ಪ್ರಧಾನ ಸುದ್ದಿ

ಅಧಿವೇಶನದ ಮೊದಲ ದಿನಕ್ಕೆ ಕಹಿ ತಂದ ಸಕ್ಕರೆ ಪ್ರತಿಭಟನೆ

ಅಧಿವೇಶನದ ಮೊದಲ ದಿನಕ್ಕೆ ಕಹಿ ತಂದ ಸಕ್ಕರೆ ಪ್ರತಿಭಟನೆ
Published On :

ವಿಧಾನಸಭೆ: ಹಲವು ವರ್ಷಗಳ ನಂತರ ಇಲಾಖಾವಾರು ಚರ್ಚೆಯ ಅಜೆಂಡಾ ಹೊಂದಿರುವ ಮಹಾ ಅಧಿವೇಶನದ ಮೊದಲ ದಿನವೇ ಸಕ್ಕರೆ ಸಮಸ್ಯೆ ಸರ್ಕಾರಕ್ಕೆ 'ಕಹಿ' ನೀಡಿದೆ.
ಕಬ್ಬಿಗೆ ಸರ್ಕಾರ ನಿಗದಿಪಡಿಸಿದ ಬೆಂಬಲ ಬೆಲೆಯನ್ನು ಸಕ್ಕರೆ ಕಾರ್ಖಾನೆ ಮಾಲೀಕರು ನೀಡುತ್ತಿಲ್ಲ. ಸರ್ಕಾರ ಘೋಷಿಸಿದ ಪ್ರೋತ್ಸಾಹ ಧನ ಬಿಡುಗಡೆ ಮಾಡಿಲ್ಲ ಎಂದು ಆರೋಪಿಸಿ ಪ್ರತಿಪಕ್ಷ ಬಿಜೆಪಿ ಮೊದಲನೇ ದಿನವೇ ಪ್ರತಿಭಟನೆಗೆ ಇಳಿದಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿದೆ.
ಪ್ರತಿಪಕ್ಷ ನಾಯಕ ಜಗದೀಶ್ ಶೆಟ್ಟರ್ ಅವರು ನಿಯಮ 69ರಡಿ ವಿಷಯ ಪ್ರಸ್ತಾಪಿಸಿ, ಕಬ್ಬು ಬೆಂಬಲ ಬೆಲೆ ಕಾರ್ಖಾನೆಗಳಿಂದ ರೈತರಿಗೆ ಪಾವತಿ ಆಗಿಲ್ಲ. ಹಣ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದರು. ಸಹಕಾರ ಮತ್ತು ಸಕ್ಕರೆ ಸಚಿವ ಎಚ್.ಎಸ್.ಮಹಾದೇವಪ್ರಸಾದ್ ನೀಡಿದ ಉತ್ತರ ಒಪ್ಪದ ಜಗದೀಶ್ ಶೆಟ್ಟರ್, ಬಿಜೆಪಿ ಸದಸ್ಯರೊಂದಿಗೆ ಪ್ರತಿಭಟನೆ ನಡೆಸಿದ್ದರಿಂದ ಕಲಾಪವನ್ನು ಮಂಗಳವಾರಕ್ಕೆ ಮುಂದೂಡಲಾಯಿತು.
ನಿದ್ರಾವಸ್ಥೆಯಲ್ಲಿದೆ: ಸೋಮವಾರ ಕಲಾಪ ಆರಂಭವಾದಾಗ ಕಬ್ಬು ಬೆಂಬಲ ಬೆಲೆಯನ್ನು ಸರ್ಕಾರ ರೈತರಿಗೆ ಒದಗಿಸುವಲ್ಲಿ ವಿಫಲವಾಗಿದೆ ಎಂದು ಪ್ರತಿಪಕ್ಷ ನಾಯಕ ಜಗದೀಶ್ ಶೆಟ್ಟರ್ ನಿಲುವಳಿ ಸೂಚನೆ ಮಂಡಿಸಿದರು.  ಇದರ ಬಗ್ಗೆ ಪೂರ್ಣವಾಗಿ ಚರ್ಚಿಸಿ ಇಂದೇ ಉತ್ತರ ಪಡೆದುಕೊಳ್ಳೋಣ ಎಂಬ ಸ್ಪೀಕರ್ ಸಲಹೆಗೆ ಒಪ್ಪಿದರು. ಮಧ್ಯಾಹ್ನ ವಿಷಯ ಚರ್ಚೆಗೆ ಬಂದಿತು. ಬೆಳಗಾವಿ ಅಧಿವೇಶನ ಸಂದರ್ಭದಲ್ಲಿ ರೈತ ವಿಠಲ ಅರಬಾವಿ ಆತ್ಮಹತ್ಯೆ ಮಾಡಿಕೊಂಡರು. ಆಗ ಸರ್ಕಾರ ಪ್ರತಿ ಟನ್‌ಗೆ ರು. 150 ಪ್ರೋತ್ಸಾಹಧನ ಘೋಷಿಸಿತ್ತು. ಅದರ ಹಣ ರು. 300 ಕೋಟಿ ಇನ್ನೂ ರೈತರಿಗೆ ತಲುಪಿಲ್ಲ ಎಂದು ಆರೋಪಿಸಿದರು.
ಅಧಿವೇಶನದಲ್ಲಿ ಈ ವಿಚಾರ ಪ್ರಸ್ತಾಪವಾಗಬಹುದೆಂಬ ಭಯಕ್ಕೆ ಎರಡು ದಿನಗಳ ಹಿಂದೆ ಮುಖ್ಯಮಂತ್ರಿ ಸಿದ್ದರಾಮಯ್ಯ ತರಾತುರಿಯಲ್ಲಿ ಹಣ ಬಿಡುಗಡೆಗೆ ಆದೇಶ ನೀಡಿದ್ದಾರೆ. ಕಾರ್ಖಾನೆ ಮಾಲೀಕರು ರು. 3500 ಕೋಟಿಯನ್ನು ಇನ್ನೂ ಬಾಕಿ ಉಳಿಸಿಕೊಂಡಿದ್ದಾರೆ ಎಂದು ಜಗದೀಶ ಶೆಟ್ಟರ್ ಆಕ್ರೋಶ ವ್ಯಕ್ತಪಡಿಸಿದರು.
ನೋಟಿಸ್ : ಇದಕ್ಕೆ ಉತ್ತರಿಸಿದ ಸಚಿವ ಮಹಾದೇವಪ್ರಸಾದ್, ಸರ್ಕಾರ ನಿಗದಿಪಡಿಸಿದ ದರದ ವಿರುದ್ಧ ಕಾರ್ಖಾನೆ ಮಾಲೀಕರು ಹೈಕೋರ್ಟ್ ಮೆಟ್ಟಿಲೇರಿದ್ದಾರೆ.  ನ್ಯಾಯಾಲಯ ಕೇಂದ್ರ ಸರ್ಕಾರ ನಿಗದಿಗೊಳಿಸಿದ ಎಫ್‌ಆರ್‌ಪಿ ಪ್ರಕಾರ ದರ ನೀಡುವಂತೆ ಸೂಚಿಸಿದೆ. ಅದರಂತೆ ರು. 2100 ನೀಡುವಂತೆ ಸೂಚಿಸಿದೆ. ಈ ಆದೇಶವನ್ನು ಪಾಲಿಸದ 18 ಸಕ್ಕರೆ ಕಾರ್ಖಾನೆ ಮಾಲೀಕರಿಗೆ ನೋಟಿಸ್ ನೀಡಲಾಗಿದ್ದು, ಸಕ್ಕರೆ ವಶಪಡಿಸಿಕೊಂಡು ರೈತರಿಗೆ ರು. 587 ಕೋಟಿ ನೀಡುವಂತೆ ಸರ್ಕಾರ ಆದೇಶ ನೀಡಿದೆ. ಅದೇ ರೀತಿ ಸರ್ಕಾರ ಘೋಷಿಸಿದ ಪ್ರೋತ್ಸಾಹ ಧನವನ್ನು ರೈತರಿಗೆ ತಲುಪಿಸುವ ಪ್ರಯತ್ನ ಮಾಡಲಾಗಿದೆ. ಡಿಸೆಂಬರ್‌ವರೆಗೆ ರು. 398 ಕೋಟಿ ಬಿಡುಗಡೆ ಮಾಡಲಾಗಿದ್ದು, ಉಳಿದ ರು. 189 ಕೋಟಿ ಬಿಡುಗಡೆಗೆ ಆದೇಶ ನೀಡಿದ್ದೇವೆ ಎಂದರು.
ಉತ್ತರದಿಂದ ತೃಪ್ತರಾಗದ ಬಿಜೆಪಿ ಸದಸ್ಯರು, ಪ್ರತಿಭಟಿಸಿದ್ದರಿಂದ ಗದ್ದಲದ ವಾತಾವರಣ ನಿರ್ಮಾಣವಾಗಿ ಕಲಾಪವನ್ನು  ಮಂಗಳವಾರಕ್ಕೆ ಮುಂದೂಡಿದರು.


ದರಕ್ಕಾಗಿ ಧರಣಿ ತೀವ್ರ

ಹಾವೇರಿ/ಬಿಜಾಪುರ: ರೈತರು, ಸಕ್ಕರೆ ಕಾರ್ಖಾನೆ ಮಾಲೀಕರ ನಡುವೆ ಕಬ್ಬು ಜಗ್ಗಾಟ ಮುಂದುವರಿದಿದ್ದು, ಹಾವೇರಿ ಹಾಗೂ ಬಿಜಾಪುರದಲ್ಲಿ ಸೋಮವಾರ ತೀವ್ರ ಪ್ರತಿಭಟನೆ ನಡೆದಿದೆ. ಟನ್ ಕಬ್ಬಿಗೆ 2500 ಕೊಡದ ಕಾರ್ಖಾನೆ ವಿರುದ್ಧ ಘೋಷಣೆ ಕೂಗಿದ ಹಾವೇರಿ ರೈತರು ಅಲ್ಲಿನ ಜಿಲ್ಲಾಡಳಿತಭವನಕ್ಕೆ ಬೆಳಗ್ಗೆ ನುಗ್ಗಿ ಗೇಟಿಗೆ ಬೀಗ ಹಾಕಿ ಆಕ್ರೋಶ ವ್ಯಕ್ತಪಡಿಸಿದರು.

ಸಕ್ಕರೆ ನಂಬಿದ್ದ
1.5 ಕೋಟಿ ಜನ ಅತಂತ್ರ
ರು. 3500
ಕೋಟಿ ಕಾರ್ಖಾನೆ ಮಾಲೀಕರಿಂದ ಬಾಕಿ
ರು. 300 ಕೋಟಿ ಸರ್ಕಾರದ ಪ್ರೋತ್ಸಾಹಧನ ಬಾಕಿ
18 ಸಕ್ಕರೆ ಕಾರ್ಖಾನೆ ಮಾಲೀಕರಿಗೆ ನೋಟಿಸ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.