ಪ್ರಧಾನ ಸುದ್ದಿ

ವಿಧಾನಸೌಧ ಅಂದವಾಗಿ ಇಟ್ಟುಕೊಳ್ಳಲು ಆಗದವರು ಊರನ್ನು ಚೆಂದಾಗಿಟ್ಟಾರೇ?

ವಿಧಾನಸೌಧ ಅಂದವಾಗಿ ಇಟ್ಟುಕೊಳ್ಳಲು ಆಗದವರು ಊರನ್ನು ಚೆಂದಾಗಿಟ್ಟಾರೇ?
Published On :

ಹರಿದ ಕರ್ಟನ್‌ಗಳು. ಮುರಿದ ಕುರ್ಚಿಗಳು. ಒಡೆದ ಗಾಜುಗಳು. ಬಣ್ಣ ಕಾಣದ ಕಪಾಟುಗಳು. ಮುರುಕು ಸೋಫಾಗಳು. ಗುಜರಿ ಅಂಗಡಿಯಂತೆ ಭಾಸವಾಗುವ ಮೊದಲ ಮಹಡಿ ಕಾರಿಡಾರುಗಳು. ವಾಸನೆ ಸೂಸುವ ಶೌಚಾಲಯಗಳು. ಮಾತಾಡದೇ ಮಂಕಾಗಿರುವ ಕಾರಂಜಿಗಳು. ಸಿಕ್ಕಸಿಕ್ಕಲ್ಲಿ ಅಡ್ಡಾದಿಡ್ಡಿ ನಿಂತಿರುವ ಪೊಲೀಸರ ಬ್ಯಾರಿಕೇಡುಗಳು. ಅದಕ್ಕೆ ಅಸ್ಥವ್ಯಸ್ಥವಾಗಿ ಸಿಕ್ಕು ನೇತಾಡುವ ಟೇಪುಗಳು. ಮನಬಂದಂತೆ ಎಲ್ಲೆಂದರಲ್ಲಿ ಅಳವಡಿಸಲಾದ ಬೇಸಿನ್ನುಗಳಿಂದ ಬಚ್ಚಲುಮನೆಯಂತೆ ಗೋಚರಿಸುವ ಕಾರಿಡಾರ್‌ಗಳು. ಅಲ್ಲಲ್ಲಿ ಬಿದ್ದಿರುವ ಪೊಲೀಸರ ಹಳೇ ಕ್ಯಾಪುಗಳು. ಇಲಾಖೆ, ಅಧಿಕಾರಿ, ಸಚಿವರ ಹೆಸರಿರುವ ಕೆಂಪೇಗೌಡರರ ಕಾಲದ ಬೋರ್ಡುಗಳು....
ಇಂಥ ಗಳುಗಳ ಪಟ್ಟಿ ಮುಂದುವರಿಯುತ್ತಲೇ ಹೋಗುತ್ತದೆ. ಇವು ನಮ್ಮ ವಿಧಾನಸೌಧ ಅರ್ಥಾತ್ ರಾಜ್ಯದ ಶಕ್ತಿಸೌಧದ ಪರಿಸ್ಥಿತಿಗೆ ಹಿಡಿದ ಕೈಗನ್ನಡಿ!
ಅನುಮಾನವೇ ಇಲ್ಲ, ವಿಧಾನಸೌಧ ಕನ್ನಡಿಗರ ಹೆಮ್ಮೆ. ಕನ್ನಡ ನಾಡಿನ ಗೌರವದ ಪ್ರತೀಕ. ಅದಕ್ಕೇ ತಾನೇ ಸಾವಿರಾರು ಪ್ರವಾಸಿಗರು ಇಂದಿಗೂ ಬೇಲಿ ಹೊರಗೆ ನಿಂತಾದರು ಅದರೆದುರು ಫೋಟೊ ತೆಗೆಸಿಕೊಳ್ಳುವುದು. ವಿಧಾನಸೌಧದ ಒಳಗೆ ಬಿಡಿ ಹಿನ್ನೆಲೆಯಲ್ಲಿ ಫೋಟೊ ತೆಗೆಸಿಕೊಂಡರೆ ಅದೇ ದೊಡ್ಡ ಹೆಮ್ಮೆ. ಅಂತಹ ವಿಧಾನಸೌಧವನ್ನು ನಮ್ಮ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಎಷ್ಟು ಚೆನ್ನಾಗಿಟ್ಟಿದ್ದಾರೆಂದರೆ ಅದರೊಳಗೆ ಹೋಗಿ ನೋಡಿದರೆ ನಮಗಿರುವ ಹೆಮ್ಮೆ, ಅಭಿಮಾನಗಳೆಲ್ಲ ಮುರುಕು ಕುರ್ಚಿಗಳ ರಾಶಿಯಲ್ಲಿ ಕಳೆದುಹೋಗುತ್ತದೆ!
ಸರ್ಕಾರಿ ಕೆಲಸ ಎಂದರೆ ದೇವರ ಕೆಲಸ. ಸ್ವಚ್ಛ ಮಾಡುವುದು ಕೂಡ ದೇವರ ಕೆಲಸ ಅಂದುಕೊಂಡುಬಿಟ್ಟಿದ್ದಾರೊ ಏನೊ?
ವಿಧಾನಸೌಧದಲ್ಲಿ ಸ್ವಚ್ಥತೆ ಕಾಣಬೇಕಾದರೆ ನೀವು ಮೊದಲ ಮಹಡಿಗೆ ಹೋಗಬೇಕು. ಅದು ಅಕ್ಷರಶಃ ವಿಧೌನಸೌಧದ ಪಾಲಿಗೆ ಗುಜರಿ ಅಂಗಡಿ. ಮೊದಲ ಮಹಡಿಯಲ್ಲಿ ಯಾವುದೇ ರಾಜಕಾರಣಿಗಳ ಕಚೇರಿಯಿಲ್ಲ. ಹಿರಿಯ ಅಧಿಕಾರಿಗಳ ಕಚೇರಿಯೂ ಇಲ್ಲ. ಆದ್ದರಿಂದಲೇ ಇಲ್ಲಿನ ಸ್ವಚ್ಛತೆ ಬಗ್ಗೆ ತಲೆಕೆಡಿಸಿಕೊಳ್ಳುವವರೇ ಇಲ್ಲ. ಮೊದಲ ಮಹಡಿ ನೋಡಿದರೆ ನಮ್ಮ ಊರನ್ನು ಇವರು ಸ್ವಚ್ಛವಾಗಿಡಬೇಕೆಂದು ನೀರೀಕ್ಷಿಸುವುದೇ ತಪ್ಪೇನೋ ಅನ್ನಿಸುತ್ತದೆ.

ವಿಧಾನಸೌಧದಲ್ಲೊಂದು ಕ್ಯಾಂಟೀನ್ ಇದೆ. ಬಹಳ ಜನರಿಗೆ ಗೊತ್ತಿಲ್ಲ. ಗೊತ್ತಿದ್ದವರು ಅತ್ತ ಹೋಗುವುದಿಲ್ಲ! ಬಹುಶಃ ಅದು ನಗರದ ಕೆಟ್ಟ ಕ್ಯಾಂಟೀನ್‌ಗಳ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆಯಲು ಪೈಪೋಟಿ ನಡೆಸಬಹುದು. ವಿಧಾನಸೌಧದಲ್ಲೊಂದು ಸ್ವಚ್ಛ, ಸುಸಜ್ಜಿತ, ಬೇಡ ಸಾಧಾರಣ ಕ್ಯಾಟೀನ್ ಸಹ ಇಡಲಾಗದ ನಮ್ಮ ಸರ್ಕಾರ ಬಸ್‌ನಿಲ್ದಾಣ, ರೇಲ್ವೆ ನಿಲ್ದಾಣಗಳಲ್ಲಿ ಕಡಿಮೆ ದರದ ಉತ್ತಮ ಕ್ಯಾಂಟೀನ್ ನಡೆಸುವುದಲ್ಲು ನಿರೀಕ್ಷಿಸುವುದಾದರೂ ಹೇಗೆ? ಅದರ ಬದಲು ವಿಧಾನಸೌಧದಂತಹ ಸಣ್ಣ ಪ್ರದೇಶದಲ್ಲಿ ಒಂದು ಉತ್ತಮ ಕ್ಯಾಂಟೀನ್ ನಡೆಸಿತೋರಿಸಲಿ. ಆಮೇಲೆ ಊರಿಗೆ ಊಟ ಹಾಕುವ ಉಸಾಬರಿ ಬಗ್ಗೆ ಯೋಚಿಸಿದರೆ ಒಳಿತು.
ಈ ಕ್ಯಾಂಟೀನ್ ಆಸುಪಾಸಿನ ಜಾಗವಂತೂ ವಿಧಾನಸೌಧದ ಒಳಭಾಗ ಎಂದು ಹೇಳಲು ಸಾಧ್ಯವೇ ಇಲ್ಲ. ಸೆಂಟ್ರಲ್ ಹಾಲ್ ಪಕ್ಕದಲ್ಲಿ ಒಂದಷ್ಟು ತೆರೆದ ಸ್ಥಳವಿದೆ. ಅಲ್ಲಿ ಹಳೇ ಟ್ಯೂಬ್‌ಲೈಟ್‌ಗಳು, ಮುರಿದ ಮರದ ತುಂಡುಗಳನ್ನು ಪೇರಿಸಿಡಲಾಗಿದೆ. ಅದನ್ನು ಇಟ್ಟು ವರ್ಷಗಳೇ ಕಳೆದಿವೆ. ವಿಧಾನಸೌಧದ ಕಂಬಗಳಂತೆ ಇವು ಕೂಡ ಶಾಶ್ವತ ನಿರ್ಮಾಣಗಳೇ ಆಗಿಬಿಟ್ಟಿವೆ. ಹಾಗಂತ ನಮ್ಮನ್ನಾಳುವ ಮುಖ್ಯಮಂತ್ರಿ ಮತ್ತು ಸಚಿವರು ಓಡಾಡುವ, ಕಚೇರಿಗೆ ಹೊಂದಿರುವ ವಿಧಾನಸೌಧದ ಮೂರನೇ ಮಹಡಿ ಚೊಕ್ಕವಾಗಿದೆ. ಮುಖ್ಯಮಂತ್ರಿ ಮತ್ತು ಬಹುತೇಕ ಸಚಿವರು ಆಗಮಿಸುವ ಕೆಂಗಲ್ ಹನುಮಂತಯ್ಯ ದ್ವಾರದ ಕಡೆ ಹೆಚ್ಚು ಸ್ವಚ್ಛತೆ ಕಾಣಬಹುದು. ಆದರೆ ಅದೇ ಮಾತನ್ನು ಬೇರೆ ದ್ವಾರಗಳ ಬಗ್ಗೆ ಹೇಳಲಾಗುವುದಿಲ್ಲ.
ಇದರರ್ಥ ಅಧಿಕಾರಿಗಳು ಹೇಗೆ ಜನಪ್ರತಿನಿಧಿಗಳ ಕಣ್‌ಕಟ್ಟುತ್ತಾರೆ ಮತ್ತು ಜನಪ್ರತಿನಿಧಿಗಳು ಹೇಗೆ ತಾವು ಓಡಾಡುವ ಜಾಗ ಮಾತ್ರ ಚೆನ್ನಾಗಿದ್ದರೆ ಸಾಕು ಎಂಬ ಸೀಮಿತ ದೃಷ್ಟಿಕೋನ ಹೊಂದಿದ್ದಾರೆ ಎಂಬುದೂ ಗೊತ್ತಾಗುತ್ತದೆ. ನಮ್ಮ ಮುಖ್ಯಮಂತ್ರಿಯವರು ವಿಧಾನಸೌಧದಲ್ಲೂ ಒಂದು ರೌಂಡ್ ಹಾಕುವುದಿಲ್ಲ ಎಂಬುದಕ್ಕೂ ಇದು ಸಾಕ್ಷಿ. ಮುಖ್ಯಮಂತ್ರಿ ಬರುತ್ತಾರೆ, ಪರೀಕ್ಷಿಸುತ್ತಾರೆ ಎಂಬ ಸುದ್ದಿ ಹಬ್ಬಿದರೂ ಒಂದಿಷ್ಟು ಕಸ ಸ್ವಚ್ಛವಾಗಿಬಿಡುತ್ತದೆ. ಅವರಿಗೇನೋ ಭಾರೀ ಕೆಲಸ ಅಂದುಕೊಳ್ಳೋಣ. ನಮ್ಮ ಅಧಿಕಾರಿಗಳಿಗೂ ಪುರುಸೊತ್ತಿಲ್ಲವೇ? ಎಲ್ಲರೂ ತಮ್ಮದೆಷ್ಟಿದೆಯೋ ಅಷ್ಟೇ ಮಾಡಿಕೊಂಡು ಹೋಗುತ್ತಿರುವುದರಿಂದಲೇ ಈ ಪರಿ ಸಮಸ್ಯೆ. ತಾವು ವರ್ಷಾನುಗಟ್ಟಲೆ ಕೆಲಸ ಮಾಡುತ್ತಿರುವ, ಮಾಡುವ ರಾಜ್ಯದ ಹೆಮ್ಮೆಯ ಸೌಧವನ್ನೇ ಸ್ವಚ್ಛವಾಗಿ, ಅಂದವಾಗಿ ಇರಿಸಿಕೊಳ್ಳದವರು ಊರನ್ನು ಅಂದವಾಗಿರಿಸಿಕೊಳ್ಳುವತ್ತ ಗಮನಹರಿಸುವುದು ಸಾಧ್ಯವೇ ಇಲ್ಲ.
ನಮ್ಮ ಸಚಿವರು ಅವರು ಉಳಿದುಕೊಳ್ಳುವ ಮನೆ, ಕಚೇರಿಗಳ ನವೀಕರಣಕ್ಕೆ ಬೇಕಾದಷ್ಟು ಖರ್ಚು ಮಾಡುತ್ತಾರೆ. ಒಬ್ಬ ಸಚಿವರು ಕೋಟಿಗಟ್ಟಲೆ ಖರ್ಚು ಮಾಡಿ, ನಂತರ ಖರ್ಚಾಗಿದ್ದು ಕೇವಲ 46 ಲಕ್ಷ ಅಂತ ಹೇಳಿದ್ದೂ ಆಗಿದೆ. ಅದರ ಬಗ್ಗೆ ಆಸಕ್ತಿ ತೋರುವ ಸಚಿವರು ವಿಧಾನಸೌಧವನ್ನು ಸ್ವಚ್ಛವಾಗಿಟ್ಟುಕೊಳ್ಳುವ ಬಗ್ಗೆ ಅಷ್ಟೇನೂ ಆಸಕ್ತಿ ಹೊಂದಿಲ್ಲ. ತಮ್ಮ ಕಚೇರಿ, ತಮ್ಮ ಕೊಠಡಿ ಭಾರೀ ಅಂದವಾಗಿದ್ದರೆ ಸಾಕು. ಹೊರಗೆ ಹೇಗಿದ್ದರೂ ಇವರಿಗೆ ಸಂಬಂಧವಿಲ್ಲ. ವಿಧಾನಸೌಧದ ಹೊರಭಾಗದಲ್ಲೊಂದು ಪೊಲೀಸ್ ಠಾಣೆಯಿದೆ. ಅದರ ಬಳಿ ಹಳೇ ಟೈಲ್ಸ್ ಮತ್ತು ಕಲ್ಲುಗಳ ರಾಶಿಕೊಡಲಾಗಿದೆ. ಉಗ್ರರು ದಾಳಿ ಮಾಡಿದರೆ ಅಡಗಿಕೊಳ್ಳಲು ಸಹಾಯವಾಗಬಹುದು ಎಂಬ ಒಂದು ಕಾರಣ ಬಿಟ್ಟರೆ, ಇವುಗಳಲ್ಲಿ ಅಲ್ಲಿ ಇಡಲು ಬೇರಾವ ಕಾರಣವೂ ಗೋಚರಿಸುವುದಿಲ್ಲ. ಅದರ ಇನ್ನೊಂದು ಪಕ್ಕದಲ್ಲಿ ಹಳೇ ಗ್ರಿಲ್‌ಗಳು, ಮುರಿದ ಕಂಬಗಳು, ಕಾಂಕ್ರೀಟ್ ತುಂಡುಗಳಲ್ಲಿ ಬೇಕಾಬಿಟ್ಟಿ ಎಸೆದಿಡಲಾಗಿದೆ.
ವಿಧಾನಸೌಧದ ಹೊರಭಾಗದಲ್ಲಿ ಹುಲ್ಲು ಹಾಸು, ಹೂದೋಟಗಳಿವೆ. ರಾಜಭವನ ಇರುವ ಕಡೆ ಹೂದೋಟವನ್ನು ಉತ್ತಮವಾಗಿ ನಿರ್ವಹಿಸಲಾಗಿದೆ. ಅಲ್ಲಿಂದ ವಿಧಾನಸೌಧದ ನೋಟವೂ ಉತ್ತಮವಾಗಿರುತ್ತದೆ. ಅದನ್ನು ಆಸ್ವಾದಿಸಲೆಂದು ಆಸನ ವ್ಯವಸ್ಥೆಯೂ ಇದೆ. 2-3 ಆಸನಗಳನ್ನು ತಲೆಕೆಳಗಾಗಿ ಬಿದ್ದಿವೆ. ಇನ್ನೊಂದು ಹಳೇಯ ಮುರುಕಲು ಆಸನ ನೋಡಿದರೆ ಪ್ರಾಚ್ಯವಸ್ತು ಇಲಾಖೆಯವರು ಸಂರಕ್ಷಿಸಿ ಇಡಲು ಸೂಕ್ತವಾಗಿರುವಂತಿದೆ. ಆಶ್ಚರ್ಯವೆಂದರೆ ಈ ಬಗ್ಗೆ ವಿಧಾನಮಂಡಲ ಅಧಿವೇಶನದಲ್ಲಿ ಯಾರೂ ತಕರಾರು ಎತ್ತಿದ್ದು ಕೂಡ ನೆನಪಿಲ್ಲ! ಬೆಂಗಳೂರು ನಗರದ ಕಸ ತೆಗೆಯಲಾರದೇ, ಅದನ್ನು ನಿರ್ವಹಿಸಲಾಗದೇ ಸರ್ಕಾರ ಹೈರಾಣಾಗಿದೆ. ಕಸದ ಸಮಸ್ಯೆ ನಿವಾರಿಸಲು ಸಾಧ್ಯವಾಗದ ಬಗ್ಗೆ ಸಾಕಷ್ಟು ಕಾರಣಗಳನ್ನು ಮಹಾನಗರ ಪಾಲಿಕೆ ಮತ್ತು ಸರ್ಕಾರ ನೀಡಬಹುದು. ಆದರೆ ಕಸದ ಸಮಸ್ಯೆಗೆ ನಮ್ಮ ಧೋರಣೆ, ಅಶಿಸ್ತು, ಧೋರಣೆ ಮತ್ತು ನಿರ್ಲಕ್ಷ್ಯವೇ ಕಾರಣ ಎಂಬುದಕ್ಕೆ ವಿಧಾನಸೌಧವೇ ಉತ್ತಮ ಉದಾಹರಣೆ.

ಸೌಧಸಂಕೇತ
ವಿಧಾನಸೌಧ ಮತ್ತು ಆಸುಪಾಸಿನ ಸ್ಥಳಗಳನ್ನು ಹೇಗಿಟ್ಟುಕೊಂಡಿದ್ದಾರೆ ಎಂಬುದನ್ನು ನೋಡಿದರೆ ನಮ್ಮೂರುಗಳು ಯಾಕಿಷ್ಟು ಕೆಟ್ಟದಾಗಿವೆ ಎಂಬುದು ಅರ್ಥವಾಗುತ್ತದೆ. ಬೆಂಗಳೂರಿನ ಕಸ ನಿರ್ವಹಿಸುವಲ್ಲಿ ರಾಜ್ಯದ ಸರ್ಕಾರ, ಮಹಾನಗರ ಪಾಲಿಕೆ ಯಾಕೆ ವಿಫಲವಾಗಿವೆ ಎಂಬುದು ಅರ್ಥವಾಗಬೇಕಾದರೆ ಅತ್ಯಂತಪ್ರಮುಖ ಆಡಳಿತ ಕೇಂದ್ರವಾದ ವಿಧಾನಸೌಧವನ್ನು ಹೇಗೆ ನಿರ್ವಹಿಸುತ್ತಾರೆ ಎಂಬುದನ್ನು ನೋಡಿದರೆ ಸಾಕು. ವಿಧಾನಸೌಧ ಇರುವುದು 60 ಎಕರೆ ಜಾಗದಲ್ಲಿ. ವಿಧಾನಸೌಧ ಕಟ್ಟಡ ಇರುವುದು ಇನ್ನೂ ಕಡಿಮೆ ಜಾಗ. ಇಷ್ಟು ಕಡಿಮೆ ಜಾಗದಲ್ಲೇ ಸ್ವಚ್ಛತೆ ನಿಭಾಯಿಸಲು ಆಗದವರು ಊರೆಲ್ಲ ಸ್ವಚ್ಛವಾಗಿಟ್ಟಾರೇ? ಇದು ಸಾಮರ್ಥ್ಯಕ್ಕಿಂತ ಹೆಚ್ಚಾಗಿ ಸರ್ಕಾರಿ ಕಚೇರಿ, ಅದರಲ್ಲೂ ವಿಧಾನಸೌಧ ಹೇಗಿರಬೇಕೆಂಬ ದೃಷ್ಟಿಯೇ ನಮ್ಮ ಜನಪ್ರತಿನಿಧಿಗಳಲ್ಲಿಲ್ಲ. ಹೇಗಿರಬೇಕೆಂಬ ಕಲ್ಪನೆ ಮೊದಲೇ ಇಲ್ಲ.
- ಮಸುಕಾದ ಹೊಳಪು

ಮೊದಲೆಲ್ಲ ವಿಧಾನಸೌಧ ಫಳಫಳನೆ ಹೊಳೆಯುತ್ತಿತ್ತು. ಬಿಸಿಲ ಸಮಯದಲ್ಲಿ ಫೋಟೊ ತೆಗೆಯಲು ಕಷ್ಟವಾಗುವಷ್ಟು ಪ್ರಖರ ಹೊಳಪು ಇರುತ್ತಿತ್ತು. ಆದರೆ ವಿಧಾನಸೌಧ ತನ್ನ ಅಂದಿನ ಹೊಳಪು ಕಳೆದುಕೊಂಡಿದೆ. ಹಿಂದೆಲ್ಲ ವಿಧಾನಸೌಧವನ್ನು ರಾಸಾಯನಿಕ ಬಳಸಿ ಸ್ವಚ್ಛಮಾಡಲಾಗುತ್ತಿತ್ತು. ಆದರೆ ಅದರಿಂದ ಕಟ್ಟಡಕ್ಕೆ ಹಾನಿಯಾಗಬಹುದು ಎಂಬ ಕಾರಣಕ್ಕೆ ಅದನ್ನು ಕೈಬಿಡಲಾಗಿದೆ. ಅದರ ಜತೆಗೆ ವಿಧಾನಸೌಧದೆದುರು ಮೆಟ್ರೋ ಕಾಮಗಾರಿ ಆರಂಭಗೊಂಡಿದೆ. ಇದರಿಂದ ವಿಧಾನಸೌಧದ ಮೇಲೆ ಕೂರುವ ಧೂಳೂ ಹೆಚ್ಚಿದೆ. ಇದರಿಂದ ವಿಧಾನಸೌಧದ ಬಣ್ಣವೇ ಮಸುಕಾಗಿದೆ. ಇದನ್ನು ಬೇರೆ ಮಾರ್ಗಗಳಿಂದ ಅಥವಾ ವಾಟರ್‌ಜೆಟ್ ಯಂತ್ರಗಳನ್ನು ಬಳಸಿ, ಪ್ರಾಚ್ಯವಸ್ತು ಸಂಶೋಧನಾ ಇಲಾಖೆ ಸಹಾಯಪಡೆದು ಸ್ವಚ್ಛಗೊಳಿಸಲು ಸಾಧ್ಯವಿದೆ. ಆದರೆ ಮಾಡುವ ಆಸಕ್ತಿ ಯಾರಲ್ಲೂ ಇಲ್ಲ.
- ಅಧಿಕಾರಿಗಳಲ್ಲೂ ಶಿಸ್ತಿಲ್ಲ

ವಿಧಾನಸೌಧದ ಸ್ವಚ್ಛತೆ ಕುರಿತು ಪ್ರತ್ಯಕ್ಷವಾಗಿ ಪರೀಕ್ಷಿಸಲು 'ಕನ್ನಡಪ್ರಭ' ವಿಧಾನಸೌಧಕ್ಕೆ ಭೇಟಿಕೊಟ್ಟಾಗ ಮಾತ್ರ ಊಟದ ಸಮಯ ಮುಗಿದಿತ್ತು. ವಿಧಾನಸೌಧದಲ್ಲಿ ಸರಿಯಾದ ಕ್ಯಾಂಟೀನ್ ಇಲ್ಲದೇ ಇರುವುದರಿಂದಲೋ ಏನೋ ಹೊರಗಿನಿಂದ ಊಟದ ಪಾರ್ಸಲ್ ತರಲಾಗುತ್ತದೆ. ಊಟ ಮಾಡಿದ ನಂತರ ಪಾರ್ಸಲ್ ತಂದ ಪ್ಲಾಸ್ಟಿಕ್, ಕಾಗದಗಳನ್ನು ಹಾಗೇ ಕಿಟಕಿಯಿಂದ ಕೆಳಕ್ಕೆ ಎಸೆದಿರುವುದು ಕಂಡುಬಂತು. ಇದು ವಿಧಾನಸೌಧದ ಹೊರಭಾಗಕ್ಕೆ ಅಷ್ಟಾಗಿ ಕಾಣಿಸದಿದ್ದರೂ ವಿಧಾನಸೌಧದ ಒಳಭಾಗದಲ್ಲಿರುವ ತೆರೆದ ಸ್ಥಳಕ್ಕೆ ಹೋದಾಗ ಅಧಿಕಾರಿಗಳ ಅಶಿಸ್ತು ಕಣ್ಣಿಗೆ ರಾಚುತ್ತದೆ. ಸಾರ್ವಜನಿಕ ಸ್ಥಳಗಳಲ್ಲಿ 'ಇಲ್ಲಿ ಕಸ ಎಸೆದರೆ ದಂಡ ವಿಧಿಸಲಾಗುವುದು' ಎಂದು ಬೋರ್ಡ್‌ಹಾಕುವ ಸರ್ಕಾರ ವಿಧಾನಸೌಧದಲ್ಲಿಯೇ ಕಸ ಹಾಕಿದವರನ್ನು ದಂಡಿಸಲಾಗದೇ ಕುಳಿತಿದೆ. ಅವರು ಕಸಚೆಲ್ಲಿ ಕುಳಿತರೆ, ಸರ್ಕಾರ ಕೈಚೆಲ್ಲಿ ಕುಳಿತಿದೆ!


ಕಾಲಿಬರ್ಡ್!
ವಿಧಾನಸೌಧಕ್ಕೆ ಹೊಸ ಬಂದರೆ ಗೋವಿಂದ. ಯಾವ ಸಚಿವರು ಎಲ್ಲಿದ್ದಾರೆ? ಯಾವ ಇಲಾಕೆ ಯಾವ ಕೊಠ್ಙಯಲ್ಲಿದೆ? ಎಂದು ಗೊತ್ತಾಗದೇ ಕಂಗಾಲಾಗುವ ಪರಿಸ್ಥಿತಿ. ಕಾರಣ ವಿಧಾನಸೌಧದ ಹೊರಗೆ ಹಾಕಿರುವ ಬೋರ್ಡ್ ಕಾಲಿ ಕಾಲಿ! ಸ್ವಾಗತಾಕರು, ಮಾರ್ಗದರ್ಶಕರು ಎಂಬ ಕಲ್ಪನೆಯೇ ವಿಧಾನಸೌಧದಲ್ಲಿಲ್ಲ. ನಿಮ್ಮ ಸ್ವಂತ ಶಕ್ತಿಯಿಂದ ಅಥವಾ ಯಾರನ್ನಾದರೂ ಕೇಳಿಕೊಂಡು ಹೋಗಬೇಕು. ಯಾರಾದರೂ ಪರಿಚಿತರಿಲ್ಲದೇ ವಿಧಾನಸೌಧದೊಳಕ್ಕೆ ಹುಡುಕು ಹುಡುಕಿ ಸುಸ್ತಾಗುವುದು ಗ್ಯಾರಂಟಿ. ಇದು ಸಾಮಾನ್ಯ ಜನಕ್ಕಷ್ಟೇ ಅಲ್ಲ ಅಧಿವೇಶನ ನೋಡಲು ಬರುವವರಿಗೂ ಅನ್ವಯಿಸುತ್ತದೆ. ಲೋಕಸಭೆಯಲ್ಲಿ ಅಧಿವೇಶನ ನೋಡಲು ಬರುವವರನ್ನು ಸ್ವಾಗತಕಾರರ ಕೊಠಡಿಯಿಂದ ಕರೆದುಕೊಂಡು ಹೋಗಲು ಮತ್ತು ವಿವರಿಸಲು ಮಾರ್ಗದರ್ಶಕರಿದ್ದಾರೆ. ಆದರೆ ನಮ್ಮ ವಿಧಾನಸೌಧದಲ್ಲಿ ಅದಕ್ಕೂ ಜನ ಸ್ವಾವಲಂಬಿಗಳೇ!

ವಿನಾಯಕ ಭಟ್ಟ ಮೂರೂರು

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.