿಸಿದ್ದರೆ ಆ ಒತ್ತುವರಿಯನ್ನು ತೆರವುಗೊಳಿಸುವಂತಿಲ್ಲ. ಅಂತಹ ಕೆಲಸಕ್ಕೆ ಮುಂದಾದ ಅಧಿಕಾರಿ ಮೇಲೆ ಕ್ರಿಮಿನಲ್ ಮೊಕದ್ದಮೆಯನ್ನೂ ಹೂಡಬಹುದಾಗಿದೆ ಎಂದು ವಿವರಿಸಿದ ಸ್ಪೀಕರ್, ಈ ಅರ್ಜಿಗಳು ಇತ್ಯರ್ಥವಾಗುವವರೆಗೆ ಯಾವುದೇ ಪ್ರಕ್ರಿಯೆ ನಡೆಯುವುದು ಬೇಡ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ, ಅರಣ್ಯ ಸಚಿವ ರಮಾನಾಥರೈ ಅವರಿಗೆ ಸೂಚಿಸಿದರು. ಈ ಬಗ್ಗೆ ಸಮಗ್ರವಾಗಿ ಚರ್ಚಿಸಿ ಸೂಕ್ತ ನಿರ್ಧಾರ ಕೈಗೊಳ್ಳೋಣ ಎಂದರು.
ಪ್ರಶ್ನೋತ್ತರ ವೇಳೆಯಲ್ಲಿ ಬಿಜೆಪಿಯ ಕೆ.ಜಿ. ಬೋಪಯ್ಯ ಅವರು, ಹಕ್ಕುಪತ್ರ ಕೊಟ್ಟಿದ್ದರೂ ಸಂರಕ್ಷಣೆ ಸಮಿತಿಗೆ ಅರ್ಜಿ ಸಲ್ಲಿಸಿದ್ದರೂ ಒತ್ತುವರಿ ತೆರವಿಗೆ ನೋಟಿಸ್ ನೀಡಲಾಗುತ್ತಿದೆ. ಇದು ಸರಿಯಲ್ಲ ಎಂದರು. ಇದಕ್ಕೆ ಉತ್ತರಿಸಿದ ಅರಣ್ಯ ಸಚಿವ ರಮಾನಾಥ ರೈ, 1978ರ ಹಿಂದೆ ಒತ್ತುವರಿ ಮಾಡಿಕೊಂಡಿದ್ದರೆ ಅದನ್ನು ತೆರವು ಮಾಡುತ್ತಿಲ್ಲ. ಅದರ ನಂತರದ ಭೂಮಿ ತೆರವಿಗೆ ಮಾತ್ರ ನೋಟಿಸ್ ಜಾರಿ ಮಾಡಲಾಗಿದೆ ಎಂದರು.
ಇಲ್ಲ, ಮೂರು ತಲೆಮಾರಿನವರು ಅಲ್ಲಿದ್ದರೂ ಅವರನ್ನು ತೆರವುಗೊಳಿಸಲು ಅರಣ್ಯ ಇಲಾಖೆಯವರು ಮುಂದಾಗಿದ್ದಾರೆ ಎಂದು ಬೋಪಯ್ಯ, ಜೀವರಾಜ್, ವಿಶ್ವೇಶ್ವರ ಹೆಗಡೆ ಕಾಗೇರಿ ನುಡಿದರು. ಈ ಸಂದರ್ಭದಲ್ಲಿ ಬಿರುಸಿನ ಮಾತುಕತೆ ನಡೆಯಿತು. ಮಂತ್ರಿಗಳ ಮಾತಿಗೆ ಶಾಸಕರು ಆಕ್ರೋಶ ವ್ಯಕ್ತಪಡಿಸಿದಾಗ, ಸ್ಪೀಕರ್ ಮಧ್ಯೆ ಪ್ರವೇಶಿಸಿ ಈ ಬಗ್ಗೆ ಚರ್ಚೆ ನಡೆಸೋಣ. ಮುಖ್ಯಮಂತ್ರಿಯವರೇ ಈ ಬಗ್ಗೆ ಸೂಕ್ತ ಕ್ರಮವಾಗಲಿ. ವಿವರವಾಗಿ ಚರ್ಚೆ ಮಾಡೋಣ ಎಂದರು. ಇದಕ್ಕೆ ಸಿದ್ದರಾಮಯ್ಯ ಸಮ್ಮತಿಸಿದರು. ಚರ್ಚೆಗೆ ಸ್ಪೀಕರ್ ತೆರೆ ಎಳೆದರು.
ಆಲಿಕಲ್ಲು ಮಳೆಗೆ ಪರಿಹಾರವಿಲ್ಲ: ಅತಿವೃಷ್ಟಿ, ಅನಾವೃಷ್ಟಿ ಪರಿಹಾರ ಸಂಬಂಧ ಕಂದಾಯ ಸಚಿವ ಶ್ರೀನಿವಾಸಪ್ರಸಾದ್ ಹಾಗೂ ಪ್ರತಿಪಕ್ಷ ನಾಯಕ ಜಗದೀಶ್ ಶೆಟ್ಟರ್, ಬಿಜೆಪಿ ಶಾಸಕರ ನಡುವೆ ಏರುದನಿಯ ಚರ್ಚೆ ನಡೆಯಿತು.
ಅತಿವೃಷ್ಟಿ ಪರಿಹಾರದಲ್ಲಿ ಆಲಿಕಲ್ಲು ಮಳೆ ಬರುವುದಿಲ್ಲ ಎಂಬುದು ಕಂದಾಯ ಸಚಿವ ಶ್ರೀನಿವಾಸ ಪ್ರಸಾದ್ ಅವರ ವಾದವಾದರೆ, ಆಲಿಕಲ್ಲು ಮಳೆ ಎಂದರೆ ಅತಿವೃಷ್ಟಿಯೇ. ಅದಕ್ಕೆ ಸರ್ಕಾರ ಕೈಗೊಂಡಿರುವ ಕ್ರಮಗಳೇನು ಎಂಬ ಬಗ್ಗೆ ಮಾಹಿತಿಯನ್ನೇ ನೀಡಿಲ್ಲ ಎಂದು ಪ್ರಶ್ನೋತ್ತರ ವೇಳೆಯಲ್ಲಿ ವಿಶ್ವೇಶ್ವರ ಹೆಗಡೆ ಕಾಗೇರಿ ಆಕ್ರೋಶ ವ್ಯಕ್ತಪಡಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ಶ್ರೀನಿವಾಸಪ್ರಸಾದ್, ನೀವು ಆಲಿಕಲ್ಲು ಮಳೆ ಬಗ್ಗೆ ಕೇಳಿಲ್ಲ ಎಂದರು. ಆಗ ಜಗದೀಶ್ ಶೆಟ್ಟರ್ ಮಾತನಾಡಿ, ಅತಿವೃಷ್ಟಿಯಲ್ಲೇ ಆಲಿಕಲ್ಲು ಮಳೆ ಬರಲಿದ್ದು, ರೈತರಿಗೆ ಆಗಿರುವ ನಷ್ಟ ಭರಿಸಬೇಕು ಎಂದರು. ಸಚಿವರು ಮತ್ತೆ ಹಳೆ ಮಾತಿಗೆ ಅಂಟಿಕೊಂಡಾಗ, ಕಲಾಪದಲ್ಲಿ ಏರುದನಿ ಮಾತುಕತೆಯಾಯಿತು. ನಂತರ ಜಿಲ್ಲಾಧಿಕಾರಿಗಳಿಗೆ ಹೇಳಿ ತುರ್ತಾಗಿ ವರದಿ ತರಿಸಿಕೊಳ್ಳಿ ಎಂದು ಸ್ಪೀಕರ್ ಸಲಹೆ ನೀಡಿ ಚರ್ಚೆಗೆ ತೆರೆ ಎಳೆದರು.
ಪೂರ್ಣ ವೆಚ್ಚ ಭರಿಸಲು ಸಿದ್ಧ: ವನ್ಯಮೃಗಗಳಿಂದ ಕೃಷಿ ಜಮೀನು ರಕ್ಷಿಸಲು ರೈತರು ಸೋಲಾರ್ ತಂತಿಬೇಲಿಯನ್ನು 50:50 ಅನುಪಾತದಲ್ಲಿ ನಿರ್ಮಿಸಿಕೊಳ್ಳಬಹುದು. ರೈತರಿಂದ ಅಥವಾ ಶಾಸಕರಿಂದ ಸೂಕ್ತ ಪ್ರಸ್ತಾವನೆ ಬಂದರೆ ಪೂರ್ಣ ವೆಚ್ಚವನ್ನು ಸರ್ಕಾರವೇ ಭರಿಸಲಿದೆ ಎಂದು ಅರಣ್ಯ ಸಚಿವ ಬಿ. ರಮಾನಾಥ ರೈ ತಿಳಿಸಿದ್ದಾರೆ.
ಪ್ರಶ್ನೋತ್ತರದಲ್ಲಿ ಬಂಗಾರಪೇಟೆಯ ನಾರಾಯಣಸ್ವಾಮಿ ಮತ್ತು ರಾಣಿಬೆನ್ನೂರಿನ ಕೆ.ಬಿ. ಕೋಳಿವಾಡ ಪ್ರಶ್ನೆಗೆ ಅವರು ಉತ್ತರಿಸಿದರು. ರೈತರು ಶೇ.50ರಷ್ಟು ಹಣ ನೀಡಲು ಸಾಧ್ಯವಿಲ್ಲ. ಸರ್ಕಾರವೇ ಇದನ್ನು ಭರಿಸಬೇಕು ಎಂದು ಶಾಸಕರು ಒತ್ತಾಯಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, ಸರ್ಕಾರವೇ ಸಂಪೂರ್ಣ ವೆಚ್ಚ ಭರಿಸಿ ಸೋಲಾರ್ ತಂತಿಬೇಲಿ ನಿರ್ಮಿಸುತ್ತಿತ್ತು. ಆದರೆ, ಕಳಪೆಯಾಗಿರುತ್ತದೆ ಎಂದು ಆಕ್ಷೇಪಿಸಿದಾಗ, ಅವರೇ ನಿರ್ಮಿಸಿಕೊಂಡರೆ ಶೇ.50ರಷ್ಟು ಹಣ ನೀಡುವ ಯೋಜನೆ ರೂಪಿಸಲಾಗಿದೆ. ಇದು ಬೇಡ, ಪೂರ್ಣ ವೆಚ್ಚ ಸರ್ಕಾರವೇ ಭರಿಸಬೇಕು ಎಂದು ಪ್ರಸ್ತಾಪ ಸಲ್ಲಿಸಿದರೆ ಹಾಗೇ ಮಾಡೋಣ ಎಂದು ಸಚಿವರು ಹೇಳಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


